* ರಾಜ್ಯ ರಾಜಕಾರಣದಲ್ಲಿ ಸಂಚಲನ ಬಿಎಸ್‌ವೈ ಔಟ್‌?* ಜತೆಗೆ ಶೆಟ್ಟರ್‌, ಈಶ್ವರಪ್ಪ ಟೀಂಗೂ ಕೊಕ್‌?* ಸಿಎಂ ಸ್ಥಾನಕ್ಕೆ 3 ಹೆಸರುಗಳು ಚಾಲ್ತಿಯಲ್ಲಿ* ದೆಹಲಿಯಿಂದಲೇ ಮುಖ್ಯಮಂತ್ರಿ ನೇಮಕ* ಕಟೀಲ್‌ದು ಎನ್ನಲಾದ ಆಡಿಯೋ ವೈರಲ್‌

ಬೆಂಗಳೂರು(ಜು.19): ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿರುವ ಮಧ್ಯೆಯೇ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ತಮ್ಮ ಆಪ್ತರ ಜತೆ ಆಡಿದ್ದಾರೆ ಎನ್ನಲಾದ ಸ್ಫೋಟಕ ಮಾತು ಬಹಿರಂಗವಾಗಿದ್ದು, ಸಂಚಲನಕ್ಕೆ ಕಾರಣವಾಗಿದೆ.

‘ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಕೆಳಗಿಳಿಯುವುದು ನಿಶ್ಚಿತವಾಗಿದ್ದು, ಹಿರಿಯ ನಾಯಕರಾದ ಜಗದೀಶ್‌ ಶೆಟ್ಟರ್‌ ಮತ್ತು ಈಶ್ವರಪ್ಪ ತಂಡ ಸಂಪುಟದಿಂದ ಕಾಯಂ ಆಗಿ ಹೊರಬೀಳಲಿದೆ’ ಎಂದು ಕಟೀಲ್‌ ಹೇಳಿರುವ ಆಡಿಯೋ ಭಾನುವಾರ ವೈರಲ್‌ ಆಗಿದೆ.

ತಮ್ಮ ಆಪ್ತರ ಜೊತೆ ತುಳು ಭಾಷೆಯಲ್ಲಿ ಮಾತುಕತೆ ನಡೆಸಿರುವ ಕಟೀಲ್‌ ಅವರು, ‘ಮುಖ್ಯಮಂತ್ರಿ ಸ್ಥಾನಕ್ಕೆ ಮೂವರ ಹೆಸರುಗಳು ಪರಿಶೀಲನೆಯಲ್ಲಿವೆ. ಆ ಮೂವರ ಪೈಕಿ ಒಬ್ಬರು ಬರಲಿದ್ದಾರೆ. ದೆಹಲಿಯಿಂದಲೇ ಹೆಸರು ಅಂತಿಮವಾಗಲಿದೆ. ಯಾರೇ ಬಂದರೂ ನಮಗೆ ಬೇಕಾದವರೇ ಆಗಿರುತ್ತಾರೆ’ ಎಂದು ಹೇಳಿರುವುದು ಸ್ಪಷ್ಟವಾಗಿದೆ.

"

‘ಅಲ್ಲದೆ, ಯಾರಿಗೂ ಹೇಳಬೇಡ. ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಮತ್ತವರ ತಂಡ ಹೊರಬೀಳಲಿದೆ. ಬಳಿಕ ನಾವು ಹೇಳಿದಂತೆಯೇ ನಡೆಯಲಿದೆ. ಯಾವುದಕ್ಕೂ ಹೆದರಬೇಡಿ. ನಾವಿದ್ದೇವೆ’ ಎಂದು ಕಟೀಲ್‌ ಅಭಯ ನೀಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎರಡು ದಿನಗಳ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಸುದೀರ್ಘ ಸಮಾಲೋಚನೆ ನಡೆಸಿ ವಾಪಸಾದ ಮರುದಿನವೇ ರಾಜ್ಯಾಧ್ಯಕ್ಷ ಕಟೀಲ್‌ ಅವರು ಆಡಿದ್ದಾರೆ ಎನ್ನಲಾದ ಈ ಆಡಿಯೋ ಬಹಿರಂಗಗೊಂಡಿರುವುದು ಸದ್ಯದ ಬೆಳವಣಿಗೆಗಳಿಗೆ ಬಿಸಿ ತುಪ್ಪ ಸುರಿದಂತಾಗಿದೆ. ಬಿಜೆಪಿ ಪಾಳೆಯದಲ್ಲಿ ಬಿರುಸಿನ ಚರ್ಚೆಗೆ ನಾಂದಿ ಹಾಡಿದೆ.

ದೆಹಲಿಯಿಂದ ವಾಪಸಾಗಿದ್ದ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ವರಿಷ್ಠರು ಯಾವುದೇ ಸೂಚನೆ ನೀಡಿಲ್ಲ. ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆದು ಪಕ್ಷ ಸಂಘಟನೆ ಬಲವಾಗಿ ಕೈಗೊಳ್ಳುತ್ತೇನೆ. ಜೊತೆಗೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಆ ಜವಾಬ್ದಾರಿಯನ್ನು ವರಿಷ್ಠರು ನನಗೆ ನೀಡಿದ್ದಾರೆ ಎಂದಿದ್ದರು. ಆದರೆ, ಇದೀಗ ಕಟೀಲ್‌ ಅವರಿಗೆ ಸಂಬಂಧಿಸಿದ ಆಡಿಯೋ ಯಡಿಯೂರಪ್ಪ ಅವರ ಹೇಳಿಕೆಯನ್ನು ಅಲ್ಲಗಳೆಯುವಂತಿದೆ.

ಆಡಿಯೋದಲ್ಲೇನಿದೆ?

ಯಾರಿಗೂ ಹೇಳಲಿಕ್ಕೆ ಹೋಗಬೇಡಿ. ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಆ ಟೀಂ ಅನ್ನೇ ತೆಗೆಯುವುದು. ಹೊಸ ಟೀಂ ಮಾಡುತ್ತಿದ್ದೇವೆ. ಯಾರ ಹತ್ತಿರವೂ ಹೇಳಲಿಕ್ಕೆ ಹೋಗಬೇಡಿ ಇನ್ನು. ಈಗ ಸದ್ಯಕ್ಕೆ ಯಾರಿಗೂ ಕೊಡಬೇಡಿ ಅಂತ ಹೇಳಿ. ಆಯ್ತು. ತೊಂದ್ರೆ ಇಲ್ಲ. ಹೆದರಬೇಡಿ ನಾವಿದ್ದೇವೆ. ಆಯ್ತು ಹೆದರಬೇಡಿ. ಎಲ್ಲವೂ ನಮ್ಮ ಕೈಯಲ್ಲೇ ಇನ್ನು. ಸಿಎಂ ಸ್ಥಾನಕ್ಕೆ ಮೂರು ಹೆಸರಿದೆ. ಯಾರಾದ್ರೂ ಆಗುವ ಚಾನ್ಸ್‌ ಇದೆ. ಇಲ್ಲ ಇಲ್ಲ. ಇಲ್ಲಿನವರನ್ನು ಯಾರನ್ನೂ ಮಾಡುವುದಿಲ್ಲ. ಡೆಲ್ಲಿಯಿಂದಲೇ ಹಾಕ್ತಾರೆ.