Asianet Suvarna News Asianet Suvarna News

ಸಿಎಂ ವಿರುದ್ಧ ಬಿಜೆಪಿ ಹೊಸ ಬಾಂಬ್!

ಯಡಿಯೂರಪ್ಪ ವಿರುದ್ಧ ಆಡಿಯೋ ಬಿಡುಗಡೆ ಮಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ಇದೀಗ ಬಿಜೆಪಿ ಹೊಸ ಬಾಂಬ್ ಸಿಡಿಸಲು ಸಜ್ಜಾಗಿದೆ. 

BJP ready To Release New video About CM HD Kumaraswamy
Author
Bengaluru, First Published Feb 11, 2019, 7:52 AM IST

ಬೆಂಗಳೂರು :  ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿಯವರು ಆಪರೇಷನ್‌ ಕಮಲ ನಡೆಸುತ್ತಿದ್ದಾರೆಂದು ಆಡಿಯೋ ಬಿಡುಗಡೆ ಮಾಡಿ ಆರೋಪ ಮಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧವೇ ಇದೀಗ ‘ಲಂಚದ ವಿಡಿಯೋ’ ಬಾಂಬ್‌ ಎಸೆಯಲು ಬಿಜೆಪಿ ಸಜ್ಜಾಗಿದೆ.

ವಿಧಾನ ಪರಿಷತ್‌ ಸದಸ್ಯರನ್ನಾಗಿ ನೇಮಕ ಮಾಡಲು ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಬ್ಬರಿಂದ ಲಂಚ ಕೇಳಿದ ಆಡಿಯೋ ಮತ್ತು ವಿಡಿಯೋ ನಮ್ಮ ಬಳಿಯಿದೆ. ಅದನ್ನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಬಿಜೆಪಿ ಹೇಳಿದೆ. ಈ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನಡುವಿನ ಜಿದ್ದಾಜಿದ್ದಿ ಮತ್ತಷ್ಟುರೋಚಕತೆ ಪಡೆಯುವ ಸಾಧ್ಯತೆ ಇದೆ.

ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಲು ವಿಜುಗೌಡ ಪಾಟೀಲ್‌ ಬಳಿ 25 ಕೋಟಿ ರು. ಬೇಡಿಕೆ ಇಟ್ಟಧ್ವನಿ ಮತ್ತು ದೃಶ್ಯ ಸುರುಳಿ ಬಿಜೆಪಿ ಬಳಿ ಇದೆ ಎನ್ನಲಾಗಿದೆ. ಆದರೆ, ಇದು 2014ರ ದೃಶ್ಯ ಸುರುಳಿ. ಈ ಹಿಂದೆಯೂ ಒಮ್ಮೆ ಈ ವಿಚಾರ ಬಹಿರಂಗಗೊಂಡು ವಿವಾದ ಉಂಟಾಗಿತ್ತು. ಈಗ ಬಿಜೆಪಿ ಅದೇ ಹಳೆಯ ವಿಡಿಯೋ ಅಸ್ತ್ರವನ್ನು ಮತ್ತೊಮ್ಮೆ ಪ್ರಯೋಗಿಸಲಿದೆಯೇ ಎಂಬ ಅನುಮಾನ ಮೂಡಿದೆ.

ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಬಿಜೆಪಿ ನಾಯಕರೊಬ್ಬರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಲು ಮುಖ್ಯಮಂತ್ರಿಗಳು 25 ಕೋಟಿ ರು. ಬೇಡಿಕೆ ಇಟ್ಟಿದ್ದಾರೆ. ಇದರ ಆಡಿಯೋ ಮತ್ತು ವಿಡಿಯೋ ನಮ್ಮ ಬಳಿ ಇದೆ. ಇದನ್ನು ಸದನದಲ್ಲಿ ಪ್ರಸ್ತಾಪಿಸಲಾಗುವುದು. ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ವಿಧಾನಸಭೆಯ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಧ್ವನಿ ಸುರುಳಿಯ ಸತ್ಯಾಸತ್ಯ ಅರಿಯಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ತಮ್ಮ ಕೊಠಡಿಗೆ ಕರೆದು ವಿಚಾರಣೆ ಮಾಡುವಂತೆ ಪಕ್ಷದ ನಾಯಕರು ಸಭಾಧ್ಯಕ್ಷ ರಮೇಶ್‌ ಕುಮಾರ್‌ ಅವರಿಗೆ ಮನವಿ ಮಾಡಲಿದ್ದಾರೆ. ಮುಖ್ಯಮಂತ್ರಿಗಳು ಕೀಳುಮಟ್ಟದ ರಾಜಕೀಯ ಎಷ್ಟರ ಮಟ್ಟಿಗೆ ಮಾಡುತ್ತಾರೆ ಎನ್ನುವ ಮಾತಿಗೆ ನಮ್ಮಲ್ಲಿರುವ ಆಡಿಯೋ ಮತ್ತು ವಿಡಿಯೋ ಸಾಕ್ಷಿಯಾಗಿದೆ ಎಂದು ಟೀಕಾಪ್ರಹಾರ ನಡೆಸಿದರು.

ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಇತಿಹಾಸದಲ್ಲಿ ಇಂತಹ ಕೀಳುಮಟ್ಟದ ಘಟನೆ ಮೊದಲನೆಯದ್ದಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಘಟನೆಗಳು ನಡೆದಿವೆ ಎಂದು ಹೇಳಿದ ಅವರು, ಬಿಜೆಪಿ ಮುಖಂಡನ ಹೆಸರನ್ನು ಬಹಿರಂಗ ಪಡಿಸಲು ನಿರಾಕರಿಸಿದರು. ಈ ಬಗ್ಗೆ ವಿಧಾನಸಭಾಧ್ಯಕ್ಷರಿಗೆ ನೇರವಾಗಿ ದೂರು ಕೊಡಲಾಗುವುದು ಎಂದೂ ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋ ನಕಲಿಯಾಗಿದೆ. ಈಗ ಯಾರು ಬೇಕಾದರೂ ಇಂತಹವುಗಳನ್ನು ಸೃಷ್ಟಿಸಬಹುದು. ತಂತ್ರಜ್ಞಾನ ಬಹಳಷ್ಟುಮುಂದುವರಿದಿದ್ದು, ವಂಚನೆ ಮಾಡುವ ಪ್ರಕರಣಗಳು ಹಲವಾರು ಇವೆ. ಇದು ಸಹ ಅದರ ಮುಂದುವರಿದ ಭಾಗವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುವು. ವಾಸ್ತವವಾಗಿ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಅವರೇ ಮುಂದಾಗಿದ್ದಾರೆ. ನಮ್ಮ ಪಕ್ಷದವರನ್ನು ಸೆಳೆಯುವ ತಂತ್ರವನ್ನು ಮುಚ್ಚಿಹಾಕಲು ನಕಲಿ ಆಡಿಯೋ ಇಟ್ಟುಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿ ಮೂಲತಃ ಚಿತ್ರರಂಗದಿಂದ ಬಂದವರು. ಇಂತಹ ಆಡಿಯೋಗಳನ್ನು ಸೃಷ್ಟಿಸುವುದರಲ್ಲಿ ಅವರು ನಿಪುಣರು. ಹೀಗಾಗಿ ಇದಕ್ಕೆ ಯಾವುದೇ ಬೆಲೆ ಇಲ್ಲ ಎಂದು ಕಿಡಿಕಾರಿದರು.

ಅತೃಪ್ತ ಶಾಸಕರನ್ನು ಬಿಜೆಪಿಗೆ ಸೆಳೆಯಲು ಮುಂಬೈಗೆ ಹೋಗಿದ್ದಿರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾನು ಪಕ್ಷದ ಜವಾಬ್ದಾರಿ ನಿರ್ವಹಿಸಲು ತೆಲಂಗಾಣಕ್ಕೆ ತೆರಳಿದ್ದೆ. ಆದರೂ, ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಇಂತಹ ಆರೋಪಗಳಿಗೆ ಉತ್ತರ ನೀಡಬೇಕಾದ ಅಗತ್ಯ ಇಲ್ಲ ಎಂದರು.

Follow Us:
Download App:
  • android
  • ios