* ಹಿಂದುಳಿದ ವರ್ಗಗಳ ಯಾರೊಬ್ಬರೂ ಬಿಜೆಪಿಯಿಂದ ದೂರಾಗದಂತೆ ನೋಡಿಕೊಳ್ಳಿ: ನಡ್ಡಾ* ಒಬಿಸಿ ಮೀಸಲು ಪ್ರತಿಪಾದಕ ಬೊಮ್ಮಾಯಿಗೆ ಶ್ಲಾಘನೆ* ಬೆಂಗಳೂರಲ್ಲಿ ಒಬಿಸಿ ಮೋರ್ಚಾ ಸಮಾವೇಶ
ಬೆಂಗಳೂರು(ಜೂ.19): ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯದವನ್ನು ಪ್ರಮುಖವಾಗಿ ಸೆಳೆಯಲು ಮುಂದಾಗಿದೆ. ಹಿಂದುಳಿದ ವರ್ಗಗಳ ಯಾರೊಬ್ಬರೂ ಬಿಜೆಪಿಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ಖಾಸಗಿ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಸಮುದಾಯ ಬಹಳ ದೊಡ್ಡ ಸಮುದಾಯವಾಗಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರು. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ ಎಂದರು.
ಚಿತ್ರದುರ್ಗ: 2023ಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ಸಿಎಂ ಬೊಮ್ಮಾಯಿ
ಪಕ್ಷ ಸಂಘಟನೆಗೆ ಗಮನ ಕೇಂದ್ರೀಕರಿಸಿ:
ಹಿಂದುಳಿದ ಜಾತಿಗಳ ಪ್ರಭಾವಿ ಯಾರು, ನಾಯಕ ಯಾರು ಎಂಬುದನ್ನು ತಿಳಿಯಬೇಕು. ನಮ್ಮ ನಮ್ಮಲ್ಲಿ ಜಾತಿ ದ್ವೇಷ ಬರಬಾರದು. ಎಲ್ಲ ಜಾತಿಗಳ ಪ್ರಭಾವಿ ನಾಯಕರು ಬಿಜೆಪಿಯಾಗಬೇಕು. ಸಣ್ಣ ಸಣ್ಣ ಮಾತುಗಳನ್ನಾಡುವವರು ಸಣ್ಣದಾಗಿಯೇ ಇದ್ದು ವ್ಯರ್ಥ ಉತ್ಪನ್ನಗಳಾಗಿ ಉಳಿದುಬಿಡುತ್ತಾರೆ. ಪ್ರಧಾನ ಮಂತ್ರಿಗಳು ಒಂದೊಂದು ವಿಷಯವು ಒಂದೊಂದು ಸಮುದಾಯ ಹಾಗೂ ಒಂದೊಂದು ಜಾತಿಯನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿ ಸುಂದರ ಪುಷ್ಪಗುಚ್ಛ ತಯಾರು ಮಾಡುತ್ತಿದ್ದಾರೆ. ಹೀಗಾಗಿ ಎಲ್ಲರೂ ಪಕ್ಷ ಸಂಘಟನೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದರು.
ಒಬಿಸಿ ಹಾಸ್ಟೆಲ್, ವಸತಿ ಶಾಲೆ ತೆರೆಯಿರಿ:
ಕರ್ನಾಟಕದ ಭೂಮಿಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಹಾಸ್ಟೆಲ್‌ಗಳು, ಪ್ರತ್ಯೇಕ ವಸತಿ ಶಾಲೆಗಳು ನಿರ್ಮಾಣವಾಗಬೇಕು. ಇದನ್ನು ಬಿಜೆಪಿ ಸರ್ಕಾರ ಮಾಡುತ್ತದೆ. ಪ್ರತಿಯೊಂದು ಪ್ರದೇಶಗಳ ಒಬಿಸಿ ಬಗ್ಗೆ ಎಲ್ಲಾ ಪ್ರದೇಶಗಳಿಗೂ ತಿಳಿದಿರಬೇಕು. ಹೀಗಾಗಿ ದೇಶದ ಪ್ರತಿಯೊಂದು ಪ್ರದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಆದ ಕೆಲಸಗಳ ಮಾಹಿತಿ ನೀಡುವಂತೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್ ಅವರಿಗೆ ನಡ್ಡಾ ಸೂಚಿಸಿದರು.
ರಾಜಕೀಯ ಕಾರ್ಯಕರ್ತರ ಜೀವನ ಪಕ್ಷವಾಗಬೇಕು. ತಮ್ಮ ತಮ್ಮ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬುದನ್ನು ಕಾರ್ಯಕರ್ತರು ಅರಿತಿರಬೇಕು. ಕಾರ್ಯಕರ್ತರು ಸದಾ ಸಕ್ರಿಯರಾಗಿರಬೇಕು. ನಮ್ಮ ಪರಿಚಯ ಏನೆಂಬುದು ಕೇಳಿದರೆ ಅದು ಬಿಜೆಪಿಯಾಗಬೇಕು. ಎಲ್ಲರ ಜಾತಿ ಬಿಜೆಪಿಯಾಗಬೇಕು. ಇಂತಹ ಅಭ್ಯಾಸ ರೂಢಿಸಿಕೊಳ್ಳಬೇಕು. ಬಿಜೆಪಿ ಎನ್ನುವ ಜಾತಿಯೊಂದಿಗೆ ಎಲ್ಲರೂ ತಮ್ಮನ್ನು ಜೋಡಿಸಿಕೊಳ್ಳಬೇಕು. ಎಲ್ಲರ ಜಾತಿ ಬಿಜೆಪಿಯೇ ಆಗಬೇಕು. ನಾವು ವಿಶೇಷ ಚಿಕಿತ್ಸೆ ನೀಡುವುದಿಲ್ಲ. ನಮ್ಮ ಜಾತಿಯ ವ್ಯಕ್ತಿ ಬಿಜೆಪಿಯಲ್ಲಿದ್ದಾನೆ ಎಂಬ ಹೆಮ್ಮೆ ಜಾತಿ ಸಮುದಾಯದಲ್ಲಿ ಬರಬೇಕು ಎಂದು ಸಲಹೆ ನೀಡಿದರು.
ಪಂಚಾಯಿತಿ ಚುನಾವಣಾ ಅಖಾಡಕ್ಕೆ ಜೆಪಿ ನಡ್ಡಾ, ಚಿತ್ರದುರ್ಗದಲ್ಲಿ ಕೇಸರಿ ಕಲರವ!
ಮಧ್ಯರಾತ್ರಿಯಲ್ಲೂ ಪಕ್ಷಕ್ಕೆ ದುಡಿಯಬೇಕು:
ನಾವು ಬೇರೆ ಪಕ್ಷಗಳಿಂದ ಹೇಗೆ ಭಿನ್ನವಾಗಿದ್ದೇವೆ ಎಂಬುದನ್ನು ಅರಿಯಬೇಕು. ಕೇವಲ ಬಿಜೆಪಿ ಎಲ್ಲ ಪಕ್ಷಗಳಿಗಿಂತ ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ಬೇರೆ ಪಕ್ಷಗಳಲ್ಲಿ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ. ಅನ್ಯ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದರಲ್ಲಿಯೇ ತಲ್ಲೀನರಾಗಿದ್ದಾರೆ. ನಾವು ಬೇರೆಯವರಿಗಿಂತ ಭಿನ್ನ. ಅನಿವಾರ್ಯ ಮತ್ತು ಅತ್ಯಗತ್ಯ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲೂ ಪಕ್ಷಕ್ಕಾಗಿ ದುಡಿಯುವವರು ನಮ್ಮ ಬಿಜೆಪಿಯಲ್ಲಿದ್ದಾರೆ. ಹೀಗಾಗಿ ಬಿಜೆಪಿಯ ವೈಶಿಷ್ಟ್ಯವನ್ನು ಅರಿಯಬೇಕು. ಸಮಾಜವಾದಿ, ಡಿಎಂಕೆ, ಆರ್‌ಜೆಡಿ, ಜನತಾ ದಳದಂಥ ಪಕ್ಷಗಳಲ್ಲಿ ಯಾರು ಬೇಕಾದರೂ ಪ್ರಧಾನಿ, ರಾಜ್ಯಾಧ್ಯಕ್ಷ ಅಥವಾ ರಾಷ್ಟ್ರೀಯ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಇಂತಹ ಪಕ್ಷಗಳಲ್ಲಿ ಕುಟುಂಬದ ಸದಸ್ಯರಷ್ಟೇ ಅಧಿಕಾರ ಅನುಭವಿಸಲು ಸಾಧ್ಯ. ಆದರೆ, ಬಿಜೆಪಿಯಲ್ಲಿ ಯಾರು ಬೇಕಾದರೂ ಉನ್ನತ ಸ್ಥಾನ ಏರಬಹುದು ಎಂದು ನಡ್ಡಾ ಹೇಳಿದರು.
ಸಮಾರಂಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ್ ಮತ್ತಿತರರು ಉಪಸ್ಥಿತರಿದ್ದರು.
