ಚಿತ್ರದುರ್ಗ: 2023ಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ಸಿಎಂ ಬೊಮ್ಮಾಯಿ
* ಕೋಟೆನಾಡಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ರಣಕಹಳೆ
* ಮುರುಘಾ ಮಠದಲ್ಲಿ ನಡೆದ ರಾಜ್ಯ ಮಟ್ಟದ ಜನಪ್ರತಿನಿಧಿಗಳ ಸಮಾವೇಶ
* ಸಮಾಜದಲ್ಲಿ ಅಶಾಂತಿ ಸೃಷ್ಟಸುವುದನ್ನು ಯರೂ ಒಪ್ಪುವುದಿಲ್ಲ
ವರದಿ: ಕಿರಣ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜೂ.18): ಇಂದು ಚಿತ್ರದುರ್ಗ ನಗರ ಸಂಪೂರ್ಣ ಬಿಜೆಪಿಯ ಬಾವುಟಗಳಿಂದ ರಾರಾಜಿಸುವ ಮೂಲಕ ಸಂಪೂರ್ಣ ಕೇಸರಿಮಯವಾಗಿತ್ತು. ಅದಕ್ಕೆ ಕಾರಣ, ರಾಜ್ಯ ಮಟ್ಟದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಸಲುವಾಗಿ ಈ ಸಮಾವೇಶ ಎಂದು ಹೇಳಲಾಗಿತ್ತು. ಆದರೂ, ಮುಂಬರುವ ವಿಧಾನಸಭಾ ಚುನಾವಣೆಯ ತಯಾರಿ ಎಂದೇ ಬಿಂಬಿತವಾಗಿತ್ತು. ಜನಪ್ರತಿನಿಧಿಗಳ ಸಮಾವೇಶದಲ್ಲಿ ಬಿಜೆಪಿಯ ಘಟನುಘಟಿ ರಾಜ್ಯ ಮತ್ತು ರಾಷ್ಟ್ರದ ನಾಯಕರು ಭಾಗವಹಿಸಿದ್ದು ವಿಶೇಷವಾಗಿತ್ತು.
ಕೇಂದ್ರ ಸರಕಾರದ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಉದ್ದೇಶದಿಂದ ಇಂದು ಚಿತ್ರದುರ್ಗ ನಗರದಲ್ಲಿ ಮುರುಘಾ ಮಠದಲ್ಲಿ ರಾಜ್ಯಮಟ್ಟದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಮಠದ ಹಿಂಭಾಗದಲ್ಲಿರುವ ಅನುಭವ ಮಂಟಪದಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಬಿಜೆಪಿ ಘಟಕದಿಂದ ಆಯೋಜಿತವಾಗಿದ್ದ ಸಮಾವೇಶದಲ್ಲಿ ರಾಜ್ಯ ನಾನಾ ಭಾಗಗಳಿಂದ ಸಾವಿರಾರು ಬಿಜೆಪಿ ಬೆಂಬಲಿತ ಗ್ರಾ.ಪಂ ಅಧ್ಯಕ್ಷರು& ಉಪಾಧ್ಯಕ್ಷರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಮಾವೇಶದ ಮುಖ್ಯ ಆಕರ್ಷಣೆಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿದ್ದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗದ SJM ಆಂಗ್ಲ ಮಾದ್ಯಮ ಶಾಲಾ ಆವರಣದಲ್ಲಿರುವ ಹೆಲಿಪ್ಯಾಡ್ ಗೆ ಬಂದಿಳಿದ ನಡ್ಡಾ ಅವರಿಗೆ ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಾಥ್ ನೀಡಿದ್ದರು. ಚಿತ್ರದುರ್ಗಕ್ಕೆ ಬಂದಿಳಿದ ಕೂಡಲೇ ಮುರುಘಾಮಠಕ್ಕೆ ಭೇಟಿ ನೀಡಿದ ನಡ್ಡಾ ಅವರು ಮುರುಘಾ ಶರಣರನ್ನು ಆಶೀರ್ವಾದಿಸಿ ನಂತರ ಅವರಿಗೆ ಸನ್ಮಾನ ಮಾಡಿ ತಾವು ಕೂಡ ಸನ್ಮಾನ ಮಾಡಿಸಿಕೊಂಡರು ನಂತರ ನಡ್ಡಾ ಸಿಎಂ ಬೊಮ್ಮಾಯಿ, ಲಕ್ಷಣ ಸವದಿ, ಸೇರಿ ಮುರುಘಾ ಶರಣರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.
ಪಂಚಾಯಿತಿ ಚುನಾವಣಾ ಅಖಾಡಕ್ಕೆ ಜೆಪಿ ನಡ್ಡಾ, ಚಿತ್ರದುರ್ಗದಲ್ಲಿ ಕೇಸರಿ ಕಲರವ!
ಈ ವೇಳೆ ವಿವಿಧ ಮಠಾಧೀಶರನ್ನು ಅವರು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದರು. ನಂತರ ಕಾರ್ಯಕ್ರಮ ಆಯೋಜಿತವಾಗಿದ್ದ ಅನುಭವ ಮಂಟಪಕ್ಕೆ ಆಗಮಿಸಿದ ನಡ್ಡಾ ಅವರು, ಕಾರ್ಯಕ್ರಮದ ದಿಕ್ಸೂಚಿ ಭಾಷಣ ಮಾಡಿದರು. ಇಡೀ ದೇಶದ ಹಿತದೃಷ್ಟಿಯಿಂದ ಬಿಜೆಪಿ ಕೆಲಸ ಮಾಡುತ್ತಿದೆ. ನಾವು ಎಂದಿಗೂ ಅಭಿವೃದ್ಧಿ ಪರ. ಮಂಬರುವ ಚುನಾವಣೆಯಲ್ಲಿ ಪಂಚಾಯತಿಗಳಿಂದ ಕಮಲ ಅರಳಬೇಕು. ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಬಿಜೆಪಿ ಬೆಂಬಲಿತ ಜನಪ್ರತಿನಿಧಿಗಳಿಗೆ ನರೇಂದ್ರ ಮೋದಿ ಸರಕಾರದ ಯೋಜನೆಗಳನ್ನು ಮನೆ ಮನೆಗೂ ತಲುಪಿಸುವ ಮಾಡಬೇಕು. ಸಾಮಾಜಿಕ ಭದ್ರತೆ ಅಡಿ ಕೆಲಸವಾಗಬೇಕು ಎಂದು ಸಲಹೆ, ಸೂಚನೆ ನೀಡಿದರು.
ಇನ್ನು ಕಾರ್ಯಕ್ರಮದಲ್ಲಿ ನಡ್ಡಾ ಅವರ ಜೊತೆಗೆ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಸಚಿವರಾದ ಶ್ರೀ ರಾಮುಲು, ಬಿ.ಸಿ.ಪಾಟೀಲ್, ಶಾಸಕರಾದ ಎಂ.ಚಂದ್ರಪ್ಪ, ಕೆ.ಪೂರ್ಣಿಮಾ, ಗೂಳಿಹಟ್ಟಿ ಶೇಖರ್, ಜಿ.ಎಚ್.ತಿಪ್ಪಾರೆಡ್ಡಿ ಉಪಸ್ಥಿತರಿದ್ದರು. ಇನ್ನು ಕಾರ್ಯಕ್ರಮದಲ್ಲಿ ರಾಜ್ಯದೆಲ್ಲೆಡೆಯಿಂದ ಆಗಮಿಸಿದ್ದ ಬಿಜೆಪಿ ಬೆಂಬಲಿತ ಸ್ಥಳೀಯ ಸಂಸ್ಥೆ ಸದಸ್ಯರುಗಳ ಸಂಖ್ಯೆ ಅಂದಾಜು 5000 ದಷ್ಟಿತ್ತು. ಕಾರ್ಯಕರ್ತರು ಸಹ ಸುಮಾರು 10000 ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಎಂ ಬಸವರಾಜ ಬೊಮ್ಮಾಯಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿ ಅಭಿವೃದ್ಧಿ ಪರವಾಗಿರುವ ಪಕ್ಷ. ಕಾಂಗ್ರೆಸ್ ಈಗಾಗಲೇ ಮುಳುಗಿರುವ ಹಡಗು. ಮುಂಬರುವ ಚುನಾವಣೆಯಲ್ಲಿ ಅದು ಮತ್ತೆ ಮುಳುಗಡೆ ಕಾಣಲಿದೆ. ಕಾಂಗ್ರೆಸ್ ನವರು ದಿವಾಳಿ ಆಗಿದ್ದಾರೆ. ಅವರು ಬೌಧಿಕವಾಗಿ, ರಾಜಕೀಯವಾಗಿ, ಸಂಘಟನಾತ್ಮಕವಾಗಿ ದಿವಾಳಿ ಆಗಿದ್ದಾರೆ. ದೇಶದಲ್ಲಿ ಮತ್ತೊಮ್ಮೆ ಅರಾಜಕತೆ ಹುಟ್ಟಿಸುವ ಕೆಲಸ. ಅವರಿಗೆ ಶಾಂತಿ ಬೇಕಾಗಿಲ್ಲ ಅಧಿಕಾರ ಬೇಕು. ಅಧಿಕಾರಕ್ಕಾಗಿ ಯಾವ ಕೆಲಸವನ್ನು ಮಾಡುವುದುಕ್ಕೂ ತಯಾರಾಗಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಸುವುದನ್ನು ಯರೂ ಒಪ್ಪುವುದಿಲ್ಲ. ಕಾಂಗ್ರೆಸ್ ನಾಗರೀಕ ಸ್ವತಂತ್ರದ ಬಗ್ಗೆ ಮಾತನಾಡ್ತಾರೆ.
Chitradurga: ಚಳ್ಳಕೆರೆ ತಾಲ್ಲೂಕಿನ ದೇವಸ್ಥಾನ ಜೀರ್ಣೋದ್ಧಾರಕ್ಕೆ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನೆರವು!
ರಾಹುಲ್ ಗಾಂಧಿಯನ್ನ ವಿಚಾರಣೆಗೆ ಕರೆದರೆ ಇವರು ಪ್ರತಿಭಟನೆ ಮಾಡ್ತಾರೆ. ಗಾಂಧಿ ಕುಟುಂಬ ಕಾನೂನಿಗೆ ಮೀರಿ ದೊಡ್ಡವರಾ? ದೇಶದಲ್ಲಿ ಎಲ್ಲದಕ್ಕಿಂತ ದೊಡ್ಡದು ನ್ಯಾಯ. ಅದನ್ನು ಕೊಡುವುದು ಕಾನೂನು. ನಮ್ಮ ಹಲವು ನಾಯಕರನ್ನು ಜೈಲಿಗೆ ಇಟ್ಟಿದ್ರು. ನಾವೇನು ಅವಾಗ ಪ್ರತಿಭಟನೆ ಮಾಡಿದ್ವಾ? ಇವರ ಕಾಲದಲ್ಲಿ ಎಷ್ಟು ಹಣವನ್ನು ಲೂಟಿ ಮಾಡಿ ಅಧಿಕಾರಿ ದುರುಪಯೋಗ ಮಾಡಿಕೊಂಡಿದ್ದಾರೆ ನೆನಪು ಮಾಡಿಕೊಳ್ಳಿ. ಇವರಿಗೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಯಾವುದೇ ನೈತಿಕ ಹಕ್ಕಿಲ್ಲ. ಇಡೀ ದೇಶದಲ್ಲಿ ಕಾಂಗ್ರೆಸ್ ಮುಳುಗಿದೆ.
ಮುಂದಿನ ಬಾರಿಯೂ ಕಾಂಗ್ರೆಸ್ ಮುಳುಗಿ 2023ಕ್ಕೆ ಕಮಲ ಅರಳಲಿದೆ. ನಮ್ಮದು ಭಾರತ್ ಮಾತಾಕಿ ಜೈ ಅವರದ್ದು ಸೋನಿಯಾ ಮಾತಾಕಿ ಜೈ ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ಅಖಾಡ ಸಿದ್ಧ ಮಾಡಲೆಂದೆ ಈ ಸಮಾವೇಶ ಆಯೋಜಿಸಿತ್ತು. ಬಿಜೆಪಿ ಸರಕಾರದ ಸಾಧನೆಗಳ ಜೊತೆಗೆ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕೆಲಸದ ಬಗೆಗೂ ಬಿಜೆಪಿ ನಾಯಕರು ಸೂಚನೆ ನೀಡಿದರು. ಜನಪ್ರತಿನಿಧಿಗಳ ಜೊತೆಗೆ ರಾಜ್ಯದೆಲ್ಲೆಡೆಯಿಂದ ಕಾರ್ಯಕರ್ತರು ಸಹ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.