ಬೆಂಗಳೂರು (ಜೂ. 06): ಕೇಂದ್ರದ ಬಿಜೆಪಿ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷದ ಸಾಧನೆಯನ್ನು ನಾಡಿನ ಜನತೆಗೆ ತಲುಪಿಸುವ ಉದ್ದೇಶದಿಂದ ಪ್ರಸಕ್ತ ವರ್ಷವನ್ನು ಕೇಂದ್ರ ಸರ್ಕಾರದ ಸಾಧನೆಯ ವರ್ಷ ಎಂದು ಆಚರಿಸಲಾಗುತ್ತಿದ್ದು, ರಾಜ್ಯ ಬಿಜೆಪಿ ವತಿಯಿಂದ ‘ಮನೆ ಮನೆ ಅಭಿಯಾನ’ದ ಅಂಗವಾಗಿ ರಾಜ್ಯಾದ್ಯಂತ 50 ಲಕ್ಷ ಜನರನ್ನು ಸಂಪರ್ಕ ಮಾಡಲು ನಿರ್ಧರಿಸಲಾಗಿದೆ.

ಶನಿವಾರದಿಂದ ಆರಂಭವಾಗುವ ಈ ಅಭಿಯಾನ ಈ ತಿಂಗಳ 15ರವರೆಗೆ ನಡೆಯಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಕಂಟೇನ್ಮೆಂಟ್‌ ಹಾಗೂ ಸೀಲ್‌ಡೌನ್‌ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಪ್ರದೇಶಗಳಿಗೆ ಹೋಗುತ್ತೇವೆ. ಪ್ರತಿ ಬೂತ್‌ನಲ್ಲಿ 100 ಮನೆಗಳಿಗೆ ತೆರಳಲಾಗುವುದು. 50 ಲಕ್ಷ ಜನರನ್ನು ಸಂಪರ್ಕ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುತ್ತೇವೆ ಎಂದರು.

ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ: ರೇಣುಕಾಚಾರ್ಯ ಸ್ಪಷ್ಟನೆ

70 ವರ್ಷಗಳಿಂದ ಕಾಶ್ಮೀರ ಸಮಸ್ಯೆ ಮತ್ತು 700 ವರ್ಷಗಳಿಂದ ರಾಮಮಂದಿರ ಸಮಸ್ಯೆ ಹಾಗೆಯೇ ಇತ್ತು. ಇವೆರಡನ್ನು ನ್ಯಾಯಾಂಗದ ಚೌಕಟ್ಟಿನಲ್ಲಿ ಇತ್ಯರ್ಥ ಮಾಡಲಾಗಿದೆ. ತ್ರಿವಳಿ ತಲಾಖ್‌ಗೆ ಅಂತ್ಯ ಹಾಡಿ ಅಲ್ಪಸಂಖ್ಯಾತ ಹೆಣ್ಣುಮಕ್ಕಳಿಗೆ ನ್ಯಾಯ ನೀಡಿದ್ದೇವೆ. ವಿಶ್ವವನ್ನೇ ಬಾಧಿಸುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಜನತರಲ್ಲಿ ಜಾಗೃತಿ ಮೂಡಿಸಿದ್ದೇವೆ. ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರವು ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದು ಹೇಳಿದರು.

ಜೂ.10ರಂದು ಸಂಸದರು, ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ಬಿಜೆಪಿಯ ಎಲ್ಲಾ ಹಂತದ ಪದಾಧಿಕಾರಿಗಳು ಕೇಂದ್ರ ಸರ್ಕಾರದ ಸಾಧನೆಯ ಕರಪತ್ರವನ್ನು ಮನೆ-ಮನೆಗೆ ನೀಡಿ ‘ಮಹಾ ಸಂಪರ್ಕ ಅಭಿಯಾನ’ ನಡೆಯಲಿದೆ. ಜೂ.14ರಂದು ರಾಜ್ಯದ 50 ಲಕ್ಷ ಮನೆಗಳಲ್ಲಿ ಸ್ವದೇಶಿ ವಸ್ತುಗಳನ್ನು ಬಳಸಲು ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ‘ಸ್ವಾವಲಂಬಿ ಭಾರತ’ ಕಟ್ಟುವ ಸಂಕಲ್ಪ ದೀಕ್ಷೆ ನಡೆಯಲಿದೆ.

ರಾಜ್ಯಾದ್ಯಂತ ವರ್ಚುವಲ್‌ ರಾರ‍ಯಲಿ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಒಂದು ಕೋಟಿ ಮೊಬೈಲ್‌ ಸಂಪರ್ಕ ಮಾಡಿ ಪ್ರಧಾನಿಯವರ ಸಾಧನೆಯನ್ನು ತಿಳಿಸಲಿದ್ದೇವೆ. ಜೂ.14ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಸಾಮಾಜಿಕ ಜಾಲತಾಣದ ಮೂಲಕ ಒಂದು ಲಕ್ಷ ಜನರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ರವಿಕುಮಾರ್‌ ಮಾಹಿತಿ ನೀಡಿದರು.