ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಸರ್ಕಾರದ ಸ್ಥಿರತೆಯ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರೆ ಸರ್ಕಾರ ಪತನವಾಗುವುದು ಖಚಿತ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್ ಅವರ ಸಿಎಂ ಆಗುವ ಆಸೆ ಕಷ್ಟಸಾಧ್ಯ ಎಂದಿದ್ದಾರೆ.

ಹುಬ್ಬಳ್ಳಿ (ನ.8): ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಬೇಕು. ಇಲ್ಲದಿದ್ದರೆ ಸರ್ಕಾರವೇ ಪತನವಾಗುತ್ತೆ ಎಂದು ಮಾಜಿ ಸಿಎಂ, ಹಾಲಿ ಸಂಸದ ಜಗದೀಶ್ ಶೆಟ್ಟರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ರಾಜಣ್ಣ ನಿವಾಸದಲ್ಲಿನ ಔತಣ ಕೂಟ ಏರ್ಪಡಿಸಿರುವುದು ರಾಜಕಾರಣ ಹಿನ್ನೆಲೆಯದ್ದು. ಇತ್ತ ಕಬ್ಬಿನ ದರಕ್ಕಾಗಿ ಸಭೆ, ಅತ್ತ ಔತಣಕೂಟ ಮಾಡ್ತಾರೆ ಎಂದು ಟೀಕಿಸಿದರು.

ರಾಜಣ್ಣ ಔತಣಕೂಟ ರದ್ದು ಮಾಡಿದ್ದು ಯಾಕೆ?

ಸಿಎಂ ಸಿದ್ದರಾಮಯ್ಯ ರೈತರು, ಶುಗರ್ ಫ್ಯಾಕ್ಟರಿ ಮಾಲೀಕರನ್ನ ಸಭೆಗೆ ಕರೀತಿರಿ. ಆದರೆ ಕೇವಲ ಅರ್ಧ ಗಂಟೆ ಸಭೆ ಮಾಡಲು ಆಗುತ್ತಾ? ರಾಜಣ್ಣ ಅವರಿಗೆ ಮೊದಲೇ ಬರಲು ಆಗೋಲ್ಲ ಅಂತಾ ಹೇಳಬೇಕಿತ್ತು. ಸಭೆ ನಡೆಸಬೇಕಿದೆ ಅಂತಾ ಗಟ್ಟಿಯಾಗಿ ಹೇಳಬೇಕಿತ್ತು. ಅದನ್ನು ಬಿಟ್ಟು ಈಗ ಕೊನೆ ಗಳಿಗೆಯಲ್ಲಿ ಔತಣಕೂಟ ರದ್ದು ಮಾಡಿದ್ದಾರೆ ಎಂದರು.

ಇನ್ನು ನವೆಂಬರ್ ಕ್ರಾಂತಿ ಅನ್ನೋದು ಬಿಜೆಪಿಯವರ ಅಪಪ್ರಚಾರ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಜಗದೀಶ್ ಶೆಟ್ಟರ್. ನವೆಂಬರ್ ಕ್ರಾಂತಿ ಬಗ್ಗೆ ಬಿಜೆಪಿ ನಾಯಕರು ಹೇಳಿಲ್ಲ. ನಿನ್ನೆ ಔತಣ ಕೂಟ ಕರೆದವರೇ ಹೇಳಿದ್ದು. ಕ್ರಾಂತಿ ಆಗುತ್ತೋ, ಭ್ರಾಂತಿ ಆಗುತ್ತೋ ಗೊತ್ತಿಲ್ಲ. ಆದರೆ ಏನೋ ಒಂದು ಆಗೇ ಆಗುತ್ತೆ. ನವೆಂಬರ್ ಅಂತ್ಯದಲ್ಲಿ ರಾಜಕೀಯ ಬದಲಾವಣೆ ಆಗುತ್ತೆ ಎಂದರು.

ಡಿಕೆ ಶಿವಕುಮಾರ್ ಸಿಎಂ ಆಗಲ್ಲ?

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಅನ್ನೋ ಮನೋಭಾವದಲ್ಲಿ ಅವರ ಹಿಂಬಾಲಕರು ಇದ್ದಾರೆ

ಆದರೆ ಕಷ್ಟಸಾಧ್ಯ. ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಮುಂದುವರಿಯುತ್ತಾರೆ. ಸಿದ್ದರಾಮಯ್ಯ ಕೆಳಗಿಳಿದರೆ ಈ ಸರ್ಕಾರವೇ ಪತನವಾಗೋದು ಖಚಿತ ಎಂದರು. ಇದೇ ವೇಳೆ ಡಿಕೆ ಶಿವಕುಮಾರ ಎಲ್ಲಿಯೂ ಸಿಎಂ ಆಗಿ ಸಿದ್ದರಾಮಯ್ಯ ಅವರೇ ಐದು ವರ್ಷ ಇರುತ್ತಾರೆ ಎಂದು ಹೇಳಿಲ್ಲ. ಡಿಕೆಶಿ ಬಹಿರಂಗವಾಗಿ ಹೇಳಲಿ ನೋಡೋಣ. ಹೇಳಿಲ್ಲ ಅಂದ್ರೆ ನಾಯಕತ್ವ ಬದಲಾವಣೆಯ ಕೆಲಸ ನಡೀತಾ ಇದೆ ಅಂತ ಅರ್ಥ ಇದೆ ರೀತಿ ಮುಂದುವರೆದರೆ ಸರ್ಕಾರ ಪತನ ಆಗೋದು ಖಚಿತ ಎಂದರು.

ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರ ತುಷ್ಟೀಕರಣ ಇಲ್ಲಿವರೆಗೆ ಬಂದಿದೆ!

ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲಿನಲ್ಲಿರುವ ಖೈದಿಗಳಿಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎಂಬ ಆರೋಪ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್ ಅವರು. ಉಗ್ರರಿಗೆ ರಾಜಾತಿಥ್ಯ ನೀಡುವಲ್ಲಿ ಸಚಿವರು, ಅಧಿಕಾರಿಗಳು ಶಾಮೀಲು ಆಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಉಗ್ರರಿಗೆ, ಕೈದಿಗಳಿಗೆ ಫೋನ್ ಇತ್ಯಾದಿಗಳನ್ನು ಪೂರೈಸಲಾಗ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಇದೆಲ್ಲ ಮಾಮೂಲು ಎಂಬಂತೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಏನೂ ಬೇಕಾದ್ರೂ ನಡೆಯುತ್ತದೆ. ಅದರಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣ ಹೆಚ್ಚಾಗಿದೆ. ಜೈಲಿನಲ್ಲಿರುವ ಭಯೋತ್ಪಾದಕರಿಗೂ ರಾಜಾತಿಥ್ಯ ಕೊಡಲಾಗುತ್ತಿದೆ. ಆ ಮೂಲಕ ಅಕ್ರಮ ಚಟುವಟಿಕೆ ನಡೆಯುವಂತೆ ಮಾಡಿದ್ದಾರೆ. ಇದರಲ್ಲಿ ಕೆಲ ಸಚಿವರು, ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಲಷ್ಕರ್ ಇರಲಿ, ಉಮೇಶ್ ರೆಡ್ಡಿ ಇರಲಿ ಶಿಕ್ಷೆಗೊಳಗಾಗಿರುವ ಖೈದಿಗಳಿಗೆ ರಾಜ್ಯಾತಿಥ್ಯ ಕೊಡುವುದು ಕೈಬಿಡಬೇಕು. ಸರ್ಕಾರ ಈ ಕೂಡಲೇ ಎಚ್ಚರಗೊಂಡು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.