ಸಿದ್ದರಾಮಯ್ಯ ಆಡಳಿತದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ಕಾಂಗ್ರೆಸ್ ಎದುರು ಹಾಕಿಕೊಂಡಿದೆ. ಇದು ಕಾಂಗ್ರೆಸ್ಸಿನ ಅಂತ್ಯದ ಆರಂಭ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು.
ಹುಬ್ಬಳ್ಳಿ (ಅ.22): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವನ್ನು ಕಾಂಗ್ರೆಸ್ ಎದುರು ಹಾಕಿಕೊಂಡಿದೆ. ಇದು ಕಾಂಗ್ರೆಸ್ಸಿನ ಅಂತ್ಯದ ಆರಂಭ ಎಂದು ಸಂಸದ ಜಗದೀಶ್ ಶೆಟ್ಟರ್ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಹಿಡಿತ ಕಳೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ, ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ. ಭ್ರಷ್ಟಾಚಾರ ಮಿತಿ ಮೀರಿದೆ ಇದನ್ನೆಲ್ಲ ಮರೆಮಾಚಲು ಆರೆಸ್ಸೆಸ್ ಹಿಂದೆ ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಆರೆಸ್ಸೆಸ್ ಬಗ್ಗೆ ಮಾತನಾಡುತ್ತಾರೆ. ಗುತ್ತಿಗೆದಾರರ ಆರೋಪಕ್ಕೆ ಕೋರ್ಟ್‌ಗೆ ಹೋಗಲಿ ಎಂದು ಸಿದ್ದರಾಮಯ್ಯ ಹೇಳುತ್ತಿರುವುದು ಸರಿಯಲ್ಲ ಎಂದರು.
ಕಾಂಗ್ರೆಸ್ಸಿಗೆ ಕರ್ನಾಟಕ ಎಟಿಎಂ: ರಾಜ್ಯ ಸರ್ಕಾರ ಇಲ್ಲಿಯ ಹಣ ಲೂಟಿ ಮಾಡಿ ಬಿಹಾರ ಚುನಾವಣೆಗೆ ಕಳುಹಿಸುತ್ತಿದೆ. ಒಂದೊಂದು ಇಲಾಖೆಗೆ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಈಚೆಗೆ ಬಿಹಾರ ಚುನಾವಣೆ ಹಿನ್ನೆಲೆಯಲ್ಲಿಯೇ ಮುಖ್ಯಮಂತ್ರಿಗಳು ಔತಣಕೂಟ ಏರ್ಪಡಿಸಿದ್ದರು. ಬೆಂಗಳೂರು ಜನ ಸರ್ಕಾರದ ವರ್ತನೆಯಿಂದ ಭ್ರಮನಿರಸನಗೊಂಡಿದ್ದಾರೆ. ಎಲ್ಲ ಇಲಾಖೆಗಳಲ್ಲಿಯೂ ಭ್ರಷ್ಟಾಚಾರ ಮಿತಿ ಮೀರಿದೆ. ವಿವಿಧ ಇಲಾಖೆಗಳಲ್ಲಿ ಲೂಟಿ ಮಾಡಿರುವ ಹಣವನ್ನೆಲ್ಲ ಬಿಹಾರ ಚುನಾವಣೆಗೆ ಕಳುಹಿಸಲಾಗುತ್ತಿದೆ ಎಂದು ಶೆಟ್ಟರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಮಂಡ್ಯದಲ್ಲಿ ಪ್ರಿಯಾಂಕ್ ವಿರುದ್ಧ ‘ಐ ಲವ್ ಆರೆಸ್ಸೆಸ್’ ಅಭಿಯಾನ
ಆರ್‌ಎಸ್‌ಎಸ್ ಚಟುವಟಿಕೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಹೇಳಿಕೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ನಗರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ‘ಐ ಲವ್ ಆರ್‌ಎಸ್‌ಎಸ್’ ಪೋಸ್ಟರ್ ಅಭಿಯಾನ ನಡೆಸಿದರು ನಗರದ ಪ್ರಧಾನ ಅಂಚೆ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪೋಸ್ಟರ್‌ಗಳನ್ನು ಅಂಗಡಿ ಮುಂಗಟ್ಟುಗಳ ಮುಂದೆ, ವಾಹನಗಳಿಗೆ ಅಂಟಿಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಗತ್ತಿನ ದೊಡ್ಡ ದೇಶಭಕ್ತ ಸಂಘಟನೆಯಾದ ಆರ್‌ಎಸ್‌ಎಸ್ ಸುಮಾರು 80 ಸಾವಿರ ಶಾಖೆಗಳು, ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿದೆ. ಆರ್‌ಎಸ್‌ಎಸ್ ಇಲ್ಲದಿದ್ದರೆ ನೆರೆಯ ಶ್ರೀಲಂಕಾ, ಬಾಂಗ್ಲಾ ಹಾಗೂ ನೇಪಾಳ ದೇಶಗಳಲ್ಲಿ ಆದ ಗಲಭೆಗಳು ನಡೆಯುತ್ತಿದ್ದವು ಎಂದು ಕಿಡಿಕಾರಿದರು. ಭಾರತವನ್ನು ಮತ್ತೊಮ್ಮೆ ವಿಭಜನೆ ಮಾಡಲು ಬಾಹ್ಯ ಶಕ್ತಿಗಳು ‘ಘಜ್ವಾ ಏ ಹಿಂದ್’ ಹೆಸರಿನಲ್ಲಿ ಜಾಗತಿಕ ಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ. ಬಾಂಗ್ಲಾ ದೇಶದ ಯುನಿವರ್ಸಿಟಿಗಳಲ್ಲಿ ಈ ಬಗ್ಗೆ ಹತ್ತಾರು ವರ್ಷದಿಂದ ಸಂಶೋಧನೆ ನಡೆಯುತ್ತಿದೆ. 2050ರ ವೇಳೆಗೆ ಮತ್ತೊಮ್ಮೆ ಭಾರತವನ್ನು ಧರ್ಮದ ಹೆಸರಿನಲ್ಲಿ ಭಾಗ ಮಾಡುವ ಪಿತೂರಿ ನಡೆಯುತ್ತಿದೆ. ಅದಕ್ಕೆ ಇಂದು ತಡೆಗೋಡೆಯಾಗಿ ನಿಂತಿರುವುದು ಆರ್‌ಎಸ್‌ಎಸ್ ಸಂಘಟನೆ ಎಂದರು.
