Asianet Suvarna News Asianet Suvarna News

ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಧರಣಿ: ಮೂಡಿಗೆರೆ ಶಾಸಕನ ಪ್ರತಿಭಟನೆ!

* ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಮೂಡಿಗೆರೆ ಶಾಸಕನ ಪ್ರತಿಭಟನೆ

* ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಧರಣಿ!

* ಅನುದಾನ ನೀಡುತ್ತಿಲ್ಲ ಎಂದು ಎಂ.ಪಿ.ಕುಮಾರಸ್ವಾಮಿ ಕಣ್ಣೀರು

* ಸ್ಥಳಕ್ಕಾಗಮಿಸಿ ಕಂದಾಯ ಸಚಿವ ಅಶೋಕ್‌ ಮನವೊಲಿಕೆ

* ಭರವಸೆ ಸಿಕ್ಕ ಬಳಿಕ ಧರಣಿ ಕೈಬಿಟ್ಟಶಾಸಕ

 

BJP MLA MP Kumaraswamy protests against own party for failing to provide flood aid pod
Author
Bangalore, First Published Aug 13, 2021, 7:48 AM IST
  • Facebook
  • Twitter
  • Whatsapp

ಬೆಂಗಳೂರು(ಆ.13): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದು, ಅನುದಾನ ತಾರತಮ್ಯದ ಬಗ್ಗೆ ಕಣ್ಣೀರು ಹಾಕಿದ್ದಾರೆ.

ಮೂಡಿಗೆರೆ ಕ್ಷೇತ್ರವನ್ನು ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅನುದಾನದ ಪಟ್ಟಿಗೆ ಸೇರಿಸದ ಬಗ್ಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಮುಂದೆ ಗುರುವಾರ ಧರಣಿ ನಡೆಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಸಮಸ್ಯೆ ಆಲಿಸಿದರು. ಸಚಿವರ ಮುಂದೆ ತಮ್ಮ ಕ್ಷೇತ್ರದ ಸಮಸ್ಯೆಗಳು ಹಾಗೂ ಅನುದಾನ ನೀಡದ ಬಗ್ಗೆ ಹೇಳುತ್ತಾ ಕುಮಾರಸ್ವಾಮಿ ಕಣ್ಣೀರಿಟ್ಟರು.

‘ನಾನು ಸಚಿವ ಸ್ಥಾನ ಕೊಡಲೇಬೇಕು ಅಂತಾ ಕೇಳಿದ್ದೀನಾ? ನನ್ನ ಕ್ಷೇತ್ರಕ್ಕೆ ಏಕೆ ಅನುದಾನ ಕೊಡುತ್ತಿಲ್ಲ? ನಾನು ಕೂಡ ಹಿರಿಯ ಶಾಸಕ. ನನಗೇ ಹೀಗೆ ಮಾಡೋದು ಸರಿಯೇ? ಸಚಿವ ಸ್ಥಾನ ಕೊಡದೇ ಇದ್ದಾಗಲೂ ನಾನು ನಿಮ್ಮೆಲ್ಲರ ಮಾತು ಕೇಳಿದ್ದೇನೆ. ಪಕ್ಷಕ್ಕೆ ಪ್ರಾಮಾಣಿಕವಾಗಿದ್ದೇನೆ. ಯಾವತ್ತೂ ಬ್ಲ್ಯಾಕ್‌ಮೇಲ್‌ ರಾಜಕಾರಣ ಮಾಡಿಲ್ಲ. ಹೀಗಿದ್ದರೂ ನನ್ನ ಮಾತಿಗೆ ಏಕೆ ಬೆಲೆ ನೀಡುತ್ತಿಲ್ಲ’ ಎಂದು ಬೇಸರದಿಂದ ಪ್ರಶ್ನಿಸಿ ತಮ್ಮ ಅಳಲು ತೋಡಿಕೊಂಡರು. ಈ ವೇಳೆ ಕುಮಾರಸ್ವಾಮಿ ಅವರನ್ನು ಸಮಾಧಾನಪಡಿಸಿದ ಸಚಿವ ಆರ್‌.ಅಶೋಕ್‌, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಹೀಗಾಗಿ ಧರಣಿ ಕೈಬಿಟ್ಟರು.

ಸಮಸ್ಯೆ ಪರಿಹರಿಸಲು ಕ್ರಮ- ಅಶೋಕ್‌:

ಬಳಿಕ ಮಾತನಾಡಿದ ಸಚಿವ ಅಶೋಕ್‌, ನಾನು ಮತ್ತು ಶಾಸಕ ಎಂ.ಪಿ.ಕುಮಾರಸ್ವಾಮಿ 20 ವರ್ಷದಿಂದ ಸ್ನೇಹಿತರು. ಅನುದಾನದ ಸಮಸ್ಯೆ ಆಗಿದೆ. ಬೆಳೆ ಪರಿಹಾರ ನೀಡುವಂತೆ ವಿನಂತಿ ಮಾಡಿದ್ದಾರೆ. ಮುಖ್ಯಮಂತ್ರಿ ಅವರ ಬಳಿ ಮಾತನಾಡಿ ಬಿಡುಗಡೆ ಮಾಡಬೇಕಿರುವ ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮೂಡಿಗೆರೆ ಕ್ಷೇತ್ರಕ್ಕೆ ಎಸ್‌ಡಿಆರ್‌ಎಫ್‌ ಅನುದಾನ ತಪ್ಪಿಸುತ್ತಿರುವುದು ಸಿ.ಟಿ.ರವಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ರವಿ ನನಗೆ 12 ದಿನದಿಂದ ಫೋನ್‌ ಸಹ ಮಾಡಿಲ್ಲ. ಸಿ.ಟಿ.ರವಿ, ಜೀವರಾಜ್‌, ಬೆಳ್ಳಿ ಪ್ರಕಾಶ್‌, ತರೀಕೆರೆ ಶಾಸಕರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ ಎಂದರು.

ಇದಕ್ಕೂ ಮೊದಲು ಸಚಿವ ಅಶೋಕ್‌ ಅವರು ಧರಣಿ ನಿರತ ಸ್ಥಳಕ್ಕೆ ತಮ್ಮ ಆಪ್ತ ಕಾರ್ಯದರ್ಶಿ ಪ್ರಶಾಂತ್‌ ಎಂಬುವರನ್ನು ಮಾತುಕತೆಗೆ ಕಳುಹಿಸಿದ್ದರು. ಇದರಿಂದ ಗರಂ ಆಗಿದ್ದ ಎಂ.ಪಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು. ಬಳಿಕ ಅಶೋಕ್‌ ಸ್ಥಳಕ್ಕೆ ಆಗಮಿಸಿದರು.

ಅನುದಾನ ಬಿಡುಗಡೆ ಬಗ್ಗೆ ಸೂಕ್ತ ನಿರ್ಧಾರ

ಎಂ.ಪಿ. ಕುಮಾರಸ್ವಾಮಿ ಅವರ ಜತೆ ಈಗಾಗಲೇ ಮಾತನಾಡಿದ್ದು, ಅವರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಮತ್ತೆ ಅವರ ಜತೆ ಮಾತನಾಡಲಿದ್ದೇನೆ. ಅವರ ಕ್ಷೇತ್ರಕ್ಕೆ ಬೇಕಾದ ಅನುದಾನ ಬಿಡುಗಡೆ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.

- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Follow Us:
Download App:
  • android
  • ios