ಜಾಮೀನಿಗಾಗಿ ಮಾಡಾಳ್ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಮೊರೆ: ಪ್ರಕರಣ ರದ್ದು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಕೆ
ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರು (ಮಾ.07): ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಮಾಡಾಳು ವಿರೂಪಾಕ್ಷಪ್ಪ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದು, ಲೋಕಾಯುಕ್ತ ಪೊಲೀಸರು ಮತ್ತು ದೂರುದಾರ ಶ್ರೇಯಸ್ ಕಶ್ಯಪ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದಾರೆ. ವಿರೂಪಾಕ್ಷಪ್ಪ ಪರ ವಕೀಲ ಸಂದೀಪ್ ಪಾಟೀಲ್ ಅವರು ಸೋಮವಾರ ಬೆಳಗ್ಗೆ ನ್ಯಾಯಮೂರ್ತಿ ಕೆ.ನಟರಾಜನ್ ಅವರ ಪೀಠದ ಮುಂದೆ ಹಾಜರಾಗಿ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿ ಮೆಮೊ ಸಲ್ಲಿಸಿದರು. ಅದಕ್ಕೆ ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ನಿಗದಿಪಡಿಸಿತು.
ವಿರೂಪಾಕ್ಷಪ್ಪ ಅವರ ಪುತ್ರರೂ ಆದ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳು ಅವರು ದೂರುದಾರ ಶ್ರೇಯಸ್ ಕಶ್ಯಪ್ ನಿರ್ದೇಶಕರಾಗಿರುವ ಮೆಸೆರ್ಸ್ ಡಿಲಿಸಿಯಾ ಕೆಮಿಕಲ್ಸ್ ಕಂಪನಿಯಿಂದ ಕೆಮಿಕಲ್ ಆಯಿಲ್ ಖರೀದಿಯ ಟೆಂಡರ್ ಹಂಚಿಕೆ ಮಾಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ರು. ಲಂಚ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಾ.2ರಂದು ಎಫ್‌ಐಆರ್ ದಾಖಲಿಸಿದ್ದಾರೆ.
ಕಾಂಗ್ರೆಸ್‌ನಿಂದ ದೇಶದ ಅಭಿವೃದ್ಧಿಯಾಗಿಲ್ಲ: ಸಚಿವ ಗೋವಿಂದ ಕಾರಜೋಳ
ಈ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಮೊದಲ ಆರೋಪಿಯಾದರೆ, ಪ್ರಶಾಂತ್ ಮಾಡಾಳು ಎರಡನೇ ಆರೋಪಿ. ಇದರಿಂದ ವಿರೂಪಾಕ್ಷಪ್ಪ ಹೈಕೋರ್ಟ್ ಮೊರೆ ಹೋಗಿದ್ದು, ನಾನು ಲಂಚ ಕೇಳಿಲ್ಲ ಹಾಗೂ ಸ್ವೀಕರಿಸಿಲ್ಲ. ನನ್ನ ಮೇಲಿನ ಆರೋಪಕ್ಕೆ ಸಾಕ್ಷ್ಯವೂ ಇಲ್ಲ. ಆದರೂ ನನ್ನ ವಿರುದ್ಧ ಕಾನೂನು ಬಾಹಿರವಾಗಿ ಮತ್ತು ಕಿರುಕುಳ ಕೊಡುವ ದುರುದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ. ತನಿಖಾಧಿಕಾರಿಗಳಿಂದ ನನಗೆ ಬಂಧನ ಭೀತಿಯಿದ್ದು, ನಿರೀಕ್ಷಣಾ ಜಾಮೀನು ನೀಡಬೇಕು ಎಂದು ವಿರೂಪಾಕ್ಷಪ್ಪ ಕೋರಿದ್ದಾರೆ.
ಎಫ್‌ಐಆರ್ ರದ್ದತಿಗೆ ಅರ್ಜಿ: ಇದೇ ವೇಳೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ವಿರೂಪಾಕ್ಷಪ್ಪ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಜತೆಗೆ, ಅರ್ಜಿ ಇತ್ಯರ್ಥವಾಗುವವರೆಗೂ ಲೋಕಾಯುಕ್ತ ಪೊಲೀಸರ ತನಿಖೆ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಗೆ ತಡೆ ನೀಡುವಂತೆ ಮಧ್ಯಂತರ ಮನವಿ ಮಾಡಿದ್ದಾರೆ.
ದೂರುದಾರರಿಗೆ ಯಾವುದೇ ಅನುಕೂಲ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಮತ್ತು ಲಂಚ ಸ್ವೀಕರಿಸಿದ ಬಗ್ಗೆ ನನ್ನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ. ಪ್ರಕರಣದ ಎರಡನೇ ಆರೋಪಿಯಾದ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ಪುತ್ರ ಪ್ರಶಾಂತ್ ಮಾಡಾಳು ಅವರಿಂದ ಲಂಚದ ಹಣ ಜಪ್ತಿ ಮಾಡಲಾಗಿದೆ ಎಂಬ ಏಕೈಕ ಕಾರಣಕ್ಕೆ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅರ್ಜಿಯಲ್ಲಿ ವಿರೂಪಾಕ್ಷಪ್ಪ ಆಕ್ಷೇಪಿಸಿದ್ದಾರೆ.
ದೇಶದಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ತಬ್ಬಲಿ: ಬಿ.ಎಸ್.ಯಡಿಯೂರಪ್ಪ
ಅಲ್ಲದೆ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಲಿಮಿಟೆಡ್ ವ್ಯವಸ್ಥಾಪಕರು ಟೆಂಡರ್ ಕರೆದಿದ್ದಾರೆ. ದೂರುದಾರರಿಗೆ ಟೆಂಡರ್ ಹಂಚಿಕೆ ಹಾಗೂ ಅವರಿಂದ ಕೆಮಿಕಲ್ ಆಯಿಲ್ ಖರೀದಿಗೆ ಲಿಮಿಟೆಡ್‌ನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ. ಇಡೀ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ. ದೂರುದಾರರು ಕೇವಲ ವೈಯಕ್ತಿಕ ಹಿತಾಸಕ್ತಿ ಮತ್ತು ದುರುದ್ದೇಶದಿಂದ ದೂರು ದಾಖಲಿಸಿದ್ದಾರೆ. ಆದ್ದರಿಂದ ಮಾ.2ರಂದು ತಮ್ಮ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ವಿರೂಪಾಕ್ಷಪ್ಪ ಕೋರಿದ್ದಾರೆ.