ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಾ.ಭರತ್ ಶೆಟ್ಟಿ ಆರೋಪಿಸಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕೇಸ್ ದಾಖಲಿಸಿ ಸರ್ಕಾರ ಸ್ವಾಸ್ಥ್ಯ ಕೆಡಿಸಿಕೊಳ್ಳುತ್ತಿದೆ, ಹಿಂದೂಗಳ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಮೂಲ್ಕಿ (ಜೂ.9): ರಾಜ್ಯ ಸರ್ಕಾರದ ಬೇಜವಾಬ್ದಾರಿ ಆಡಳಿತ ಮತ್ತು ಓಲೈಕೆಯ ರಾಜಕಾರಣದಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಹೊರತು ಹಿಂದೂ ನಾಯಕರಿಂದ ಅಲ್ಲ. ಓಲೈಕೆಯ ತಂತ್ರವಾಗಿ ಆರ್‌ಎಸ್‌ಎಸ್‌ ನೇತಾರ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ಮೇಲೆ ಕೇಸು ದಾಖಲಿಸಿ ಸರ್ಕಾರ ಮತ್ತಷ್ಟು ಸ್ವಾಸ್ಥ್ಯ ಕೆಡಿಸಲು ಮುಂದಾಗಿರುವಂತೆ ಕಾಣುತ್ತದೆ. ಜೇನು ಗೂಡಿಗೆ ಕಲ್ಲು ಹೊಡೆಯಲು ಹೋದರೆ ಏನಾಗುತ್ತದೆ ಎಂಬುದು ಸರ್ಕಾರಕ್ಕೆ ತಿಳಿದಿರಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ದೇಶದ ಸಂವಿಧಾನ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳುವ, ಮಾತನಾಡುವ ಸ್ವಾತಂತ್ರ್ಯ ನೀಡಿದೆ. ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹಿಂದೂ ಸಮಾಜದ ಮೇಲಾಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿದರೆ ಅದು ಪ್ರಚೋದನೆಯೆ ಎಂದು ಪ್ರಶ್ನಿಸಿರುವ ಅವರು, ಹಿಂದೂಗಳ ಧ್ವನಿಯನ್ನು ಕೇಸ್ ಹಾಕುವ ಮೂಲಕ ಅಡಗಿಸಲು ಸಾಧ್ಯವಾಗದು ಎಂದಿದ್ದಾರೆ.

ಹಿಂದೂ ನಾಯಕರ ಮನೆ ಫೋಟೋ ತೆಗೆಯೋದು, ನಡು ರಾತ್ರಿ ಮನೆಗೆ ತೆರಳಿ ವಿಚಾರಣೆ ನೆಪದಲ್ಲಿ ತೊಂದರೆ ಕೊಡುವುದು ಕಾನೂನು ಮೀರಿದ ನಡವಳಿಕೆಯನ್ನು ಪೊಲೀಸರು ತೋರುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ಕಾರ್ಯಕರ್ತರ ಮನೆಗೆ ನುಗ್ಗಿ ವಿಚಾರಣೆ ,ಬೆದರಿಸುವ ವರ್ತನೆ ತುರ್ತು ಪರಿಸ್ಥಿತಿ ನೆನಪಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.