ಬಳ್ಳಾರಿಯ ಸಂಡೂರು ಅರಣ್ಯದಲ್ಲಿ 10,000 ವರ್ಷಗಳಷ್ಟು ಹಳೆಯದಾದ ಶಿಲಾಯುಗದ ಗುಹೆ ವಾಸಸ್ಥಾನ ಪತ್ತೆಯಾಗಿದೆ. ಕಾರ್ಬನ್ ಡೇಟಿಂಗ್ ಮೂಲಕ ಇದು ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದಲ್ಲಿರುವ ಭಾರತದ ಅತ್ಯಂತ ಹಳೆಯ ಗುಹಾ ವಾಸಸ್ಥಾನವೆಂದು ದೃಢಪಟ್ಟಿದೆ.

ಸಂಡೂರು (ಬಳ್ಳಾರಿ): ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಂಡೂರು ಅರಣ್ಯ ಪ್ರದೇಶದಲ್ಲಿರುವ ಗುಹೆಯೊಂದು ದೇಶದಲ್ಲೇ ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದ ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಪತ್ತೆಯಾಗಿರುವ ಅತ್ಯಂತ ಹಳೆಯ ಗುhe ವಾಸಸ್ಥಾನ (Oldest Cave Habitat) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾರ್ಬನ್ ಡೇಟಿಂಗ್ (Carbon Dating) ತಂತ್ರಜ್ಞಾನದ ಮೂಲಕ ಈ ಗುಹೆಯು ಶಿಲಾಯುಗದ (Stone Age) ಕಾಲದ್ದಾಗಿದ್ದು, ಇಲ್ಲಿ ಆದಿಮಾನವರು ವಾಸಿಸುತ್ತಿದ್ದರು ಎಂಬ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಪುರಾತತ್ವಶಾಸ್ತ್ರಜ್ಞರು ಘೋಷಿಸಿದ್ದಾರೆ.

ಖ್ಯಾತ ಪುರಾತತ್ವಶಾಸ್ತ್ರಜ್ಞ ರವಿ ಕೋರಿಸೆಟ್ಟರ್ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, "ಗುಹೆಯ ಮೇಲ್ಮೈ ಭಾಗದಲ್ಲಿ ದೊರೆತ ಮಾನವನ ಮೂಳೆಯ ತುಣುಕು ಹಾಗೂ ಸೂಕ್ಷ್ಮ ಶಿಲಾ ಉಪಕರಣದ (Microlith) ಮೇಲೆ ಅಹಮದಾಬಾದ್‌ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ (PRL) ಮತ್ತು ಐಐಟಿ ಗಾಂಧಿನಗರದ ಆರ್ಕಿಯಾಲಜಿ ಸೈನ್ಸ್ ಸೆಂಟರ್ ಸಹಯೋಗದೊಂದಿಗೆ ರೇಡಿಯೋಕಾರ್ಬನ್ ಡೇಟಿಂಗ್ ನಡೆಸಲಾಯಿತು. ಈ ಪರೀಕ್ಷೆಯಿಂದ ಈ ಮಾನವ ವಾಸಸ್ಥಾನವು ಬರೋಬ್ಬರಿ 10,000 ವರ್ಷಗಳಷ್ಟು ಹಳೆಯದು ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ," ಎಂದು ತಿಳಿಸಿದ್ದಾರೆ.

2024ರಲ್ಲಿ ಬೆಳಕಿಗೆ ಬಂದಿದ್ದ 'ರಶೀದ್ ಪಾಡಿ' ಗುಹೆ

ಸ್ಥಳೀಯ ತಪಸ್ವಿಯೊಬ್ಬರ ಹೆಸರನ್ನಿಡಲಾಗಿರುವ ಈ ಗುಹೆಯನ್ನು 'ರಶೀದ್ ಪಾಡಿ' ಎಂದು ಕರೆಯಲಾಗುತ್ತದೆ. 2024 ರಲ್ಲಿ ರವಿ ಕೋರಿಸೆಟ್ಟರ್ ನೇತೃತ್ವದ ಪುರಾತತ್ವ ಆಸಕ್ತರ ತಂಡ, ಪರಿಸರವಾದಿ ಸಮದ್ ಕೊಟ್ಟೂರು, ಬಳ್ಳಾರಿ ಹೆರಿಟೇಜ್ ಟ್ರಸ್ಟ್‌ನ ಸದಸ್ಯರು ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪುರಾತತ್ವ ವಸ್ತುಸಂಗ್ರಹಾಲಯದ ಸಹವರ್ತಿಗಳು ಜಂಟಿಯಾಗಿ ಈ ತಾಣವನ್ನು ಸಾರ್ವಜನಿಕರ ಗಮನಕ್ಕೆ ತಂದಿದ್ದರು.

ಸಾಮಾನ್ಯವಾಗಿ ಭಾರತದಲ್ಲಿ ಕಂಡುಬರುವ ಬಹುತೇಕ ಗುಹೆಗಳು ಸುಣ್ಣದ ಕಲ್ಲುಗಳಿಂದ (Limestones) ರೂಪುಗೊಂಡಿರುತ್ತವೆ. ಆದರೆ ಸಂಡೂರು ಅರಣ್ಯದ ಈ ಗುಹೆಗಳು ವಿಭಿನ್ನವಾಗಿವೆ. ಇವು ಸುಣ್ಣದ ಕಲ್ಲಿನಿಂದ ನಿರ್ಮಾಣವಾಗಿಲ್ಲ; ಬದಲಿಗೆ, ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಒಳಗಿನ ಟೆಕ್ಟೋನಿಕ್ ತಲ್ಲಣಗಳು ಹಾಗೂ ಬಂಡೆಗಳ ಮೇಲ್ಮುಖ ಉಬ್ಬುವಿಕೆಯಿಂದ (Tectonic Uplift) ನೈಸರ್ಗಿಕವಾಗಿ ಸೃಷ್ಟಿಯಾಗಿವೆ ಎಂದು ಪ್ರೊ. ಕೋರಿಸೆಟ್ಟರ್ ವಿವರಿಸಿದ್ದಾರೆ.

ಭಾರತದಲ್ಲೇ ಇಂತಹ ಮತ್ತೊಂದು ತಾಣವಿಲ್ಲ ಎಂದ ತಜ್ಞರು

ರಶೀದ್ ಪಾಡಿಯಲ್ಲಿ ಆದಿಮಾನವರ ವಸಾಹತು ಇತ್ತು ಎಂಬುದಕ್ಕೆ ಪ್ರಬಲ ಪುರಾವೆಗಳು ಸಿಕ್ಕಿವೆ. ಸಮುದ್ರ ಮಟ್ಟದಿಂದ 850 ಮೀಟರ್ ಎತ್ತರದಲ್ಲಿರುವ ಈ ತಾಣವು ಸಂಪೂರ್ಣವಾಗಿ ದಟ್ಟ ಅರಣ್ಯದಿಂದ ಆವೃತವಾಗಿದೆ. ಭಾರತದ ಇತಿಹಾಸದಲ್ಲೇ ಇಷ್ಟು ಎತ್ತರದ ಹೈ-ಆಲ್ಟಿಟ್ಯೂಡ್ ಪ್ರದೇಶದಲ್ಲಿ ಆದಿಮಾನವ ನೆಲೆಸಿದ್ದ ಉದಾಹರಣೆ ಬೇರೆಲ್ಲೂ ಇಲ್ಲ. ಈ ಗುಹೆಯು ಸುಮಾರು 100 ಅಡಿ ಎತ್ತರವಿದ್ದು, ಗುಹೆಯ ತಳಭಾಗವು 45 ಅಡಿ ವಿಸ್ತಾರವಾಗಿದೆ. ಇಲ್ಲಿ ಪತ್ತೆಯಾಗಿರುವ ಹಲವಾರು ಶಿಲಾ ಉಪಕರಣಗಳು ಮತ್ತು ಪ್ರಾಣಿಗಳ ಮೂಳೆಗಳು ನಮ್ಮ ವಾದಕ್ಕೆ ದೃಢವಾದ ಬೆಂಬಲ ನೀಡುತ್ತವೆ," ಎಂದು ಕೋರಿಸೆಟ್ಟರ್ ಹೇಳಿದ್ದಾರೆ.

ಸಂಡೂರಿನ ದಟ್ಟ ಅರಣ್ಯದ ಮಧ್ಯೆ ಇರುವ ಈ ಗುಹೆಗಳನ್ನು ಅನ್ವೇಷಿಸುವುದು ಸಂಶೋಧನಾ ತಂಡಕ್ಕೆ ಅತ್ಯಂತ ಕಠಿಣವಾದ ಸವಾಲಾಗಿತ್ತು. ಆದರೂ ತಂಡವು ಸಂಡೂರು ಕಾಡಿನ ವಿವಿಧ ಗುಹೆಗಳಿಗೆ ಭೇಟಿ ನೀಡಿ ಪರಿಶೀಲಿಸಿದೆ. ತಾರಾನಗರದ ಸಮೀಪವಿರುವ ರಶೀದ್ ಪಾಡಿ, ದೇವಧಾರಿ ಪಾಡಿ, ರಾಮ ಪಾಡಿ, ಭೈರವ ತೀರ್ಥ ಪಾಡಿ ಹಾಗೂ ಕುಮಾರಸ್ವಾಮಿ ದೇವಾಲಯದ ಸಮೀಪವಿರುವ ಭೀಮ ತೀರ್ಥ, ಹರಿಶಂಕರ ತೀರ್ಥ, ನವಿಲು ತೀರ್ಥ ಮತ್ತು ಕಪ್ಪರ ಗುಪ್ಪರ ಸ್ವಾಮಿ ಪಾಡಿ ಮುಂತಾದ ಗುಹಾ ತಾಣಗಳನ್ನು ತಂಡವು ಕೂಲಂಕಷವಾಗಿ ಪರಿಶೋಧಿಸಿದೆ.

ಮುಂದುವರಿದ ಸಂಶೋಧನೆ - ಆದಿಮಾನವರ ಜೀವನ ಶೈಲಿ ಪತ್ತೆ

ಇಲ್ಲಿ ದೊರೆತಿರುವ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಮಧ್ಯಶಿಲಾಯುಗದ (Mesolithic Period) ಸಂಸ್ಕೃತಿಯನ್ನು ಹೋಲುತ್ತವೆ. ಹಾಗೆಯೇ ಇಲ್ಲಿ ಸಿಕ್ಕಿರುವ ಮೂಳೆಗಳು ಸಾಕುಪ್ರಾಣಿಗಳದ್ದಾಗಿರಬಹುದು ಎಂದು ಶಂಕಿಸಲಾಗಿದೆ. ಇದರೊಂದಿಗೆ ಕಾಡು ಪ್ರಾಣಿಗಳ ಮೂಳೆ ಹಾಗೂ ಹಲ್ಲುಗಳ ಅವಶೇಷಗಳೂ ಪತ್ತೆಯಾಗಿದ್ದು, ಇವುಗಳನ್ನು ಮುಂದಿನ ಹಂತದ ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

"2024ರಲ್ಲಿ ಈ ಗುಹೆಗಳು ಪತ್ತೆಯಾದಾಗ, ಆದಿಮಾನವನು ಸಸ್ಯಹಾರಿ ಆಹಾರ, ಬೇಟೆಯಾಡಲು ಪ್ರಾಣಿಗಳು ಮತ್ತು ಕಲ್ಲಿನ ಉಪಕರಣಗಳನ್ನು ತಯಾರಿಸಲು ಸೂಕ್ತವಾದ ಬಂಡೆಗಳನ್ನು ಹುಡುಕುತ್ತಾ ಈ ದುರ್ಗಮ ಪ್ರದೇಶಕ್ಕೆ ಯಾವಾಗ ಪ್ರವೇಶಿಸಿದ ಎಂಬ ಯಕ್ಷಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಆ ಪ್ರಶ್ನೆಗೆ ಈಗ ಕಾರ್ಬನ್ ಡೇಟಿಂಗ್ ಮೂಲಕ ನಿಖರ ಉತ್ತರ ಸಿಕ್ಕಿದೆ," ಎಂದು ಕೋರಿಸೆಟ್ಟರ್ ಸಂಶೋಧನೆಯ ಮಹತ್ವವನ್ನು ವಿವರಿಸಿದ್ದಾರೆ.