ಬೆಂಗಳೂರು(ಫೆ.21): ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಒಳ ಪಂಗಡವಾಗಿರುವ ಪಂಚಮಸಾಲಿ ಸಮುದಾಯದವರಿಗೆ 2-ಎ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದ ‘ಪಂಚ ಲಕ್ಷ ಹೆಜ್ಜೆಗಳ ಬೃಹತ್‌ ಪಾದಯಾತ್ರೆ’ ಕ್ಲೈಮಾಕ್ಸ್‌ ಹಂತ ತಲುಪಿದೆ.

ಇಬ್ಬರು ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಬೆಂಗಳೂರಿಗೆ ತಲುಪಿದೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ 700 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಿ ಸ್ವಾತಂತ್ರ್ಯ ಉದ್ಯಾನದ ಬಳಿ ಸೇರಿದೆ. ಭಾನುವಾರ ಬೆಳಗ್ಗೆ ಅರಮನೆ ಮೈದಾನದವರೆಗೆ ಪ್ರತಿಭಟನಾ ರಾರ‍ಯಲಿ ನಡೆಸಿ 10 ಲಕ್ಷಕ್ಕೂ ಹೆಚ್ಚು ಮಂದಿಯೊಂದಿಗೆ ಅರಮನೆ ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲಿದ್ದಾರೆ.

ಈ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿರುವ ಬಿಜೆಪಿ ಶಾಸಕ ಹಾಗೂ ಸಮುದಾಯದ ಹಿರಿಯ ನಾಯಕ ಚಂದ್ರಕಾಂತ ಬೆಲ್ಲದ್‌ ಅವರ ಪುತ್ರ ಅರವಿಂದ್‌ ಬೆಲ್ಲದ್‌ ಅವರು ‘ಕನ್ನಡಪ್ರಭ’ ಜೊತೆ ಹೋರಾಟದ ಉದ್ದೇಶ, ಸರ್ಕಾರದ ಸ್ಪಂದನೆ, ಭವಿಷ್ಯದ ಹೋರಾಟದ ರೂಪರೇಷಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೋರಾಟ ಕೇವಲ ಪಂಚಮಸಾಲಿಗಳಿಗೆ ಮಾತ್ರ ಸೀಮಿತವಲ್ಲ. ಇಡೀ ವೀರಶೈವ ಲಿಂಗಾಯತ ಸಮುದಾಯದ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಹಾವನೂರು ವರದಿ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಿ ಇಡೀ ಲಿಂಗಾಯತರನ್ನು ಕೇಂದ್ರದ ಹಿಂದುಳಿದ ವರ್ಗಕ್ಕೆ ಸೇರಿಸಬೇಕು. ಜೊತೆಗೆ ಪಂಚಮಸಾಲಿಗಳನ್ನು 2-ಎಗೆ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಂಚಮಸಾಲಿ ಮಹಾ ಸಮಾವೇಶ! 10 ಲಕ್ಷ ಮಂದಿ ನಿರೀಕ್ಷೆ

ಪಂಚಮಸಾಲಿ ಸಮುದಾಯದ ಹೋರಾಟದ ಪ್ರಮುಖ ಉದ್ದೇಶವೇನು?

ಪಂಚಮಸಾಲಿ ಲಿಂಗಾಯತ ಸಮಾಜ ಮೊದಲಿನಿಂದಲೂ ಹಳ್ಳಿ ಭಾಗದಲ್ಲಿ ಕೇಂದ್ರೀಕೃತವಾಗಿರುವ ಸಮಾಜ. ವಿವಿಧ ಕಸುಬುಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ಹಿಂದುಳಿದ ಸಮಾಜ. ಪ್ರಮುಖವಾಗಿ ಕೃಷಿ ಆಧಾರಿತ ಸಮಾಜದ ಯುವಕರಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ದೊರೆಯಲು ಅನುವಾಗುವಂತೆ ಒಬಿಸಿಯಲ್ಲಿ ಹೆಚ್ಚು ಮೀಸಲಾತಿ ಇರುವ 2-ಎ ವ್ಯಾಪ್ತಿಗೆ ಸೇರಿಸಬೇಕು. ಹಾವನೂರು ಆಯೋಗದ ವರದಿಯಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವುದೇ ಹೋರಾಟದ ಪ್ರಮುಖ ಉದ್ದೇಶ.

ಹಾವನೂರು ಆಯೋಗದ ವರದಿಯಲ್ಲಿ ಏನು ಅನ್ಯಾಯವಾಗಿದೆ?

ದಿವಂಗತ ದೇವರಾಜು ಅರಸು ಅವರ ಕಾಲದಲ್ಲಿ ರಚಿಸಿದ್ದ ಹಾವನೂರು ಆಯೋಗದ ವರದಿಯಲ್ಲಿ ಲಿಂಗಾಯತ ಸಮಾಜಕ್ಕೆ ತೀವ್ರ ಅನ್ಯಾಯವಾಗಿದೆ. ಹಾವನೂರು ಆಯೋಗವು ನಮ್ಮ ಸಮಾಜವನ್ನೇ ಒಡೆದಿದೆ. ಕಸುಬು ಆಧಾರಿತ ಉಪ ಪಂಗಡಗಳಿಗೆ ಹಾವನೂರು ಆಯೋಗದಲ್ಲಿ ಮೀಸಲಾತಿಗೆ ಶಿಫಾರಸು ಮಾಡಿಲ್ಲ. ಲಿಂಗಾಯತ ಗಾಣಿಗ, ಲಿಂಗಾಯತ ಮಡಿವಾಳ, ಲಿಂಗಾಯತ ಕುಂಬಾರ ಎಂದಿದ್ದರೆ ಮೀಸಲಾತಿ ಕಲ್ಪಿಸಿಲ್ಲ. ಹೀಗಾಗಿ ಈ ಉಪ ಪಂಗಡಗಳು ಲಿಂಗಾಯತ ಎಂಬ ಪದವನ್ನು ಬಿಟ್ಟು ಗಾಣಿಗ, ಮಡಿವಾಳ, ಕುಂಬಾರ ಎಂಬ ಜಾತಿಗಳಿಂದ ಗುರುತಿಸಿಕೊಂಡವು. ಇವರಿಗೆ 2-ಎನಲ್ಲಿ ಮೀಸಲಾತಿ ಸಿಗುತ್ತಿದೆ. ಆದರೆ, ನಮ್ಮ ಲಿಂಗಾಯತ ಸಮಾಜ ಒಡೆದುಹೋಗಿದೆ. ಹಾವನೂರು ಆಯೋಗದಿಂದ ಆದ ಈ ಎಲ್ಲಾ ನೋವಿಗೆ ಧ್ವನಿಯಾಗಿ ಇಂದು ಹೋರಾಟ ನಡೆಯುತ್ತಿದೆ.

ಎಲ್ಲರೂ ಮೀಸಲಾತಿಗೆ ಒತ್ತಾಯಿಸುತ್ತಿರುವ ಈ ಸಮಯದಲ್ಲಿ ನಿಮ್ಮ ಹಕ್ಕೊತ್ತಾಯವನ್ನು ಸರ್ಕಾರ ಹೇಗೆ ಪರಿಗಣಿಸಲಿದೆ?

ಸರ್ಕಾರ ಹಾಗೂ ಜನರು ಬೇರೆ ಬೇರೆಯಲ್ಲ. ಜನರ ಬೇಡಿಕೆ, ಆಶಯಗಳನ್ನು ಈಡೇರಿಸಲೆಂದೇ ಸರ್ಕಾರ ಇದೆ. ಜನರ ಭಾವನೆ, ನೋವುಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸವನ್ನು ಜನ ಪ್ರತಿನಿಧಿಯಾಗಿ ಮಾಡುತ್ತಿದ್ದೇವೆ. ಸರ್ಕಾರ ನಮಗೆ ಪೂರಕವಾಗಿ ಸ್ಪಂದಿಸುತ್ತಿದೆ.

ಪಂಚಮಸಾಲಿಗಳಿಗೆ ಮೀಸಲಾತಿ ಯಾಕೆ ಬೇಕು?

ನಿಮ್ಮ ಮೀಸಲಾತಿ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರಚನೆ ಮಾಡಲು ಸರ್ಕಾರ ಚಿಂತಿಸಿದೆ ಎನ್ನುತ್ತಾರೆ. ನಿಮಗೆ ನ್ಯಾಯ ದೊರೆಯುವುದು ವಿಳಂಬವಾಗುವುದಿಲ್ಲವೇ?

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಈಗಾಗಲೇ ಪಂಚಮಸಾಲಿ ಸಮುದಾಯವನ್ನು 2-ಎ ಗೆ ಸೇರಿಸುವ ಬಗ್ಗೆ ವರದಿ ನೀಡುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಿದ್ದಾರೆ. ಇದರಂತೆ ಮುಖ್ಯ ಕಾರ್ಯದರ್ಶಿಗಳು ಅಧಿಕೃತವಾಗಿ ಆಯೋಗಕ್ಕೆ ಪತ್ರ ಬರೆದು ಕೂಡಲೇ ವರದಿ ನೀಡುವಂತೆ ಸೂಚಿಸಿದ್ದಾರೆ. ಆಯೋಗವು ನಮಗೆ ಪೂರಕವಾಗಿ ವರದಿ ನೀಡಲಿದ್ದು, ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ನಿಮಗೆ ಪೂರಕವಾಗಿ ವರದಿ ಹೇಗೆ ನೀಡಲಿದೆ?

ಆಯೋಗವು ವರದಿ ನೀಡುವುದು ನಮ್ಮ ಸಮಾಜದ ಸ್ಥಿತಿಗತಿ ನೋಡಿ. ನಮ್ಮ ಸಮಾಜದಲ್ಲಿ ಬಹುತೇಕ ಉಪ ಪಂಗಡಗಳು ಆರ್ಥಿಕವಾಗಿ ತೀರಾ ಹಿಂದುಳಿದಿವೆ. ಇದನ್ನೆಲ್ಲಾ ತಮ್ಮ ವರದಿಯಲ್ಲಿ ನೀಡಿದರೆ ನಮಗೆ ಪೂರಕವಾಗಲಿದೆ.

ಪಂಚಮಸಾಲಿಯಂತಹ ದೊಡ್ಡ ಸಮುದಾಯ 2-ಎಗೆ ಬರುವ ಬಗ್ಗೆ ಸಣ್ಣ ಸಮುದಾಯಗಳಿಗೆ ಆತಂಕ ಎದುರಾಗಿದೆ. ಇದಕ್ಕೇನು ಪರಿಹಾರ?

ಇದೊಂದು ವ್ಯವಸ್ಥೆ ಸುಧಾರಣೆ ಪ್ರಕ್ರಿಯೆಯಷ್ಟೆ. ಆದಿಶಂಕರಾಚಾರ್ಯರ ಬಳಿಕ ಮಾದ್ವರು, ಬುದ್ಧ, ಬಸವಣ್ಣ ಬಳಿಕ ಅಂಬೇಡ್ಕರ್‌ ಬಂದು ಎಲ್ಲಾ ಕಾಲದಲ್ಲೂ ಆಯಾ ಕಾಲಕ್ಕೆ ತಕ್ಕಂತೆ ಸುಧಾರಣೆಗಳು ನಡೆದಿವೆ. ಅದೇ ರೀತಿ ಈಗಲೂ ನಡೆಯಲಿದೆ. ನಾವು 2-ಎ ನಲ್ಲಿರುವವರಿಗೆ ಅನ್ಯಾಯ ಮಾಡಲು ಹೇಳುತ್ತಿಲ್ಲ. ಲಭ್ಯವಿರುವ ಶೇ.50ರಷ್ಟು ಮೀಸಲಾತಿಯಲ್ಲೇ ಎಲ್ಲರಿಗೂ ನ್ಯಾಯ ಒದಗಿಸಬಹುದು.

ವೀರಶೈವ ಮಹಾಸಭಾ ವತಿಯಿಂದ ಇಡೀ ಲಿಂಗಾಯತರನ್ನು ಒಬಿಸಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೇ ವೇದಿಕೆಯಡಿ ಹೋರಾಟ ಮಾಡಬಹುದಿತ್ತಲ್ಲ?

ಕೇಂದ್ರದಲ್ಲಿ ಇಡೀ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಲು ಪೂರಕವಾಗಿಯೇ ಈ ಹೋರಾಟ ನಡೆಯುತ್ತಿದೆ. ಶೇ.70ರಷ್ಟುಪ್ರಮಾಣದಲ್ಲಿರುವ ಪಂಚಮಸಾಲಿಗಳು ಹೋರಾಟ ಆರಂಭಿಸಿದರೆ ಉಳಿದವರೂ ಸಹ ಜೊತೆಗೂಡುತ್ತಾರೆ. ಶೇ.20ಕ್ಕೂ ಹೆಚ್ಚಿರುವ ಸಮುದಾಯಕ್ಕೆ 3-ಬಿ ಅಡಿ ಕೇವಲ ಶೇ.5ರಷ್ಟುಮೀಸಲಾತಿ ನೀಡಲಾಗುತ್ತಿದೆ. 2-ಎನಲ್ಲಿ ಶೇ.15ರಷ್ಟುಮೀಸಲಾತಿ ಇದೆ. ನಮ್ಮ ಮೀಸಲಾತಿಯನ್ನು 2-ಎಗೆ ಸೇರಿಸಿ, ಮುಸ್ಲಿಮರ ಮೀಸಲಾತಿಯನ್ನೂ ಸೇರಿಸಿಯೇ ನಮಗೆ 2-ಎ ಮೀಸಲಾತಿ ನೀಡಲಿ. ಕುರುಬರಿಗೆ ಎಸ್‌.ಟಿ. ಮೀಸಲಾತಿ ನೀಡಿ ಎಸ್‌.ಟಿ. ಮೀಸಲಾತಿಯನ್ನೂ ಹೆಚ್ಚಿಸಲಿ.

ಶೇ.50ರ ಮಿತಿಯಲ್ಲೇ ಎಲ್ಲರಿಗೂ ಮೀಸಲು ನೀಡಲು ಹೇಗೆ ಸಾಧ್ಯ?

ಹಿಂದುಳಿದ ವರ್ಗಗಳ ಮೀಸಲಾತಿಯ ಪ್ರವರ್ಗ 2-ಬಿಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟುಮೀಸಲಾತಿ ಕಲ್ಪಿಸಲಾಗಿದೆ. ಇದು ಸಂವಿಧಾನ ವಿರೋಧಿ. ಸಂವಿಧಾನದಲ್ಲಿ ಜಾತಿಗೆ ಮೀಸಲಾತಿ ನೀಡಬೇಕು ಎಂದು ಇದೆಯೇ ಹೊರತು ಧರ್ಮಕ್ಕೆ ನೀಡಬೇಕು ಎಂದಿಲ್ಲ. ಈ ಬಗ್ಗೆ ಈವರೆಗೂ ಯಾರೂ ಪ್ರಶ್ನಿಸಿಲ್ಲ. ಇದನ್ನು ರದ್ದು ಮಾಡಿ. ಆ ಶೇ.4ರಷ್ಟುಮೀಸಲಾತಿಯನ್ನು 2-ಎಗೆ ಸೇರಿಸಿ ಪಂಚಮಸಾಲಿಗಳಿಗೆ ನೀಡಲಿ. ಮೀಸಲಾತಿ ಪ್ರಮಾಣವನ್ನು ಪರಿಷ್ಕರಿಸಲಿ.

ಮುಸ್ಲಿಮರಿಗೆ ಮೀಸಲಾತಿ ರದ್ದು ಮಾಡಬೇಕು ಎನ್ನುವುದು ವಿವಾದವಾಗುವುದಿಲ್ಲವೇ?

ವಾಸ್ತವ ಹೇಳುತ್ತಿದ್ದೇನೆ. ಸಂವಿಧಾನಕ್ಕೆ ವಿರುದ್ಧವಾಗಿ ನೀಡಿರುವ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ಅದು ರದ್ದಾಗಲಿದೆ. ಈವರೆಗೆ ಯಾರೂ ಅದನ್ನು ಪ್ರಶ್ನಿಸಿಲ್ಲ ಅಷ್ಟೆ. ಮಾಜಿ ಪ್ರಧಾನಮಂತ್ರಿ ಎಚ್‌.ಡಿ.ದೇವೇಗೌಡ ಯಾವುದನ್ನೂ ಯೋಚಿಸದೆ ಮೀಸಲಾತಿ ಕಲ್ಪಿಸಿದ್ದಾರೆ. ಅಲ್ಪಸಂಖ್ಯಾತರ ಮಾನ್ಯತೆಯಡಿ ಅವರಿಗೆ ಎಲ್ಲಾ ಸೌಲಭ್ಯಗಳೂ ದೊರೆಯುತ್ತಿವೆ. ಹೀಗಿದ್ದೂ ಹಿಂದುಳಿದ ವರ್ಗಗಳಲ್ಲೂ ಮೀಸಲಾತಿ ನೀಡುವುದು ಎಷ್ಟು ಸರಿ?

ವೀರಶೈವ ಲಿಂಗಾಯತರನ್ನು ಒಗ್ಗೂಡಿಸಿದ ಚಂದ್ರಕಾಂತ ಬೆಲ್ಲದ್‌

ಅರವಿಂದ ಬೆಲ್ಲದ್‌ ಅವರ ತಂದೆ ಚಂದ್ರಕಾಂತ ಬೆಲ್ಲದ್‌ 5 ಬಾರಿ ಶಾಸಕರಾಗಿದ್ದವರು. ಉತ್ತರ ಕರ್ನಾಟಕದಾದ್ಯಂತ ವೀರಶೈವ ಮಹಾಸಭಾದ ವೇದಿಕೆಯಡಿ ಲಿಂಗಾಯತರನ್ನು ಸಂಘಟಿಸಿದವರು. ಯಡಿಯೂರಪ್ಪ ಅವರ ಬೆಂಬಲಿಗರು ಹಾಗೂ ದೂರದ ಸಂಬಂಧಿ ಕೂಡ ಹೌದು. ಐದು ಬಾರಿ ಶಾಸಕರಾಗಿದ್ದರೂ ಒಮ್ಮೆಯೂ ಸಚಿವರಾಗಲಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಮಾಡಿ ಸಚಿವ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು.

ಇಡೀ ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿದ್ದ ಚಂದ್ರಕಾಂತ ಬೆಲ್ಲದ್‌ 2009ರಲ್ಲಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದಿದ್ದರು. ಬಳಿಕ ಪುತ್ರ ಅರವಿಂದ ಬೆಲ್ಲದ್‌ ಅವರು ಮುನ್ನೆಲೆಗೆ ಬಂದರೂ ಅವರ ಪರ ಚಂದ್ರಕಾಂತ ಬೆಲ್ಲದ್‌ ಒಮ್ಮೆಯೂ ಮತ ಕೇಳುವುದಕ್ಕೆ ಹೋಗಿಲ್ಲ.