ಬೆಂಗಳೂರು (ಫೆ. 20): ಈ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಸಾವಿರ ಸಲ ಗಿರಕಿ ಹೊಡೆದಿದೆ. ಪೀಠಕ್ಕೆ ಬರುವ ನೂರಾರು ಯುವಕ ಯುವತಿಯರ ಅಳಲು ಕೇಳಿದಾಗ, ನ್ಯಾಯಯುತವಾಗಿ ಸಿಗಬೇಕಾದ ಅವಕಾಶ ಸಿಗದೆ ವಂಚಿತರಾದಾಗ, ನಮಗೇ ಯಾಕೆ ಹೀಗೆ ಮೋಸ ಆಗ್ತಿದೆ ಎಂದು ಕಣ್ಣೀರಿಟ್ಟಾಗಲೆಲ್ಲಾ ಈ ಮೀಸಲಾತಿ ನಮ್ಮನ್ನು ಬಹುವಾಗಿ ಕಾಡಿದೆ.

ಸುಮಾರು ಮೂವತ್ತನಾಲ್ಕು ವೀರಶೈವ ಲಿಂಗಾಯತ ಒಳಪಂಗಡಗಳು ಈಗಾಗಲೇ 2ಎ ಮೀಸಲಾತಿ ಹಕ್ಕನ್ನು ಅನುಭವಿಸ್ತಿವೆ. ಅಪ್ಪಟ ಕೃಷಿಕರಾದ ಪಂಚಮಸಾಲಿ ಮಕ್ಕಳಿಗೆ ಸಿಗದ ಅವಕಾಶ ಅವರ ಮಕ್ಕಳಿಗೆ ಸಿಗುತ್ತಿವೆ. ಹೀಗಿದ್ದಾಗ ನಮ್ಮ ಮಕ್ಕಳು ಮಾತ್ರ ಯಾಕೆ ಭವಿಷ್ಯ ಮರುಟಿಕೊಂಡು ಕಣ್ಣೀರು ಹಾಕಬೇಕು? ಪ್ರತಿಭೆ ಇದ್ದೂ ಕೇವಲ ಮೀಸಲಾತಿಯಿಂದ ಏಕೆ ಅವಕಾಶ ವಂಚಿತರಾಗಬೇಕು? ಇದನ್ನೆಲ್ಲಾ ನೋಡಿದ ಮೇಲೆ ನಾವು ಕೈಕಟ್ಟಿಕೂತುಕೊಳ್ಳುವುದು ಸರಿಯಲ್ಲ ಅಂತ ಬಲವಾಗಿ ಅನಿಸಿತು. ಆಗಲೇ ನಾವು 2ಎ ಮೀಸಲಾತಿ ಹಕ್ಕಿಗಾಗಿ ಹೋರಾಟ ಶುರುಮಾಡಿದ್ದು. ಶುರುಮಾಡಿದ ಹೋರಾಟ ಫಲಪ್ರದವಾಗದೆ ಹಿಂದಿರುಗುವುದಿಲ್ಲ ಅಂತ ಶಪಥ ಮಾಡಿದ್ದು.

ಮೀಸಲು ಹೋರಾಟಕ್ಕೊಂದು ಇತಿಹಾಸವಿದೆ!

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಅನ್ನುವ ಬೇಡಿಕೆ ಏಕಾಏಕಿ ನಿನ್ನೆ ಮೊನ್ನೆ ಶುರುವಾದ ಬೇಡಿಕೆಯಲ್ಲ. ಇದಕ್ಕೊಂದು ಸುದೀರ್ಘ ಇತಿಹಾಸವೇ ಇದೆ. ದುರಂತವೆಂದರೆ ನಮ್ಮ ಬೇಡಿಕೆಯನ್ನು ಬಂದ ಎಲ್ಲಾ ಸರ್ಕಾರಗಳೂ ವ್ಯವಸ್ಥಿತವಾಗಿ ಪಕ್ಕಕ್ಕಿಟ್ಟವು. ಹೋರಾಟದ ದಾರಿಯನ್ನೇ ಗೊಂದಲಗೊಳಿಸಿದವು. ಒಗ್ಗಟ್ಟು ಮೂಡಲೇ ಇಲ್ಲ. ಹಾಗಾಗಿಯೇ ದಶಕಗಳೇ ಕಳೆದರೂ ನಮಗೆ ಸಾಂವಿಧಾನಿಕವಾದ 2ಎ ಮೀಸಲಾತಿ ಹಕ್ಕು ಸಿಗಲಿಲ್ಲ. ಭರವಸೆಗಳು ಭರವಸೆಗಳಾಗೇ ಉಳಿದವು.

ಮೀಸಲಾತಿ ಕಿಚ್ಚು ಆರಿಸಲು ಮುಂದಾದ ರಾಜ್ಯ ಸರ್ಕಾರ

ಪಂಚಮಸಾಲಿಗಳನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮೇಲೆತ್ತಲು 2ಎ ಮೀಸಲಾತಿಯ ಅಂತಿಮ ಹೋರಾಟ ಅವಶ್ಯವಾಗಿತ್ತು. ನಾವು ಪಂಚಮಸಾಲಿ ಪೀಠಕ್ಕೆ ಜಗದ್ಗುರುಗಳಾಗಿ ಬಂದಮೇಲೆ ಹೋರಾಟದ ದನಿಯನ್ನು ಎತ್ತರಿಸಲಾಯಿತು. ಒಗ್ಗಟ್ಟಿನ ಸೂತ್ರವನ್ನು ಜಪಿಸಲಾಯಿತು. ರಾಜ್ಯದ ಅತಿ ದೊಡ್ಡ ಸಮುದಾಯವಾದ ಪಂಚಮಸಾಲಿಗಳಿಗೆ ರಾಜಕೀಯ ಪ್ರಾತಿನಿಧ್ಯ ಕೊಡಲೇಬೇಕು ಅನ್ನುವ ಒತ್ತಾಯ ಮಾಡಲಾಯಿತು. ಈ ಎಲ್ಲದರ ಹಿಂದೆ ನಮಗಿರುವುದು ಸಮುದಾಯದ ಕಾಳಜಿ ಸಮುದಾಯದ ಭವಿಷ್ಯ ಮತ್ತು ಸಮುದಾಯದ ಶ್ರೇಯೋಭಿವೃದ್ಧಿ ಮಾತ್ರ.

ನಾವು ಅಪ್ಪಟ ಕೃಷಿಕರ ಮಕ್ಕಳು

ನಾವು ಪಂಚಮಸಾಲಿಗಳು ಅಪ್ಪಟ ಕೃಷಿಕರು. ಕೃಷಿಯನ್ನೇ ನಂಬಿ ಬದುಕುತ್ತಿದ್ದೇವೆ. ಕೃಷಿಯಲ್ಲಿ ಎಷ್ಟುಆದಾಯವಿದೆ, ಕೃಷಿಕರ ಬದುಕು ಎಷ್ಟುಹಸನಾಗಿದೆ ಅನ್ನೋದು ನಿಮಗೆಲ್ಲಾ ಗೊತ್ತಿದೆ. ಪಂಚಮಸಾಲಿ ಸಮುದಾಯದಲ್ಲಿ ಎಲ್ಲಾ ಕೃಷಿ ಸಮುದಾಯದಲ್ಲಿರುವಂತೆ ಬಡವರಿದ್ದಾರೆ. ನೊಂದವರಿದ್ದಾರೆ. ಈಗಲೂ ಗುಡಿಸಿಲಿನಲ್ಲಿ ವಾಸಿಸುವವರಿದ್ದಾರೆ. ಹಸಿದಿರುವವರೂ ಇದ್ದಾರೆ. ಇವರನ್ನೆಲ್ಲಾ ನಾವು ಮೇಲೆತ್ತುವುದು ಬೇಡವಾ? ನಮ್ಮ ಸಮುದಾಯದ ಜೊತೆಗೆ ಹಳೇ ಮೈಸೂರಿನ ಗೌಡ ಲಿಂಗಾಯತರು, ಮಲೆನಾಡಿನ ಮಲೆಗೌಡ ಲಿಂಗಾಯತರು, ಕಲ್ಯಾಣ ಕರ್ನಾಟಕದ ದಿಕ್ಷಾ ಲಿಂಗಾಯತರು, ಕರಾವಳಿ ಭಾಗದ ಗೌಳಿ ಲಿಂಗಾಯತರು ಮೀಸಲಾತಿ ಹಕ್ಕಿಗಾಗಿ ಹೋರಾಡುತ್ತಿದ್ದಾರೆ.

ನಮ್ಮ ಪ್ರತಿಪಾದನೆ ಏನು ಅಂದರೆ, ಮೀಸಲಾತಿ ಯಾವ ಸಮುದಾಯಕ್ಕೆ ಅವಶ್ಯವಿದೆಯೋ ಅದಕ್ಕೆ ನೀಡಿ. ಅದನ್ನು ಆರ್ಥಿಕತೆಯ ಆಧಾರದ ಮೇಲೆ ನೀಡಿ. ಆಗ ಪಂಚಮಸಾಲಿಗಳಂತಹ ಆರ್ಥಿಕವಾಗಿ ಹಿಂದುಳಿದ ಶೈಕ್ಷಣಿಕವಾಗಿ ಹಿಂದುಳಿದ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಸಹಾಯ ಆಗುತ್ತದೆ. ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಇನ್ನೂ ಮೀಸಲಾತಿ ಹಂಚಿಕೆ ಸರಿಯಾಗಿ ಆಗಿಲ್ಲ. ಅದು ತಲುಪಬೇಕಾದವರಿಗೆ ತಲುಪಿಲ್ಲ ಅಂದರೆ ಅದು ಆಳುವ ಸರ್ಕಾರಗಳ ಬೇಜವಾಬ್ದಾರಿತನ, ರಾಜಕೀಯ ದುರುದ್ದೇಶ ಮತ್ತು ಸೋಗಲಾಡಿತನವೇ ಆಗಿರುತ್ತದೆ ಎಂದು ನಾವು ಹೇಳಬೇಕಾಗಿಲ್ಲ.

ನಾಳೆ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ; ಬೇಡಿಕೆ ಈಡೇರದಿದ್ರೆ ಸತ್ಯಾಗ್ರಹದ ಎಚ್ಚರಿಕೆ

ಈ ಹೋರಾಟ ಫಲಪ್ರದವಾಗದೆ ನಿಲ್ಲದು

2ಎ ಮೀಸಲಾತಿ ಹಕ್ಕಿಗಾಗಿ ಕೂಡಲಸಂಗಮದಿಂದ ಶುರುವಾದ ಹೋರಾಟ ಈಗ ಹಲವು ಹಂತಗಳನ್ನು ದಾಟಿ, ನೂರಾರು ಕಿಲೋಮೀಟರ್‌ ಕ್ರಮಿಸಿ ರಾಜಧಾನಿ ಬೆಂಗಳೂರಿನತ್ತ ಸಾಗುತ್ತಿದೆ. ಪುಟ್ಟಪುಟ್ಟತೊರೆಗಳೆಲ್ಲಾ ಬಂದು ಹೇಗೆ ಸಾಗರಕ್ಕೆ ಸೇರುತ್ತವೋ ಹಾಗೆ ಪಾದಯಾತ್ರೆಯ ಉದ್ದಕ್ಕೂ ನಮ್ಮ ಹೆಜ್ಜೆಯ ಜೊತೆ ಹೆಜ್ಜೆ ಹಾಕಿದವರು ಸಾವಿರ ಸಾವಿರ. ಧಗಧಗಿಸುವ ಬಿಸಿಲು, ಕಾದು ಅಗ್ನಿಕುಂಡದಂತಾದ ರಸ್ತೆಗಳು ನಮ್ಮನ್ನು ಸೋಲಿಸಲು ನೋಡಿದವು. ನಡೆದು ನಡೆದು ಪಾದಗಳಲ್ಲಿ ಬೊಬ್ಬೆಗಳೆದ್ದವು. ನಾವು ಧೃತಿಗೆಡಲಿಲ್ಲ. ಬಿಸಿಲು ಅಂತ ಕೂರಲಿಲ್ಲ. ವಿಶ್ರಾಂತಿಗಾಗಿ ಹಂಬಲಿಸಲಿಲ್ಲ. ಬದಲಿಗೆ ಇನ್ನಷ್ಟುಬಿರುಸಿನಿಂದ ನಮ್ಮ ಗುರಿಯತ್ತ ನಡೆಯತೊಡಗಿದೆವು.

ನೀವು ಗಮನಿಸಬೇಕು, ನಾವು ಯಾರ ವಿರುದ್ಧವೂ ಹೋರಾಟ ಮಾಡುತ್ತಿಲ್ಲ. ನಮ್ಮ ಸಮುದಾಯದ ಉಳಿವಿಗಾಗಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈ ಸಲ ಎಲ್ಲಾ ಪಂಚಮಸಾಲಿಗಳೂ ಎಚ್ಚತ್ತುಕೊಂಡಿದ್ದಾರೆ. ಒಗ್ಗಟ್ಟು ಪ್ರದರ್ಶಿಸಿದ್ದಾರೆ. ನಮ್ಮ ಹೋರಾಟಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಶತಾಯಗತಾಯ ನಾವು 2ಎ ಮೀಸಲಾತಿ ಹಕ್ಕನ್ನು ಪಡೆದುಕೊಂಡೇ ಹಿಂದಿರುಗುವುದು ಎಂದು ಶಪಥ ಮಾಡಲಾಗಿದೆ. ಅದಕ್ಕೆ ನಾವು ಸದಾ ಬದ್ಧ ಮತ್ತು ಸಿದ್ಧ.

ಎಲ್ಲರೂ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬನ್ನಿ

ನಮ್ಮ ಮನವಿಯೇನೆಂದರೆ, ನಮ್ಮ ಹೋರಾಟವು ಫೆಬ್ರವರಿ 21, 2021ರಂದು ಬೆಳಗ್ಗೆ 8.30ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ನಿಂದ ಹೊರಟು ಅರಮನೆ ಮೈದಾನದಲ್ಲಿ ನಡೆಯುವ ಬೃಹತ್‌ ಸಮಾವೇಶದಲ್ಲಿ ಸೇರಲಿದೆ. ಈ ಬೃಹತ್‌ ಸಮಾವೇಶದಲ್ಲಿ ಲಕ್ಷಲಕ್ಷ ಪಂಚಮಸಾಲಿಗಳು ಸ್ವಇಚ್ಛೆಯಿಂದ ಭಾಗವಹಿಸಬೇಕು. ಪ್ರತಿಯೊಬ್ಬರೂ ವೀರ ಯೋಧರಂತೆ ಭಾಗವಹಿಸಬೇಕು. ನಿಮಗೆ ಗೊತ್ತಿದೆ ಅಂದುಕೊಳ್ತೀವಿ. ಸೈನ್ಯದಲ್ಲಿ ಹಲವು ರೆಜಿಮೆಂಟ್‌ಗಳಿರುತ್ತವೆ. ಯುದ್ಧದ ಸಮಯ ಬಂದಾಗ, ದೇಶದ ಸುರಕ್ಷತೆಗೆ ಘನತೆಗೆ ಗೌರವಕ್ಕೆ ಕುಂದುಂಟಾದಾಗ ಎಲ್ಲರೂ ಎದೆಸೆಟೆಸಿ ನಿಂತು ನನ್ನ ಭಾರತಕ್ಕೋಸ್ಕರ ಅಂತ ಹೋರಾಡುತ್ತಾರೆ. ಅಂಥ ಹೋರಾಟದ ಕಿಚ್ಚು ನಮ್ಮ ಸಮುದಾಯದಲ್ಲೂ ಈಗ ಅವಶ್ಯಕತೆ ಇದೆ. ಎಲ್ಲೇ ಇದ್ದರೂ ಹೇಗೆ ಇದ್ದರೂ ಸಮುದಾಯಕ್ಕೋಸ್ಕರ ಹೋರಾಡಬೇಕಾದ ತುರ್ತು ಅವಶ್ಯಕತೆ ಬಂದಿದೆ.

ನೆನಪಿರಲಿ, ಪಂಚಮಸಾಲಿಗಳಿಗೆ ಇದು ಅತ್ಯಂತ ನಿರ್ಣಾಯಕ ಹೋರಾಟ. ಮಾಡು ಇಲ್ಲವೆ ಮಡಿ ಅನ್ನುವ ಹೋರಾಟ. ಈಗ ಎಲ್ಲವೂ ಇತ್ಯರ್ಥವಾಗುವ ಸುಸಮಯ ಬಂದಿದೆ. ಈಗ ಶುರುವಾಗಿರುವ ನಮ್ಮ ಅಂತಿಮ ಸುತ್ತಿನ ಹೋರಾಟವನ್ನು, ಒಗ್ಗಟ್ಟನ್ನು ಯಾರಿಂದಲೂ ಕದಲಿಸಲು ಸಾಧ್ಯವಿಲ್ಲ. ನಾವು ಮತ್ತು ಶ್ರೀ ಜಯಮೃತ್ಯುಂಜಯ ಶ್ರೀಗಳಲ್ಲದೆ ಸಮುದಾಯದ ಎಲ್ಲಾ ಸ್ವಾಮಿಗಳು ಒಗ್ಗಟ್ಟಾಗಿದ್ದೇವೆ. ನಮ್ಮ ಒಗ್ಗಟ್ಟಿನಿಂದ ಸಮುದಾಯಕ್ಕೆ ಆನೆ ಬಲ ಬಂದಂತಾಗಿದೆ. ನಾವು ಹರಿಹರಾದಿ ಶರಣರಲ್ಲಿ ಪ್ರತಿಜ್ಞೆ ಮಾಡಿ ಹೇಳುತ್ತೇವೆ, ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಚಿಕ್ಕವರಲ್ಲ. ಭಿನ್ನಾಭಿಪ್ರಾಯ ಬೇಕಿಲ್ಲ. ಇಲ್ಲಿ ಎಲ್ಲರೂ ಒಂದೆ. ಒಂದಾದರೆ ಮಾತ್ರ ನಮಗೆ ಸಿಗಬೇಕಾದ ಸಾಂವಿಧಾನಿಕ ಹಕ್ಕು ಸಿಗುತ್ತದೆ. ಅದಕ್ಕಾಗಿ ಎಲ್ಲರೂ ಈಗಲೇ ಸಿದ್ಧರಾಗಿ. ಬೆಂಗಳೂರಿನ ಸಮಾವೇಶದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ಧರಾಗಿ. ಸಮಾವೇಶಕ್ಕೆ ಸಾಗರೋಪಾದಿಯಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಹರಿದುಬನ್ನಿ.

ನಮ್ಮ ಹಕ್ಕು ನಮಗೆ ಸಿಕ್ಕೇ ಸಿಗುತ್ತದೆ. ಸಿಗದಿದ್ದರೆ ಈ ಸಲ ಬಿಡುವ ಮಾತೇ ಇಲ್ಲ.ಇದು ನಮ್ಮ ಕರೆ.

- ಶ್ರೀ ವಚನಾನಂದ ಸ್ವಾಮೀಜಿ, ಪಂಚಮಸಾಲಿ ಜಗದ್ಗುರು ಪೀಠ, ಹರಿಹರ