ಬೆಂಗಳೂರು (ಫೆ.21):  ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ 38 ದಿನಗಳ ಪಾದಯಾತ್ರೆ ಶನಿವಾರ ಅಂತಿಮಗೊಂಡಿದ್ದು, ಭಾನುವಾರ ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮುದಾಯದ ಬೃಹತ್‌ ಸಮಾವೇಶ ನಡೆಯಲಿದೆ.

ಸಮಾವೇಶಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು, ಅಂದಾಜು 10 ಲಕ್ಷ ಮಂದಿ ಭಾಗವಹಿಸುವ ನಿ​ರೀ​ಕ್ಷೆ​ಯಿದೆ. ಪಂಚಮಸಾಲಿ ಶಾಸಕರು, ಸಂಸದರು, ಮಠಾಧೀಶರು ಸೇರಿದಂತೆ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಇತರೆ ಸಮುದಾಯದ ಮುಖಂಡರು ಕೂಡ ಸಮಾವೇಶದಲ್ಲಿ ಭಾಗವಹಿಸಲಿ​ದ್ದಾ​ರೆ.

ಎರಡು ಲಕ್ಷ ಆಸನ ವ್ಯವಸ್ಥೆ:

ಅರಮನೆ ಮೈದಾನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ. ಜೊತೆಗೆ ಮ್ಯಾಟ್‌ಗಳನ್ನು ಹಾಸಲಾಗಿದೆ. 10 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಒಟ್ಟು ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಮಠಾಧೀಶರು ಒಳಗೊಂಡಂತೆ ವೇದಿಕೆಯಲ್ಲಿ 300 ಗಣ್ಯರ ಆಸನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯ ಮಧ್ಯದಲ್ಲಿ ಮಠಾಧೀಶರು, ಬಲಭಾಗಕ್ಕೆ ಗಣ್ಯರು ಹಾಗೂ ಎಡಭಾಗದಲ್ಲಿ ವಿಶೇಷ ಆಹ್ವಾನಿತರಿಗೆ ಆಸನಗಳನ್ನು ಮೀಸಲಿಡಲಾಗಿದೆ.

ಮೀಸಲಾತಿ ಹೋರಾಟ, ಸಿದ್ದು- ಬಿಎಸ್‌ವೈಗೆ ಪ್ರಾಣ ಸಂಕಟ..!

ಸಮಾವೇಶಕ್ಕೆ ಆಗಮಿಸುವ ಜನರಿಗಾಗಿ ಮೈದಾನದಲ್ಲಿ ಅಂದಾಜು ಒಂದು ಲಕ್ಷ ಆಸನ ವ್ಯವಸ್ಥೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮಠಾಧೀಶರು, ವಿಶೇಷ ಆಹ್ವಾನಿತ ಗಣ್ಯರಿಗೆ ಮೈದಾನದ ಮೊದಲನೇ ದ್ವಾರದಿಂದ ಕರೆತರಲು ಸಮಿತಿ ನಿರ್ಧರಿಸಿದ್ದು, ಮೈದಾನದ ಹಿಂಬದಿಯ (ದೂರದರ್ಶನ) ದ್ವಾರವನ್ನು ಸಮಾವೇಶದಲ್ಲಿ ಭಾಗವಹಿಸುವ ಜನರಿಗಾಗಿ ಕಾಯ್ದಿರಿಸಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಉತ್ತರ ಕರ್ನಾಟಕದಿಂದ ಸಮಾಜದವರು 2.5 ಲಕ್ಷ ರೊಟ್ಟಿತಂದಿದ್ದಾರೆ. ಜೊತೆಗೆ ಪಲಾವ್‌ ಮತ್ತು ಮಜ್ಜಿಗೆ ನೀಡಲಾಗುತ್ತಿದೆ.

ಪಾರ್ಕಿಂಗ್‌, ಭೋಜನ ವ್ಯವಸ್ಥೆ:

ಅರಮನೆ ಮೈದಾನದಲ್ಲಿ ಅಂದಾಜು 800 ಬಸ್‌ಗಳ ನಿಲ್ದಾಣಕ್ಕೆ ಅವಕಾಶ ನೀಡಲಾಗಿದೆ. ಪಾರ್ಕಿಂಗ್‌ ಸಮಸ್ಯೆ ಬಗೆಹರಿಸಲು ಹತ್ತಿರದ ಮಾ​ವಿನ ಮಂಡಿ, ಪಶುಭವನ ಮತ್ತು ಜಿಕೆವಿಕೆಯಲ್ಲಿ ವಾಹನಗಳ ನಿಲುಗಡೆಗೆ ಹೋರಾಟ ಸಮಿತಿ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿದೆ. 500ಕ್ಕೂ ಹೆಚ್ಚು ಸ್ವಯಂಪ್ರೇರಿತ ಕಾರ್ಯಕರ್ತರು ಊಟದ ವ್ಯವಸ್ಥೆ ನೋಡಿಕೊಳ್ಳಲಿದ್ದಾರೆ. ಅಡುಗೆ ಸಾಮಗ್ರಿಗಳ ಸಂಗ್ರಹಕ್ಕೆ ಪ್ರತ್ಯೇಕವಾಗಿ ಮೂರು ಉಗ್ರಾಣಗಳನ್ನು ನಿರ್ಮಿಸಲಾಗಿದೆ.

"

ಶ್ರೀಗಳಿಂದ ಸಿದ್ಧತೆ ಪ​ರಿ​ಶೀ​ಲ​ನೆ:

ಬಹಿರಂಗ ಸಮಾವೇಶಕ್ಕೆ ನಡೆದಿರುವ ಸಿದ್ಧತೆಗಳನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿಗಳು ಶನಿವಾರ ಪರಿಶೀಲಿಸಿದ ಬಳಿಕ ಸಮಾವೇಶದ ರೂಪರೇಷೆ ಕುರಿತು ಚರ್ಚಿಸಿದರು. ಸಭೆ ಬಳಿಕ ಸುದ್ದಿಗೋಷ್ಠಿ​ಯಲ್ಲಿ ಮಾ​ತ​ನಾ​ಡಿದ ಅವರು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅ​ವರು ತಮಗಿರುವ ಪರಮಾಧಿಕಾರ ಬಳಸಿ ಸಚಿವ ಸಂಪುಟ ಸಭೆ ಕರೆದು 2ಎ ಮೀಸಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪಂಚಮಸಾಲಿಗಳ ಮೀಸಲು ಕುರಿತು ಸಮಿತಿ ರಚಿಸಿ ವರದಿ ಪಡೆದಿದ್ದರು. 2ಎ ಮೀಸಲಾತಿ ಸೇರ್ಪಡೆಗೆ ಸಮಿತಿಯು ಶಿಫಾರಸು ಮಾಡಿತ್ತು. ಆದರೂ ಬೇಡಿಕೆ ಬೇ​ಡಿ​ಕೆ​ಯಾ​ಗಿಯೇ ಉ​ಳಿ​ದಿದೆ. ನಮ್ಮ ಬೇಡಿಕೆಯು ಈಗ ಬೃಹತ್‌ ಸಮಾವೇಶದ ರೂಪ ಪಡೆದಿದೆ. ಇದು ಕರ್ನಾಟಕದಲ್ಲಿನ ಮನ್ವಂತರ ಪರ್ವ. ಸಾಮಾಜಿಕ ನ್ಯಾಯಕ್ಕಾಗಿ ಮೊದಲ ಪಾದಯಾತ್ರೆ. ನಮ್ಮ ಪಾದಯಾತ್ರೆಗೆ ಇತರೆ ಸಮುದಾಯದವರೂ ಬೆಂಬಲ ನೀಡಿದ್ದಾರೆ ಎಂದರು.

ಸ್ವಾತಂತ್ರ್ಯ ಉದ್ಯಾನ ತಲುಪಿದ 682 ಕಿ.ಮೀ. ನಡಿಗೆ

ಪಂಚಮಸಾಲಿಗಳಿಗೆ 2ಎ ಮೀಸಲಾತಿಗೆ ಒತ್ತಾಯಿಸಿ ಜ.14ರಂದು ಕೂಡಲಸಂಗಮದಿಂದ ಆರಂಭವಾಗಿದ್ದ ಪಾದಯಾತ್ರೆಯು ಶನಿವಾರ ನ​ಗ​ರ​ದ ಅರಮನೆ ಮೈದಾನ ತಲುಪಿತು.

682 ಕಿ.ಮೀ.ಗಳ ಪಾದಯಾತ್ರೆ ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ತಲುಪುವ ಮೂಲಕ ಪೂರ್ಣಗೊಂಡಿದೆ. ಶುಕ್ರವಾರ ಬೆಂಗಳೂರಿನ ಶಿವನಗರ ತಲುಪಿದ್ದ ಪಾದಯಾತ್ರೆ ಶನಿವಾರ ಶಿವನಗರ, ಮಂಜುನಾಥನಗರ, ನವರಂಗ್‌ ಜಂಕ್ಷನ್‌, ಡಾ.ರಾಜಕುಮಾರ್‌ ರಸ್ತೆ, ಸುಜಾತ ಚಿತ್ರಮಂದಿರ ಜಂಕ್ಷನ್‌, ಓಕಳಿಪುರಂ, ಆನಂದರಾವ್‌ ಸರ್ಕಲ್‌ ಮೂಲಕ ಸ್ವಾತಂತ್ರ್ಯ ಉದ್ಯಾನ ತಲುಪಿತು.

ಸಂಜೆ ನಾಲ್ಕು ಗಂಟೆ ಸುಮಾರಿಗೆ ಶಿವನಗರದ ಸಿದ್ಧಗಂಗಾ ಮಠದಿಂದ ಹೊರಟು ಐದು ಗಂಟೆ ಸುಮಾರಿಗೆ ಸ್ವಾತಂತ್ರ್ಯ ಉದ್ಯಾನ ತಲುಪಿತು. ಬಳಿಕ ಹರಿಹರ ಪೀಠದ ವಚನಾನಂದ ಸ್ವಾಮೀಜಿ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರೀಯ ಘಟಕದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌ ಸೇರಿದಂತೆ ಹಲವು ಪಾದಯಾತ್ರಿಗಳು ಚಾಲುಕ್ಯ ವೃತ್ತದಲ್ಲಿರುವ ಅಶ್ವಾರೂಢ ಬಸವಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಭಾನುವಾರ ಸಮಾವೇಶ ನಡೆಯಲಿರುವ ಅರಮನೆ ಮೈದಾನಕ್ಕೆ 

ಮುತ್ತಿಗೆ ಹಾಕುವುದಿಲ್ಲ

ಸುಮಾರು 700 ಕಿ.ಮೀ. ಪಾದಯಾತ್ರೆ ಅಂತಿಮ ಗುರಿ ಮುಟ್ಟಿದೆ. ಆದರೂ ಸರ್ಕಾರ ಮಾತ್ರ ಬೇಡಿಕೆ ಈಡೇರಿಸುವ ಬಗ್ಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಸರ್ಕಾರ ಏಕೆ ಇಷ್ಟುವಿಳಂಬ ನೀತಿ ಅನುಸರಿಸುತ್ತಿದೆ ಎಂಬುದು ಮಾತ್ರ ತಿಳಿಯದಾಗಿದೆ. ಭಾನುವಾರ ಅರಮನೆ ಮೈದಾನದಲ್ಲಿ ಪಂಚಮಸಾಲಿಗಳ ಬೃಹತ್‌ ಸಮಾವೇಶ ನಡೆಸಿ ಬೇಡಿಕೆ ಈಡೇರಿಸುವಂತೆ ಮತ್ತೊಮ್ಮೆ ಒತ್ತಾಯಿಸಲಾಗುವುದು. ಒಂದು ವೇಳೆ ಆಗಲೂ ಈಡೇರಿಸದಿದ್ದರೆ, ರಾಜ್ಯ ಸರ್ಕಾರಕ್ಕೆ ಮಾ.4ರ ವರೆಗೆ ಗಡುವು ನೀಡಲಾಗುತ್ತದೆ. ಮಾ.5ರಿಂದ ವಿಧಾನಸೌಧ ಮುಂಭಾಗ ಧರಣಿ ಹಾಗೂ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗುತ್ತದೆ. ಸಮಾವೇಶದ ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ತೀರ್ಮಾನವನ್ನು ಸಚಿವ ಸಿ.ಸಿ.ಪಾಟೀಲ್‌ ಮನವಿ ಮೇರೆಗೆ ಕೈಬಿಡಲಾಗಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.