ರಾಜ್ಯ ಸರ್ಕಾರದ ವಿರುದ್ಧ ಇದೀಗ ಬಿಜೆಪಿ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದೆ. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದ ವೇಳೆ ಉಗ್ರ ಹೋರಾಟ ಮಾಡಲು ಬಿಜೆಪಿ ಸಜ್ಜಾಗಿದೆ. 

ಬೆಂಗಳೂರು : ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯ. ಪ್ರತಿಭಟನೆ ನಡೆಸುತ್ತಿರುವವರು ಯಾವ ಪಕ್ಷದವರು, ಯಾರಿಗೆ ಮತ ಹಾಕಿದ್ದಾರೆ ಎಂಬುದು ಮುಖ್ಯವಲ್ಲ. ರೈತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ನಿರ್ಧರಿಸದಿದ್ದರೆ, ಮಂಗಳವಾರ ನಡೆಯಲಿರುವ ಕೋರ್‌ ಕಮಿಟಿಯಲ್ಲಿ ಚರ್ಚಿಸಿ ಬೆಳಗಾವಿಯ ಅಧಿವೇಶನದ ವೇಳೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಬಾಕಿ ಹಣ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಸೇರಿದಂತೆ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಅದನ್ನು ಬಿಟ್ಟು ಹೋರಾಟಗಾರರ ಮೇಲೆ ಪೊಲೀಸರಿಂದ ಲಾಠಿ ಪ್ರಹಾರ ನಡೆಸುವುದು ಸರ್ಕಾರ ನಡೆಸುವ ರೀತಿನಾ ಎಂದು ಪ್ರಶ್ನಿಸಿದರು.

ರೈತ ಮಹಿಳೆಯೊಬ್ಬರನ್ನು ‘ಇಲ್ಲಿಯವರೆಗೂ ಎಲ್ಲಿ ಮಲಗಿದ್ದೆ’ ಎಂದು ಕೇಳುವ ಮೂಲಕ ಸಮಸ್ತ ಮಹಿಳೆಯರಿಗೆ ಮುಖ್ಯಮಂತ್ರಿಗಳು ಅವಮಾನ ಮಾಡಿರುವುದರಿಂದ ತಕ್ಷಣವೇ ಕ್ಷಮೆಯಾಚಿಸಬೇಕು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಮಹಿಳೆಯರ ಬಗ್ಗೆ ಹೇಗೆ ಮಾತನಾಡಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲವೇ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ತಮ್ಮ ಮಗನ ಪರ ವಕಾಲತ್ತು ವಹಿಸುತ್ತಿರುವುದು ದುರದೃಷ್ಟ. ಕೊನೇ ಪಕ್ಷ ಅವರಾದರೂ ಮಗನ ಕಿವಿ ಹಿಂಡಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಬೇಕಿತ್ತು. ಆದರೆ, ದೇವೇಗೌಡರೇ ಸಮರ್ಥಿಸಿಕೊಳ್ಳುತ್ತಿರುವುದು ನೋವಿನ ಸಂಗತಿ. ಕೂಡಲೇ ಕಾರ್ಖಾನೆಗಳ ಮಾಲೀಕರು, ರೈತ ಪ್ರತಿನಿಧಿಗಳ ಸಭೆ ಕರೆದು ಸಮಸ್ಯೆಯನ್ನು ಸರ್ಕಾರ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ಪ್ರಿಂಟಿಂಗ್‌ ಮಷಿನ್‌ ಕೇಳಿದ್ವಾ:

ರೈತರ ಸಮಸ್ಯೆಗಳ ಪರಿಹರಿಸುವುದಕ್ಕಾಗಿ ಅವಶ್ಯವಿರುವ ಹಣ ನೀಡುವ ಸಂಬಂಧ ‘ನಾವು ಪ್ರಿಂಟಿಂಗ್‌ ಮಿಷನ್‌ ಇಟ್ಟುಕೊಂಡಿಲ್ಲ’ ಎಂದು ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ. ಆದರೆ, ನಾವೇನಾದರೂ ನೀವು ಪ್ರಿಂಟಿಂಗ್‌ ಮಿಷನ್‌ ಇಟ್ಟುಕೊಂಡಿದ್ದೀರಾ ಎಂದು ಕೇಳಿದ್ದೆವಾ? ರೈತರ ಸಾಲ ಮನ್ನಾ ಮಾಡುವುದಾಗಿ ಕಳೆದ 4-5 ತಿಂಗಳಿನಿಂದ ಬೊಬ್ಬೆ ಹೊಡೆಯುತ್ತಿರುವವರು ಯಾರು ಎಂದು ಪ್ರಶ್ನಿಸಿದರು.


ನೆರೆಯ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವ ಮುನ್ನವೇ ಅಲ್ಲಿನ ಸರ್ಕಾರ ಕಾರ್ಖಾನೆ ಮಾಲೀಕರು, ರೈತ ಪ್ರತಿನಿಧಿಗಳು ಸರ್ವಪಕ್ಷಗಳ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥಪಡಿಸುತ್ತಾರೆ. ಆದರೆ ನಮ್ಮಲ್ಲಿ ಬೆಂಕಿಗೆ ಗುಡ್ಡ ಬಿದ್ದಾಗ ಬಾವಿ ತೋಡುವ ಪ್ರವೃತ್ತಿ ಇದೆ. ಆರಂಭದಲ್ಲಿಯೇ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ.

- ಗೋವಿಂದ ಕಾರಜೋಳ, ಪ್ರತಿಪಕ್ಷದ ಉಪನಾಯಕ