ಹೊನ್ನಾಳಿ ಕ್ಷೇತ್ರದ ಬಿಜೆಪಿ ನಾಯಕರು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ರೇಣುಕಾಚಾರ್ಯ ಕಾರಣ ಎಂದು ಆರೋಪಿಸಿ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ದಾವಣಗೆರೆ (ಜು.2): ಹೊನ್ನಾಳಿ ಕ್ಷೇತ್ರದ ಕೆಲವು ಬಿಜೆಪಿ ನಾಯಕರು ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿದ್ದಾರೆ. ದಾವಣಗೆರೆ ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ನೇತೃತ್ವದಲ್ಲಿ ನಡೆದ ಈ ಗೋಷ್ಠಿಯಲ್ಲಿ ರೇಣುಕಾಚಾರ್ಯ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಲಾಗಿದೆ.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ರೇಣುಕಾಚಾರ್ಯ ಕಾರಣ ಎಂದು ದಾವಣಗೆರೆ ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಪ್ರತಿಕ್ರಿಯಿಸಿದ್ದು, ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ರೇಣುಕಾಚಾರ್ಯರಿಂದ ನೋವಾಗಿದೆ. ಜಿಲ್ಲಾ ಬಿಜೆಪಿ ಸಂಘಟನಾ ವ್ಯವಸ್ಥೆಯನ್ನು ಅವರು ಹಾಳು ಮಾಡಿದ್ದಾರೆ. ಬಿಜೆಪಿಯನ್ನು ಕಾಂಗ್ರೆಸ್‌ಗೆ ಅಡ್ಡಿಡುವ ಷಡ್ಯಂತ್ರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: 8th Pay Commission: ಪಿಂಚಣಿದಾರರಿಗೆ ಸಿಹಿಸುದ್ದಿ, ಮೋದಿ ಸರ್ಕಾರದಿಂದ ದೊಡ್ಡ ನಿರ್ಧಾರ ಸಾಧ್ಯತೆ!
ಎಸ್‌ಎಸ್ ಮಲ್ಲಿಕಾರ್ಜುನ್ ವಿರುದ್ಧ ಯಾಕೆ ಮಾತನಾಡುತ್ತಿಲ್ಲ?
ಎಂಪಿ ರೇಣುಕಾಚಾರ್ಯ ರಾಜ್ಯ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಾರೆಯೇ ಹೊರತು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಗ್ಗೆ ಒಂದೇ ಒಂದು ದಿನ ಮಾತನಾಡಿಲ್ಲ ಎಂದು ಆಕ್ಷೇಪಿಸಿದ ಅವರು, ಲೋಕಸಭಾ ಚುನಾವಣೆ ವೇಳೆ ರೇಣುಕಾಚಾರ್ಯರ ಹೊಸ ಮನೆಯಲ್ಲಿ ಮಧ್ಯರಾತ್ರಿ ಎಸ್.ಎಸ್. ಮಲ್ಲಿಕಾರ್ಜುನ ಭೇಟಿಯಾಗಿದ್ದರು ಎಂದು ಆರೋಪಿಸಿರುವ ಶಾಂತರಾಜ್ ಪಾಟೀಲ್, ಸಂದರ್ಭ ಬಂದಾಗ ಈ ಬಗ್ಗೆ ದಾಖಲೆಗಳನ್ನು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ! ಈ ಬಾರಿ ಕೃಷ್ಣಜನ್ಮಾಷ್ಟಮಿಗೆ ಬರ್ತಾರಾ ಸಿಎಂ?
ಸದ್ಯ ಹೊನ್ನಾಳಿ ಕ್ಷೇತ್ರದ ಬಿಜೆಪಿ ನಾಯಕರು ರೇಣುಕಾಚಾರ್ಯರ ಉಚ್ಚಾಟನೆಗೆ ಒತ್ತಾಯಿಸಿದ್ದು, ಈ ವಿಷಯ ರಾಜ್ಯ ಬಿಜೆಪಿ ನಾಯಕರ ಗಮನಕ್ಕೆ ತರಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುಂದಿನ ರಾಜ್ಯ ಬಿಜೆಪಿ ಬೆಳವಣಿಗೆ ಕುತೂಹಲ ಮೂಡಿಸಿದೆ.
