ಬೀಳಗಿ(ಜ.26): ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳುವ ಮಾಜಿ ಸಿಎಂ ಸಿದ್ದರಾಮಯ್ಯ ಅವರೇನು ಹದಿಹರೆಯದ ಯುವಕರೇ?. ಅವರಿಗೆ ಯಾರಾದರೂ ಕರೆದು ಹೆಣ್ಣು ಕೊಡಲಿದ್ದಾರಾ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ಇಷ್ಟು ವಯಸ್ಸಾದ್ರೂ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. 72 ವರ್ಷದ ಸಿದ್ದರಾಮಯ್ಯ ಅವರಿಗೆ ಯಾರದರೂ ಹೊಸದಾಗಿ ಹೆಣ್ಣು ಕೊಡಲಿದ್ದಾರಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರು ಮಾತನಾಡುವ ಹಾಗೆ ಯಾವ ಕುಡುಕನೂ ಮಾತನಾಡುವುದಿಲ್ಲ ಎಂದ ಈಶ್ವರಪ್ಪ, ಮಾತನಾಡುವಾಗ ನಾಲಿಗೆ ಮೇಲೆ ಹಿಡಿತವಿರಬೇಕು ಎಂದು ಎಚ್ಚರಿಕೆ ನೀಡಿದರು.

"

ಇದೇ ವೇಳೆ ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಹರಿಹಾಯ್ದ ಈಶ್ವರಪ್ಪ, ಇದು ಕಲಾಸಿಪಾಳ್ಯ ಸರ್ಕಾರ ಎಂದು ಕಿಡಿಕಾರಿದರು. ಶಾಸಕರೇ ಗೂಂಡಾಗಳಂತಿದ್ದು, ಒಬ್ಬರು ಮತ್ತೊಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅತೃಪ್ತ ಶಾಸಕರ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕೊಲೆ ಮಾಡಲು ಸಂಚು ರೂಪಿಸುವವರು ಫೋನ್ ಕದ್ದಾಲಿಕೆ ಮಾಡುವುದು ದೊಡ್ಡ ವಿಷಯವೇನಲ್ಲ ಬಿಡಿ ಎಂದರು.

ಸಿಎಂ ಕುಮಾರಸ್ವಾಮಿ ನಮ್ಮ ಜೊತೆ ಬಿಜೆಪಿಯ ಮೂವರು ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ರೀತಿ ಮಕ್ಕಳ ಕಳ್ಳರಿದ್ದಂತೆ, ಇದೇ ಕಾರಣಕ್ಕೆ ನಮ್ಮ ಶಾಸಕರನ್ನು ರಕ್ಷಿಸಲು ರೆಸಾರ್ಟ್ ಗೆ ಹೋಗಿದ್ದೇವು ಎಂದು ಈಶ್ವರಪ್ಪ ಸಮಜಾಯಿಷಿ ನೀಡಿದರು.