ಬಿಜೆಪಿ-ಜೆಡಿಎಸ್ ಮೈತ್ರಿಯಿದ್ದರೂ ತಮಗೆ ಹಾಸನ ಕ್ಷೇತ್ರದ ಟಿಕೆಟ್ ಸಿಗುವ ವಿಶ್ವಾಸವನ್ನು ಮಾಜಿ ಶಾಸಕ ಪ್ರೀತಮ್ ಗೌಡ ವ್ಯಕ್ತಪಡಿಸಿದ್ದಾರೆ. ಕೊಡಗಿನಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ನೋವಾಗದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದರು. 

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ ಕೊಡಗು

ಕೊಡಗು (ಜ.30): ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಇದ್ದರೂ ನನಗೆ ಪಕ್ಷದಿಂದ ಮತ್ತೆ ಟಿಕೆಟ್ ಸಿಗುವ ವಿಶ್ವಾಸ ಇದೆ ಎನ್ನುವ ಅರ್ಥದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರೀತಮ್ ಗೌಡ ಮಾತನಾಡಿದ್ದಾರೆ. ಕೊಡಗು ಜಿಲ್ಲಾ ಬಿಜೆಪಿಯಿಂದ ನಡೆದ ವಿಬಿ ಜಿ ರಾಮ್ ಜಿ ಯೋಜನೆಯ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಎಲ್ಲಾ ಹಂತದ ಚುನಾವಣೆಗಳಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲಿವೆ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರೀತಂಗೌಡ ಅವರು ಈ ಕುರಿತು ರಾಜ್ಯ, ರಾಷ್ಟ್ರೀಯ ನಾಯಕರು ಕಾರ್ಯಕರ್ತರಿಗೆ ನೋವಾಗದಂತೆ ತೀರ್ಮಾನ ತೆಗೆದುಕೊಳ್ತಾರೆ. ಆ ಮೂಲಕ ತಮಗೆ ಮತ್ತೆ ಟಿಕೆಟ್ ಬೇಕು ಎನ್ನುವ ವಿಶ್ವಾಸವನ್ನು ಪ್ರೀತಂಗೌಡ ವ್ಯಕ್ತಪಡಿಸಿದರು.

ರಾಜ್ಯ ನಾಯಕರು ಸೇರಿದಂತೆ ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ಚರ್ಚೆ ಆಗುತ್ತದೆ. ಕೇವಲ ನಮ್ಮ ಪಕ್ಷ ಎಂದಾಗಲೇ ಸಾಕಷ್ಟು ಭಿನ್ನಾಭಿಪ್ರಾಯ ಇರುತ್ತವೆ, ಹೀಗಿರುವಾಗ ಅದರಲ್ಲಿ ಸಮ್ಮಿಶ್ರ ಎಂದಾಗ ನಮ್ಮದೊಂದು ಅಭಿಪ್ರಾಯವಿದ್ದರೆ ಅವರದೊಂದು ಅಭಿಪ್ರಾಯ ಇರುತ್ತದೆ. ಎಲ್ಲವನ್ನೂ ಸಮಾಲೋಚನೆ ಮಾಡಿ ರಾಜ್ಯ, ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ. ನಮ್ಮ ಕಾರ್ಯಕರ್ತರಿಗೆ ನೋವಾಗದ ರೀತಿ ತೀರ್ಮಾನ ಮಾಡುತ್ತಾರೆ. ಆ ಮೂಲಕ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತಾರೆಂದು ಮಾಜಿ ಶಾಸಕ ಪ್ರೀತಂಗೌಡ ಮಡಿಕೇರಿಯಲ್ಲಿ ಹೇಳಿದರು.

ಇನ್ನು ಕಾಂಗ್ರೆಸ್ ಶಾಸಕರಿಲ್ಲದ ಕ್ಷೇತ್ರದಲ್ಲಿ ನಾನೇ ಪಾದಯಾತ್ರೆ ಮಾಡುತ್ತೇನೆ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಪ್ರೀತಂ ಗೌಡ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನವರು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಾರೆ, ನಾವು ಜನರಿಗಾಗಿ ಕಾರ್ಯಕ್ರಮ ಕೊಡುತ್ತೇವೆ. ಅವರು ಚುನಾವಣಾ ಪೂರ್ವದಲ್ಲಿ 2023 ರಲ್ಲಿ ಪಾದಯಾತ್ರೆ ನೋಡಿದ್ವಿ. ಯಾವ ಉದ್ದೇಶಕ್ಕಾಗಿ ಪಾದಯಾತ್ರೆ ಅಂತ ನಿಮಗೂ ಗೊತ್ತಿತ್ತು. ಪಾದಯಾತ್ರೆಯಿಂದ ಯಾವುದಾದರೂ ಅನುಷ್ಠಾನ ಆಗಿವೆಯೇ. ಅದನ್ನು ಮಾಧ್ಯಮಗಳು ರಾಜ್ಯದ ಜನತೆಗೆ ತಿಳಿಸಲಿ. ಅದೇ ರೀತಿಯ ಪಾದಯಾತ್ರೆ ಮಾಡುತ್ತಾರೆ ಅಷ್ಟೇ. ಅಧಿಕಾರಕ್ಕೆ ಬಂದು 3 ವರ್ಷ ಆಗುತ್ತಿವೆ, ಯಾವುದಾದರೂ ಅನುಷ್ಠಾನ ಆಗಿವೆಯೇ. ಅಧಿಕಾರಕ್ಕಾಗಿ ಮಾಡುವ ಪಾದಯಾತ್ರೆ ಬೇರೆ, ಜನಸಾಮಾನ್ಯರ ಆಶೋತ್ತರಗಳಿಗೆ ಮಾಡುವ ಪಾದಯಾತ್ರೆ ಬೇರೆ. ಬಿಜೆಪಿ ಜನಸಾಮಾನ್ಯರ ಪರವಾಗಿ ಕೆಲಸ ಮಾಡುತ್ತಿದೆ. ಸಬ್ ಕಾ ಸಾಥ್, ಸಬ್ ಕೆ ವಿಶ್ವಾಸ ಸಬ್ ಕಾ ವಿಶ್ವಾಸ ಅಂತ ಕೆಲಸ ಮಾಡುತ್ತಿದೆ. ಹಾಗಾಗಿ ನಮಗೆ ಮತ್ತು ಕಾಂಗ್ರೆಸ್ ಹೋರಾಟದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ತಿರುಗೇಟು ನೀಡಿದ್ದಾರೆ.

ವಿಬಿ ಜಿ ರಾಮ್ ಜಿ ಯೋಜನೆ ವಿರುದ್ಧ ಕಾಂಗ್ರೆಸ್ ಜಾಹೀರಾತು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕಾಂಗ್ರೆಸ್ ನ ರಾಷ್ಟ್ರೀಯ ಅಥವಾ ರಾಜ್ಯದ ನಾಯಕರಿಗೆ ವಿಬಿ ಜಿ ರಾಮ್ ಜಿ ಯೋಜನೆ ಕುರಿತು ಮಾಹಿತಿ ಕೊರತೆ ಇದೆ. ಅಥವಾ ಜಾಣ್ಮೆಯ ಮರೆವು ಇರಬಹುದು ಎಂದು ಹೇಳಿದ್ದಾರೆ.

ಲೋಕಸಭಾ ಅಧಿವೇಶನದಲ್ಲಿ ಉತ್ತರ ಕೊಡುವಾಗ ಅದನ್ನು ಕೇಳಿಸಿಕೊಳ್ಳುವ ಸಮಾಧಾನ ಇರಲಿಲ್ಲ. ಕಾಂಗ್ರೆಸ್ ಸರ್ಕಾರದ ಸಚಿವರಿಗೆ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಕಲ್ಪನೆಯೂ ಗೊತ್ತಿಲ್ಲ. ಹಾಗಾಗಿ ನಾವು ಜಾಬ್ ಕಾರ್ಡುದಾರರಿಗೆ ಇದರ ಮಾಹಿತಿ ನೀಡಲಿದ್ದೇವೆ. ಆ ಮೂಲಕ ನಾವು ಕಾಂಗ್ರೆಸ್ ಗೆ ಉತ್ತರ ಕೊಡುತ್ತೇವೆ. ಈ ಕಾರ್ಯಕ್ರಮದ ಮೂಲಕ ಗ್ರಾಮ ಭಾರತಕ್ಕೆ ಹೊಸ ಕಾಯಕಲ್ಪ ಕೊಡಲಿದೆ. ಆ ನಿಟ್ಟಿನಲ್ಲಿ ಪ್ರಧಾನಿಯವರ ಆಲೋಚನೆ ಇದೆ. ಬರುವಂತ ದಿನಗಳಲ್ಲಿ ಇದರ ಬಗ್ಗೆ ಕಾಂಗ್ರೆಸ್ ಗೂ ಮನವರಿಕೆ ಆಗಲಿದೆ. ಜಾಬ್ ಕಾರ್ಡ್ ಹೋಲ್ಡರ್ ಗೆ ಇದೆಲ್ಲ ಅರ್ಥ ಆದ ಮೇಲೆ ಕಾಂಗ್ರೆಸ್ ತಾವೇ ಆಡಿದ ಮಾತನ್ನು ತಾವೇ ನುಂಗಿಕೊಳ್ಳಬೇಕಾಗುತ್ತದೆ ಎಂದು ಪ್ರೀತಂಗೌಡ ಹೇಳಿದರು.