Kodagu News: ನಾಪೋಕ್ಲು ಸರ್ಕಾರಿ ಕಾಲೇಜು ಜಾಗದಲ್ಲಿ ಶಾದಿ ಮಹಲ್ ನಿರ್ಮಾಣವಾಗುತ್ತಿದ್ದು, ಇದು ಒತ್ತುವರಿ ಎಂದು ಸ್ಥಳ ದಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯ ಸ್ಥಳ ದಾನಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರನ್ನು ಕಾಲೇಜಿನಲ್ಲಿ ಭೇಟಿಯಾಗಿ ಶಾಲೆಯ ಜಾಗ ಒತ್ತುವರಿಯಾಗಿರುವ ಬಗ್ಗೆ ಸ್ಪಷ್ಟನೆ ಕೋರಿದರು.
ಬೇತು ಗ್ರಾಮದ ಬೊಳ್ಳೆಪಂಡ, ಚೋಕಿರ, ಕೀಕಂಡ ಮತ್ತು ಪೋರಾಡ್ ಬ್ರಾಹ್ಮಣರ ಕುಟುಂಬಸ್ಥರು ಉದಾರವಾಗಿ ನೀಡಿದ ಜಾಗ ಒತ್ತುವರಿಯಾಗಿದೆ. ಪ್ರಾಂಶುಪಾಲರು ಸಂಬಂಧಿಸಿದವರಿಗೆ ಪತ್ರ ಬರೆದರೂ ಸಂಪೂರ್ಣ ನಿರ್ಲಕ್ಷ್ಯ ಮಾಡಿ ಸರ್ಕಾರಿ ಶಾಲೆ ಜಾಗದಲ್ಲಿ ಶಾದಿ ಮಹಲ್ ಕಟ್ಟಲು ಅಧಿಕಾರಿಗಳು ಅವಕಾಶ ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತವಾಯಿತು.
ಒತ್ತುವರಿ ಜಾಗ ತೆರವು, ಮುಂದೆ ಆಗಬಹುದಾದಂತಹ ಭೂಕಬಳಿಕೆಯನ್ನು ತಡೆಗಟ್ಟ ಬೇಕಾಗಿದೆ ಎಂದು ಸ್ಥಳ ದಾನಿಗಳ ಕುಟುಂಬಸ್ಥರು, ಹಳೆ ವಿಧ್ಯಾರ್ಥಿಗಳು, ಆಡಳಿತ ಮಂಡಳಿಯವರು ಸಭೆಯಲ್ಲಿ ಅಭಿಪ್ರಾಯಪಟ್ಟರು.
ಶಾಸಕರಿಂದ ಶಾದಿ ಮಹಲ್ ಕಟ್ಟಡಕ್ಕಾಗಿ ಗುದ್ದಲಿ ಪೂಜೆ
ನಾಪೋಕ್ಲು ಕಾಲೇಜಿನ ಜಾಗದಲ್ಲಿ ಶಾದಿಮಹಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶಾಸಕರು ಶಾದಿ ಮಹಲ್ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದಾರೆ. ಈ ಸ್ಥಳವು ಕಾಲೇಜಿಗೆ ಸೇರಿದ್ದೋ ಅಥವಾ ಶಾದಿಮಹಲ್ ಫಲಾನುಭವಿಗಳಿಗೆ ಸೇರಿದ್ದೋ ಎಂಬುವುದು ಗೊಂದಲದಲ್ಲಿದ್ದು, ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಯವರು ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರಿಗೆ, ಜಿಲ್ಲಾಧಿಕಾರಿಗೆ ಲಿಖಿತವಾಗಿ ಅರ್ಜಿ ನೀಡಿದ್ದು, ಸರ್ವೆ ಕಾರ್ಯ ಮಾಡಿ ಈ ಗೊಂದಲವನ್ನು ನಿವಾರಿಸಿಕೊಡಬೇಕೆಂದು ಕೇಳಿಕೊಂಡಿದ್ದರೂ ಯಾವುದೇ ಕ್ರ,ಮ ಕೈಗೊಳ್ಳದಿರುವುದು, ಸರ್ವೆ ಕಾರ್ಯ ಮಾಡದೆ, ಯಾವುದೇ ಸ್ಪಷ್ಟತೆ ಇಲ್ಲದೆ ಇದೀಗ ಕಟ್ಟಡ ನಿರ್ಮಾಣಕಾರ್ಯ ಭರದಿಂದ ಸಾಗುತ್ತಿರುವುದು ಸಂಶಯಕ್ಕೆ ಎಡೆಮಾಡಿದೆ. ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಸರ್ವೆ ಆದ ನಂತರ ನ್ಯಾಯುತವಾಗಿ, ಕಾನೂನುಬದ್ದವಾಗಿ ಅವರದೇ ಸ್ಥಳದಲ್ಲಿ ಕಾಮಗಾರಿ ನಡೆಸಲು ಆದೇಶಿಸುವಂತೆ ಆಗ್ರಹಿಸಲಾಯಿತು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವಿಶಾಲ ಕುಶಾಲಪ್ಪ, ಉಪ ಪ್ರಾಂಶುಪಾಲ ಶಿವಣ್ಣ ಎಂ. ಎಸ್., ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎನ್.ಎಸ್. ಉದಯಶಂಕರ್ ಪ್ರತಿಕ್ರಿಯಿಸಿ, ತಾವು ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಿದ್ದಲ್ಲದೆ ಪತ್ರ ವ್ಯವಹಾರ ಮಾಡಿದ ದಾಖಲೆ ಪತ್ರದೊಂದಿಗೆ ಮನವರಿಗೆ ಮಾಡಿಕೊಟ್ಟರು.
ಇದನ್ನೂ ಓದಿ: ಸರ್ಕಾರಿ ಶಾಲೆ ಜಾಗದಲ್ಲಿ ಶಾದಿ ಮಹಲ್ ನಿರ್ಮಾಣ ಆರೋಪ : ಸ್ಪಷ್ಟೀಕರಣಕ್ಕೆ ಬಿಜೆಪಿ ಒತ್ತಾಯ
ಈ ಸಂದರ್ಭ ಕಾಲೇಜಿನ ಅಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ಜಿಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಸ್ಥಳ ದಾನಿಗಳಾದ ಕೀಕಂಡ ರಾಜ ಮೇದಪ್ಪ, ಮಕ್ಕಿ ಬ್ರಾಹ್ಮಣರ ನಾರಾಯಣ, ಕೀಕಂಡ ವಿಠಲ, ಹಳೆ ವಿದ್ಯಾರ್ಥಿಗಳಾದ ಕುಲ್ಲೇಟಿರ ಅಜಿತ್ ನಾಣಯ್ಯ, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಶಿವಚಳಿಯಂಡ ಜಗದೀಶ್, ಕುಂಡ್ಯೋಳಂಡ ವಿಶು ಪೂವಯ್ಯ, ಪಾಡಿಯಮ್ಮoಡ, ಮನು ಮಹೇಶ್ , ಬಿದ್ದಾ ಟಂಡ ಸಂಪತ್, ಕಂಗಾಂಡ ಜಾಲಿ ಪೂವಪ್ಪ, ಬಾಳೆಯಡ ಮೇದಪ್ಪ ಉಪಸ್ಥಿತರಿದ್ದರು.


