BJP Janotsav: ದೊಡ್ಡಬಳ್ಳಾಪುರ ಜನೋತ್ಸವ: 2-3 ಲಕ್ಷ ಜನ ಸೇರಿಸಿ ಭರ್ಜರಿ ಯಶಸ್ಸಿಗೆ ಸಿದ್ಧತೆ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಿರುವ ಆಡಳಿತಾರೂಢ ಬಿಜೆಪಿಯು ಗುರುವಾರ (ಸೆ.8) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೊರವಲಯದಲ್ಲಿ ‘ಜನೋತ್ಸವ ಸಮಾವೇಶ’ ಹಮ್ಮಿಕೊಂಡಿದೆ. 

bjp janotsav on september 8th at doddaballapur gvd

ಬೆಂಗಳೂರು (ಸೆ.06): ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಆದ್ಯತೆ ನೀಡಿರುವ ಆಡಳಿತಾರೂಢ ಬಿಜೆಪಿಯು ಗುರುವಾರ (ಸೆ.8) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪಟ್ಟಣದ ಹೊರವಲಯದಲ್ಲಿ ‘ಜನೋತ್ಸವ ಸಮಾವೇಶ’ ಹಮ್ಮಿಕೊಂಡಿದೆ. ರಾಜ್ಯದ ಇತರ ಭಾಗಗಳಲ್ಲಿ ಪ್ರಾಬಲ್ಯ ಹೊಂದಿರುವ ಬಿಜೆಪಿಯು ಹಳೆ ಮೈಸೂರು ಭಾಗದಲ್ಲಿ ತನ್ನ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕಾಗಿದೆ. ಈ ಭಾಗದಲ್ಲಿ ಸಂಘಟನೆ ಬಲಗೊಂಡಲ್ಲಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರುವುದು ಸುಲಭ. 

ಹೀಗಾಗಿ, ದೊಡ್ಡಬಳ್ಳಾಪುರದ ಸಮಾವೇಶದಿಂದಲೇ ಮುಂಬರುವ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲು ರಾಜ್ಯ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಸುಮಾರು ಎರಡರಿಂದ ಮೂರು ಲಕ್ಷ ಜನ ಸೇರಿಸುವ ಮೂಲಕ ಸಮಾವೇಶವನ್ನು ಭರ್ಜರಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ತೊಡಗಿದ್ದಾರೆ. ರಾಷ್ಟ್ರೀಯ ಬಿಜೆಪಿಯ ಪ್ರಭಾವಿ ನಾಯಕರೂ ಆಗಿರುವ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರು ಕೆಲವು ತಿಂಗಳ ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ ವೇಳೆ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ನಡೆಸಿದ್ದರು. ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಆ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರ ಅಭಿಪ್ರಾಯ, ಸಲಹೆಗಳನ್ನು ಆಲಿಸಿದ ಬಳಿಕ ಅವರು ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಲಪಡಿಸದೇ ಹೋದರೆ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವುದು ಸಾಧ್ಯವಿಲ್ಲ. 

ಭ್ರಷ್ಟ ಬಿಜೆಪಿ ಸರ್ಕಾ​ರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು

ಈ ಬಗ್ಗೆ ತಕ್ಷಣವೇ ಎಲ್ಲ ನಾಯಕರೂ ಕಾರ್ಯಪ್ರವೃತ್ತರಾಗಿ ನೀಲನಕ್ಷೆ ಸಿದ್ಧಪಡಿಸಿ ಎಂಬ ಸೂಚನೆ ನೀಡಿದ್ದರು. ಅಮಿತ್‌ ಶಾ ಅವರ ಸೂಚನೆ ಅನುಸಾರ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ತೆರೆಮರೆಯಲ್ಲಿ ಕಸರತ್ತು ಆರಂಭಿಸಿರುವ ರಾಜ್ಯ ಬಿಜೆಪಿ ನಾಯಕರು ಇದೀಗ ಬಿಜೆಪಿ ಸರ್ಕಾರ ಮೂರು ವರ್ಷ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿರುವುದನ್ನೇ ನೆಪವಾಗಿಸಿಕೊಂಡು ಜನೋತ್ಸವ ಸಮಾವೇಶ ಹಮ್ಮಿಕೊಳ್ಳಲು ಮುಂದಾದರು. ಕಳೆದ ಜುಲೈ 28ರಂದು ಸಮಾವೇಶ ನಡೆಸಲು ದಿನಾಂಕವನ್ನೂ ಅಂತಿಮಗೊಳಿಸಲಾಯಿತು.

ಆಗ ಪಕ್ಷ ಸಂಘಟನೆ ದುರ್ಬಲವಾಗಿರುವ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೇ ಸಮಾವೇಶಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಇದಕ್ಕೆ ಪ್ರಮುಖ ಕಾರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ತೋರಿದ ಅತೀವ ಆಸಕ್ತಿ ಮತ್ತು ಉತ್ಸಾಹ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಒಳಗೊಂಡಂತೆ ನಡೆದ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ದೊಡ್ಡಬಳ್ಳಾಪುರವನ್ನು ಆಯ್ಕೆ ಮಾಡಿದ ಬೆನ್ನಲ್ಲೇ ಉಸ್ತುವಾರಿ ಸಚಿವರಾಗಿರುವ ಸುಧಾಕರ್‌ ಅವರು ಸಮಾವೇಶದ ಸಿದ್ಧತೆಯ ಕೆಲಸವನ್ನು ಭರದಿಂದ ಆರಂಭಿಸಿದರು. 

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳನ್ನು ಪ್ರಮುಖವಾಗಿ ಗಮನದಲ್ಲಿರಿಸಿಕೊಂಡು ಸಂಘಟನಾ ಪ್ರವಾಸಕ್ಕೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜ್‌ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರ ಜತೆಗೂಡಿ ಮೂರೂ ಜಿಲ್ಲೆಗಳ ತಾಲೂಕುಗಳಲ್ಲಿ ಪಕ್ಷದ ಕಾರ್ಯಕರ್ತರ ಸರಣಿ ಸಭೆಗಳನ್ನು ನಡೆಸಿದ ಸುಧಾಕರ್‌ ಅವರು ಎಲ್ಲ ಮುಖಂಡರನ್ನು ಭೇಟಿ ಮಾಡಿ ಸಮಾವೇಶ ಯಶಸ್ವಿಗೊಳಿಸುವ ತಂತ್ರ ರೂಪಿಸತೊಡಗಿದರು.

ಆದರೆ, ಸಮಾವೇಶಕ್ಕೆ ಎಲ್ಲ ಸಿದ್ಧತೆಯೂ ನಡೆದಿತ್ತು. ಅದೇ ವೇಳೆ ಮಂಗಳೂರಿನಲ್ಲಿ ಪಕ್ಷದ ಯುವಮೋರ್ಚಾ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆಯಾಯಿತು. ಪಕ್ಷದ ಕಾರ್ಯಕರ್ತರು ದುಃಖದ ಮಡುವಿನಲ್ಲಿದ್ದಾಗ ಸಮಾವೇಶ ನಡೆಸುವುದು ಬೇಡ ಎಂಬ ನಿಲವಿಗೆ ಬಂದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಮುಂದೂಡುವ ನಿರ್ಧಾರ ಪ್ರಕಟಿಸಿದರು. ಸಮಾವೇಶಕ್ಕೆ ಆಗಮಿಸುವ ಲಕ್ಷಾಂತರ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಲುವಾಗಿ ಅಡುಗೆಯೂ ಸಜ್ಜಾಗುವ ವೇಳೆ ರದ್ದಾಗಿದ್ದರಿಂದ ಎಲ್ಲ ಸಿದ್ಧತೆಯೂ ವ್ಯರ್ಥವಾಯಿತು.

ಇದರಿಂದ ತಕ್ಷಣಕ್ಕೆ ನಿರಾಸೆಯಾದರೂ ಬಳಿಕ ಮತ್ತೆ ಸಮಾವೇಶದ ಸಿದ್ಧತೆಯಲ್ಲಿ ಸಚಿವ ಸುಧಾಕರ್‌ ಮತ್ತಿತರರು ತಮ್ಮನ್ನು ತಾವು ತೊಡಗಿಸಿಕೊಂಡರು. ಆಗಸ್ಟ್‌ ಎರಡನೇ ವಾರದಲ್ಲಿ ಸಮಾವೇಶ ಹಮ್ಮಿಕೊಳ್ಳಲು ಮುಂದಾದರೂ ವಿವಿಧ ಕಾರಣಗಳಿಗಾಗಿ ದಿನಾಂಕ ಅಂತಿಮಗೊಳ್ಳಲಿಲ್ಲ. ಇದೀಗ ಸೆ.8ರಂದು ಗುರುವಾರ ದೊಡ್ಡಬಳ್ಳಾಪುರದ ಹೊರವಲಯದ ತಮ್ಮಶೆಟ್ಟಿಹಳ್ಳಿಯಲ್ಲಿ ಜನೋತ್ಸವ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಮಾವೇಶದ ಯಶಸ್ಸಿಗಾಗಿ ಸಚಿವ ಸುಧಾಕರ್‌ ನೇತೃತ್ವದಲ್ಲಿ ಸಕಲ ಸಿದ್ಧತೆಯೂ ಆರಂಭಗೊಂಡಿದ್ದು, ಇಡೀ ಸಮಾವೇಶದ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ. ರಾಜ್ಯ ನಾಯಕರು ಹಾಗೂ ಜಿಲ್ಲಾ ಮುಖಂಡರ ಸಮನ್ವಯ ಸಾಧಿಸುವ ಮೂಲಕ ಶ್ರಮಿಸುತ್ತಿದ್ದಾರೆ.

ಎಲ್ಲರ ಮನದಲ್ಲೂ ಬಿಜೆಪಿ: ಜನೋತ್ಸವ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸುಧಾಕರ್‌, ಬಯಲು ಸೀಮೆನಾಡಿನಲ್ಲಿ ಈಗ ಕೇಸರಿಯ ರಂಗು. ಪ್ರತಿಯೊಬ್ಬರ ಮನದಲ್ಲೂ ಬಿಜೆಪಿಯ ಸಾಧನೆಯ ಮಾತು. ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ಜನತೆಗೆ ಇದೊಂದು ಐತಿಹಾಸಿಕ ಕ್ಷಣ. ಬಿಜೆಪಿ ಸರ್ಕಾರದ ಮೂರು ವರ್ಷದ ಸಾಧನೆ ಏನು ಎನ್ನುವುದನ್ನು ಜನರು ಈಗಾಗಲೇ ತಿಳಿದುಕೊಂಡಿದ್ದಾರೆ. ಹೀಗಾಗಿ ಜನರೇ ಆಚರಿಸುವ ಸಂಭ್ರಮ ಇದಾಗಿದೆ ಎಂದಿದ್ದಾರೆ.

BJP Janotsav: ಸೆ.8ಕ್ಕೆ ಬಿಜೆಪಿ ಜನೋತ್ಸವ, ಸರ್ಕಾರದ ಸಾಧನೆ ಅನಾವರಣ: ಕಟೀಲ್‌

ವಿರೋಧ ಪಕ್ಷಗಳದ್ದು ವ್ಯಕ್ತಿ ಉತ್ಸವವಾಗಿದ್ದರೆ, ನಮ್ಮದು ಜನರೇ ಆಚರಿಸುವ ಜನೋತ್ಸವ. ಬಿಜೆಪಿ ಅಧಿಕಾರಕ್ಕೆ ಬಂದು ಮೂರು ವರ್ಷಗಳ ಸಂಭ್ರಮದಲ್ಲಿದೆ. ಕರ್ನಾಟಕದಲ್ಲಿ ಹಲವು ರಾಜಕೀಯ ಉತ್ಸವಗಳು ನಡೆದಿವೆ. ಆದರೆ ಅವುಗಳಲ್ಲೆಲ್ಲ ಅಧಿಕಾರದ ದಾಹ ಕಾಣುತ್ತಿತ್ತು. ಚುನಾವಣೆಯಲ್ಲಿ ಅಧಿಕಾರಕ್ಕೇರುವ ಹಗಲು ಕನಸಿತ್ತು. ಆದರೆ ಈ ಉತ್ಸವ ಬಿಜೆಪಿಯ ಉತ್ಸವ ಅಲ್ಲ. ಇದು ಜನರೇ ನಡೆಸಿಕೊಡುವ ಜನೋತ್ಸವ. ಜನರಿಗೆ ಸರ್ಕಾರ ಕೊಟ್ಟಿರುವ ಸಾರ್ಥಕ ಸೇವೆ ಮತ್ತು ಸಾಮಾಜಿಕ ಸಬಲೀಕರಣದ ಹೆಜ್ಜೆಗಳನ್ನು ಸಂಭ್ರಮಿಸುವ ಜನೋತ್ಸವ ಎಂದು ಅಭಿಪ್ರಾಯಪಟ್ಟಿದ್ದಾರೆ.

Latest Videos
Follow Us:
Download App:
  • android
  • ios