Asianet Suvarna News Asianet Suvarna News

BJP Janotsav: ಸೆ.8ಕ್ಕೆ ಬಿಜೆಪಿ ಜನೋತ್ಸವ, ಸರ್ಕಾರದ ಸಾಧನೆ ಅನಾವರಣ: ಕಟೀಲ್‌

ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ್‌ ನಡ್ಡಾ ಭಾಗಿಯಾಗಲಿದ್ದು, ಸರ್ಕಾರದ 3 ವರ್ಷಗಳ ಸಾಧನೆಯ ಅನಾವರಣ ನಡೆಯಲಿದೆ: ಕಟೀಲ್‌

BJP Janotsav Will Be Held on September 8th in Doddaballapur Says Nalin Kumar Kateel grg
Author
First Published Sep 4, 2022, 8:49 AM IST

ದೊಡ್ಡಬಳ್ಳಾಪುರ(ಸೆ.04):  ದೊಡ್ಡಬಳ್ಳಾಪುರದಲ್ಲಿ ಸೆ.8ರಂದು ನಡೆಯುವ ಜನೋತ್ಸವ ಕಾರ‍್ಯಕ್ರಮ ಬಿಜೆಪಿ ಸರ್ಕಾರದ ಜನಸ್ನೇಹಿ ಶಕ್ತಿಪ್ರದರ್ಶನವಾಗಿದ್ದು, ಸರ್ಕಾರದ ಜನಪರ ಯೋಜನೆಗಳ ಅನಾವರಣದ ವೇದಿಕೆಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ತಾಲೂಕಿನ ದೊಡ್ಡಬೆಳವಂಗಲದಲ್ಲಿ ಶನಿವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ ಕೆಲ ವಿಧಾನಸಭಾ ಕ್ಷೇತ್ರಗಳು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಯ ಮಧುಗಿರಿ ಭಾಗದ ಕೆಲ ಕ್ಷೇತ್ರಗಳನ್ನೂ ಒಳಗೊಂಡಂತೆ 19ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಿಂದ ಜನರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್‌ಪ್ರಕಾಶ್‌ ನಡ್ಡಾ ಅವರು ಭಾಗಿಯಾಗಲಿದ್ದು, ಸರ್ಕಾರದ 3 ವರ್ಷಗಳ ಸಾಧನೆಯ ಅನಾವರಣ ಈ ಸಮಾವೇಶದಲ್ಲಿ ನಡೆಯಲಿದೆ ಎಂದರು.

ರಾಜ್ಯ ಬಿಜೆಪಿ ಸರ್ಕಾರ 3 ವರ್ಷ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 1 ವರ್ಷ ಅಧಿಕಾರಾವಧಿ ಪೂರೈಸಿರುವ ಹಿನ್ನಲೆಯಲ್ಲಿ ನಡೆಯುತ್ತಿರುವ ಈ ಬೃಹತ್‌ ಸಮಾವೇಶಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದೆ. ಕಾಂಗ್ರೆಸ್‌ ಪಕ್ಷ ಜನೋತ್ಸವದ ಬಗ್ಗೆ ಟೀಕಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಹತಾಶಗೊಂಡಿದ್ದು, ಎಲ್ಲ ಹಂತಗಳಲ್ಲಿ ಹತಾಶಗೊಂಡಿದೆ. ಅನಗತ್ಯವಾಗಿ ವಿವಾದಗಳನ್ನು ಸೃಷ್ಟಿಸುವುದು, ಆ ನಂತರ ಮುಜುಗರಕ್ಕೆ ಈಡಾಗುವುದು ಆ ಪಕ್ಷಕ್ಕೆ ಹೊಸದೇನಲ್ಲ. ಜನೋತ್ಸವ ಯಶಸ್ಸಿನ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಲಿದ್ದು, ಬಿಜೆಪಿ ಬಲವರ್ಧನೆಯಾಗಲಿದೆ ಎಂದರು.

ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಎರಡನೇ ಟ್ರೈಲರ್ ಸೆ.8ಕ್ಕೆ ಬಿಡುಗಡೆ: ಸಚಿವ ಸುಧಾಕರ್

ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಜನೋತ್ಸವ ಕಾರ‍್ಯಕ್ರಮವನ್ನು ಯಶಸ್ವಿಗೊಳಿಸುವ ಕುರಿತು ಚರ್ಚಿಸಲು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಜಿಲ್ಲಾ ತಾಲೂಕು ಮುಖಂಡರ ಪೂರ್ವಸಿದ್ಧತೆ ಸಭೆ ನಡೆಸಲಾಗಿದೆ. ಪ್ರತಿ ತಾಲೂಕಿನ ಮುಖಂಡರ ಸಲಹೆಗಳನ್ನು ಸ್ವೀಕರಿಸಲಾಗಿದೆ. ಜನೋತ್ಸವಕ್ಕೆ ಒಟ್ಟು ಎರಡು ಲಕ್ಷ ಜನರನ್ನು ಸೇರಿಸುವ ಉದ್ದೇಶವಿದೆ ಎಂದು ಹೇಳಿದರು.

ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ಮಾತನಾಡಿ, ಕಾರ್ಯಕ್ರಮಕ್ಕೆ ಜನರನ್ನು ಕರೆತರುವ ಸಲುವಾಗಿ ಗ್ರಾಮ ಮಟ್ಟದ ಪ್ರತಿ ಬೂತ್‌, ಹೋಬಳಿ, ತಾಲೂಕು ಮಟ್ಟದಲ್ಲಿ ಸಭೆ ನಡೆಸಬೇಕು. ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯಕ್ಕೆ ಸಂದೇಶ ರವಾನಿಸಬೇಕು ಎಂದು ಹೇಳಿದರು.

ತೋಟಗಾರಿಕೆ ಸಚಿವ ಮುನಿರತ್ನ ಮಾತನಾಡಿ, ಸೆ.8ರಂದು ಜನೋತ್ಸವಕ್ಕೆ ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಚರ್ಚಿಸಲಾಗಿದೆ. ಸುಮಾರು 1.5 ರಿಂದ 2 ಲಕ್ಷ ಜನರು ಸೇರುವ ನಿರೀಕ್ಷೆ ಇದ್ದು, ಅಚ್ಚುಕಟ್ಟಾದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪೂರ್ವಸಿದ್ದತೆ ಸಭೆಯಲ್ಲಿ ಕೋಲಾರ ಸಂಸದ ಮುನಿಸ್ವಾಮಿ, ವಿಧಾನಪರಿಷತ್‌ ಸದಸ್ಯರಾದ ಅಶ್ವತ್ಥನಾರಾಯಣಗೌಡ, ಕೇಶವಪ್ರಸಾದ್‌, ವೈ.ಎ.ನಾರಾಯಣಸ್ವಾಮಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಜಿ.ವಿ, ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ಸ್ಥಳೀಯ ಮುಖಂಡರು, ವಿವಿಧ ಜಿಲ್ಲೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಜನೋತ್ಸವಕ್ಕೆ ಕೋಲಾರ ಜಿಲ್ಲೆಯಿಂದ 200 ಬಸ್‌: ಸಚಿವ ಮುನಿರತ್ನ

ಜಿಲ್ಲಾ ಕೇಂದ್ರ ಘೋಷಣೆ ಪರಿಶೀಲಿಸಿ ತೀರ್ಮಾನ: ಡಾ.ಕೆ.ಸುಧಾಕರ್‌

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕೇಂದ್ರದ ಘೋಷಣೆ ಸಂಬಂಧ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ದೊಡ್ಡಬೆಳವಂಗಲದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲಿ ಜಿಲ್ಲಾ ಕೇಂದ್ರವೇ ಇಲ್ಲದ ಜಿಲ್ಲೆಯಾಗಿರುವುದು ಬೆಂಗಳೂರು ಗ್ರಾಮಾಂತರದ ದುದೈರ್‍ವ. ಹಿಂದಿನ ಪ್ರಕ್ರಿಯೆಗಳು ಏನಾಗಿವೆ, ಯಾರ ಅವಧಿಯಲ್ಲಿ ಜಿಲ್ಲಾಡಳಿತ ಭವನ ಯಾವ ತಾಲೂಕಿನಲ್ಲಿ ಆಗಿದೆ ಇತ್ಯಾದಿ ವಿವರಗಳನ್ನೆಲ್ಲಾ ಪರಿಶೀಲಿಸಿ ನ್ಯಾಯಸಮ್ಮತ ತೀರ್ಮಾನ ಪ್ರಕಟಿಸುವುದಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಜನೋತ್ಸವ ಕಾರ್ಯಕ್ರಮಕ್ಕೂ ಜಿಲ್ಲಾ ಕೇಂದ್ರ ವಿವಾದಕ್ಕೂ ಸಂಬಂಧವಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ಜಿಲ್ಲಾ ಕೇಂದ್ರದ ವಿಚಾರದಲ್ಲಿ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
 

Follow Us:
Download App:
  • android
  • ios