ಅಂಬಿಕಾಪತಿ ಈಗ ಕರೋಡ್ ಪತಿ ಈತ ಯಾರ ಬೇನಾಮಿ?: ಸಿಟಿ ರವಿ ಕಿಡಿ
ಗುತ್ತಿಗೆದಾರ ಅಂಬಿಕಾಪತಿ ಈಗ ಕರೋಡ್ ಪತಿ ಆಗಿದ್ದಾರೆ. ಸಂತೋಷ್ ಕೃಷ್ಣಪ್ಪ ಅಂಬಿಕಾಪತಿ ಈತ ಯಾರ ಬೇನಾಮಿ? ರಾಜ್ಯದ ನಂಬರ್ ಒನ್, ನಂಬರ್ ಟು ಗೆ ಬೇನಾಮಿ ಅನ್ನೋದು ನಮಗೆ ಮಾಹಿತಿಯಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಡಿಕೆ ಶಿವಕುಮಾರ ಅವರ ಹೆಸರು ಹೇಳದೆ ಗಂಭೀರ ಆರೋಪ ಮಾಡಿದರು.

ಬೆಂಗಳೂರು (ಅ.15): ನಾಡಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ಈ ಸರ್ಕಾರದ ಹಗರಣಗಳು, ಅಸ್ತಿಪಂಜರಗಳು ನಿತ್ಯ ಹೊರಬರುತ್ತಿವೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿಟಿ ರವಿ ವಾಗ್ದಾಳಿ ನಡೆಸಿದರು
ಖ್ಯಾತ ಸರೋದ್ ವಾದಕ ಶ್ರೀ ರಾಜೀವ್ ತಾರಾನಾಥ್ ಅವರ ಬಳಿ ದಸರಾ ಸಮಿತಿ ಅಧಿಕಾರಿಗಳು ಕಾರ್ಯಕ್ರಮ ನಡೆಸಲು 5 ಲಕ್ಷ ಬೇಡಿಕೆಯಿಟ್ಟ ವಿಚಾರ ಸಂಬಂಧ ಮಾತನಾಡಿದ ಅವರು, ದಸರಾ ಉತ್ಸವದಲ್ಲಿ ಶ್ರೀ ರಾಜೀವ್ ತಾರಾನಾಥ್ ಕಾರ್ಯಕ್ರಮ ಆಯೋಜನೆಗೆ 5 ಲಕ್ಷಕ್ಕೆ ಮೂರು ಲಕ್ಷ ಲಂಚ ಕೇಳ್ತಾರೆ ಎಂದರೆ ಇದು60% ಕಮಿಷನ್ ಸರ್ಕಾರ ಅಂತಾಯ್ತು. ಸರಸ್ವತಿ ಪುತ್ರನಿಗೇ ಕಮಿಷನ್ ಕೇಳ್ತಾರೆ ಅಂದರೆ ಇಂಥವರು ಯಾರನ್ನು ಬಿಟ್ಟಾರು? ಕಲಾವಿದರ ಬಳಿಯೇ ಹಣ ಕೀಳ್ತಾರಂದ್ರೆ ಮುಂದೆ ಹೇಗೆ? ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಇಷ್ಟೊಂದು ಹಗರಣಗಳು ಬೆಳಕಿಗೆ ಬಂದಿವೆ. ಇನ್ನೂ ಐದು ವರ್ಷದ ಆಡಳಿತದಲ್ಲಿ ಎಷ್ಟು ಹಗರಣಗಳಲ್ಲಿ ತೊಡಗಬಹುದು ಎಂದು ಕಿಡಿಕಾರಿದರು.
ನಾಡಿನ ಕಲೆ, ಸಂಸ್ಕೃತಿಯನ್ನ ದಸರಾ ಮೂಲಕ ಜಗತ್ತಿಗೆ ತಿಳಿಸುವ ಕಾರ್ಯ ನಮ್ಮ ಸರ್ಕಾರ ಮಾಡುತ್ತೆ: ಸಿದ್ದರಾಮಯ್ಯ
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲೇ ಕಮಿಷನ್ ಕೇಳೋ ಇವರು ಬೇರೆಯವರಿಗೆ ಬಿಟ್ಟಾರಾ? ಇದು ಸಿದ್ದರಾಮಯ್ಯನವರ ತವರು ಜಿಲ್ಲೆಯಲ್ಲೇ ಆಗಿರೋದು, ಇನ್ನು ಬೇರೆ ಜಿಲ್ಲೆಯಲ್ಲಿ ಹೇಗೆ? ಕಮಿಷನ್ ಕೇಳಿದ್ದು ನಿಜವೇ ಆಗಿದ್ರೂ ಈಗ ಸರ್ಕಾರದ ಮಾನ ಉಳಿಸಿಕೊಳ್ಳಲು ಒತ್ತಡ ಹಾಕಿ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡಿರೋದು ಇನ್ನೂ ದೊಡ್ಡ ನಾಚಿಕೆಗೇಡು ಎಂದರು.
ಅಂಬಿಕಾಪತಿ ಈ ಕರೋಡ್ ಪತಿ :
ಗುತ್ತಿಗೆದಾರ ಅಂಬಿಕಾಪತಿ ಈಗ ಕರೋಡ್ ಪತಿ ಆಗಿದ್ದಾರೆ. ಸಂತೋಷ್ ಕೃಷ್ಣಪ್ಪ ಅಂಬಿಕಾಪತಿ ಈತ ಯಾರ ಬೇನಾಮಿ? ರಾಜ್ಯದ ನಂಬರ್ ಒನ್, ನಂಬರ್ ಟು ಗೆ ಬೇನಾಮಿ ಅನ್ನೋದು ನಮಗೆ ಮಾಹಿತಿಯಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಡಿಕೆ ಶಿವಕುಮಾರ ಅವರ ಹೆಸರು ಹೇಳದೆ ಗಂಭೀರ ಆರೋಪ ಮಾಡಿದರು.
ಈ ಇಬ್ಬರು ನಾಯಕರು ತಮ್ಮ ಅಕ್ರಮ ನಡೆಸಲು ಇವರನ್ನು ಬಳಸಿಕೊಂಡಿದ್ದಾರೆ.. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ATM ಮಾಡಿಕೊಂಡಿದೆ. ಅಂದು ಗೋವಿಂದ ರಾಜ್ ಡೈರಿ ಸತ್ಯ ಹೇಳಿತ್ತು. ಈಗ ಅದಕ್ಕೆ ಮತ್ತೆ ಸಾಕ್ಷಿ ಸಿಕ್ಕಿದೆ. ಈ ಕೇಸ್ ಸಿಬಿಐಗೆ ವಹಿಸಬೇಕು. ನಿಮ್ಮದು ಪ್ರಾಮಾಣಿಕ ಸರ್ಕಾರ ಎಂದಾಗಿದ್ದರೆ, ಸಿದ್ದರಾಮಯ್ಯನವರೇ ಈ ಕೇಸ್ ಸಿಬಿಐಗೆ ಕೊಡಿ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿ ಖುರ್ಚಿಗೆ ಟವೆಲ್ ಹಾಕಿರೋರು ಎರಡು ಸಾವಿರ ಕೋಟಿ ಕೊಡ್ತೇನೆ ಎಂದು ಹೇಳಿದ್ದಾರಂತೆ. ಆದರೆ ಸಿದ್ದರಾಮಯ್ಯ ಅವರು ನನಗೆ ಅಷ್ಟು ಕೊಡೋಕೆ ಆಗಲ್ಲ ನಾನು ಅರ್ಧ ವ್ಯವಸ್ಥೆ ಮಾಡ್ತೇನೆ ಚುನಾವಣೆಗೆ ಎಂದಿದ್ದಾರಂತೆ. ಅದರ ಹಣವೇ ಈಗ ಸಿಕ್ಕಿಬಿದ್ದಿರೋದು ಅಂತ ನಮಗೆ ಅನಿಸ್ತಿದೆ. ಇನ್ನು ಬ್ರಾಂಡ್ ಬೆಂಗಳೂರು ಪ್ಲಾನ್ ಹೇಗೆ ಎನ್ನೋದು ಅರ್ಥ ಮಾಡ್ಕೊಬೇಕು. ಬೆದರಿಸಿ ಹಣ ವಸೂಲಿ ಮಾಡ್ತಾ ಇದ್ದಾರೆ. LnT ಕಂಪನಿ ಅವರಿಗೆ ನೀರನ್ನೇ ಬಂದ್ ಮಾಡಿದ್ದಾರೆ. ಕಾರಣ ಕಮಿಷನ್ ಕೊಟ್ಟಿಲ್ಲ ಎಂದು. ಹೇಳ್ತಾ ಹೋದ್ರೆ ಈ ಸರ್ಕಾರ ಹಗರಣಗಳು ಒಂದಾ ಎರಡಾ? ಅಧಿಕಾರಕ್ಕೆ ಬಂದ ದಿನದಿಂದಲೆ ಕಮಿಷನ್, ವರ್ಗಾವಣೆ ದಂಧೆಯಲ್ಲಿ ಮುಳುಗಿಹೋಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಐಟಿ ರೇಡ್‌ಗಳಿಗೆಲ್ಲ ನಾವು ಬಗ್ಗಲ್ಲ: ಬಿಜೆಪಿ ಜೆಡಿಎಸ್ ನಾಯಕರ ಆರೋಪಗಳಿಗೆ ಪ್ರಿಯಾಂಕ್ ಖರ್ಗೆ ತಿರುಗೇಟು!
ಎಲ್ಲಾ ಐಟಿ ದಾಳಿ ಹಿಂದೆ ರಾಜಕೀಯ ಇರುತ್ತದೆ ಎಂದು ಡಿಸಿಎಂ ಅಣಿಮುತ್ತು ಉದುರಿಸಿದ್ದಾರೆ. ಆದರೆ 42 ಕೋಟಿ ಸಿಕ್ಕಿದೆಯಲ್ಲ. ನಿಮಗೆ ಸಂಬಂಧ ಇಲ್ಲದ ಹಣ ಆದರೆ ನೀವು ಸಿಬಿಐಗೆ ಕೊಡಿ. ನೀವು ಈ ಪ್ರಕರಣದಲ್ಲಿ ವಹಿಸಿಕೊಂಡು ಮಾತಾಡ್ತಾ ಇರೋದನ್ನ ನೋಡಿದ್ರೆ ನಿಮಗೂ ಈ ಕೇಸ್ ಗೂ ಸಂಬಂಧ ಇರಬಹದು ಎಂದು ನಮನೆ ಅನುಮಾನ ಮೂಡಿಸಿದೆ ಇದು ನಿಜವೂ ಹೌದು ಎಂದರು.