* ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಪರೋಕ್ಷ ಟೀಕೆ* 40% ಕಮಿಷನ್‌ ಕೈ ಸೃಷ್ಟಿಮಾಡಿದ ಟೂಲ್‌ಕಿಟ್‌: ಬಿಜೆಪಿ* ಇದು ಕಾಂಗ್ರೆಸ್‌ನ ‘ಬೇನಾಮಿ ಅಧ್ಯಕ್ಷೆ’ಯ ಮಹಾ ಕೈವಾಡವೇ? 

ಬೆಂಗಳೂರು(ಏ.14): ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರ ಸಾವಿಗೆ ನ್ಯಾಯ ಸಿಗಲೇಬೇಕು. ನ್ಯಾಯದ ಜತೆಗೆ ಸಾವಿನ ಹಿಂದಿರುವ ರಹಸ್ಯಗಳಿಗೂ ಉತ್ತರ ಸಿಗಬೇಕು. ಮೃತ ಸಂತೋಷ್‌ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಇದೇ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿದ್ದರು. ಇದು ಕಾಕತಾಳೀಯವಾಗಲು ಹೇಗೆ ಸಾಧ್ಯ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಾಕಷ್ಟುಅನುಮಾನ ಸೃಷ್ಟಿಯಾಗಿದೆ. ಇದು ಕಾಂಗ್ರೆಸ್‌ ಪಕ್ಷದ ‘ಬೇನಾಮಿ ಅಧ್ಯಕ್ಷೆ’ ಮತ್ತು ‘ಮಹಾನಾಯಕ’ ಸೃಷ್ಟಿಸಿದ ಮಹಾ ಕೈವಾಡವೇ?, ‘ಅಘೋಷಿತ ಕೆಪಿಸಿಸಿ ಅಧ್ಯಕ್ಷೆ’ಯ ಕ್ಷೇತ್ರದಲ್ಲಿ ನಡೆದ ಬೇನಾಮಿ ಕಾಮಗಾರಿಗೆ ಕಾಂಗ್ರೆಸ್‌ ಮಾಜಿ ಕಾರ್ಯಕರ್ತ ಬಲಿಯಾದರೆ? ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಪರೋಕ್ಷವಾಗಿ ಟೀಕಾಪ್ರಹಾರ ನಡೆಸಿದೆ.

ಶೇ.40ರಷ್ಟುಕಮಿಷನ್‌ ಆರೋಪ ಕಾಂಗ್ರೆಸ್‌ ಪಕ್ಷ ಸೃಷ್ಟಿಸಿದ ಬಹುದೊಡ್ಡ ಟೂಲ್‌ಕಿಟ್‌. ಈ ಷಡ್ಯಂತ್ರವನ್ನು ಪೋಷಿಸುವುದಕ್ಕಾಗಿ ಕಾಂಗ್ರೆಸ್‌ ಖಳನಾಯಕರು ಮಗದೊಂದು ಪ್ರಹಸನ ಹೆಣೆದರೇ? ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್‌ ಮುನ್ನುಡಿ ಬರೆಯುತ್ತಿದೆಯೇ? ಅನುಮೋದನೆ ಇಲ್ಲದೆಯೇ 100ಕ್ಕೂ ಹೆಚ್ಚು ಕಾಮಗಾರಿ ನಡೆಸಿದ್ದ ಸಂತೋಷ್‌. ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಕಾಮಗಾರಿಯಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಂದ ಸ್ಪಷ್ಟನೆ ಮತ್ತು ಅನಧಿಕೃತ ಕಾಮಗಾರಿಯ ಹಿಂದೆ ಕೆಪಿಸಿಸಿಯ ಅಘೋಷಿತ ಅಧ್ಯಕ್ಷೆಯ ಪಾತ್ರವೇನು? ಕೇಂದ್ರದ ನಾಯಕರ, ಮಂತ್ರಿಗಳ, ಅಧಿಕಾರಿಗಳ ಬಳಿಗೆ ತೆರಳಿ ದೂರು ಸಲ್ಲಿಸುವಷ್ಟುಧೈರ್ಯವಿದ್ದ ವ್ಯಕ್ತಿ ಅತ್ಮಹತ್ಯೆ ಮಾಡಿಕೊಳ್ಳುವಷ್ಟುಮೆತ್ತಗಿನ ಮನುಷ್ಯನೇ? ಇದರ ಹಿಂದೆ ಕಾಂಗ್ರೆಸ್‌ ಕೈವಾಡವಿದೆ. ಆರಾಜಕತೆ ಸೃಷ್ಟಿಸಲು ಮುಗ್ಧರನ್ನು ಕಾಂಗ್ರೆಸ್‌ ನಾಯಕರು ಬಳಸಿಕೊಳ್ಳುತ್ತಿದ್ದಾರೆಯೇ? ಸಂತೋಷ್‌ ಪ್ರಕರಣ ಕಾಂಗ್ರೆಸ್‌ ಟೂಲ್‌ಕಿಟ್‌ ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ ಎಂದು ವಾಗ್ದಾಳಿ ನಡೆಸಿದೆ.

ಸಂತೋಷ್‌ ಪಾಟೀಲ್‌ ಮೂಲತಃ ಕಾಂಗ್ರೆಸ್‌ ಕಾರ್ಯಕರ್ತನಾಗಿದ್ದು, ಈ ಹಿಂದೆ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಸಹಿ ನಕಲು ಮಾಡಿದ್ದು ನಿಜವಲ್ಲವೇ? ಈ ಕಾರಣಕ್ಕಾಗಿ ಆತನನ್ನು ಕಾಂಗ್ರೆಸ್ಸಿನಿಂದ ಉಚ್ಚಾಟನೆ ಮಾಡಿದ್ದು ಸುಳ್ಳೇ? ಆತ ಕಾಂಗ್ರೆಸ್ಸಿನ ‘ಬೇನಾಮಿ ಅಧ್ಯಕ್ಷರಿಗೆ’ ನಿಷ್ಠನಾಗಿದ್ದು ಸುಳ್ಳೇ? ಎಂದು ಕಿಡಿಕಾರಿದೆ.

ಯಾರೋ ಹೇಳಿದಾಕ್ಷಣ ಎಲ್ಲ ಸತ್ಯ ಆಗಲ್ಲ: ಬಿಸಿಪಾ

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಯಾರೋ ಹೇಳಿದ ತಕ್ಷಣ ಎಲ್ಲವೂ ಸತ್ಯವಾಗಲ್ಲ. ಒಬ್ಬರು ಆರೋಪ ಮಾಡಿದರೆ ಅದು ಸರಿ ಎಂದು ಹೇಳಲಾಗುವುದಿಲ್ಲ. ಪ್ರಕರಣದ ಸಮಗ್ರ ತನಿಖೆಯ ಬಳಿಕ ಸತ್ಯ ಹೊರಬರಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದ್ದಾರೆ.

ಬುಧವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಮೊದಲು ತನಿಖೆಯಾಗಬೇಕು. ನಂತರ ಈ ಪ್ರಕರಣಕ್ಕೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾಧ್ಯಮಗಳಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿಕೆಯನ್ನು ಗಮನಿಸಿದ್ದೇನೆ. ಸಂತೋಷ್‌ ನಮ್ಮ ಇಲಾಖೆಯಲ್ಲಿ ಗುತ್ತಿಗೆ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಗುತ್ತಿಗೆದಾರ ಸಂತೋಷ್‌ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬದ ಜತೆ ನಾವಿದ್ದೇವೆ. ಅವರ ಕಷ್ಟದಲ್ಲಿ ಭಾಗಿಯಾಗುತ್ತೇವೆ ಎಂದರು.

ಆತ್ಮಹತ್ಯೆ ಯಾವ ಕಾರಣಕ್ಕಾಗಿ ಆಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯ ನಂತರ ಗೃಹ ಇಲಾಖೆ ಮತ್ತು ಮುಖ್ಯಮಂತ್ರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಈಗಾಗಲೇ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ಸಹ ಸಂತೋಷ್‌ ಮಾಡಿರುವ ಆರೋಪದ ಕುರಿತು ತನಿಖೆ ನಡೆಸುತ್ತಿದೆ. ಒಬ್ಬ ಮನುಷ್ಯ ಆಪಾದನೆ ಮಾಡಿದರೆ ಅದು ಸರಿ ಅಂತಲ್ಲ. ಸತ್ಯಾಸತ್ಯತೆ ಹೊರಬರಲು ಸಮಗ್ರ ತನಿಖೆಯಾಗಬೇಕು. ತನಿಖೆ ನಂತರ ಸಂಬಂಧಪಟ್ಟವರ ಮೇಲೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.