Karnataka Bitcoin Scam| ಮಾರ್ಚ್, ಏಪ್ರಿಲ್‌ನಲ್ಲೇ ಇಡಿ, ಇಂಟರ್ ಪೋಲ್‌ಗೆ ದೂರು!
* ಬಿಟ್ ಕಾಯಿನ್ ಹಗರಣ ತನಿಖೆ ನಡೆಸುವಂತೆ ಪತ್ರ
* ಮಾರ್ಚ್ ಏಪ್ರಿಲ್‌ನಲ್ಲೇ ಇಡಿ, ಇಂಟರ್ ಪೋಲ್‌ಗೆ ದೂರು
* ರಾಜ್ಯ ಸರ್ಕಾರದ ಬರೆದಿದ್ದ ಪತ್ರಗಳು ಈಗ ಬೆಳಕಿಗೆ
ಬೆಂಗಳೂರು(ನ.11): ಬಿಟ್ ಕಾಯಿನ್ ಹಗರಣ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯ (ಇ.ಡಿ), ಇಂಟರ್ ಪೋಲ್ ಇತ್ಯಾದಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಈ ವರ್ಷದ ಮಾಚ್‌ರ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಬರೆದ ಪತ್ರಗಳು ಈಗ ಬೆಳಕಿಗೆ ಬಂದಿವೆ. ಬಿಟ್ ಕಾಯಿನ್ ಹಗರಣವನ್ನು ತನಿಖೆಗೆ ಒಪ್ಪಿಸಿರುವುದಕ್ಕೆ ಸಾಕ್ಷ್ಯ ಕೊಡಿ ಎಂದು ಪ್ರತಿಪಕ್ಷಗಳು ಕೇಳುತ್ತಿರುವುದರ ನಡುವೆಯೇ ಈ ದಾಖಲೆಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.
ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುವಂತೆ ಇ.ಡಿ.ಗೆ ರಾಜ್ಯ ಸರ್ಕಾರ ಮಾಚ್‌ರ್ 3ರಂದು ಪತ್ರ ಬರೆದಿದೆ. ಅದೇ ರೀತಿ, ಇಂಟರ್ ಪೋಲ್‌ಗೆ ಏಪ್ರಿಲ್ 28ರಂದು ಪತ್ರ ಬರೆದಿದೆ. ಅಲ್ಲದೆ, ಐಐಎಸ್‌ಸಿ ತಜ್ಞರು, ಸೈಬರ್ ತಜ್ಞರು, ಇ-ಆಡಳಿತ ಇಲಾಖೆಯ ತಜ್ಞರು ಮುಂತಾದವರ ನೆರವನ್ನೂ ರಾಜ್ಯ ಸರ್ಕಾರ ಕೋರಿರುವ ಸಂಗತಿ ಬಹಿರಂಗಗೊಂಡಿದೆ. ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಹಲವು ಮಜಲುಗಳ ಮೂಲಕ ಪ್ರಕರಣವನ್ನು ಭೇದಿಸಲು ವಿವಿಧ ತನಿಖಾ ಸಂಸ್ಥೆಗಳು ಕಾರ್ಯಾಚರಣೆಗಿಳಿದಿವೆ.
ಬಿಟ್‌ಕಾಯಿನ್ ಸೇರಿದಂತೆ ಇತರೆ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ನಲ್ಲಿ ಹ್ಯಾಕ್ ಮಾಡಿರುವ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜಾಲದಲ್ಲಿ ಕೋಟ್ಯಂತರ ರು. ಅಕ್ರಮ ವಹಿವಾಟು ಪತ್ತೆ ಮಾಡಲು ರಾಜ್ಯ ಸರ್ಕಾರವೇ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ.) ಪತ್ರ ಬರೆದು ತನಿಖೆ ಕೈಗೊಳ್ಳುವಂತೆ ಹೇಳಿದೆ. ಅಲ್ಲದೆ, ಈತನ ಜಾಲ ಹೊರದೇಶದಲ್ಲಿಯೂ ಹರಡಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಇಂಟರ್‌ಪೋಲ್‌ಗೂ ಪತ್ರ ಬರೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜಾರಿ ನಿರ್ದೇಶನಾಲಯ, ಇಂಟರ್‌ಪೋಲ್, ಇ-ಆಡಳಿತ ತಜ್ಞರು, ಐಐಎಸ್‌ಸಿ, ಸೈಬರ್ ತಜ್ಞರು ಸೇರಿದಂತೆ ಇತರೆ ತನಿಖಾ ಸಂಸ್ಥೆಯ ತಾಂತ್ರಿಕ ನಿಪುಣರು ಪ್ರಕರಣದ ಇಂಚಿಂಚು ಮಾಹಿತಿಯನ್ನು ಹೊರಗೆಳೆಯುವ ಕಾರ್ಯ ಕೈಗೊಂಡಿದ್ದಾರೆ.
ಮಾ.3ರಂದು ಇ.ಡಿ.ಗೆ ಪತ್ರ:
ಪ್ರಕರಣವು ಗಂಭೀರ ಸ್ವರೂಪದ್ದಾಗಿರುವುದರಿಂದ ಎಲ್ಲಾ ಆಯಾಮಗಳ ತನಿಖೆ ಕೈಗೊಳ್ಳಲು ಸರ್ಕಾರವು ಕ್ರಮ ಕೈಗೊಂಡಿದೆ. ಇದೇ ವರ್ಷದ ಮಾ.3ರಂದು ಇ.ಡಿ.ಗೆ ಪತ್ರ ಬರೆದಿರುವ ರಾಜ್ಯ ಸರ್ಕಾರವು ಹಗರಣದಲ್ಲಿ ನಡೆದಿರುವ ಕೋಟ್ಯಂತರ ರು. ಅಕ್ರಮದ ಬಗ್ಗೆ ತನಿಖೆ ಕೈಗೊಳ್ಳುವಂತೆ ಕೋರಿದೆ.
ಕೋಟ್ಯಂತರ ರು. ವ್ಯವಹಾರ ನಡೆಯುವ ಬಿಟ್‌ಕಾಯಿನ್ ಮತ್ತು ಇತರೆ ಕ್ರಿಪ್ಟೋಕರೆನ್ಸಿಗಳ ವ್ಯವಹಾರವನ್ನು ಆರೋಪಿ ಶ್ರೀಕಿ ಹ್ಯಾಕ್ ಮಾಡುತ್ತಿದ್ದ. ಈ ಅಕ್ರಮದಲ್ಲಿ ಕೋಟ್ಯಂತರ ರು. ವಹಿವಾಟು ನಡೆದಿರುವ ಕಾರಣ ಸರ್ಕಾರದ ಮನವಿ ಮೇರೆಗೆ ಇ.ಡಿ. ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ವಿಸ್ತೃತವಾಗಿ ತನಿಖೆ ನಡೆಸಲು ಮುಂದಾಗಿರುವ ಇ.ಡಿ. ಅಧಿಕಾರಿಗಳು ಶ್ರೀಕಿ ಜಾಲದ ಬಗ್ಗೆ ತೀವ್ರ ನಿಗಾ ವಹಿಸಿದ್ದಾರೆ. ಬಿಟ್ ಕಾಯಿನ್ ವ್ಯವಹಾರವನ್ನು ಹ್ಯಾಕ್ ಮಾಡಿ ಯಾವ ರೀತಿಯಲ್ಲಿ ಅಕ್ರಮವಾಗಿ ಹಣ ಗಳಿಸುತ್ತಿದ್ದ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಕಲೆ ಹಾಕುವಲ್ಲಿ ನಿರತವಾಗಿದೆ.
ತಾಂತ್ರಿಕ ತಜ್ಞರಿಂದಲೂ ತನಿಖೆ:
ಬಿಟ್‌ಕಾಯಿನ್ ಮತ್ತು ಇತರೆ ಕ್ರಿಪ್ಟೋಕರೆನ್ಸಿ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ವ್ಯವಹಾರ ನಡೆಯುವುದರಿಂದ ನಿಪುಣ ತಾಂತ್ರಿಕ ತಜ್ಞರ ನೆರವು ಪ್ರಕರಣದಲ್ಲಿ ಅತ್ಯಗತ್ಯವಾಗಿದೆ. ಹೀಗಾಗಿ ಇ-ಆಡಳಿತ, ಸೈಬರ್ ತಜ್ಞರಿಂದಲೂ ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಆರೋಪಿಯ ಖಾತೆಯಲ್ಲಿರುವ ಬಿಟ್ ಕಾಯಿನ್‌ಗಳನ್ನು ವಶಪಡಿಸಿಕೊಳ್ಳಲು ಇ-ಆಡಳಿತದ ಪರಿಣತ ತಜ್ಞರನ್ನು ಕಳುಹಿಸಿಕೊಡುವಂತೆ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿಯೇ ಪತ್ರ ಬರೆಯಲಾಗಿದೆ. ಅಂತೆಯೇ ಇ-ಆಡಳಿತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
ಐಐಎಸ್‌ಸಿ ತಜ್ಞರ ಸಹಾಯ:
ಇದಲ್ಲದೆ ಸೈಬರ್ ತಜ್ಞರು ಸಹ ಶ್ರೀಕಿ ಅಕ್ರಮದ ಬಗ್ಗೆ ಶೋಧ ಕಾರ್ಯ ನಡೆಸಿದ್ದಾರೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ಸೈಬರ್ ತಜ್ಞರ ನೆರವನ್ನು ಪಡೆದುಕೊಳ್ಳಲಾಗಿದೆ. ಐಐಎಸ್‌ಸಿಗೆ ರಾಜ್ಯ ಸರ್ಕಾರವು ಪತ್ರ ಬರೆದು ಸಹಾಯ ಕೋರಿದೆ. ತಂತ್ರಜ್ಞಾನದ ಮೂಲಕ ಹಗರಣ ಭೇದಿಸಬೇಕಾಗಿದೆ. ಆನ್‌ಲೈನ್ ಮೂಲಕ ಬಿಟ್‌ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ಹ್ಯಾಕ್ ಮಾಡಿರುವ ಹಿನ್ನೆಲೆಯಲ್ಲಿ ಸೈಬರ್ ನಿಪುಣರ ಅಗತ್ಯತೆ ಇದೆ. ಹೀಗಾಗಿ ಸಂಸ್ಥೆಯ ಒಬ್ಬರು ಪರಿಣತರನ್ನು ತನಿಖೆಯ ಸಹಾಯಕ್ಕಾಗಿ ನೀಡುವಂತೆ ಕೋರಲಾಗಿದೆ.
ಮಾಹಿತಿ ತಂತ್ರಜ್ಞಾನದ ಮೂಲಕ ಬಿಟ್‌ಕಾಯಿನ್ ಮತ್ತು ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಅನ್ನು ಯಾವ ರೀತಿ ಹ್ಯಾಕ್ ಮಾಡುತ್ತಿದ್ದ ಎಂಬುದರ ಬಗ್ಗೆ ನಿಪುಣರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಕೋಟ್ಯಂತರ ರು. ಅಕ್ರಮ ನಡೆಸಿರುವ ಮಾಹಿತಿ ಲಭ್ಯವಾಗಿದ್ದು, ಮತ್ತಷ್ಟುಅವ್ಯವಹಾರದ ಶೋಧ ಮುಂದುವರಿಸಲಾಗಿದೆ ಎನ್ನಲಾಗಿದೆ.
ಇಂಟರ್‌ಪೋಲ್‌ಗೆ ಬರೆದಿರುವ ಪತ್ರದಲ್ಲಿ ಏನಿದೆ?
ಬಿಟ್‌ಕಾಯಿನ್ ಪ್ರಕರಣ ಸಂಬಂಧ ಸೈಬರ್ ಪೊಲೀಸರು ಬಂಧಿಸಿರುವ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಜಾಲ ವಿದೇಶದಲ್ಲಿಯೂ ಹರಡಿದೆ. ಬಿಟ್‌ಕಾಯಿನ್ ಮತ್ತು ಇತರೆ ಕ್ರಿಪ್ಟೋಕರೆನ್ಸಿ ಎಕ್ಸ್‌ಚೆಂಜ್ ಹ್ಯಾಂಕಿಂಗ್ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಈ ಜಾಲವು ಭಾರತದಿಂದಾಚೆಗೂ ಹರಡಿದೆ. ಹೀಗಾಗಿ ಇಂಟರ್‌ಪೋಲ್ ಅತವಾ ಸೂಕ್ತ ಏಜೆನ್ಸಿ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕು.
ಅವ್ಯವಹಾರ ಪತ್ತೆಗೆ ಬಿಟ್ ಕಾಯಿನ್ ಖಾತೆ ತೆರೆಯಲು ಅನುಮತಿ
ಪ್ರಕರಣದ ರೂವಾರಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಅವ್ಯವಹಾರದ ಮೊತ್ತವನ್ನು ಪತ್ತೆ ಮಾಡುವ ಸಂಬಂಧ ರಾಜ್ಯ ಸರ್ಕಾರವು ಕಳೆದ ವರ್ಷ ಬಿಟ್‌ಕಾಯಿನ್ ಖಾತೆಯನ್ನು ತೆರೆಯಲು ಅನುಮತಿ ನೀಡಿದೆ. ನಗರ ಪೊಲೀಸ್ ಆಯುಕ್ತರ ಮನವಿ ಮೇರೆಗೆ ಅನುಮತಿ ನೀಡಲಾಗಿದೆ.
ಆರೋಪಿ ಅಕ್ರಮವಾಗಿ ಗಳಿಸಿರುವ ಬಿಟ್‌ಕಾಯಿನ್‌ಗಳನ್ನು ವಶಪಡಿಸಿಕೊಂಡ ಬಳಿಕ ಮತ್ತೊಂದು ಬಿಟ್‌ಕಾಯಿನ್ ಖಾತೆಗೆ ವರ್ಗಾಯಿಸಿ, ಅದನ್ನು ಭಾರತೀಯ ರುಪಾಯಿಗೆ ಪರಿವರ್ತಿಸಿ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕಾಗಿದೆ. ಈ ಪ್ರಕ್ರಿಯೆ ಕೈಗೊಳ್ಳಲು ಪೊಲೀಸ್ ತನಿಖೆ ಹಿತದೃಷ್ಟಿಯಿಂದ ಬಿಟ್‌ಕಾಯಿನ್ ಖಾತೆ ಮತ್ತು ಸಾಮಾನ್ಯ ಬ್ಯಾಂಕ್ ಖಾತೆಯನ್ನು ತನಿಖೆಯ ಅವಧಿಯವರೆಗೆ ತೆರೆಯಲು ಮತ್ತು ನಂತರದಲ್ಲಿ ಮುಕ್ತಾಯ ಮಾಡಲು ನಗರ ಪೊಲೀಸ್ ಆಯುಕ್ತರು ಅನುಮತಿ ಕೋರಿದ್ದರು. ಈ ಮನವಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು ಖಾತೆ ತೆರೆಯಲು ಅನುಮತಿ ನೀಡಿತ್ತು.