‘ಹಕ್ಕಿ ಜ್ವರ’ದ ಆತಂಕ, ಬಿರು ಬಿಸಿಲ ಹಿನ್ನೆಲೆಯಲ್ಲಿ ನಗರದಲ್ಲಿ ಚಿಕನ್‌ ವಹಿವಾಟು ಅರ್ಧದಷ್ಟು ಕುಸಿದಿದ್ದು, ಮಟನ್‌ ವ್ಯಾಪಾರ ಹೆಚ್ಚಾಗಿದೆ. ಆದರೆ, ಪೂರೈಕೆ ಕಡಿಮೆ ಇರುವ ಕಾರಣಕ್ಕೆ ಕೋಳಿ ದರ ಕೇಜಿಗೆ ₹20- ₹30 ರಷ್ಟು ಹೆಚ್ಚಾಗಿದೆ. ಮೊಟ್ಟೆ ದರ ಎಂದಿನಂತೆ ಸಾಮಾನ್ಯವಾಗಿದೆ.

ಬೆಂಗಳೂರು (ಮಾ.5): ‘ಹಕ್ಕಿ ಜ್ವರ’ದ ಆತಂಕ, ಬಿರು ಬಿಸಿಲ ಹಿನ್ನೆಲೆಯಲ್ಲಿ ನಗರದಲ್ಲಿ ಚಿಕನ್‌ ವಹಿವಾಟು ಅರ್ಧದಷ್ಟು ಕುಸಿದಿದ್ದು, ಮಟನ್‌ ವ್ಯಾಪಾರ ಹೆಚ್ಚಾಗಿದೆ. ಆದರೆ, ಪೂರೈಕೆ ಕಡಿಮೆ ಇರುವ ಕಾರಣಕ್ಕೆ ಕೋಳಿ ದರ ಕೇಜಿಗೆ ₹20- ₹30 ರಷ್ಟು ಹೆಚ್ಚಾಗಿದೆ. ಮೊಟ್ಟೆ ದರ ಎಂದಿನಂತೆ ಸಾಮಾನ್ಯವಾಗಿದೆ.

ಕಳೆದೊಂದು ತಿಂಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ‘ಹಕ್ಕಿಜ್ವರ’ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿ ಕೋಳಿಗಳನ್ನು ನಾಶಪಡಿಸಲಾಗಿದೆ. ರಾಜ್ಯದಲ್ಲೂ ಕೂಡ ಕೋಳಿ ಉತ್ಪಾದನೆಯನ್ನು ಪೌಲ್ಟ್ರಿ ಕಂಪನಿಗಳು ಕಡಿಮೆ ಮಾಡಿವೆ. ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿದ್ದು, ಸೋಂಕು ಪೀಡಿತ ಸಾವಿರಾರು ಕೋಳಿಗಳನ್ನು ನಾಶಪಡಿಸಲಾಗಿದೆ. ಬೆಂಗಳೂರು ಸುತ್ತಮುತ್ತಲೂ ಕೋಳಿ ಫಾರಂಗಳಲ್ಲಿ ಮಾಲೀಕರು ತೀವ್ರ ನಿಗಾ ವಹಿಸಿದ್ದಾರೆ. ಇವೆಲ್ಲ ಕಾರಣದಿಂದ ಮಾರುಕಟ್ಟೆಗೆ ಚಿಕನ್‌ ಪೂರೈಕೆಯೂ ಇಳಿದಿದೆ.

ದರ ಎಷ್ಟಿದೆ?:

ಕಳೆದ ಶನಿವಾರದಿಂದ ಮಂಗಳವಾರದವರೆಗೆ ಕೋಳಿ ದರ ₹30 ಹೆಚ್ಚಾಗಿದೆ. ಪೌಲ್ಟ್ರಿಯಿಂದ ಚಿಕನ್‌ ಅಂಗಡಿಗೆ ಬರುವ ಲೈವ್‌ ಕೋಳಿ ₹120- ₹125 ಇದೆ. ಚಿಕನ್‌ ಮಳಿಗೆಯಲ್ಲಿ ₹160 - ₹180 ವರೆಗೆ ಮಾರಲಾಗುತ್ತಿದೆ. ವಿತ್‌ಸ್ಕಿನ್‌ ₹350 - 360 ವಿತ್‌ಔಟ್‌ ಸ್ಕಿನ್‌ ₹280 - 300 ರವರೆಗೆ ದರವಿದೆ. ಕಳೆದ ವಾರ ಇದು ₹250ಗಿಂತ ಕಡಿಮೆ ದರವಿತ್ತು. ಇನ್ನು ಮೊಟ್ಟೆ ಒಂದಕ್ಕೆ ₹5- ₹6 ಇದೆ ಎಂದು ಎನ್‌.ಆರ್‌.ಚಿಕನ್ಸ್‌ನ ಅವಿನಾಶ್ ತಿಳಿಸಿದರು.

ಇದನ್ನೂ ಓದಿ: Bird flu scare: ಚಿಕನ್ ತಿನ್ನಬೇಕೋ ಬೇಡ್ವೋ? ಎಷ್ಟು ಡಿಗ್ರೀಲಿ ಕೋಳಿ ಮಾಂಸ ಬೇಯಿಸಬೇಕು? ಆರೋಗ್ಯ ಇಲಾಖೆ ಇಲಾಖೆ ಹೇಳಿದ್ದೇನು?

ಕುಸಿದ ವ್ಯಾಪಾರ:

ಹಕ್ಕಿಜ್ವರ ಬಂದಾಗ ದರ ಕಡಿಮೆ ಆಗುವುದು ಸಾಮಾನ್ಯ. ಆದರೆ, ಕಳೆದ ಒಂದು ತಿಂಗಳಿಂದ ಹಕ್ಕಿಜ್ವರದ ಸುದ್ದಿ ಜೋರಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಪನಿಗಳು, ಪೌಲ್ಟ್ರಿಗಳು ಮುಂಜಾಗೃತೆಯಿಂದ 45 ದಿನಗಳಿಂದಲೇ ಉತ್ಪಾದನೆ ಕಡಿಮೆ ಮಾಡಿವೆ. ಹೀಗಾಗಿ ಕಳೆದ ವಾರ ಬೆಲೆ ಇಳಿದಿದ್ದರೂ ಈಗ ಪುನಃ ಹೆಚ್ಚಾಗಿದೆ. ಗ್ರಾಹಕರು ಆತಂಕದಿಂದ ಚಿಕನ್‌ ಖರೀದಿ ಮಾಡುತ್ತಿಲ್ಲ. ಹೀಗಾಗಿ ಚಿಲ್ಲರೆ ಮಳಿಗೆಯವರು ಹೆಚ್ಚು ಕೋಳಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಸುಮಾರು ಅರ್ಧದಷ್ಟು ವ್ಯಾಪಾರ ಬಿದ್ದಿದೆ ಎಂದು ಹೊಲ್‌ಸೆಲ್‌ ವ್ಯಾಪಾರಸ್ಥರೊಬ್ಬರು ತಿಳಿಸಿದರು.

ಇನ್ನು, ನಗರದ ಮಾಂಸಾಹಾರ ಪ್ರಿಯರು ಮಟನ್‌ನತ್ತ ಮುಖ ಮಾಡುತ್ತಲೇ ಮಟನ್‌ಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ದರ ಕೂಡ ಕೊಂಚ ಏರಿಕೆಯಾಗಿದೆ. ಕಳೆದ ವಾರ ಕೇಜಿಗೆ ₹700-750 ಇದ್ದ ಮಟನ್‌ ಈ ವಾರ ಪ್ರತೀ ಕೇಜಿ ಮಟನ್ ದರದಲ್ಲಿ ₹50 ಏರಿಕೆಯಾಗಿ ₹800 ತಲುಪಿದೆ. ಕೆಲವರು ₹900ಕ್ಕೂ ಮಾರಾಟ ಮಾಡುತ್ತಿದ್ದಾರೆ. ಮಟನ್‌ ದರ ಏರಿಕೆ ಹೊರತಾಗಿಯೂ ಮಾಂಸಪ್ರಿಯರು ಮಟನ್ ಖರೀದಿಯಲ್ಲಿ ತೊಡಗಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದರು.