* ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ* ಆನ್‌ಲೈನ್‌ ಗ್ಯಾಂಬ್ಲಿಂಗ್‌ ಹಾಗೂ ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧ* ವಿಚಾರಣೆಯನ್ನು ಜು.26ಕ್ಕೆ ಮುಂದೂಡಿದ ಹೈಕೋರ್ಟ್‌ 

ಬೆಂಗಳೂರು(ಜು.09):ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಿಸುವ ಸಂಬಂಧ ಕರಡು ಮಸೂದೆ ಸಿದ್ಧಪಡಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ವಿಧಾನಮಂಡಳದ ಉಭಯ ಸದನಗಳಲ್ಲಿ ಮಂಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಆನ್‌ಲೈನ್‌ ಗ್ಯಾಂಬ್ಲಿಂಗ್‌ ನಿಷೇಧಿಸುವಂತೆ ಕೋರಿ ಡಿ.ಆರ್‌. ಶಾರದಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರ ಪ್ರಮಾಣ ಪತ್ರವನ್ನು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ನ್ಯಾಯಪೀಠಕ್ಕೆ ಸಲ್ಲಿಸಿದರು.

ಆನ್‌ಲೈನ್‌ ಬೆಟ್ಟಿಂಗ್‌, ಗ್ಯಾಂಬ್ಲಿಂಗ್‌ ನಿಷೇಧ ಬಗ್ಗೆ 2 ವಾರದಲ್ಲಿ ನಿರ್ಧಾರ: ಸರ್ಕಾರ

ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್‌ ಗ್ಯಾಂಬ್ಲಿಂಗ್‌ ಹಾಗೂ ಬೆಟ್ಟಿಂಗ್‌ ನಿಷೇಧಿಸುವ ಕುರಿತು ವಿವಿಧ ಇಲಾಖೆಗಳು ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕರಡು ಮಸೂದೆ ಸಿದ್ಧಪಡಿಸಿ ಪರಿಶೀಲನೆಗಾಗಿ ಸಚಿವ ಸಂಪುಟದ ಮುಂದಿಡಲಾಗಿದೆ. ಸಚಿವ ಸಂಪುಟದ ಅನುಮೋದನೆ ದೊರೆತ ಬಳಿಕ ಮಸೂದೆಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಗೃಹ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡ ಬಳಿಕವಷ್ಟೇ ಆನ್‌ಲೈನ್‌ ಗ್ಯಾಂಬ್ಲಿಂಗ್‌ ಹಾಗೂ ಆನ್‌ಲೈನ್‌ ಬೆಟ್ಟಿಂಗ್‌ ನಿಷೇಧಿಸುವ ಬಗ್ಗೆ ರಾಜ್ಯ ಸರ್ಕಾರದ ನಿಲುವು ತಿಳಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಅದನ್ನು ಪರಿಶೀಲಿಸಿದ ನ್ಯಾಯಪೀಠ, ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಗ್ಯಾಂಬ್ಲಿಂಗ್‌ ನಿಷೇಧದ ಬಗ್ಗೆ ಸರ್ಕಾರದ ನಿಲುವು ತಿಳಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ. ಆಡಳಿತಾತ್ಮಕ ಕಾರಣದಿಂದ ವಿಳಂಬವಾಗಿದೆ ಎಂದು ಪ್ರಮಾಣಪತ್ರದಲ್ಲಿ ಸಮಜಾಯಿಷಿ ನೀಡಲಾಗಿದೆ. ಆದರೆ ಈ ವಿಚಾರವಾಗಿ ಹಲವು ಬಾರಿ ನಿರ್ದೇಶನ ನೀಡಿದ್ದರೂ ಸರ್ಕಾರ ನಿಲುವು ತಿಳಿಸಿಲ್ಲ ಎಂದು ಆಕ್ಷೇಪಿಸಿತು. ಅಲ್ಲದೆ, ರಾಜ್ಯದಲ್ಲಿ ಆನ್‌ಲೈನ್‌ ಗ್ಯಾಬ್ಲಿಂಗ್‌ ಮತ್ತು ಬೆಟ್ಟಿಂಗ್‌ ನಿಷೇಧಿಸುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ತಿಳಿಸಬೇಕು. ಇದರಿಂದ ಕರಡು ಮಸೂದೆ ಬಗ್ಗೆ ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.26ಕ್ಕೆ ಮುಂದೂಡಿತು.