Asianet Suvarna News Asianet Suvarna News

ಬಿಲ್ಕಿಸ್‌ ಬಾನು ಅತ್ಯಾಚಾರಿಗಳ ಬಿಡುಗಡೆ ಖಂಡಿಸಿ ರಾಜ್ಯದಲ್ಲಿ ಸಂಘಟನೆಗಳ ಧರಣಿ

ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಿರುವ ಗುಜರಾತ್‌ ಸರ್ಕಾರದ ಕ್ರಮವನ್ನು ಖಂಡಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.

Bilkis Bano case Protests held in several parts of Karnataka gow
Author
Bengaluru, First Published Aug 28, 2022, 12:08 PM IST

ಬೆಂಗಳೂರು (ಆ.28): ಬಿಲ್ಕಿಸ್‌ ಬಾನು ಮೇಲೆ 2002ರಲ್ಲಿ ಅತ್ಯಾಚಾರ ನಡೆಸಿ, ಅವರ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದ 11 ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆಗೊಳಿಸಿದ ಗುಜರಾತ್‌ ಸರ್ಕಾರದ ಕ್ರಮವನ್ನು ಖಂಡಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಕೊಲೆಗಾರ ಮತ್ತು ಅತ್ಯಾಚಾರಿಗಳ ಶಿಕ್ಷೆ ಮೊಟಕುಗೊಳಿಸುವ ಮೂಲಕ ಗುಜರಾತ್‌ ಮತ್ತು ಕೇಂದ್ರ ಸರ್ಕಾರ ಸಂವಿಧಾನದ ಆಶಯಗಳಿಗೆ ಚ್ಯುತಿ ತಂದಿದೆ. ಆದ್ದರಿಂದ ತಕ್ಷಣವೇ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಬೇಕೆಂದು ಮಾತನಾಡಿದ ಮುಖಂಡರು ಆಗ್ರಹಿಸಿದರು. ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌.ವಿಮಲಾ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ನಿಂತು ಮಹಿಳೆಯರಿಗೆ ಗೌರವ ನೀಡುವ ಮತ್ತು ನಾರಿಶಕ್ತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ವಾಸ್ತವದಲ್ಲಿ ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾರೆ. ಸನ್ನಡತೆಯ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ನಿಯಮ ಅತ್ಯಾಚಾರಿಗಳಿಗೆ ಅನ್ವಯಿಸುವುದಿಲ್ಲ ಎಂದರು. ಚಿಂತಕಿ ಕೆ.ಷರೀಫಾ ಮಾತನಾಡಿ, ದೆಹಲಿಯ ನಿರ್ಭಯಾ ಪ್ರಕರಣದಲ್ಲಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗಿದೆ. ಹೈದರಾಬಾದ್‌ನಲ್ಲಿ ಅತ್ಯಾಚಾರಿಗಳನ್ನು ಎನ್‌ಕೌಂಟರ್‌ ಮಾಡಿ ಕೊಲ್ಲಲಾಯಿತು. ಆದರೆ ಬಿಲ್ಕಿಸ್‌ ಬಾನು ಮೇಲೆ ಅತ್ಯಾಚಾರ ನಡೆಸಿದವರನ್ನು ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ದೆಹಲಿ, ಹೈದರಾಬಾದ್‌ ಪ್ರಕರಣದಲ್ಲಿ ಅತ್ಯಾಚಾರಿಗಳು ದಲಿತರಾಗಿದ್ದ ಕಾರಣ ಅವರಿಗೆ ಸಾವಿನ ಶಿಕ್ಷೆ ಸಿಕ್ಕಿತು. ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ಅಪರಾಧಿಗಳು ಬ್ರಾಹ್ಮಣರಾಗಿರುವ ಕಾರಣ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ ಎಂದು ಆರೋಪಿಸಿದರು.

ಸ್ಲಂ ಜನಾಂದೋಲನ ಕರ್ನಾಟಕದ ಚಂದ್ರಮ್ಮ ಮಾತನಾಡಿ, ಹನ್ನೊಂದು ಜನ ಅತ್ಯಾಚಾರಿಗಳನ್ನು ಮತ್ತೆ ಜೈಲಿಗೆ ಕಳಿಸುವ ತನಕ ಹೋರಾಡುತ್ತೇವೆ. ದೇಶದ ಮಹಿಳೆಯರ ಘನತೆ ಮತ್ತು ಸಂವಿಧಾನ ಉಳಿಯಲು ಹೋರಾಟ ಅನಿವಾರ್ಯ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಶಾಸಕಿ ಸೌಮ್ಯಾರೆಡ್ಡಿ, ಮೋಹನ್‌ ರಾಜ್‌, ಅಕಾರ್‌ ಪಟೇಲ್‌, ಮೈತ್ರಿ, ಸಾಜಿದಾ, ಅಕೈ ಪದ್ಮಸಾಲಿ, ಜ್ಯೋತಿ ಪಾಲ್ಗೊಂಡಿದ್ದರು.

 ಮೈಸೂರಿನಲ್ಲೂ ಪ್ರತಿಭಟನೆ:  ಸ್ವಾತಂತ್ರ್ಯ ಮಹೋತ್ಸವ ಸಂದರ್ಭದಲ್ಲಿ ಗುಜರಾತ್‌ ಸರ್ಕಾರವು ಬಿಲ್ಕಿಸ್‌ ಬಾನು ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿರುವುದನ್ನು ಖಂಡಿಸಿ, ಸಂತ್ರಸ್ತರಿಗೆ ನ್ಯಾಯ ಮತ್ತು ಮಹಿಳೆಯರ ಸುರಕ್ಷತೆ ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ಎಫ್‌ಟಿಎಸ್‌ ವೃತ್ತದ ಡಾ. ಅಂಬೇಡ್ಕರ್‌ ಪ್ರತಿಮೆ ಮುಂಭಾಗ ಶನಿವಾರ ಪ್ರತಿಭಟಿಸಿದರು.

ಗುಜರಾತ್‌ ಸರ್ಕಾರವು ಔದಾರ್ಯದಿಂದ 11 ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಿರುವುದು ದೇಶದ ಎಲ್ಲಾ ನಾಗರೀಕರು ನಾಚಿ ತಲೆತಗ್ಗಿಸುವಂತಹ ವಿಚಾರ. ನ್ಯಾಯದಾನಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಪ್ರಕರಣವನ್ನು ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಪರಿಗಣಿಸಿ ಶಿಕ್ಷಾ ವಿನಾಯಿತಿ ಪಡೆದು ಬಿಡುಗಡೆಯಾಗಿರುವ 11 ಅಪರಾಧಿಗಳನ್ನು ನ್ಯಾಯಾಲಯದ ಆದೇಶದಂತೆ ಜೀವಿತಾವದಿಯ ಸೆರೆವಾಸದ ಶಿಕ್ಷೆಗೊಳಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಆಪ್‌ ಮುಖಂಡರಾದ ಧರ್ಮಶ್ರೀ, ಇಸ್ಮಾಯಿಲ್‌, ಆರ್‌. ಪ್ರಸಾದ್‌ ಮೊದಲಾದವರು ಇದ್ದರು.

ವಿಜಯಪುರದಲ್ಲೂ ಪ್ರತಿಭಟನೆ: ಬಿಲ್ಕಿಸ್‌ ಬಾನು ಅತ್ಯಾಚಾರ ಆರೋಪಿಗಳನ್ನು ಸನ್ನಡತೆಯ ಆಧಾರದ ಮೇಲೆ ಗುಜರಾತ್‌ ರಾಜ್ಯ ಸರಕಾರ ಬಿಡುಗಡೆ ಮಾಡಿದ್ದನ್ನು ಖಂಡಿಸಿ ನಗರದ ಅಂಬೇಡ್ಕರ್‌ ವೃತ್ತದಲ್ಲಿು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ಮಾಡಲಾಯಿತು.

Bilkis Bano Case ಅಪರಾಧಿಗಳ ಬಿಡುಗಡೆ, ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ನೊಟೀಸ್‌

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಮುಖಂಡರಾದ ದು.ಸರಸ್ವತಿ ಅವರು ಮಾತನಾಡಿ, ಅತ್ಯಾಚಾರಿಗಳು, ಕೊಲೆಗಡುಕರನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡುವುದೇ ಒಂದು ದೌರ್ಜನ್ಯ. ಇದು ನ್ಯಾಯ ವ್ಯವಸ್ಥೆಯ ಅಣಕವಾಗಿದೆ. ಬಿಡುಗಡೆ ಮಾಡಿರುವುದನ್ನು ಕೂಡಲೇ ವಾಪಸ್ಸು ಪಡೆದು ಅವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ಕೊಲೆಗಡುಕರನ್ನು ಸ್ವಾಗತಿಸಿ, ಸಹಿ ಹಂಚಿ ಹಾರ ಹಾಕಿ ಮೆರವಣಿಗೆ ಮಾಡಿರುವುದನ್ನು ನೋಡಿದರೆ ಇದು ಸ್ವಾತಂತ್ರ್ಯ ಭಾರತಕ್ಕೆ ಮಾಡಿರುವ ಅವಮಾನವಾಗಿದೆ ಎಂದರು.

ಬಿಲ್ಕಿಸ್‌ ಬಾನು ಕೇಸ್‌ ಆರೋಪಿಗಳ ಬಿಡುಗಡೆಗೆ ಬಿಜೆಪಿ ಪಕ್ಷದ ನಾಯಕರಿಂದಲೇ ವಿರೋಧ!

ಮಹಿಳಾ ವಿವಿ ವಿಶ್ರಾಂತ ಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸುವ ಮತ್ತು ಅಪರಾಧಿಗಳನ್ನು ಶಿಕ್ಷಿಸಬೇಕಿದ್ದ ಸರಕಾರಗಳೇ ಅಪರಾಧಿಗಳಿಗೆ ಈ ರೀತಿ ಆಶ್ರಯ ನೀಡಿರುವುದು ದುರಂತವಾಗಿದೆ. ಇದನ್ನು ದೇಶದ ಜನತೆ ಪ್ರಶ್ನಿಸಬೇಕಿದೆ ಎಂದರು. ಸಾಹಿತಿ ಡಾ.ಎಚ್‌.ಎಸ್‌.ಅನುಪಮಾ ಅವರು ಮಾತನಾಡಿ, ರಾಜಕೀಯವಾಗಿ ಸ್ವಾತಂತ್ರ್ಯ ಪಡೆÜದು 75 ವರ್ಷಗಳಾಗಿದೆ. ಆದರೆ ಅಪರಾಧಿಗಳಿಗೆ ಈ ರೀತಿ ಬಿಡುಗಡೆ ಮಾಡುವ ಮೂಲಕ ಸರ್ಕಾರಗಳು ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಅಪಮಾನ ಮಾಡಿವೆ ಎಂದರು.

Follow Us:
Download App:
  • android
  • ios