ರೌಡಿ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ ನಂತರ, ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಬೆಂಗಳೂರು: ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆಗೆ 5 ನೇ ಆರೋಪಿಯಾಗಿರುವ ಕೆ.ಆರ್.ಪುರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಲಭಿಸಿದೆ. ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದ ಬೈರತಿ ಅವರಿಗೆ ಡಿಸೆಂಬರ್ 23ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಬುಧವಾರ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿದೆ.
ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಬೈರತಿ ಬಸವರಾಜ್ ಅವರಿಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತು. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಿಐಡಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿತು. ಮುಂದಿನ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಲಾಗಿದೆ. ಈ ಮಧ್ಯಂತರ ಅವಧಿಯಲ್ಲಿ ಬೈರತಿ ಬಸವರಾಜ್ ಅವರನ್ನು ಬಂಧಿಸಿದರೆ ತಕ್ಷಣ ಬಿಡುಗಡೆಗೊಳಿಸಬೇಕು ಎಂಬ ಆದೇಶವನ್ನೂ ಹೈಕೋರ್ಟ್ ನೀಡಿದೆ.
ಅಮಾಯಕ ಎಂದಿದ್ದ ಬೈರತಿ
ಪ್ರಕರಣದಲ್ಲಿ ತಾವು ಅಮಾಯಕ. ದೂರಿನಲ್ಲಿ ಆರೋಪಿಸಿರುವಂತೆ ಬಿಕ್ಲು ಶಿವ ಕೊಲೆಗೆ ಸಂಬಂಧಿಸಿದ ಯಾವುದೇ ಅಪರಾಧ ಕೃತ್ಯದಲ್ಲಿ ತಾವು ಭಾಗಿಯಾಗಿಲ್ಲ. ನಿರೀಕ್ಷಣಾ ಜಾಮೀನು ನಿರಾಕರಿಸಲು ವಿಶೇಷ ನ್ಯಾಯಾಲಯ ನೀಡಿರುವ ಕಾರಣಗಳು ದೋಷಪೂರಿತವಾಗಿವೆ. ತಮ್ಮ ವಿರುದ್ಧದ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಅಸ್ಪಷ್ಟತೆಯಿಂದ ಕೂಡಿವೆ. ಕಸ್ಟೋಡಿಯಲ್ ವಿಚಾರಣೆಗೆ ಅಗತ್ಯವಿದ್ದೇವೆ ಎಂದು ಪ್ರತಿಪಾದಿಸುವ ಅಪರಾಧ ಕೃತ್ಯಗಳನ್ನು ಎಸಗಿಲ್ಲ. ರಾಜಕೀಯ ದ್ವೇಷದಿಂದ ತಮ್ಮನ್ನು ಬಂಧಿಸಿ ಕಿರುಕುಳ ನೀಡಲು ಸಿಐಡಿ ಪೊಲೀಸರು ಸರ್ವ ಪ್ರಯತ್ನ ನಡೆಸುತ್ತಿದ್ದಾರೆ. ಇದರಿಂದ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಶಾಸಕ ಬೈರತಿ ಬಸವರಾಜು ಅರ್ಜಿಯಲ್ಲಿ ಮನವಿ ಮಾಡಿದ್ದರು.
ಬೈರತಿ ಬಸವರಾಜ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ದರು. ಈ ಪ್ರಕರಣಕ್ಕೆ ಸರ್ಕಾರ ಬಿ.ಎನ್. ಜಗದೀಶ್ ಅವರನ್ನು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಿಸಿದೆ. ಆದರೆ ಇಂದು ಅವರು ವಿದೇಶ ಪ್ರವಾಸದ ಹಿನ್ನೆಲೆ ಗೈರಾಗಿದ್ದರು. ಸರ್ಕಾರದ ಪರ ವಕೀಲ ನಾಗೇಶ್ ಹಾಜರಿದ್ದರು.
ಜಮೀನು ವಿವಾದ ಸಂಬಂಧ ಕೊಲೆ
ಜಮೀನು ವಿವಾದ ಸಂಬಂಧ ಬೆಂಗಳೂರಿನ ಹಲಸೂರು ಕೆರೆಯ ಸಮೀಪದ ಮನೆಯೊಂದರ ಎದುರು 2025ರ ಜುಲೈನಲ್ಲಿ ಬಿಕ್ಲು ಶಿವ ಕೊಲೆ ನಡೆದಿತ್ತು. ಸಿಐಡಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ಬೈರತಿ ಅವರು ಮೊದಲಿಗೆ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ತನಿಖಾಧಿಕಾರಿಗಳು ಬೈರತಿ ಅವರನ್ನು ಬಂಧಿಸಬಾರದು, ಬಸವರಾಜು ಅವರೂ ತನಿಖೆಗೆ ಸಹಕರಿಸಬೇಕು ಎಂದು ಆರಂಭದಲ್ಲಿ ಹೈಕೋರ್ಟ್ ಸೂಚಿಸಿತ್ತು. ಅದರಂತೆ ಬಸವರಾಜು ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.
ನಂತರ 2025ರ ಆ.12ರಂದು ಸಿಐಡಿ ಪೊಲೀಸರು ಪ್ರಕರಣದಲ್ಲಿ ಕೋಕಾ ನಿಯಮಗಳನ್ನು ಹೇರಿದ್ದರು. ಈ ಕ್ರಮ ರದ್ದತಿಗೆ ಮತ್ತು ನಿರೀಕ್ಷಣಾ ಜಾಮೀನು ಮಂಜೂರಾತಿಗೆ ಕೋರಿ ಬಸವರಾಜು ಹೈಕೋರ್ಟ್‌ಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಕೋಕಾ ನಿಯಮಗಳನ್ನು ಹೇರಿದ್ದ ಸಿಐಡಿ ಪೊಲೀಸರ ಕ್ರಮ ರದ್ದುಪಡಿಸಿದ್ದ ಹೈಕೋರ್ಟ್, ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಅದಕ್ಕಾಗಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗುವಂತೆ ಡಿ.19ರಂದು ಸೂಚಿಸಿತ್ತು. ಮರುದಿನವೇ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಡಿ.23ರಂದು (ಮಂಗಳವಾರ) ಆದೇಶಿಸಿತ್ತು. ಇದರಿಂದ ಬಸವರಾಜು ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನುಗಾಗಿ ಬುಧವಾರ ಅರ್ಜಿ ಸಲ್ಲಿಸಿದ್ದರು.


