Asianet Suvarna News Asianet Suvarna News

ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ

ಬೈಕ್ ಸವಾರರ ಗ್ಯಾಂಗ್‌ಗಳು ಕಾರ್‌ಗಳು ಮತ್ತು ಅವುಗಳ ಚಾಲಕರನ್ನು ಗುರಿಯಾಗಿಸಿ, ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನ ನಡೆಸುವುದು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

Biker gangs and corruption are a challenge to Bengaluru law and order girish linganna article gvd
Author
First Published Jul 1, 2024, 5:37 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಒಂದು ರಾತ್ರಿ, ಬೆಂಗಳೂರಿನ ಮೌನವಾದ ರಸ್ತೆಯೊಂದರಲ್ಲಿ ಅತ್ಯಂತ ವೇಗವಾಗಿ ಮೋಟಾರ್ ಸೈಕಲ್‌ಗಳನ್ನು ಓಡಿಸುತ್ತಾ, ಅಟ್ಟಿಸಿಕೊಂಡು ಬಂದ ಗುಂಪು ಚರಣ್ ಸಿಂಗ್ ಎಂಬವರ ಕಾರ್ ಮೇಲೆ ದಾಳಿ ನಡೆಸಿದರು. ಶರವೇಗದಲ್ಲಿ ಚಲಿಸುತ್ತಿದ್ದ ಆ ಬೈಕ್‌ಗಳು ಚರಣ್ ಸಿಂಗ್ ಕಾರಿಗೆ ಬಹಳ ಸನಿಹದಲ್ಲಿ ಚಲಿಸುತ್ತಿದ್ದವು. ಅವರ ಪೈಕಿ, ಓರ್ವ ಬೈಕರ್ ಇದ್ದಕ್ಕಿದ್ದಂತೆ ಅಡ್ಡಲಾಗಿ ಚಲಿಸಿ, ತನ್ನ ಬೈಕನ್ನು ಬೀಳಿಸಿದ. ಆತನ ಉದ್ದೇಶ ಒಂದು ಅಪಘಾತ ಉಂಟುಮಾಡುವುದಾಗಿತ್ತು. ಜೊತೆಯಲ್ಲಿದ್ದ ಮೂವರು ಮಹಿಳಾ ಪ್ರಯಾಣಿಕರು ಚೀರುತ್ತಿದ್ದರೂ, ಚರಣ್ ಸಿಂಗ್ ಅವರಿಗೆ ಮುಂದೆ ಬಿದ್ದ ಬೈಕ್ ಮೇಲೆ ಕಾರ್ ಚಲಾಯಿಸುವುದು ಬಿಟ್ಟು ಬೇರೆ ಆಯ್ಕೆಯೇ ಇರಲಿಲ್ಲ. ಅವರು ಚಲಿಸಿದಾಗ, ಬೈಕ್ ಸವಾರರು ಸ್ವಲ್ಪದರಲ್ಲೇ ಪಾರಾಗಿದ್ದರು.

ದುರದೃಷ್ಟವಶಾತ್, ರಸ್ತೆಗಳಲ್ಲಿ, ಅದರಲ್ಲೂ ರಾತ್ರಿಯ ವೇಳೆ ವಾಹನ ಚಾಲಕರಿಗೆ ಬೆದರಿಕೆ ಒಡ್ಡುವುದು, ಕಿರುಕುಳ ನೀಡುವುದು ಬೆಂಗಳೂರಿನ ರಸ್ತೆಗಳಲ್ಲಿ ಸಾಮಾನ್ಯ ಘಟನೆಯಾಗುತ್ತಿದೆ. ಬೈಕ್ ಸವಾರರ ಗ್ಯಾಂಗ್‌ಗಳು ಕಾರ್‌ಗಳು ಮತ್ತು ಅವುಗಳ ಚಾಲಕರನ್ನು ಗುರಿಯಾಗಿಸಿ, ಅವರಿಂದ ಹಣ ವಸೂಲಿ ಮಾಡಲು ಪ್ರಯತ್ನ ನಡೆಸುವುದು ಭಾರತದ ಸಿಲಿಕಾನ್ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲೂ ಇಂತಹ ಭಯ ಮೂಡಿಸುವ ಘಟನೆಗಳ ವರದಿಗಳು ತುಂಬಿದ್ದು, ಇದರ ತೀವ್ರತೆಯೆಡೆಗೆ ಬೆಳಕು ಚೆಲ್ಲಿವೆ. ಈ ಘಟನೆಗಳನ್ನು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (ಎಸ್‌ಸಿಎಂಪಿ) ಸಹ ವರದಿ ಮಾಡಿದೆ.

ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು

ಮಾನವ ಸಂಪನ್ಮೂಲ ವೃತ್ತಿಪರರಾಗಿರುವ ಚರಣ್ ಸಿಂಗ್ ಅವರು, ತನ್ನ ವಾಹನ ಹೊರ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವುದರಿಂದ ದಾಳಿಕೋರರಿಗೆ ಗುರಿಯಂತೆ ಕಂಡಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಘಟನೆ ಒಂದು ವೃತ್ತಿಪರ ದಾಳಿಕೋರ ಗುಂಪಿನ ಯೋಜಿತ ಕೃತ್ಯವಾಗಿತ್ತು ಎಂದು ಅವರು ಹೇಳಿದ್ದಾರೆ. ಆರಂಭದಲ್ಲಿ ತಾನು ಕಾರು ಚಲಾಯಿಸುತ್ತಿದ್ದಾಗ ಇಬ್ಬರು ವ್ಯಕ್ತಿಗಳು ತನ್ನ ಕಾರನ್ನು ಅಡ್ಡಗಟ್ಟಲು ಪ್ರಯತ್ನ ನಡೆಸಿದರು. ಆದರೆ, ಸಮಯ ಸಾಗಿದಂತೆ ಅದೊಂದು ಸಿನಿಮೀಯ ಬೆನ್ನಟ್ಟುವಿಕೆಯಾಗಿ ಪರಿಣಮಿಸಿತು ಎಂದು ಸಿಂಗ್ ವಿವರಿಸಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ಚರಣ್ ಸಿಂಗ್ ಈ ವಿಚಾರದ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಘಟನೆಯಲ್ಲಿ ಪಾತ್ರವಹಿಸಿದ್ದ ಮೂವರನ್ನು ಶೀಘ್ರವಾಗಿ ಬಂಧಿಸಿದರು. ಸಿಂಗ್ ಅವರ ಪ್ರಕಾರ, ಆರೋಪಿಗಳು ತಮಗೆ ಪ್ರಭಾವಿ ರಾಜಕಾರಣಿಗಳೊಡನೆ ಸಂಪರ್ಕವಿದೆ ಎಂದಿದ್ದಾರೆ. ತಾನು ಮಾತ್ರವಲ್ಲದೇ, ಒಂದಷ್ಟು ನೆರೆಹೊರೆಯವರೂ ಇಂತಹ ಅನುಭವ ಎದುರಿಸಿದ್ದು, ಕೆಲವು ಸ್ನೇಹಿತರು, ಸಹೋದ್ಯೋಗಿಗಳೂ ಇಂತಹ ಘಟನೆಗಳ ಕುರಿತು ಕೇಳಿದ್ದಾರೆ ಎಂದು ಚರಣ್ ಸಿಂಗ್ ಹೇಳಿದ್ದಾರೆ.

ಜೂನ್ ತಿಂಗಳ ಆರಂಭದಲ್ಲಿ, ಬೆಂಗಳೂರಿನಲ್ಲಿ ಕಾರ್ ಚಾಲನೆ ಮಾಡುವಾಗ ತಾನೂ ಇಂತಹ ಅನುಭವವನ್ನು ಎದುರಿಸಿರುವುದಾಗಿ ಮಾರ್ಕೆಟಿಂಗ್ ವೃತ್ತಿಪರರಾಗಿರುವ ದೀಪಕ್ ಜೈನ್ ಹೇಳಿದ್ದಾರೆ. ದೀಪಕ್ ಜೈನ್ ತಾನು ಈ ಮೊದಲೂ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಇಂತಹ ಘಟನೆಗಳ ಕುರಿತು ಕೇಳಿದ್ದಾಗಿ ಹೇಳಿದ್ದಾರೆ. ತಾನು ಕಾರ್ ಚಲಾಯಿಸುತ್ತಿದ್ದಾಗ ತನ್ನನ್ನು ಬಲವಂತವಾಗಿ ನಿಲ್ಲಿಸಿದ ದಾಳಿಕೋರರ ಎಳನೀರಿನ ಚಿಪ್ಪು ಎತ್ತಿಕೊಂಡಾಗ ಇದು ರಸ್ತೆ ಜಗಳಕ್ಕೆ ತಿರುಗುತ್ತಿದೆ ಎನ್ನುವುದು ಅರಿವಿಗೆ ಬಂತು ಎನ್ನುತ್ತಾರೆ ದೀಪಕ್. ನಾನು ಅಲ್ಲಿಂದ ಪಾರಾಗಲು ಪ್ರಯತ್ನ ನಡೆಸುವಾಗ, 200-300 ಮೀಟರ್ ಮುಂದೆ ಇನ್ನೊಂದು ಕಾರ್ ರಸ್ತೆ ತಡೆ ನಡೆಸಲು ಪ್ರಯತ್ನ ನಡೆಸುತ್ತಿತ್ತು ಎಂದು ದೀಪಕ್ ಹೇಳಿದ್ದಾರೆ.

ಮರುದಿನ ತಾನು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತೆರಳುತ್ತಿದ್ದ ಸಂದರ್ಭದಲ್ಲಿ, ತನ್ನನ್ನು ಯಾರೋ ಹಿಂಬಾಲಿಸಿ, ವೀಡಿಯೋ ಚಿತ್ರೀಕರಣ ನಡೆಸಿದ್ದರು ಎಂದು ದೀಪಕ್ ಹೇಳುತ್ತಾರೆ. ಈ ಘಟನೆಯಿಂದ ತಾನು ಗಾಬರಿಗೊಂಡು, ವಾಹನ ಚಾಲನೆ ನಡೆಸುವಾಗೆಲ್ಲ ಎಲ್ಲಿ ಮತ್ತೆ ಇಂತಹ ಗುಂಪುಗಳು ದಾಳಿ ನಡೆಸುತ್ತಾವೋ ಎಂದು ಯೋಚಿಸತೊಡಗಿದ್ದೆ ಎಂದು ದೀಪಕ್ ಹೇಳಿದ್ದಾರೆ. ಚರಣ್ ಸಿಂಗ್ ಮತ್ತು ದೀಪಕ್ ಜೈನ್ ಇಬ್ಬರೂ ತಮ್ಮ ಕಾರ್‌ಗಳಲ್ಲಿ ಡ್ಯಾಶ್ ಕ್ಯಾಮರಾ ಅಳವಡಿಸಿದ್ದರಿಂದ, ಅವರಿಬ್ಬರ ಮೇಲೆ ನಡೆದ ದಾಳಿಗೆ ಸಾಕ್ಷಿ ಸಿಕ್ಕಿತ್ತು. 1.4 ಕೋಟಿ ಜನಸಂಖ್ಯೆ ಹೊಂದಿರುವ ಬೆಂಗಳೂರು ಕಳೆದ ಕೆಲವು ವರ್ಷಗಳಿಂದ ಮೂಲಭೂತ ವ್ಯವಸ್ಥೆಗಳಲ್ಲಿ ಸಮಸ್ಯೆ ಎದುರಿಸುತ್ತಾ ಬಂದಿದೆ. 

ರಾಜಧಾನಿ ಬೆಂಗಳೂರಿನ ಬಹಳಷ್ಟು ರಸ್ತೆಗಳಲ್ಲಿ ಹೊಂಡಗಳೇ ತುಂಬಿವೆ. ನಗರ ಅಪಾರವಾಗಿ ನೀರಿನ ಸಮಸ್ಯೆಯನ್ನೂ ಎದುರಿಸುತ್ತಿದೆ. ಅದರೊಡನೆ, ಬೆಂಗಳೂರಿನ ವಾಯುಮಾಲಿನ್ಯವೂ ದಿನೇ ದಿನೇ ಹೆಚ್ಚುತ್ತಿದೆ. ಆ್ಯಮ್‌ಸ್ಟರ್‌ಡ್ಯಾಮ್ ಮೂಲದ ಲೊಕೇಶ‌ನ್ ತಂತ್ರಜ್ಞಾನ ಸಂಸ್ಥೆ ಟಾಮ್‌ಟಾಮ್ 2022ರಲ್ಲಿ ನೀಡಿದ ವರದಿಯ ಪ್ರಕಾರ, ವಾಹನ ದಟ್ಟಣೆಯಲ್ಲಿ ಬೆಂಗಳೂರು ಜಗತ್ತಿನ ಎರಡನೇ ಅತಿಹೆಚ್ಚು ದಟ್ಟಣೆಯ ಸ್ಥಾನ ಹೊಂದಿದ್ದು, ಭಾರತದಲ್ಲಿ ಮೊದಲನೇ ಸ್ಥಾನ ಹೊಂದಿತ್ತು. ಬೆಂಗಳೂರು ನಗರದ ರಸ್ತೆಗಳೂ 'ವೈಲ್ಡ್ ವೆಸ್ಟ್' (ಪಾಶ್ಚಾತ್ಯ) ರೀತಿಯಾಗಿದ್ದು, ವಂಚನೆಗಳು, ರಸ್ತೆ ಗಲಭೆಗಳು ಮತ್ತು ಇತರ ಕಾನೂನು ಉಲ್ಲಂಘನೆಗಳು ಹೆಚ್ಚಾಗುತ್ತಿವೆ ಎನ್ನುತ್ತವೆ ವರದಿಗಳು.

ರಸ್ತೆ ಸುರಕ್ಷತೆ, ಸುಸ್ಥಿರ ಅಭಿವೃದ್ಧಿ ಮತ್ತು ನೀರಿಗೆ ಸಂಬಂಧಿಸಿದಂತೆ ಹಲವಾರು ಲಾಭರಹಿತ ಸಂಸ್ಥೆಗಳನ್ನು (ಎನ್‌ಜಿಒ) ಸ್ಥಾಪಿಸಿರುವ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಸಂದೀಪ್ ಅನಿರುದ್ಧನ್ ಅವರು ಬೈಕ್ ಗ್ಯಾಂಗ್‌ಗಳು ಮತ್ತು ನೋಂದಣಿ ಸಂಖ್ಯೆ ಹೊಂದಿರದ ಕಾರುಗಳು ಬೆಂಗಳೂರಿನಲ್ಲಿ ಸಾಮಾನ್ಯ ನೋಟವಾಗುತ್ತಿದೆ ಎಂದಿದ್ದಾರೆ. ಇಂತಹ ಬೈಕ್ ಗ್ಯಾಂಗ್‌ಗಳನ್ನು ತಕ್ಷಣವೇ ಹತ್ತಿಕ್ಕದಿದ್ದರೆ, ಭವಿಷ್ಯದಲ್ಲಿ ಅವುಗಳು ಗಂಭೀರ ಸುರಕ್ಷತಾ ಅಪಾಯ ಉಂಟುಮಾಡಬಹುದು ಎಂದು ಅನಿರುದ್ಧನ್ ಎಚ್ಚರಿಸಿದ್ದಾರೆ. ಇಂತಹ ಬೈಕ್‌ಗಳು ಮುಖ್ಯ ರಸ್ತೆಗಳಲ್ಲಿ ಮಾತ್ರವಲ್ಲದೆ, ಜನವಸತಿ ಪ್ರದೇಶಗಳಲ್ಲಿ, ಸಣ್ಣ ರಸ್ತೆಗಳಲ್ಲೂ ವೇಗವಾಗಿ ಸಂಚರಿಸುತ್ತವೆ. ಜನರು ಅವುಗಳನ್ನು ನೋಡುತ್ತಾರಾದರೂ, ಅವುಗಳ ಛಾಯಾಚಿತ್ರ ತೆಗೆಯುವ ಮುನ್ನವೇ ವೇಗವಾಗಿ ಕಣ್ಮೃರೆಯಾಗುತ್ತವೆ ಎನ್ನುತ್ತಾರೆ ಅನಿರುದ್ಧನ್.

ಪೊಲೀಸರ ವೈಫಲ್ಯ ಎತ್ತಿ ತೋರಿಸಿದ ಸಂಚಾರ ಅವ್ಯವಸ್ಥೆಗಳು
ಕಾನೂನು ಜಾರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಮತ್ತು ಅಸಮರ್ಪಕ ಸಂಚಾರ ನಿಯಂತ್ರಣ ವ್ಯವಸ್ಥೆಗಳ ಕಾರಣದಿಂದಾಗಿ ಬೆಂಗಳೂರಿನಲ್ಲಿ ಕಾನೂನು ಉಲ್ಲಂಘನೆ ನಡೆಸುವವರು ಹೆಚ್ಚಿಕೊಂಡಿದ್ದಾರೆ. ಅವರು ಯಾವುದೇ ಕಾನೂನು ಕ್ರಮಗಳ ಭಯವಿಲ್ಲದೆ, ವಾಹನ ಚಾಲಕರು, ಪ್ರಯಾಣಿಕರನ್ನು ಶೋಷಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಕಾನೂನು ಉಲ್ಲಂಘನೆಗಳು ಯಾವ ಮಟ್ಟಕ್ಕೆ ತಲುಪಿವೆ ಎಂದರೆ, ಅವುಗಳನ್ನು ತಡೆಯಲು ಸರ್ಕಾರ ಅಸಮರ್ಥವಾಗಿದೆ ಎಂಬಂತೆ ತೋರುತ್ತಿದೆ. ಅದರೊಡನೆ, ಬೆಂಗಳೂರಿನ ಸಂಚಾರ ನಿಯಂತ್ರಣ ಅಧಿಕಾರಿಗಳಲ್ಲಿ ತುಂಬಿರುವ ಭ್ರಷ್ಟಾಚಾರ ಮತ್ತು ಹಗಲು ಹೊತ್ತಲ್ಲೇ ಪೊಲೀಸರು ಲಂಚ ಪಡೆಯುತ್ತಿರುವುದು ಸಂಚಾರ ಸಮಸ್ಯೆಗೆ ಇನ್ನಷ್ಟು ಇಂಬು ನೀಡಿದೆ. 

ಇಂತಹ ಪರಿಸ್ಥಿತಿ ಸಾರ್ವಜನಿಕರಲ್ಲಿ ಋಣಾತ್ಮಕ ಮಾನಸಿಕ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಬೆಂಗಳೂರು ಕಳೆದ ಒಂದು ವರ್ಷದಲ್ಲಿ 4,000 ಸಂಚಾರ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಿದೆ. ಆದರೆ, 20 ಲಕ್ಷ ಕಾರುಗಳು, 75 ಲಕ್ಷ ಬೈಕುಗಳು, ಅಪಾರ ಸಂಖ್ಯೆಯ ಸಾರ್ವಜನಿಕ ಸಾರಿಗೆ ವಾಹನಗಳು, ಆಟೋ ರಿಕ್ಷಾಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಕೇವಲ 5,600 ಸಂಚಾರಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರನ್ನು ಕಾನೂನು ಜಾರಿ ಮತ್ತು ಸಂಚಾರಿ ಪೊಲೀಸರೆಂದು ವಿಭಜಿಸಿರುವುದರಿಂದ, ಸಂಚಾರಿ ಪೊಲೀಸ್ ಇಲಾಖೆಗೆ ಅತ್ಯಂತ ಕಡಿಮೆ ಸಿಬ್ಬಂದಿಗಳಿದ್ದಾರೆ.

ಬೆಂಗಳೂರು ಪೊಲೀಸ್ ಇಲಾಖೆಯ ಬಳಿ ಬೈಕರ್ ಗ್ಯಾಂಗ್‌ಗಳ ಕುರಿತು ಪ್ರಶ್ನಿಸಿದರೆ, ಕಾನೂನು ಜಾರಿ ಪೊಲೀಸರು ಸಂಚಾರಿ ಪೊಲೀಸರ ಮೇಲೆ, ಟ್ರಾಫಿಕ್ ಪೊಲೀಸರು ಕಾನೂನು ಜಾರಿ ಪೊಲೀಸರ ಮೇಲೆ ಆರೋಪ ಹೊರಿಸುತ್ತಾರೆ. ಅದರೊಡನೆ, ತಮ್ಮ ಬಳಿ ಇದಕ್ಕೆ ಪೂರಕವಾದ ಅಂಕಿಅಂಶಗಳು ಲಭ್ಯವಿಲ್ಲ ಎಂದೂ ಪೊಲೀಸರು ಹೇಳುತ್ತಾರೆ. ಅಧಿಕಾರಿಗಳು ಈಗ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಈ ವಿಚಾರವನ್ನು ಸ್ವತಃ ಕೈಗೆತ್ತಿಕೊಂಡಿದ್ದಾರೆ. ಅವರು ಆನ್‌ಲೈನ್ ಖಾತೆಗಳನ್ನು ತೆರೆಯುವ ಮೂಲಕ, ಇಂತಹ ಸಂಚಾರಿ ಕಾನೂನು ಉಲ್ಲಂಘನೆಗಳನ್ನು ದಾಖಲಿಸುತ್ತಿದ್ದಾರೆ. 'ಥರ್ಡ್ ಐ ಡೂಡ್' (3rdEyeDude) ಎಂಬ ಹೆಸರಿನ ಸಾಮಾಜಿಕ ಜಾಲತಾಣದ ಖಾತೆ ಇಂತಹ ಕಾರ್ಯ ನಡೆಸುವ ಖಾತೆಗಳಲ್ಲಿ ಒಂದಾಗಿದ್ದು, ಬೆಂಗಳೂರು ನಗರದ ಸಂಚಾರ ಉಲ್ಲಂಘನೆಗಳು ಮತ್ತು ರಸ್ತೆ ಜಗಳಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಪ್ರೋಬಾ 3: ಕೃತಕ ಗ್ರಹಣ ನಿರ್ಮಾಣ, ಸೂರ್ಯ ರಹಸ್ಯ ಅನಾವರಣಕ್ಕೆ ಇಸ್ರೋ ಇಎಸ್ಎ ಜಂಟಿ ಪ್ರಯತ್ನ

ಬೈಕರ್ ಗ್ಯಾಂಗ್‌ಗಳು ಮತ್ತು ರಸ್ತೆ ಜಗಳಗಳ ಸಮಸ್ಯೆಗಳನ್ನು ನಿವಾರಿಸಬೇಕಾದರೆ, ಸೂಕ್ತ ಸುಧಾರಣೆಗಳು ಅತ್ಯವಶ್ಯಕವಾಗಿದೆ. ಇದರಲ್ಲಿ ಕಾನೂನು ಜಾರಿ ವಿಭಾಗಗಳನ್ನು ವಿಲೀನಗೊಳಿಸುವುದು, ರಸ್ತೆ ಗಸ್ತು ತಂಡಗಳನ್ನು ಹೆಚ್ಚಿಸುವುದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ವಾಹನ ನೋಂದಣಿ ಪ್ರಕ್ರಿಯೆಯನ್ನು ಉತ್ತಮಗೊಳಿಸುವುದು ಸೇರಿವೆ. ಬೆಂಗಳೂರಿನ ಸಮಗ್ರ ಸಂಚಾರ ನಿರ್ವಹಣಾ ವ್ಯವಸ್ಥೆಯ ಜವಾಬ್ದಾರಿಯನ್ನು ಯಾರಾದರೂ ಹಿರಿಯ, ದಕ್ಷ ಹಾಗೂ ಸಮರ್ಥ ಅಧಿಕಾರಿಗೆ ವಹಿಸಬೇಕು. ಇಂತಹ ಕ್ರಮಗಳನ್ನು ಕ್ಷಿಪ್ರವಾಗಿ ಕೈಗೊಂಡರೆ, ಬೆಂಗಳೂರು 'ಭಾರತದ ಸಿಲಿಕಾನ್ ನಗರಿ' ಎಂಬ ಬಿರುದನ್ನು ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ, ಬೆಂಗಳೂರು ಭಾರತದ 'ಭ್ರಷ್ಟಾಚಾರ ರಾಜಧಾನಿ' ಎಂಬ ಕುಖ್ಯಾತಿ ಪಡೆಯುವ ಅಪಾಯವೂ ನಮ್ಮ ಕಣ್ಣ ಮುಂದಿದೆ!

Latest Videos
Follow Us:
Download App:
  • android
  • ios