Asianet Suvarna News Asianet Suvarna News

ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು

ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ನೀಡಿರುವ ವರದಿಯೊಂದರ ಪ್ರಕಾರ, ದೆಹಲಿಯ ನಗರ ಉಷ್ಣತಾ ಒತ್ತಡವನ್ನು (ಅರ್ಬನ್ ಹೀಟ್ ಸ್ಟ್ರೆಸ್) ಗಮನಿಸುವುದಾದರೆ, ರಾತ್ರಿಯ ವೇಳೆ ನಗರ ಕೇವಲ 8.5 ಡಿಗ್ರಿ ಸೆಲ್ಸಿಯಸ್ ತಾಪಮಾನವಷ್ಟೇ ಇಳಿಕೆ ಹೊಂದುತ್ತದೆ.

Urban Heat Island Cities concrete nests and scorching nights written by girish linganna gvd
Author
First Published Jun 26, 2024, 3:37 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ರಾಜಧಾನಿ ದೆಹಲಿ ಇತ್ತೀಚಿನ ದಿನಗಳಲ್ಲಿ ಅಹಿತಕರವಾಗಿ ಮತ್ತು ಅಪಾಯಕಾರಿ ಮಟ್ಟದಲ್ಲಿ ಬಿಸಿಯ ಅನುಭವವನ್ನು ಹೊಂದುತ್ತಿದೆ. ದೆಹಲಿ ಮಾತ್ರವಲ್ಲದೆ, ಜಗತ್ತಿನ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ಈ ವರ್ಷ ಸಹಿಸಲಸಾಧ್ಯ ಸೆಖೆಯಿಂದ ಕಷ್ಟಪಡುತ್ತಿದೆ. ಅದರಲ್ಲೂ ಉತ್ತರ ಭಾರತ ಅತ್ಯಂತ ಸುಡು ಬೇಸಿಗೆಯನ್ನೇ ಅನುಭವಿಸಿದ್ದು, ದೆಹಲಿಯ ಒಂದು ಭಾಗ ಮೇ ತಿಂಗಳ ಅಂತ್ಯದಲ್ಲಿ 49.9 ಡಿಗ್ರಿ ಸೆಲ್ಸಿಯಸ್ (121.8 ಡಿಗ್ರಿ ಫ್ಯಾರನ್‌ಹೀಟ್) ತಾಪಮಾನ ದಾಖಲಿಸಿತ್ತು. ಇದು ದೆಹಲಿಯ ಇತಿಹಾಸದಲ್ಲೇ ದಾಖಲಾದ ಅತ್ಯಂತ ಹೆಚ್ಚು ತಾಪಮಾನವಾಗಿತ್ತು. ಆದರೆ ವಿಪರ್ಯಾಸವೆಂಬಂತೆ, ಸಂಜೆ ಸೂರ್ಯಾಸ್ತವಾದ ನಂತರವೂ ದೆಹಲಿಯಲ್ಲಿ ತಾಪಮಾನ ಕಡಿಮೆಯಾಗುತ್ತಿರಲಿಲ್ಲ.

ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್ಮೆಂಟ್ (ಸಿಎಸ್ಇ) ನೀಡಿರುವ ವರದಿಯೊಂದರ ಪ್ರಕಾರ, ದೆಹಲಿಯ ನಗರ ಉಷ್ಣತಾ ಒತ್ತಡವನ್ನು (ಅರ್ಬನ್ ಹೀಟ್ ಸ್ಟ್ರೆಸ್) ಗಮನಿಸುವುದಾದರೆ, ರಾತ್ರಿಯ ವೇಳೆ ನಗರ ಕೇವಲ 8.5 ಡಿಗ್ರಿ ಸೆಲ್ಸಿಯಸ್ ತಾಪಮಾನವಷ್ಟೇ ಇಳಿಕೆ ಹೊಂದುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ನಗರದ ಹೊರವಲಯಗಳು ರಾತ್ರಿಯ ವೇಳೆ ತಾಪಮಾನದಲ್ಲಿ 12.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಕೆ ಕಂಡಿವೆ. ವಿಜ್ಞಾನಿಗಳು ರಾತ್ರಿಯ ವೇಳೆಯ ಇಷ್ಟೊಂದು ಹೆಚ್ಚಿನ ತಾಪಮಾನ ಹವಾಮಾನ ಬಿಕ್ಕಟ್ಟಿನ ಪರಿಣಾಮದಿಂದ ಸಂಭವಿಸಿದೆ ಎಂದು ಎಚ್ಚರಿಸಿದ್ದಾರೆ. ಅದರೊಡನೆ, ಹೆಚ್ಚಿನ ತಾಪಮಾನದ ಪರಿಣಾಮವಾಗಿ, ಆರೋಗ್ಯ ಸಮಸ್ಯೆಗಳು ತಲೆದೋರಲಿವೆ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. 

ಪ್ರೋಬಾ 3: ಕೃತಕ ಗ್ರಹಣ ನಿರ್ಮಾಣ, ಸೂರ್ಯ ರಹಸ್ಯ ಅನಾವರಣಕ್ಕೆ ಇಸ್ರೋ ಇಎಸ್ಎ ಜಂಟಿ ಪ್ರಯತ್ನ

ರಾತ್ರಿಯ ವೇಳೆ ದೇಹ ದುರಸ್ತಿ ಹೊಂದಲು ಮತ್ತು ಮರಳಿ ಚೈತನ್ಯ ಪಡೆಯಲು ಡೀಪ್ ಸ್ಲೀಪ್ (ಗಾಢ ನಿದ್ದೆ) ಮತ್ತು ರ‌್ಯಾಪಿಡ್ ಐ ಮೂವ್ಮೆಂಟ್ ಸ್ಲೀಪ್ (ಆರ್‌ಇಎಂ) ಅತ್ಯಂತ ಅವಶ್ಯಕವಾಗಿದೆ. ಆದರೆ, ಸಂಶೋಧನೆಗಳ ಪ್ರಕಾರ, ಈಗಿನ ಅತಿಯಾದ ತಾಪಮಾನದಿಂದಾಗಿ ರಾತ್ರಿ ನಿದ್ದೆ ಮಾಡುವುದೇ ಕಷ್ಟಕರವಾಗಿ ಪರಿಣಮಿಸಿದೆ. 2019ರ ಸಂಶೋಧನೆಯೊಂದರ ಪ್ರಕಾರ, ಗರ್ಭಿಣಿ ಮಹಿಳೆಯರು ಅತಿಯಾದ ತಾಪಮಾನಕ್ಕೆ ತುತ್ತಾದರೆ, ಅವಧಿ ಪೂರ್ವ ಪ್ರಸವದಂತಹ ಸಮಸ್ಯೆಗಳು ಎದುರಾಗಬಹುದು. ಅತಿಯಾದ ತಾಪಮಾನದಲ್ಲಿ ಮಲಗುವಾಗ, ಹಿರಿಯ ನಾಗರಿಕರಲ್ಲಿ ಹೆಚ್ಚಿನ ಹೃದಯ ಬಡಿತ ಮತ್ತು ಅಧಿಕ ಒತ್ತಡ ಕಾಣಿಸಿಕೊಳ್ಳಬಹುದು. 

ಉಷ್ಣ ಅಲೆಯ (ಹೀಟ್ ವೇವ್) ಸಂದರ್ಭದಲ್ಲಿ, ಮಾನಸಿಕ ಮತ್ತು ವರ್ತನೆಯ ಅಸ್ವಸ್ಥತೆಯಿಂದ ಉಂಟಾಗುವ ಸಾವುಗಳೂ ಹೆಚ್ಚಾಗುತ್ತವೆ ಎಂದು 2008ರ ಆಸ್ಟ್ರೇಲಿಯಾದ ಒಂದು ಅಧ್ಯಯನವನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ. ರಾತ್ರಿಯ ವೇಳೆ ಹೆಚ್ಚಿನ ತಾಪಮಾನ ದೆಹಲಿ, ಮುಂಬೈ, ಮತ್ತು ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ವಿಶೇಷವಾಗಿ ಅನುಭವಕ್ಕೆ ಬರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ, ಅರ್ಬನ್ ಹೀಟ್ ಐಲ್ಯಾಂಡ್ (ಯುಎಚ್ಐ) ಪರಿಣಾಮ. ಒಂದು ಯುಎಚ್ಐ ನಲ್ಲಿ, ಉಷ್ಣತೆ ಕೇವಲ ಸೂರ್ಯನ ತಾಪದಿಂದ ಮಾತ್ರವೇ ಉಂಟಾಗುವುದಿಲ್ಲ. ಅದರೊಡನೆ, ಜನರು ಬಳಸುವ ಇಂಧನ, ಕಾರುಗಳು, ಬಸ್‌ಗಳು, ಮತ್ತು ರೈಲುಗಳಿಂದಲೂ ಉಂಟಾಗುತ್ತದೆ. 

ಯುಎಚ್ಐಗಳು ಹೆಚ್ಚಿನ ಚಟುವಟಿಕೆಗಳು ಮತ್ತು ಹೆಚ್ಚಿನ ಜನದಟ್ಟಣೆ ಹೊಂದಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿರುತ್ತವೆ. ಯುಎಚ್ಐ ಉಂಟಾಗಲು ಹಲವಾರು ಕಾರಣಗಳಿವೆ. ಮನೆಗಳು, ಅಂಗಡಿ ಮುಂಗಟ್ಟುಗಳು, ಕಾರ್ಖಾನೆಗಳು ಒಂದಕ್ಕೊಂದು ಅತ್ಯಂತ ಸನಿಹದಲ್ಲಿ ನಿರ್ಮಾಣಗೊಂಡಿದ್ದರೆ, ಅಲ್ಲಿ ಯುಎಚ್ಐಗಳು ಉಂಟಾಗುತ್ತವೆ. ಇಂತಹ ಕಟ್ಟಡಗಳ ನಿರ್ಮಾಣದಲ್ಲಿ ಬಳಸುವ ಉಪಕರಣಗಳು ಸಾಮಾನ್ಯವಾಗಿ ಉಷ್ಣತೆಯನ್ನು ಅಲ್ಲೇ ಬಂಧಿಸಿಡುತ್ತವೆ. ಇದರಿಂದಾಗಿ ಆ ಕಟ್ಟಡಗಳು ಮತ್ತು ಸುತ್ತಲಿನ ಪ್ರದೇಶಗಳು ಹೆಚ್ಚು ಬೆಚ್ಚಗಾಗುತ್ತವೆ.

'ತ್ಯಾಜ್ಯ ತಾಪ'ವೂ (ವೇಸ್ಟ್ ಹೀಟ್) ಯುಎಚ್ಐ ಪರಿಣಾಮಕ್ಕೆ ಕೊಡುಗೆ ನೀಡುತ್ತದೆ. ವಾಹನ ಚಾಲನೆ, ವ್ಯಾಯಾಮ, ಕಾರ್ಖಾನೆಗಳ ಕಾರ್ಯಾಚರಣೆ, ಅಥವಾ ದೈನಂದಿನ ಚಟುವಟಿಕೆಗಳಂತಹ ಮಾನವರ ಕಾರ್ಯಗಳು ನಿರಂತರವಾಗಿ ಶಕ್ತಿಯನ್ನು ಬಿಡುಗಡೆಗೊಳಿಸುತ್ತವೆ. ಈ ಶಕ್ತಿ ಸಾಮಾನ್ಯವಾಗಿ ಉಷ್ಣತೆಯ ರೂಪದಲ್ಲಿ ಬಿಡುಗಡೆಯಾಗುತ್ತದೆ. ಒಂದೇ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಇದ್ದಾಗ, ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಷ್ಣ ಬಿಡುಗಡೆಯಾಗುತ್ತದೆ. ನಗರ ಪ್ರದೇಶಗಳು ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುತ್ತವೆ. ಅದರೊಡನೆ, ನಗರಗಳಲ್ಲಿ ಕಟ್ಟಡಗಳನ್ನೂ ಅತ್ಯಂತ ಒತ್ತೊತ್ತಾಗಿ ಕಟ್ಟಲಾಗಿರುತ್ತದೆ. 

ನಗರ ಪ್ರದೇಶಗಳಲ್ಲಿ ಸಾಕಷ್ಟು ಕಟ್ಟಡಗಳ ನಿರ್ಮಾಣವಾಗಿ, ಇನ್ನೂ ಹೊರಗಡೆ ವಿಸ್ತರಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಉಂಟಾದಾಗ, ಇಂಜಿನಿಯರ್‌ಗಳು ಅತ್ಯಂತ ಎತ್ತರವಾದ ಕಟ್ಟಡಗಳನ್ನು ನಿರ್ಮಿಸಲಾರಂಭಿಸುತ್ತಾರೆ. ಈ ಮೂಲಕ ನಗರಗಳಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣವಾಗುತ್ತದೆ. ಇಂತಹ ನಿರ್ಮಾಣ ಕಾಮಗಾರಿಗಳು ತ್ಯಾಜ್ಯ ಉಷ್ಣತೆಯನ್ನು ಉಂಟುಮಾಡುತ್ತವೆ. ಈ ರೀತಿ ನಿರೋಧನಗಳ ಮೂಲಕ ಬಿಡುಗಡೆಯಾದ ಉಷ್ಣತೆಗೆ ಹೊರಹೋಗಲು ಯಾವುದೇ ಜಾಗವಿರುವುದಿಲ್ಲ. ಈ ತಾಪಮಾನ ಅದೇ ಕಟ್ಟಡದ ಒಳಗೆ, ಸುತ್ತಲೂ ಇದ್ದು, ಯುಎಚ್ಐ ಪರಿಣಾಮಕ್ಕೆ ಹಾದಿ ಮಾಡಿಕೊಡುತ್ತದೆ.

ಕಟ್ಟಡಗಳು, ಸೈಡ್‌ವಾಕ್‌ಗಳು, ಮತ್ತು ಪಾರ್ಕಿಂಗ್ ಪ್ರದೇಶಗಳು ಭೂಮಿಯ ತಾಪಮಾನ ಮತ್ತು ಮಾಲಿನ್ಯಕಾರಕಗಳನ್ನು ರಾತ್ರಿಯ ತಣ್ಣಗಿನ ಆಕಾಶಕ್ಕೆ ಸಾಗಲು ಅವಕಾಶ ನೀಡುವುದಿಲ್ಲ. ಈ ಕಾರಣದಿಂದಾಗಿ ಯುಎಚ್ಐಗಳು ರಾತ್ರಿಯ ವೇಳೆಯೂ ಹೆಚ್ಚಿನ ತಾಪಮಾನ ಹೊಂದಿರುತ್ತವೆ. ಇದು ತಾಪಮಾನವನ್ನು ತಳಭಾಗದಲ್ಲೇ ಸೆರೆಹಿಡಿದು, ಸಂಪೂರ್ಣ ಪ್ರದೇಶವನ್ನು ಹೆಚ್ಚು ಬೆಚ್ಚಗಾಗಿಸುತ್ತದೆ. ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ, ಯುಎಚ್ಐಗಳಲ್ಲಿ ಗಾಳಿ ಮತ್ತು ನೀರಿನ ಗುಣಮಟ್ಟ ಕಡಿಮೆಯಾಗಿರುತ್ತದೆ. ವಾಹನಗಳಿಂದ, ಕಾರ್ಖಾನೆಗಳಿಂದ ಮತ್ತು ಮಾನವರ ಚಟುವಟಿಕೆಗಳಿಂದ ಹೊರಸೂಸುವ ಮಾಲಿನ್ಯಕಾರಕಗಳ ಪರಿಣಾಮವಾಗಿ, ಇಂತಹ ಪ್ರದೇಶಗಳ ಗಾಳಿಯ ಗುಣಮಟ್ಟ ಸಾಕಷ್ಟು ಕಳಪೆಯಾಗಿರುತ್ತದೆ. ಅರ್ಬನ್ ಹೀಟ್ ಐಲ್ಯಾಂಡ್‌ಗಳಲ್ಲಿನ ನೀರಿನ ಗುಣಮಟ್ಟವೂ ಕುಸಿದಿರುತ್ತದೆ. 

ಯುಎಚ್ಐನಿಂದ ಹೊರಬರುವ ಬಿಸಿಯಾದ ನೀರು ಸಾಮಾನ್ಯ ನೀರಿಗೆ ಬೆರೆತರೆ, ಆ ನೀರಿನಲ್ಲಿ ವಾಸಿಸುವ ಜೀವಜಂತುಗಳಿಗೆ, ತಣ್ಣಗಿನ ನೀರಿನಲ್ಲಿ ವಾಸಿಸುವ ಜಲಚರಗಳಿಗೆ ಅಪಾಯಕಾರಿಯಾಗಬಲ್ಲದು. ಯುಎಚ್ಐಗಳು ಜಾಗತಿಕ ತಾಪಮಾನ ಹೆಚ್ಚಳದ ಪ್ರಕ್ರಿಯೆಗೆ ಹೇಗೆ ಕೊಡುಗೆ ನೀಡುತ್ತಿವೆ ಎಂಬ ಕುರಿತು ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. ಜಾಗತಿಕ ತಾಪಮಾನ ಹೆಚ್ಚಳದಲ್ಲಿ, ಭೂಮಿಯ ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಅತ್ಯಂತ ಸೆಖೆಯ ವಾತಾವರಣದಲ್ಲಿ, ಅದರಲ್ಲೂ ಯುಎಚ್ಐ ಪರಿಣಾಮ ಹೊಂದಿರುವ ನಗರ ಪ್ರದೇಶಗಳಲ್ಲಿ ಜನರು ಸೆಖೆಯಿಂದ ಮುಕ್ತಿ ಪಡೆಯಲು ಫ್ಯಾನ್‌ಗಳು ಮತ್ತು ಹವಾನಿಯಂತ್ರಕಗಳನ್ನು (ಎಸಿ) ಬಳಸುತ್ತಾರೆ. 

ಅರ್ಬನ್ ಹೀಟ್ ಐಲ್ಯಾಂಡ್‌ಗಳು ಬೇಸಿಗೆ ಕಾಲದಲ್ಲಿ ಹೆಚ್ಚಿನ ವಿದ್ಯುತ್ ಬೇಡಿಕೆ ಸೃಷ್ಟಿಸಿ, ಇಂಧನ ಸಂಪನ್ಮೂಲಗಳ ಮೇಲೆ ಒತ್ತಡ ಸೃಷ್ಟಿಸುತ್ತವೆ. ವಿದ್ಯುತ್ ಸ್ಥಗಿತದಂತಹ ಘಟನೆಗಳು (ರೋಲಿಂಗ್ ಬ್ಲ್ಯಾಕೌಟ್) ಯುಎಚ್ಐಗಳಲ್ಲಿ ಸರ್ವೇಸಾಮಾನ್ಯವಾಗಿರುತ್ತವೆ. ವಿದ್ಯುತ್ ಫ್ಯಾನ್‌ಗಳು ಮತ್ತು ಹವಾನಿಯಂತ್ರಕ ಯಂತ್ರಗಳ ಬಳಕೆಯಿಂದ ಅರ್ಬನ್ ಹೀಟ್ ಐಲ್ಯಾಂಡ್‌ಗಳ ಉಷ್ಣತೆಗೆ ಇನ್ನಷ್ಟು ಕೊಡುಗೆ ಲಭಿಸಿ, ಒಟ್ಟಾರೆ ತಾಪಮಾನ ಹೆಚ್ಚಾಗುತ್ತದೆ. ವಿದ್ಯುತ್ ಪೂರೈಕೆ ಸಂಸ್ಥೆಗಳಿಗೆ ತಮ್ಮ ಗ್ರಾಹಕರ ಇಂಧನ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಗದೆ ಹೋದಾಗ, ಅವುಗಳು ವಿದ್ಯುತ್ ಕೊರತೆಯನ್ನು ಸರಿದೂಗಿಸಲು 'ರೋಲಿಂಗ್ ಬ್ಲ್ಯಾಕೌಟ್' ವಿಧಾನದ ಮೊರೆ ಹೋಗುತ್ತವೆ. 

ರೋಲಿಂಗ್ ಬ್ಲ್ಯಾಕೌಟ್ ಸಂದರ್ಭದಲ್ಲಿ, ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಅಥವಾ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಆವರ್ತನ ಕ್ರಮದಲ್ಲಿ, ಬೇರೆ ಬೇರೆ ಪ್ರದೇಶಕ್ಕೆ ನಡೆಸಲಾಗುತ್ತದೆ. ಈ ಮೂಲಕ ವಿದ್ಯುತ್ ಬೇಡಿಕೆ ಮತ್ತು ಪೂರೈಕೆಯನ್ನು ಸರಿದೂಗಿಸಲು ಪ್ರಯತ್ನಿಸಲಾಗುತ್ತದೆ. ಮೇಲೆ ಕಾಣಿಸಿದ ದುಷ್ಪರಿಣಾಮಗಳನ್ನು ತಪ್ಪಿಸುವ ಸಲುವಾಗಿ, ನಗರ ನಿವಾಸಿಗಳು, ವಾಸ್ತುಶಿಲ್ಪಿಗಳು, ಮತ್ತು ವಿನ್ಯಾಸಕಾರರು ಜೊತೆಯಾಗಿ ನಗರ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳ ಪರಿಣಾಮವನ್ನು ಕಡಿಮೆಗೊಳಿಸಲು ಕಾರ್ಯಾಚರಿಸುವಂತೆ ತಜ್ಞರು ಸಲಹೆ ನೀಡುತ್ತಾರೆ. 

ಟರ್ಬ್ಯುಲೆನ್ಸ್ ದುರಂತ: ಸಿಂಗಾಪುರ್ ಏರ್‌ಲೈನ್ಸ್ ಘಟನೆ ಮತ್ತು ವಿಮಾನಯಾನದ ಭವಿಷ್ಯ

ಯುಎಚ್ಐಗಳ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ಇರುವ ಒಂದು ಪರಿಣಾಮಕಾರಿ ಮಾರ್ಗವೆಂದರೆ, ಕಟ್ಟಡಗಳ ಮೇಲ್ಭಾಗದಲ್ಲಿ ಗಿಡಗಳನ್ನು ನೆಟ್ಟು, ಹಸಿರಿನಿಂದ ಆವರಿಸುವಂತೆ ಮಾಡುವುದು. ಇಂತಹ ಹಸಿರು ಮಹಡಿಗಳು ಪ್ರಮುಖ ಮಾಲಿನ್ಯಕಾರಕವಾದ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಅದರೊಡನೆ, ತಮ್ಮ ಸುತ್ತಮುತ್ತಲಿನ ಪ್ರದೇಶಗಳ ತಾಪಮಾನವನ್ನೂ ಕಡಿಮೆಗೊಳಿಸುತ್ತವೆ. ಅದರೊಡನೆ, ಕಟ್ಟಡಗಳಿಗೆ ತಿಳಿ ಬಣ್ಣಗಳನ್ನು ಬಳಸುವುದರಿಂದ, ತಂಪಿನ ವಾತಾವರಣ ಸೃಷ್ಟಿಸಲು ಸಾಧ್ಯ. ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಹಿಂದಕ್ಕೆ ಪ್ರತಿಫಲಿಸಿ, ಉಷ್ಣದ ಹೀರುವಿಕೆಯನ್ನು ಕಡಿಮೆಗೊಳಿಸುತ್ತವೆ.

Latest Videos
Follow Us:
Download App:
  • android
  • ios