ಯಾದಗಿರಿ[ಜ.15]: ಹುಣಸಗಿ ತಾಲೂಕಿನ ಮುದನೂರು ಸಮೀಪದ ತೆಗ್ಗಳ್ಳಿ ಹಾಗೂ ಶಖಾಪುರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ವಾಲ್ವಿಗೆ ಕ್ರಿಮಿನಾಶಕ ಬೆರೆಸಿದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಅಚ್ಚರಿ ಎಂದರೆ ತಾನು ನೀರು ಕುಡಿದಿದ್ದರೂ ಸಾವಿರಾರು ಜನರ ಜೀವ ಉಳಿಸಲು ಹೆಣಗಾಡಿ ‘ವಿಷಕಂಠ’ನೆಂಬ ಖ್ಯಾತಿಗೆ ಪಾತ್ರವಾಗಿದ್ದ ಪಂಪ್‌ ಆಪರೇಟರ್‌ ಮೌನೇಶನೇ ಕ್ರಿಮಿನಾಶಕ ಬೆರೆಸಿದ್ದ ಅನ್ನೋದು ಎಲ್ಲರ ಆಘಾತ ಮೂಡಿಸಿದೆ. ಈತನೊಂದಿಗೆ ಗ್ರಾಮಸ್ಥ ಶಾಂತಗೌಡ ಮತ್ತೊಬ್ಬನು ಭಾಗಿಯಾಗಿ ಕೃತ್ಯ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಮುದನೂರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆಗಿದ್ದ ಸಿದ್ರಾಮಪ್ಪ ಮೇಲಿನ ದ್ವೇಷ ಈ ಕೃತ್ಯಕ್ಕೆ ಕಾರಣ ಎಂದು ಇವರಿಬ್ಬರು ಪೊಲೀಸ್‌ ತನಿಖೆಯಲ್ಲಿ ತಪ್ಪೊಪ್ಪಿಗೆ ನೀಡಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಸೋಮವಾರ ರಾತ್ರಿ ಈ ಬಗ್ಗೆ ತಮ್ಮ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಪಂಪ್‌ ಆಪರೇಟರ್‌ ಮೌನೇಶ ಹಾಗೂ ಶಾಂತಗೌಡರಿಗೆ ಪಿಡಿಒ ಸಿದ್ರಾಮಪ್ಪ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡದ್ದಕ್ಕೆ ಸಿಟ್ಟಿತ್ತು. ಅಲ್ಲದೆ, ಕಳೆದ ಏಪ್ರಿಲ್‌ 2018 ರಿಂದ ಮೌನೇಶನಿಗೆ ಸಂಬಳವನ್ನೇ ಪಿಡಿಓ ನೀಡದ್ದರಿಂದ ಮೌನೇಶ ಆಕ್ರೋಶಗೊಂಡಿದ್ದ. ಈ ಕಾರಣಕ್ಕೆ ಇಬ್ಬರೂ ಸೇರಿ ಕ್ರಿಮಿನಾಶಕ ಬೆರೆಸುವ ಮೂಲಕ ಪಿಡಿಓ ಮೇಲೆ ಆರೋಪ ಹೊರಿಸಿ ವರ್ಗಾವಣೆ ಮಾಡಿಸಬಹುದು ಅನ್ನೋ ದುರುದ್ದೇಶದಿಂದ ಈ ಕೃತ್ಯದ ಯೋಜನೆ ರೂಪಿಸಿದ್ದರು ಎಂದು ಯಡಾ ಮಾರ್ಟಿನ್‌ ಹೇಳಿದರು.

ಪಿಡಿಒ ವರ್ಗಾವಣೆಗೆ ಸಂಚು ಇದಾಗಿತ್ತು

ಶಾಂತಗೌಡನಿಗೆ ಮುದನೂರಿನಲ್ಲಿ ಸಾಕಷ್ಟುಜಮೀನು ಇದ್ದಿದ್ದರಿಂದ ರಸಗೊಬ್ಬರ ಅಂಗಡಿಗಳಿಗೆ ಓಡಾಟ ಸಹಜವಾಗಿತ್ತು. ಹುಣಸಗಿಯಲ್ಲಿ ‘ಹೈವ್ಯಾಪ್‌’ ಅನ್ನೋ ಕ್ರಿಮಿನಾಶಕ ಖರೀದಿಸಿದ್ದ ಇವರಿಬ್ಬರೂ ಎರಡು ದಿನಗಳ ಮೊದಲೇ ಎಲ್ಲವನ್ನೂ ನಿರ್ಧರಿಸಿ, ಜ.9ರಂದು ಮಧ್ಯಾಹ್ನ ವಾಲ್ವಿಗೆ ಕ್ರಿಮಿನಾಶಕ ಸುರಿದಿದ್ದಾರೆ. ನೀರು ವಾಸನೆ ಬಂದರೆ ಪಿಡಿಒ ವರ್ಗಾವಣೆ ಖಚಿತ ಎಂಬುದೇ ಅವರ ಲೆಕ್ಕಾಚಾರವಾಗಿತ್ತು. ಆದರೆ ಈ ಕೃತ್ಯ ಭಾರಿ ಪ್ರಮಾಣದಲ್ಲಿ ಜನರ ಆರೋಗ್ಯದ ಮೇಲೆ ಏರುಪೇರು ಆಗಬಹುದು ಎಂಬ ಅಂದಾಜಿಸಿರಲಿಲ್ಲ.

ನೀರಿಗೆ ವಿಷ: ತಾನು ನೀರು ಕುಡಿದಿದ್ದರೂ ಸಾವಿರಾರು ಜೀವ ಉಳಿಸಿದ ನೌಕರ!

ಅಂದಹಾಗೆ, ಮೌನೇಶ ನೀರಿಗೆ ಕ್ರಿಮಿನಾಶಕ ಬೆರೆಸಿದ್ದು ಖುದ್ದು ಆತನ ತಾಯಿಗೇ ಗೊತ್ತಿರಲಿಲ್ಲವಂತೆ. ನೀರು ಚಾಲನೆಗೊಂಡಾಗ ಮೊದಲಿಗೆ ಇವರ ಮನೆಗೆ ನೀರು ಬಂದು ಮೌನೇಶನ ತಾಯಿ ನಾಗಮ್ಮ ನೀರು ಕುಡಿದು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಕ್ರಿಮಿನಾಶಕ ಬೆರೆಸಿದ್ದ ವಿಚಾರವನ್ನು ಗುಪ್ತವಾಗಿಟ್ಟಿದ್ದ ಮೌನೇಶ, ನೀರು ವಾಸನೆ ಬಂದರೆ ಕುಡಿಯಬೇಡಿ ಎನ್ನುವುದನ್ನು ಹೇಳಲು ಮನೆಯಲ್ಲಿ ಮರೆತಿದ್ದನಂತೆ. ಯಾವಾಗ ಇದರ ಸ್ವರೂಪ ತೀವ್ರ ಪಡೆಯಿತೋ ಹಾಗೂ ನೀರಿನ ವಾಸನೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಬಹುದು ಅನ್ನೋದನ್ನ ಅರಿತ ಮೌನೇಶ ಮನೆಗೆ ಓಡಿ ಹೋಗಿ ಹೇಳುವಷ್ಟರಲ್ಲಿ ತಾಯಿ ನಾಗಮ್ಮ ನೀರು ಕುಡಿದು ಅಸ್ವಸ್ಥರಾಗಿದ್ದರು.

ಈ ಎಲ್ಲ ಘಟನೆಗಳಿಂದ ಬೆದರಿದ ಮೌನೇಶ ತಾನೂ ಕುಡಿದಂತೆ ನಾಟಕವಾಡಿ ಆಸ್ಪತ್ರೆ ಸೇರಿದ್ದ. ನೀರು ಕುಡಿದವರೂ ಆಸ್ಪತ್ರೆಯಿಂದ ಬಿಡುಗಡೆಯಾದರೂ, ಈತನ ನಡವಳಿಕೆ ಬಗ್ಗೆ ಅನುಮಾನ ಮೂಡಿದ್ದರಿಂದ ಪೊಲೀಸರು ತನಿಖೆ ಚುರಕುಗೊಳಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಘಟನೆ ಹಿನ್ನೆಲೆ:

ಜ.9ರ ರಾತ್ರಿ ಮುದನೂರಿನ ಬಾವಿಯಿಂದ ಪೈಪ್‌ಲೈನ್‌ ಮೂಲಕ ಶಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನಿನ ವಾಲ್ವಿನಲ್ಲಿ ಕ್ರಿಮಿನಾಶಕ ಬೆರೆಸಲಾಗಿತ್ತು. ಈ ಘಟನೆಯಿಂದ ಮುದನೂರು ಗ್ರಾಮ ಪಂಚಾಯ್ತಿ ಸದಸ್ಯ ಮೌನೇಶ ಅನ್ನುವವರ ತಾಯಿ ಹೊನ್ನಮ್ಮ (65) ಚಿಕಿತ್ಸೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಅಸುನೀಗಿದ್ದರು. ಇನ್ನೊಂದೆಡೆ, ವಿಷಪೂರಿತ ನೀರು ಕುಡಿದ ಹಿನ್ನೆಲೆಯಲ್ಲಿ 17 ಜನರು ಶಹಾಪುರ ಆಸ್ಪತ್ರೆಗೆ ದಾಖಲಾಗಿದ್ದರು.

ಎರಡು ಸಾವಿರಕ್ಕೂ ಹೆಚ್ಚು ಜನರ ಪ್ರಾಣ ಉಳಿದಿತ್ತು. ನೀರು ಕುಡಿಯದಂತೆ ಗ್ರಾಮಸ್ಥರಿಗೆ ಪಂಪ್‌ ಆಪರೇಟರ್‌ ಮೌನೇಶನ ಎಚ್ಚರಿಕೆಯೂ ಇದಕ್ಕೆ ಕಾರಣವಾಗಿತ್ತು. ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದುರಂತದ ಘಟನೆಗೆ ಇದನ್ನು ಹೋಲಿಸಲಾಗಿತ್ತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಹ ಇದನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ತನಿಖೆ ಕಾರ್ಯ ಚುರುಕಾಗಿಯೇ ನಡೆದಿತ್ತು. ಸುರಪುರ ಡಿವೈಎಸ್ಪಿ ಶಿವನಗೌಡ ಪಾಟೀಲ್‌, ಹುಣಸಗಿ ಸಿಪಿಐ ಪಂಡಿತ ಸಾಗರ, ಪಿಎಸೈ ಸತೀಶ ಮೂಲಿಮನಿ, ಪಿಎಸ್‌ಐ ಅಜಿತ್‌ ಹಾಗೂ ಸಿಬ್ಬಂದಿಗಳ ತಂಡ ತನಿಖೆ ನಡೆಸಿ, ಪ್ರಕರಣ ಪತ್ತೆ ಹಚ್ಚಿದೆ.

ತನಿಖೆಯ ಸುಳಿವಿನ ಮೇರೆಗೆ, ಬಲ್ಲ ಮೂಲಗಳನ್ನಾಧರಿಸಿ ಈ ಕುರಿತು ’ಕನ್ನಡಪ್ರಭ’ ಜ.12 ರಂದು ವಿಷಕಂಠನೇ ವಿಷವಿಕ್ಕಿದನೇ ಅನ್ನೋ ತಲೆಬರಹದಡಿ ವರದಿ ಪ್ರಕಟಿಸಿತ್ತು.