ನೀರಿಗೆ ವಿಷ: ತಾನು ನೀರು ಕುಡಿದಿದ್ದರೂ ಸಾವಿರಾರು ಜೀವ ಉಳಿಸಿದ ನೌಕರ!
ಚಾಮರಾಜನಗರ ಜಿಲ್ಲೆಯ ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ಯಾದಗಿರಿಯಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿರುವ ಘಟನೆ ನಡೆದಿದೆ. ಆದರೆ ನೌಕರನ ಸಮಯ ಪ್ರಜ್ಞೆ ಸಾವಿರಾರು ಜೀವ ಉಳಿಸಿದೆ.
ಯಾದಗಿರಿ[ಜ.11]: ಕೆಂಭಾವಿ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ವಿಷ ಆಹಾರ ಪ್ರಸಾದ ದುರಂತ ಜನಮಾನಸದಿಂದ ಮರೆಯಾಗುವ ಮುನ್ನವೇ, ಯಾದಗಿರಿ ಜಿಲ್ಲೆ ಮುದನೂರಿನಲ್ಲಿ ಬುಧವಾರದಂದು ಕುಡಿವ ನೀರು ಪೂರೈಸುವ ವಾಲ್‌ಗೆ ಕಿಡಿಗೇಡಿಗಳು ಕ್ರಿಮಿನಾಶಕ ಬೆರೆಸಿದ ಪ್ರಕರಣ ಇದೀಗ ಬೆಚ್ಚಿ ಬೀಳಿಸಿದೆ. ಈ ಸಂದರ್ಭ ಪಂಪ್ ಆಪರೇಟರ್ ಮೌನೇಶ ಮತ್ತಾತನ ತಾಯಿ ನಾಗಮ್ಮ ಎಂಬಿಬ್ಬರ ಮುಂಜಾಗ್ರತೆಯಿಂದಾಗಿ ಸಾವಿರಾರು ಜನರ ಪ್ರಾಣ ಉಳಿದಿದೆ.
"
ನೀರು ಸರಬರಾಜು ಮಾಡುವ ಪೈಪ್‌ಗಳ ವಾಲ್‌ನಲ್ಲಿ ಕ್ರಿಮಿನಾಶಕ ಬೆರೆಸಿದ್ದ ಕಿಡಿಗೇಡಿಗಳ ಕೃತ್ಯಕ್ಕೆ ಸಾವಿರಾರು ಜೀವಗಳು ಬಲಿಯಾಗುವ ಸಾಧ್ಯತೆ ಇತ್ತು. ಅದಾಗಲೇ ವಿಷಪೂರಿತ ನೀರನ್ನು ಕುಡಿದಿದ್ದ ಪಂಪ್ ಆಪರೇಟರ್ ಮೌನೇಶ ತನ್ನ ಪ್ರಾಣ ಅಪಾಯದ ಲ್ಲಿದೆ ಎಂಬುದನ್ನು ಅರಿತೂ ಬೈಕ್ ನಲ್ಲಿ ಸವಾರಿ ನಡೆಸುತ್ತಾ ಸಾವಿರಾರು ಗ್ರಾಮಸ್ಥರನ್ನು ಎಚ್ಚರಿಸಿದ. ಇದೇ ವೇಳೆ ವಿಷಜಲ ಸೇವಿಸಿದ್ದ ಆತನ ತಾಯಿ ನಾಗಮ್ಮ ಸಹ ಗ್ರಾಮಗಳಲ್ಲಿ ಓಡಾಡುತ್ತಾ ಯಾರೂ ನೀರು ಕುಡಿಯಬಾರದೆಂದು ಮನವಿ ಮಾಡಿ ಜನರ ಪ್ರಾಣ ಉಳಿಸಿದರು.
ಏನಾಗಿತ್ತು..?:
ಯಾದಗಿರಿ ಜಿಲ್ಲೆಯ ಕೆಂಭಾವಿ ಸಮೀಪದ ಮುದನೂರು(ಕೆ) ಗ್ರಾಮದಲ್ಲಿರುವ ತೆರೆದ ಬಾವಿಯ ಮುಖಾಂತರ ಸುಮಾರು ಎರಡ್ಮೂರು ಕಿ.ಮೀ. ದೂರದ ಅಂತರದಲ್ಲಿರುವ ಶಖಾಪುರ ಹಾಗೂ ತೆಗ್ಗಳ್ಳಿ ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಎರಡೂ ಗ್ರಾಮಗಳ ಸುಮಾರು 2800 ಗ್ರಾಮಸ್ಥರು ಕುಡಿಯಲು ಇದೇ ನೀರ ನ್ನು ಅವಲಂಬಿಸಿದ್ದಾರೆ. ಎಂದಿನಂತೆ, ಬುಧ ವಾರ ಸಂಜೆ ಸುಮಾರಿಗೆ ವಿದ್ಯುತ್ ಸಂಪರ್ಕ ಬಂದಾಗ, ಸ್ವಯಂಚಾಲಿತ ನೀರು ಪೂರೈಕೆ ಚಾ ಲನೆಗೊಂಡಿದೆ. ಪಂಪ್ ಆಪರೇಟರ್ ಮೌನೇಶ ಮನೆಗೆ ಮೊದಲಿಗೆ ನಲ್ಲಿಯಲ್ಲಿ ನೀರು ಬಂದಿದೆ. ತಾಯಿ ನಾಗಮ್ಮ ನೀರು ಕುಡಿದಾಗ ಕೆಟ್ಟ ವಾಸನೆ ಬಂದಿದ್ದರಿಂದ ಆತಂಕಗೊಂಡು ಮಗನಿಗೆ ತಿಳಿಸಿ ದಾಗ ಅವರು ಕುಡಿದು ಅನುಮಾನಗೊಂಡು ವಾಲ್ವ್ ಕಡೆಗೆ ಓಡಿದ್ದಾರೆ.
ಅಲ್ಲಿ ಬಿಳಿಮಿಶ್ರಿತ ನೀರು ಹಾಗೂ ಕ್ರಿಮಿನಾಶಕ ಸುರಿದಿದ್ದುದು ಕಂಡು ಬಂತು. ನೀರಿಗೆ ಯಾರೋ ಕಿಡಿಗೇಡಿಗಳು ವಿಷ ಬೆರೆಸಿದ್ದಾರೆಂಬುದನ್ನು ಮನಗಂಡು ಗ್ರಾಮದತ್ತ ಓಡಿದರು.ಮೌನೇಶ ತನ್ನ ಹಾಗೂ ತಾಯಿಯ ಆರೋಗ್ಯವನ್ನೂ ಲಕ್ಷಿಸದೇ ತೆಗ್ಗಳ್ಳಿ ಹಾಗೂ ಶಖಾಪುರ ಗ್ರಾಮಗಳಲ್ಲಿ ಬೈಕ್ ನಲ್ಲಿ ಸಂಚರಿಸಿ ಯಾರೂ ನೀರು ಕುಡಿಯದಂತೆ ಕೂಗಿ ಕೂಗಿ ಹೇಳಿದ್ದಾರೆ. ಎಲ್ಲೆಡೆ ನೀರು ಕುಡಿಯದಂತೆ ಡಂಗೂರ ಸಾರಿದ್ದಾರೆ. ಸುಮಾರು ಐದಾರು ಕಿ.ಮೀ. ದೂರ ಸುತ್ತಾಡಿ ಎಲ್ಲರಿಗೂ ಮಾಹಿತಿ ಮುಟ್ಟಿಸಿದ ಮೇಲೆ ಅಸ್ವಸ್ಥಗೊಂಡ ಮೌನೇಶ ಹಾಗೂ ಆತನ ತಾಯಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸದ್ಯ ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
ಮೌನೇಶ ಹಾಗೂ ಆತನ ತಾಯಿಯ ಇಂತಹ ಆತಂಕದ ಕೂಗು ಹಾಗೂ ಎಚ್ಚರಿಕೆ ತೆಗ್ಗಳ್ಳಿ ಹಾಗೂ ಶಖಾಪುರ ಗ್ರಾಮಸ್ಥರನ್ನು ನೀರು ಕುಡಿಯದಂತೆ ಎಚ್ಚರಿಸಿದ್ದರಿಂದ ಸಾವಿರಾರು ಜನರ ಪ್ರಾಣ ಉಳಿದಿದೆ.
ವಿಷದ ನೀರು ಕುಡಿದಿದ್ದ ವೃದೆ ್ಧ ಸಾ
ಯಾದಗಿರಿ ಜಿಲ್ಲೆಯ ಮದನೂರಿನಲ್ಲಿ ಬುಧವಾರ ವಿಷಪೂರಿತ ನೀರು ಸೇವಿಸಿದ ಪರಿಣಾಮ ವೃದ್ಧೆಯೊಬ್ಬರು ಸಾವಿಗೀಡಾಗಿದ್ದು 11 ಮಂದಿ ಅಸ್ವಸ್ಥರಾಗಿದ್ದಾರೆ. ಗ್ರಾಮದಲ್ಲಿ ಡಂಗುರ ಸಾರುವ ಮೊದಲೇ ಹೊನ್ನಮ್ಮ ಎಂಬಾಕೆ ನೀರು ಕುಡಿದಿದ್ದರು. ರಕ್ತವಾಂತಿಯಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ನೀರು ಕುಡಿದು ಅಸ್ವಸ್ಥಗೊಂಡ ಮಾಳಮ್ಮ, ನಾಗಮ್ಮ, ಸುರೇಶ, ಕಾಳಮ್ಮ, ಜಯಮ್ಮ, ಹಳ್ಳೆಮ್ಮ ರಾಯಪ್ಪ, ಮೌನೇಶ ಅವರಿಗೆ ಕೆಂಭಾವಿಯ ಸಮುದಾಯ ಆಸ್ಪತ್ರೆ ಹಾಗೂ ಶಹಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುದನೂರು ಬಾವಿಯಲ್ಲಿ ಕ್ರಿಮಿನಾಶಕ ಬೆರೆತಿರುವ ಶಂಕೆ ಹಿನ್ನೆಲೆಯಲ್ಲಿ ಅದರಲ್ಲಿನ ಸಂಪೂರ್ಣ ನೀರು ಖಾಲಿ ಮಾಡಲು ಸೂಚಿಸಲಾಗಿದೆ. ಜಿಲ್ಲಾಡಳಿತ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು, ಅದನ್ನೇ ಕುಡಿಯುವಂತೆ ಸೂಚಿಸಲಾಗಿದೆ.
ಜಿಲ್ಲಾಡಳಿತದ ಹಾಗೂ ಆರೋಗ್ಯಾಧಿಕಾರಿಗಳ ಸೇವೆ ರಾತ್ರಿಯಿಡೀ ಮುಂದುವರೆದಿದೆ. ನೀರಿನ ಮಾದರಿಗಳನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ನೀಡಲಾಗಿದ್ದು ಪೊಲೀಸರು ಕೃತ್ಯ ನಡೆಸಿರುವ ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
-ಹಳ್ಳೇರಾವ್ ಕುಲಕರ್ಣಿ