ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ವಿಶ್ವದರ್ಜೆಯ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ. ಈ ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲಾಗುವುದು ಮತ್ತು ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು: ಬಿಡದಿ ಟೌನ್‌ಶಿಪ್‌ ವಿರುದ್ಧ ಜೆಡಿಎಸ್, ಬಿಜೆಪಿ ನಾಯಕರು ಪಾದಯಾತ್ರೆ, ರೈತರಿಂದ ಪ್ರತಿಭಟನೆ ಆರಂಭಿಸಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಈ ಟೌನ್‌ಶಿಪ್‌ ಅನ್ನು ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಅವರ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಸಂದೇಶ ನೀಡಿರುವ ಅವರು, ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿಡದಿ ಟೌನ್‌ಶಿಪ್‌ ಯೋಜನೆಗೆ ಮರುಜೀವ ನೀಡಲಾಗುತ್ತಿದ್ದು, ಇದನ್ನು ವಿಶ್ವದರ್ಜೆಯ ರಸ್ತೆಗಳು, ಮೆಟ್ರೋ ಸಂಪರ್ಕ, ಸುಸಜ್ಜಿತ ವಸತಿ ಒಳಗೊಂಡ ಅತ್ಯಾಧುನಿಕ ಎಐ ಸಿಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣದ ಚಿತ್ರಣ ಬದಲು:

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಡಿ ಕೈಗೆತ್ತಿಕೊಳ್ಳಲಾಗಿರುವ ಈ ಬೃಹತ್ ಯೋಜನೆ ಬೆಂಗಳೂರು ದಕ್ಷಿಣದ ಜಿಲ್ಲೆಯ ಚಿತ್ರಣವನ್ನೇ ಬದಲಿಸಲಿದೆ. ರೈತರ ಹಿತರಕ್ಷಣೆ ನಮ್ಮ ಪ್ರಮುಖ ಆದ್ಯತೆಯಾಗಿದೆ. ಹಿಂದಿನ ಸರ್ಕಾರ ಎಕರೆಗೆ ಕೇವಲ ₹25 ಲಕ್ಷ ನಿಗದಿಪಡಿಸಿದ್ದರೆ, ನಮ್ಮ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿ ರು.ಗಳಿಗೂ ಹೆಚ್ಚು ಪರಿಹಾರ ನೀಡಲು ತೀರ್ಮಾನಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಹಣದ ಬದಲು ಭೂಮಿ ಬಯಸುವ ರೈತರಿಗೆ ಶೇ.50 ಅಭಿವೃದ್ಧಿಪಡಿಸಿದ ಜಾಗ ನೀಡಲಾಗುವುದು. ಈ ಭೂಸ್ವಾಧೀನ ಪ್ರಕ್ರಿಯೆಯು ಸಂಪೂರ್ಣವಾಗಿ ಐಚ್ಛಿಕವಾಗಿದ್ದು, ಯೋಜನೆಗೆ ಜಮೀನು ನೀಡಲು ಇಷ್ಟವಿಲ್ಲದ ಯಾರ ಮೇಲೆಯೂ ಯಾವುದೇ ಒತ್ತಾಯವಿಲ್ಲ. ಯುವಜನತೆಗೆ ಅಪಾರ ಉದ್ಯೋಗಾವಕಾಶ ಸೃಷ್ಟಿಸಿ, ನಮ್ಮ ಅನ್ನದಾತರಿಗೆ ಗೌರವಯುತ ಜೀವನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಸಹಕಾರವಿರಲಿ ಎಂದು ರೈತರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಪಾದಯಾತ್ರೆಯ ಮಾಡಲು ದಳಕ್ಕೆ ಹಕ್ಕು ಇದೆ: ಸಿಎಂ

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಸತ್ಯ ಮುಚ್ಚಿಡಲು ಯಾರಿಂದಲೂ ಸಾಧ್ಯವಿಲ್ಲ. ಅಧಿವೇಶನದಲ್ಲಿ ಬಂದು ಚರ್ಚೆ ಮಾಡಲಿ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ, ಪಾದಯಾತ್ರೆ ಮಾಡುವ ಹಕ್ಕಿದೆ. ಅವರು ಏನು ಬೇಕಾದರೂ ಮಾಡಲಿ. ಅಧಿವೇಶನದಲ್ಲಿ ಬಂದು ಮಾತನಾಡಲಿ. ಎಲ್ಲೆಲ್ಲಿ ದೂರು ನೀಡುತ್ತಾರೋ ನೀಡಲಿ, ನಾವು ಯಾರಿಗೂ ಬಲವಂತ ಮಾಡುತ್ತಿಲ್ಲ. ಯಾವ ಸಂದರ್ಭದಲ್ಲಿ ಯಾವ ಉತ್ತರ ಕೊಡಬೇಕೋ ಕೊಡುತ್ತೇವೆ ಎಂದು ತಿಳಿಸಿದರು.