* ಬೆಲ್ಲದ್‌ಗೆ ಕರೆ ಮಾಡಿದ್ದು ಯುವರಾಜ್‌ ಅಲ್ಲ, ಆಪ್ತ!* ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಮಹತ್ವದ ತಿರುವು* ತನಿಖೆ ಕೈಬಿಡಲು ಶೀಘ್ರ ಬಿಜೆಪಿ ಶಾಸಕ ಮನವಿ?* ಹೈದರಾಬಾದ್‌ ಮೂಲದ ಜ್ಯೋತಿಷಿಯಿಂದ ಕರೆ* ಪೊಲೀಸ್‌ ತನಿಖೆಯಲ್ಲಿ ಪತ್ತೆ; ಕೇಸು ಮುಕ್ತಾಯ?

ಬೆಂಗಳೂರು(ಜೂ.23): ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಆಡಳಿತಾರೂಢ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್‌ ಫೋನ್‌ ಕದ್ದಾಲಿಕೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಬೆಲ್ಲದ್‌ ಅವರಿಗೆ ಕರೆ ಮಾಡಿದ್ದು ವಂಚನೆ ಆರೋಪ ಹೊತ್ತು ಜೈಲಿನಲ್ಲಿರುವ ಯುವರಾಜ್‌ ಸ್ವಾಮಿ ಅಲ್ಲ. ಬದಲಿಗೆ ಖುದ್ದು ಶಾಸಕರ ಆಪ್ತ ಎಂಬುದು ಬೆಳಕಿಗೆ ಬಂದಿದೆ!

"

ಶಾಸಕರು ಶಂಕೆ ವ್ಯಕ್ತಪಡಿಸಿ ದೂರಿನೊಂದಿಗೆ ಸಲ್ಲಿಸಿದ್ದ ಮೊಬೈಲ್‌ ನಂಬರ್‌ನಿಂದ ಕರೆ ಮಾಡಿರುವುದು ಅವರ ಆಪ್ತ ಎಂಬ ಮಾಹಿತಿ ಕಬ್ಬನ್‌ಪಾರ್ಕ್ ಉಪ ವಿಭಾಗದ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಬೆಲ್ಲದ್‌ ಅವರು ತಮ್ಮ ಫೋನ್‌ ಕದ್ದಾಲಿಕೆ ಪ್ರಕರಣದ ತನಿಖೆ ಕೈಬಿಡುವಂತೆ ಪೊಲೀಸರಿಗೆ ಅಧಿಕೃತವಾಗಿ ಮನವಿ ಮಾಡುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕರೆ ಮಾಡಿದ್ದು ತಮ್ಮ ಆಪ್ತ ಎಂಬ ಮಾಹಿತಿ ಲಭ್ಯವಾದ ಕೂಡಲೇ ಎಚ್ಚೆತ್ತ ಶಾಸಕರು, ತಮ್ಮ ಆಪ್ತನಿಗೆ ತನಿಖೆ ನೆಪದಲ್ಲಿ ತೊಂದರೆ ಕೊಡಬೇಡಿ ಎಂದು ಈಗಾಗಲೇ ಪೊಲೀಸರಿಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ ಎಂದೂ ಗೊತ್ತಾಗಿದೆ.

ತಮಗೆ ಜೂ.2ರಂದು ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿತ್ತು ಎಂದು ಹೇಳಿ ಒಂದು ಮೊಬೈಲ್‌ ಸಂಖ್ಯೆಯನ್ನು ಶಾಸಕ ಅರವಿಂದ್‌ ಬೆಲ್ಲದ್‌ ನೀಡಿದ್ದರು. ಈ ಮೊಬೈಲ್‌ ಸಂಖ್ಯೆಯನ್ನು ಪರಿಶೀಲಿಸಿದಾಗ ಹೈದರಾಬಾದ್‌ ಮೂಲದ ಜ್ಯೋತಿಷ್ಯ ಹೇಳುವ ವ್ಯಕ್ತಿ ಎಂಬುದು ಗೊತ್ತಾಯಿತು. ಈ ಮಾಹಿತಿ ಮೇರೆಗೆ ಹೈದರಾಬಾದ್‌ಗೆ ತೆರಳಿ ಆತನನ್ನು ವಿಚಾರಣೆ ನಡೆಸಿದಾಗ ಆತ ಶಾಸಕರ ಆಪ್ತ ಸ್ನೇಹಿತ ಎಂಬ ಸಂಗತಿ ತಿಳಿಯಿತು ಎಂದು ತಿಳಿದು ಬಂದಿದೆ.

ಇನ್ನು ವಂಚನೆ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಯುವರಾಜ್‌ನನ್ನು ಸಹ ಫೋನ್‌ ಕದ್ದಾಲಿಕೆ ಸಂಬಂಧ ಪ್ರಶ್ನಿಸಲಾಯಿತು. ಆದರೆ ಆತ ತಾನು ಶಾಸಕರಿಗೆ ಕರೆ ಮಾಡಿಲ್ಲ. ನನಗೆ ಅವರ ಪರಿಚಯವಿಲ್ಲ ಎಂದಿದ್ದಾನೆ. ಇದುವರೆಗೆ ತನಿಖೆಯಲ್ಲಿ ಶಾಸಕರಿಗೆ ಯುವರಾಜ್‌ ಕರೆ ಮಾಡಿರುವುದು ಖಚಿತವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕರಣದಲ್ಲಿ ಶಾಸಕರ ಪರಿಚಿತ ವ್ಯಕ್ತಿ ವಿಚಾರಣೆ ಬಳಿಕ ಅರವಿಂದ್‌ ಬೆಲ್ಲದ್‌ ಅವರೇ ತಮ್ಮ ಗೆಳೆಯನಿಗೆ ಯಾವುದೇ ರೀತಿ ತೊಂದರೆ ಕೊಡಬೇಡಿ. ಆ ಬಗ್ಗೆ ತನಿಖೆಯ ಅಗತ್ಯವಿಲ್ಲ ಎಂದು ಕೋರಿದ್ದಾರೆ. ಹೀಗಾಗಿ ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಅವರು ನೀಡುವ ಸೂಚನೆ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.