ಮಂಡ್ಯದ ಕಾಳಿಕಾಂಭ ಮತ್ತು ಬಿಸಿಲು ಮಾರಮ್ಮ ದೇವಸ್ಥಾನಗಳಲ್ಲಿ ಭೀಮನ ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆಗಳು ಜರುಗಿದವು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ತಡೆ ಒಡೆದರು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪತ್ನಿಯೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಂಡ್ಯ,(ಜುಲೈ.24): ಇಂದು ಭೀಮನ ಅಮವಾಸ್ಯೆಯ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಪ್ರಸಿದ್ಧ ಶಕ್ತಿ ದೇಗುಲಗಳಾದ ಕಾಳಿಕಾಂಭ ದೇವಸ್ಥಾನ ಮತ್ತು ಬಿಸಿಲು ಮಾರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಜರುಗಿದವು. ಮಧ್ಯರಾತ್ರಿಯಿಂದಲೇ ಸಾವಿರಾರು ಭಕ್ತರು ದೇಗುಲಕ್ಕೆ ಹರಿದು ಬಂದು, ವಿಶೇಷ ಅಲಂಕಾರಗೊಂಡ ದೇವಿಯ ದರ್ಶನ ಪಡೆದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಭಕ್ತರು, ದೋಷ ನಿವಾರಣೆಗಾಗಿ ತಡೆ ಒಡೆಯುವ ಕೈಂಕರ್ಯದಲ್ಲಿ ಭಾಗವಹಿಸಿದರು.
ದೇವಾಲಯದ ಆವರಣದಲ್ಲಿ ನೂಕುನುಗ್ಗಲು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿತ್ತು. ಸ್ಥಳೀಯರ ಜೊತೆಗೆ ದೂರದ ಊರುಗಳಿಂದ ಆಗಮಿಸಿದ ಭಕ್ತರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಪತ್ನಿಯೊಂದಿಗೆ ಮಂಡ್ಯ ಎಸ್ಪಿ ವಿಶೇಷ ಪೂಜೆ:
ಭೀಮನ ಅಮವಾಸ್ಯೆ ಹಿನ್ನೆಲೆ ಆರತಿ ಉಕ್ಕಡಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಪತ್ನಿಯೊಂದಿಗೆ ಭೇಟಿ ನೀಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ಬಳಿಕ ತಡೆ ಒಡೆಸಿದ ಎಸ್ಪಿ, ಭೀಮನ ಅಮವಾಸ್ಯೆ ದಿನ ಪತ್ನಿಯೊಂದಿಗೆ ಪೂಜೆ ಸಲ್ಲಿಸಿದರೆ ಗಂಡನ ಆಯುಷ್ಯ ವೃದ್ಧಿಯಾಗುವ ಪ್ರತೀತಿ ಇದೆ. ಈ ದಿನದ ವಿಶೇಷತೆಯಿಂದಾಗಿ ದೇಗುಲಗಳು ಭಕ್ತರಿಂದ ಕಿಕ್ಕಿರಿದು ತುಂಬಿದ್ದವು.
