* ಇಂದು ಭಾರತ್‌ ಬಂದ್‌: ಹೈವೇ ತಡೆಗೆ ರೈತರ ಪ್ಲಾನ್‌* ಬೆಂಗಳೂರು ಸೇರಿದಂತೆ ವಿವಿಧೆಡೆ ರಸ್ತೆ ತಡೆಯಲು ಯೋಜನೆ* ಅನೇಕ ಸಂಸ್ಥೆಗಳ ನೈತಿಕ ಬೆಂಬಲ: ಬಂದ್‌ ಆಗೋದು ಡೌಟು

ಬೆಂಗಳೂರು(ಸೆ.27): ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು(Farmers Union) ಸೋಮವಾರ ಕರೆ ನೀಡಿರುವ ಭಾರತ್‌ ಬಂದ್‌ಗೆ(Bharat Bandh) ಬಹುತೇಕ ಸಂಘ ಸಂಸ್ಥೆಗಳು ನೈತಿಕ ಬೆಂಬಲ ಮಾತ್ರ ವ್ಯಕ್ತಪಡಿಸಿವೆ. ಆದರೆ, ಬಂದ್‌ ಯಶಸ್ವಿಗೊಳಿಸಲು ಪಟ್ಟು ಹಿಡಿದಿರುವ ರೈತ ಸಂಘಟನೆಗಳು ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಹೆದ್ದಾರಿ ಬಂದ್‌ ಮಾಡುವ ನಿರ್ಧಾರ ಕೈಗೊಂಡಿವೆ.

ಈ ಭಾರತ್‌ ಬಂದ್‌ಗೆ(Bharat Bandh) ಬಹುತೇಕ ಸಂಘಟನೆಗಳು ಕೇವಲ ನೈತಿಕ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿ, ಬಸ್‌, ರೈಲು ಹಾಗೂ ಮೆಟ್ರೋ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಓಲಾ- ಊಬರ್‌ ಸೇವೆಗಳು, ಲಾರಿ ಸೇರಿದಂತೆ ಸರಕು ಸಾಗಣೆ ವಾಹನ ಸಂಚಾರವೂ ಇರಲಿದೆ. ಹಾಗಾಗಿ, ಅಗತ್ಯ ವಸ್ತುಗಳ ಸರಬರಾಜಿಗೂ ತೊಂದರೆ ಆಗುವುದಿಲ್ಲ.

ಖಾಸಗಿ, ಸರ್ಕಾರಿ ಕಚೇರಿ, ಕಾರ್ಖಾನೆ, ಆಸ್ಪತ್ರೆ, ಚಿತ್ರಮಂದಿರ, ಮಾಲ್‌, ಶಾಲಾ-ಕಾಲೇಜು, ಬೀದಿಬದಿ ವ್ಯಾಪಾರ, ಹೋಟೆಲ್‌, ರೆಸ್ಟೋರೆಂಟ್‌, ಎಪಿಎಂಸಿ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಆದರೆ, ರೈತ ಮುಖಂಡರು ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಲು ಮುಂದಾಗಿರುವುದರಿಂದ ಪ್ರಯಾಣಿಕರ ವಾಹನ, ಸರಕು ಸಾಗಾಟದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಸಂಭವವಿದೆ.

ರೈತ ಸಂಘಟನೆಗಳು ಬಂದ್‌ ಯಶಗೊಳಿಸಲು ಮೈಸೂರು, ಚಾಮರಾಜನಗರ, ಶಿವಮೊಗ್ಗ, ದೊಡ್ಡಬಳ್ಳಾಪುರ, ಮಾಗಡಿ ಸಂಪರ್ಕಿಸುವ ಪ್ರಮುಖ ರಾಜ್ಯ ಹೆದ್ದಾರಿಗಳನ್ನು ಬಂದ್‌ ಮಾಡಲು ನಿರ್ಧರಿಸಿವೆ. ರಾಷ್ಟ್ರೀಯ ಹೆದ್ದಾರಿಗಳಾದ ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್‌, ಬೆಂಗಳೂರು-ಚೆನ್ನೈ ರಸ್ತೆಗಳಲ್ಲೂ ತಡೆ ಮಾಡಲು ಮುಂದಾಗಿವೆ. ಮೈಸೂರು ರಸ್ತೆಯಲ್ಲಿ ಬಿಡದಿ ಮತ್ತು ಮಂಡ್ಯ ಬಳಿ ರೈತ ಮುಖಂಡರು ರಸ್ತೆ ತಡೆ ನಡೆಸಲಿದ್ದಾರೆ. ರಾಜಧಾನಿಯ ಸುತ್ತ ಮುತ್ತಲ ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಬೆಂಗಳೂರಿಗೆ ಆಗಮಿಸಿ ಹೋರಾಟ ನಡೆಸುವ ಯೋಜನೆಯನ್ನು ಹೊಂದಿದ್ದಾರೆ.

ಬಂಧಿಸಿದರೆ ಪ್ರತಿಭಟನೆ ತೀವ್ರ: ಕೋಡಿಹಳ್ಳಿ

ಸರ್ಕಾರ ಹೋರಾಟಗಾರರನ್ನು ಬಂಧಿಸುವ ಕೆಲಸ ಮಾಡಿದರೆ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಒತ್ತಾಯಪೂರ್ವಕವಾಗಿ ನಾವು ಬಂದ್‌ ಮಾಡಿಸುತ್ತಿಲ್ಲ. ಸಾಕಷ್ಟುಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ನೈತಿಕ ಬೆಂಬಲ ನೀಡಿದ್ದೇವೆ ಎಂದು ಸಂಘಟನೆಗಳ ನಾಯಕರು ಸುಮ್ಮನಿರದೆ ಪ್ರತಿಭಟನೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ಎಷ್ಟುದಿನ ಈ ಹೋರಾಟ ಎಂದು ಹೇಳಲು ಬರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಜೊತೆ ಮಾತನಾಡಿದರೆ ಎಲ್ಲವೂ ಬಗೆಹರಿಯಲಿದೆ. ಆದರೆ ಉದ್ದೇಶಪೂರ್ವಕವಾಗಿ ಚರ್ಚೆ ನಡೆಸುತ್ತಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌, ಜೆಡಿಎಸ್‌ ಬೆಂಬಲ

ಬಂದ್‌ಗೆ ಕಾಂಗ್ರೆಸ್‌, ಜೆಡಿಎಸ್‌ ಬೆಂಬಲ ವ್ಯಕ್ತಪಡಿಸಿವೆ. ರೈತರು ನಡೆಸುತ್ತಿರುವ ಹೋರಾಟವನ್ನು ಒಬ್ಬ ರೈತನ ಮಗನಾಗಿ ಬೆಂಬಲಿಸುತ್ತೇನೆ. ಪಕ್ಷದ ನೈತಿಕ ಬೆಂಬಲವೂ ಇದೆ. ಹೋರಾಟ ಶಾಂತಿಯುತವಾಗಿರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದರೆ, ಜೆಡಿಎಸ್‌ ನಾಯಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು, ಜನಪರ, ರೈತ ಮತ್ತು ಶ್ರಮಿಕರ ಪರವಾದ ಯಾವುದೇ ಪ್ರತಿಭಟನೆ ಮತ್ತು ಬಂದ್‌ಗೆ ಜೆಡಿಎಸ್‌ ಬೆಂಬಲ ಸದಾ ಇರುತ್ತದೆ ಎಂದು ಹೇಳಿದ್ದಾರೆ.