Green Crackers: ಎಚ್ಚರ, ಹಸಿರು ಪಟಾಕಿಗಳೂ ಸುರಕ್ಷಿತವಲ್ಲ!

ಹಸಿರು ಪಟಾಕಿಗಳು ಸಂಪೂರ್ಣ ರಾಸಾಯನಿಕ ಮುಕ್ತವಲ್ಲ. ಮಾಲಿನ್ಯ ಮಾತ್ರ ತುಸು ತಗ್ಗಿಸಲಿದ್ದು, ಬೆಂಕಿ ಕಿಡಿ ಮತ್ತು ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಗಳಂತೆಯೇ ಹೆಚ್ಚಿರುತ್ತದೆ. ಹೀಗಾಗಿ, ಹಸಿರು ಪಟಾಕಿ ಸಿಡಿಸುವುದರಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಎಚ್ಚರಿಕೆ ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. 

Beware green crackers are not safe either gvd

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು (ಅ.21): ಹಸಿರು ಪಟಾಕಿಗಳು ಸಂಪೂರ್ಣ ರಾಸಾಯನಿಕ ಮುಕ್ತವಲ್ಲ. ಮಾಲಿನ್ಯ ಮಾತ್ರ ತುಸು ತಗ್ಗಿಸಲಿದ್ದು, ಬೆಂಕಿ ಕಿಡಿ ಮತ್ತು ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಗಳಂತೆಯೇ ಹೆಚ್ಚಿರುತ್ತದೆ. ಹೀಗಾಗಿ, ಹಸಿರು ಪಟಾಕಿ ಸಿಡಿಸುವುದರಿಂದಲೂ ಕಣ್ಣಿಗೆ ಹಾನಿಯಾಗುವ ಸಾಧ್ಯತೆಗಳಿದ್ದು, ಎಚ್ಚರಿಕೆ ಅತ್ಯಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕಳೆದ ಮೂರು ವರ್ಷಗಳಿಂದ ಕಡ್ಡಾಯ ಹಸಿರು ಪಟಾಕಿ ಬಳಕೆ ಕ್ರಮ ಜಾರಿಯಲ್ಲಿದ್ದರೂ, ರಾಜಧಾನಿ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಮಂದಿಗೆ ಪಟಾಕಿಯಿಂದ ಹಾನಿಯಾಗಿದೆ. 

10 ಮಂದಿಗೆ ದೃಷ್ಟಿಹಾನಿಯಾಗಿದೆ. ಮುಖ್ಯವಾಗಿ ಹಸಿರು ಪಟಾಕಿಗಳ ಕುರಿತು ಸಾರ್ವಜನಿಕರಲ್ಲಿರುವ ಮಾಹಿತಿ ಕೊರತೆಯೇ ಪಟಾಕಿ ಹೆಚ್ಚಿನ ಹಾನಿಗೆ ಕಾರಣ ಎನ್ನುತ್ತಾರೆ ವೈದ್ಯರು. 2018ರಲ್ಲಿ ಸುಪ್ರೀಂಕೋರ್ಟ್‌ ‘ಸಾಮಾನ್ಯ ಪಟಾಕಿ ನಿಷೇಧಿಸಿ, ಹಸಿರು ಪಟಾಕಿ ಬಳಸುವಂತೆ’ ಸೂಚನೆ ನೀಡಿತ್ತು. ಈ ಹಿನ್ನೆಲೆ 2019ರಿಂದ ರಾಜ್ಯ ಸರ್ಕಾರಗಳು ಸಾಮಾನ್ಯ ಪಟಾಕಿ ನಿಷೇಧಿಸಿ, ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುವಂತೆ ಕಾನೂನು ಜಾರಿ ಮಾಡಿತು. 

Firecrackers: ನಿಷೇಧದ ನಡುವೆ ಬೆಂಗಳೂರಿನಲ್ಲಿ ಹಳೆ ಪಟಾಕಿ ಮಾರಾಟ?

ಆದರೆ, ಹಸಿರು ಪಟಾಕಿ ತಯಾರಿಯಲ್ಲಿಯೂ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಮ್‌ ನೈಟ್ರೇಟ್‌ ಮತ್ತು ಕಾರ್ಬನ್‌ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ, ಸಾಮಾನ್ಯ ಪಟಾಕಿಗಿಂತ ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಇದರಿಂದಾಗಿ ಪಟಾಕಿಗಳಿಂದ ಮಾಲಿನ್ಯ ಶೇ.30ರಷ್ಟು, ಶಬ್ದ 160 ಡೆಸಿಬಲ್‌ಗಿಂತ 125 ಡೆಸಿಬಲ್‌ಗೆ ಕಡಿಮೆಯಾಗುತ್ತದೆ. ಉಳಿದಂತೆ ಸ್ಫೋಟ, ಶಾಖ, ಬೆಳಕಿನ ಉತ್ಪತ್ತಿ, ತ್ಯಾಜ್ಯ ಪ್ರಮಾಣ ಎಲ್ಲಾ ಅಂಶಗಳು ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ.

ಜನರಲ್ಲಿ ತಪ್ಪು ಕಲ್ಪನೆ: ಹಸಿರು ಪಟಾಕಿಯಲ್ಲಿ ರಾಸಾಯನಿಕ ಅಂಶ ಇರುವುದಿಲ್ಲ, ಕಣ್ಣು, ಮೈಕೈ ಭಾಗಕ್ಕೆ ಹಾನಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆಗಳಿವೆ. ಜತೆಗೆ ಮಾರುಕಟ್ಟೆಯಲ್ಲಿ ಹಸಿರು ಪಟಾಕಿ ಹೆಸರಲ್ಲಿ ಸಾಮಾನ್ಯ ಪಟಾಕಿಯೇ ಹೆಚ್ಚು ಮಾರಾಟವಾಗುತ್ತಿದೆ. ಇದರಿಂದ ಹಾನಿ ಪಟಾಕಿ ಹಾನಿಗಳು ಉಂಟಾಗುತ್ತಿವೆ. ಇತ್ತ ಹಸಿರು ಪಟಾಕಿ ನಿಯಮ ಜಾಗೃತಿ ಮೂಡಿಸಿ ಯಶಸ್ವಿಯಾಗಿ ಜಾರಿಗೊಳಿಸಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಆಡಳಿತ ಸಂಸ್ಥೆಗಳು, ಪೊಲೀಸ್‌ ಇಲಾಖೆಗೆ ನಿರ್ಲಕ್ಷ್ಯ ವಹಿಸಿದ್ದು, ಪಟಾಕಿ ಮುಂದುವರೆದಿವೆ ಎನ್ನುತ್ತಾರೆ ಪರಿಸರ ತಜ್ಞರು.

14 ವರ್ಷದೊಳಗಿನ ಮಕ್ಕಳಲ್ಲೇ ಹೆಚ್ಚು ಹಾನಿ: ಹಿಂದಿನ ವರ್ಷಗಳಲ್ಲಿ ಪಟಾಕಿಯಿಂದ ಹಾನಿಗೊಳಗಾದವರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟಾರೆ ಹಾನಿಯಾದವರಲ್ಲಿ ಶೇ.40 ರಷ್ಟು ಮಕ್ಕಳಿದ್ದಾರೆ. ಅದರಲ್ಲೂ 10ರಿಂದ 14 ವರ್ಷದ ಮಕ್ಕಳು ಹೆಚ್ಚಿದ್ದಾರೆ. ಪ್ರತಿ ವರ್ಷದಲ್ಲಿ 40 ರಿಂದ 50 ಮಂದಿ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಹಾನಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 20ಕ್ಕೂ ಅಧಿಕ ಮಕ್ಕಳಿರುತ್ತಾರೆ ಎನ್ನುತ್ತಾರೆ ಆಸ್ಪತ್ರೆ ವೈದ್ಯರು.

ಶೇ.40 ತನ್ನದಲ್ಲದ ತಪ್ಪಿನಿಂದ ಅಪಾಯ: ಆಸ್ಪತ್ರೆಗಳ ಮಾಹಿತಿ ಪ್ರಕಾರ ಪಟಾಕಿಯಿಂದ ಹಾನಿಗೊಳಗಾದರವ ಪೈಕಿ ಶೇ. 40ರಷ್ಟುಮಂದಿ ಬೇರೆಯವರು ಹಚ್ಚಿದ ಪಟಾಕಿಯಿಂದ ಹಾನಿಗೊಳಗಾಗುತ್ತಿದ್ದಾರೆ. ರಸ್ತೆಯಲ್ಲಿ ಹಾದುಹೋಗುವಾಗ ಯಾರೋ ಹಚ್ಚಿದ ಪಟಾಕಿ ಸಿಡಿದು, ಬೈಕಲ್ಲಿ ಹೋಗುವಾಗ ಒಮ್ಮೆಗೆ ರಸ್ತೆಯಲ್ಲಿ ಪಟಾಕಿ ಸಿಡಿದು, ಮನೆ ಮುಂದೆ ನಿಂತಾಗ ಯಾರೋ ಹಚ್ಚಿದ ರಾಕೆಟ್‌ ಒಮ್ಮೆಗೆ ಬಂದು ಕಣ್ಣಿಗೆ ಬಿದ್ದು ಹಾನಿಗೊಳಗಾಗುತ್ತಿರುವ ಘಟನೆಗಳು ಸಾಮಾನ್ಯವಾಗಿ ನಡೆಯುತ್ತವೆ. ಹೀಗಾಗಿ, ತಮ್ಮದಲ್ಲದ ತಪ್ಪಿಗೆ ಇಂದಿಗೂ ಹಲವರು ನೋವನ್ನು ಅನುಭವಿಸುತ್ತಿದ್ದಾರೆ.

ಹಸಿರು ಪಟಾಕಿಗಳು ಮಾಲಿನ್ಯ ತುಸು ತಗ್ಗಿಸಬಹುದೇ ಹೊರತು ಕಣ್ಣಿನ ಹಾನಿ ಪ್ರಮಾಣವಲ್ಲ. ಹಸಿರು ಪಟಾಕಿಗಳು ಸಿಡಿದಾಗ ಬರುವ ಬೆಂಕಿ ಕಿಡಿ, ಉಷ್ಣ ಪ್ರಮಾಣ ಸಾಮಾನ್ಯ ಪಟಾಕಿಯಂತೆಯೇ ಇರುತ್ತದೆ. ಸಿಡಿದಾಗ ರಾಸಾಯನಿಕಗಳು ಕಣ್ಣಿಗೆ ಸೇರಿದರೆ ದೃಷ್ಟಿಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹೀಗಾಗಿ, ಹಸಿರು ಪಟಾಕಿಯಿಂದ ಯಾವುದೇ ತರಹದ ಹಾನಿಯಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಬೇಡ.
-ಡಾ.ಭುಜಂಗ ಶೆಟ್ಟಿ, ನೇತ್ರ ತಜ್ಞ, ಅಧ್ಯಕ್ಷ ನಾರಾಯಣ ನೇತ್ರಾಲಯ

Firecrackers: ಉತ್ಪಾದನೆ ಕುಸಿತ: ಪಟಾಕಿ ಇನ್ನೂ ದುಬಾರಿ?

ಪಟಾಕಿಯ ರಭಸ, ಶಾಖ ಹಾಗೂ ರಾಸಾಯನಿಕದಿಂದ ಹಾನಿಯಾಗುತ್ತದೆ. ಹಸಿರು ಪಟಾಕಿಯಿಂದಲೂ ಕಣ್ಣು, ಚರ್ಮಕ್ಕೆ ಹಾನಿ ಸಾಧ್ಯತೆಗಳಿವೆ. ಕಡ್ಡಾಯವಾಗಿ ಮುನ್ನೆಚ್ಚರಿಕೆ ಕ್ರಮಪಾಲಿಸಬೇಕು. ಕಳೆದ ಮೂರು ವರ್ಷದಿಂದ ಮಿಂಟೋದಲ್ಲಿ ವಾರ್ಷಿಕ 40ಕ್ಕೂ ಅಧಿಕ ಮಂದಿ ಪಟಾಕಿ ಹಾನಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
-ಸುಜಾಥಾ ರಾಥೋಡ್‌, ನಿರ್ದೇಶಕಿ, ಮಿಂಟೋ ಆಸ್ಪತ್ರೆ

Latest Videos
Follow Us:
Download App:
  • android
  • ios