Firecrackers: ನಿಷೇಧದ ನಡುವೆ ಬೆಂಗಳೂರಿನಲ್ಲಿ ಹಳೆ ಪಟಾಕಿ ಮಾರಾಟ?

ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿದ್ದರೂ, ಪರಿಸರಕ್ಕೆ ಮಾರಕವಾಗಿರುವ ಮಾಮೂಲಿ ಪಟಾಕಿಗಳು ರಿಯಾಯಿತಿ, ಕಡಿಮೆ ದರದ ಮೂಲಕ ಈ ಬಾರಿಯ ದೀಪಾವಳಿಯಲ್ಲಿ ಮಾರಾಟವಾಗುವ ಸಂಶಯವನ್ನು ಪಟಾಕಿ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ. 

Old Firecrackers sold in Bengaluru amid ban gvd

ಮಯೂರ ಹೆಗಡೆ

ಬೆಂಗಳೂರು (ಅ.20): ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶವಿದ್ದರೂ, ಪರಿಸರಕ್ಕೆ ಮಾರಕವಾಗಿರುವ ಮಾಮೂಲಿ ಪಟಾಕಿಗಳು ರಿಯಾಯಿತಿ, ಕಡಿಮೆ ದರದ ಮೂಲಕ ಈ ಬಾರಿಯ ದೀಪಾವಳಿಯಲ್ಲಿ ಮಾರಾಟವಾಗುವ ಸಂಶಯವನ್ನು ಪಟಾಕಿ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಹಸಿರು ಪಟಾಕಿಗೆ ಮಾತ್ರ ಅನುಮತಿ ನೀಡಿರುವ ಸರ್ಕಾರ ಅನಧಿಕೃತವಾಗಿ ತಯಾರಿಸಿರುವ ಮಾಮೂಲಿ ಪಟಾಕಿ ಮಾರಾಟವಾಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಆ ಮೂಲಕ ನ್ಯಾಯಯುತ ವ್ಯಾಪಾರಿಗಳ ಹಿತ ಕಾಯಬೇಕು ಎಂದು ಒತ್ತಾಯಿಸಿದ್ದಾರೆ.

ಬೇರಿಯಂ ನಿಷೇಧಿಸಲ್ಪಟ್ಟ ಬಳಿಕ ಶಿವಕಾಶಿಯಲ್ಲಿನ ಸುಮಾರು 890 ಘಟಕಗಳ ಪೈಕಿ ಹಲವು ಘಟಕಗಳು ಆರಂಭ ಆಗಿಲ್ಲ. ಆದರೆ, ಕೆಲವು ಘಟಕಗಳಿಂದ ಸಾಮಾನ್ಯ ಪಟಾಕಿಗಳ ಉತ್ಪಾದನೆ ಆಗಿರುವ ಸಂಶಯವೂ ಇದೆ. ನಗರದ ಹೊಸೂರು ರಸ್ತೆಯ ಮಳಿಗೆಗಳು ಸೇರಿ ಇತರೆ ಭಾಗದ ಹಲವು ಮಳಿಗೆಗಳಿಗೆ ಹಿಂದಿನಂತೆ ಸಾಮಾನ್ಯ ಪಟಾಕಿ ಪೂರೈಕೆ ಆಗಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದು ನಗರದ ಪಟಾಕಿ ಡೀಲರ್‌ಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ದೇಗುಲಗಳಲ್ಲಿ ದೀಪಾವಳಿ ದಿನ ಸರ್ಕಾರಿ ಗೋಪೂಜೆ!

ಈ ಹಿಂದೆ ಬೊಮ್ಮನಹಳ್ಳಿ, ಹುಳಿಮಾವು, ಜಯನಗರ, ಜೆ.ಪಿ.ನಗರ ಸೇರಿದಂತೆ ಹಲವೆಡೆ ಹಸಿರು ಪಟಾಕಿ ನಿಯಮ ಉಲ್ಲಂಘನೆಯಾಗಿತ್ತು. ಸಾಮಾನ್ಯ ಪಟಾಕಿ ಬಳಕೆಯಿಂದ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಕಳೆದ ವರ್ಷ ಕೋವಿಡ್‌ ಕಾರಣದಿಂದ ಕಳೆದ ವರ್ಷ ಹಬ್ಬ ಸಪ್ಪೆಯಾಗಿತ್ತು, ಹೆಚ್ಚಿನ ಪಟಾಕಿ ಮಾರಾಟವಾಗಿರಲಿಲ್ಲ. ಹೀಗಾಗಿ ಈ ಬಾರಿ ಹಸಿರು ಪಟಾಕಿಗಳ ನಡುವೆ ಸಾಮಾನ್ಯ ಪಟಾಕಿ ಮಾರಾಟವಾಗುವ ಸಂಭವವಿದೆ ಎಂದು ಅವರು ಹೇಳುತ್ತಾರೆ.

ಶೇ.50 ರಿಯಾಯಿತಿ, ಕಡಿಮೆ ದರ, ಇತ್ಯಾದಿಗಳ ಮೂಲಕ ಮಾರುಕಟ್ಟೆಗೆ ಮಾಮೂಲಿ ಪಟಾಕಿ ಪ್ರವೇಶಿಸಬಹುದು. ಎಂಆರ್‌ಪಿ ಸ್ಟಿಕ್ಕರ್‌ ಬದಲಿಸಿ, ಜಿಎಸ್‌ಟಿ, ಎಸ್‌ಜಿಎಸ್‌ಟಿ ರಸೀದಿ ಇಲ್ಲದೆ, ಅಥವಾ ನಕಲಿ ರಸೀದಿ ಮೂಲಕ ಚಿಲ್ಲರೆ ವ್ಯಾಪಾರಸ್ಥರು ಪಟಾಕಿ ಖರೀದಿ ಮಾಡಬಾರದು ಎಂದು ಚಕ್ರವರ್ತಿ ಕ್ರ್ಯಾಕರ್ಸ್‌ನ ಜೆ.ಮದನ್‌ ಹೇಳುತ್ತಾರೆ.

ಪಟಾಕಿ ಮಾತ್ರ ಖರೀದಿಸಿ: ಹಸಿರು ಪಟಾಕಿ ಮೇಲೆ ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ (ನೀರಿ), ಸಿಎಸ್‌ಐಆರ್‌ ಲೋಗೊ ಇದ್ದೇ ಇರುತ್ತದೆ. ಸ್ಟ್ಯಾಂಡರ್ಡ್‌ ಕ್ರ್ಯಾಕರ್ಸ್‌ ಇಂಡಿಯಾ, ಕಾಳೇಶ್ವರಿ ಫೈರ್‌ವರ್ಕ್ಸ್, ಸೋನಿ ಫೈರ್‌ವರ್ಕ್ಸ್, ಅಯ್ಯನ್‌ ಫೈರ್‌ವರ್ಕ್ಸ್ ಸೇರಿದಂತೆ ಕೆಲವು ಕಂಪನಿಗಳು ಮಾತ್ರ ನಂಬಲರ್ಹ ಹಸಿರು ಪಟಾಕಿ ಉತ್ಪಾದಿಸುತ್ತವೆ. ಇವನ್ನು ಹೊರತುಪಡಿಸಿ ಸಂಶಯಾಸ್ಪದ ಪಟಾಕಿ ಉತ್ಪನ್ನ ಖರೀದಿಸಬಾರದು ಎಂದು ಪಟಾಕಿ ವರ್ತಕರ ಸಂಘ ತಿಳಿಸಿದೆ.

ಮಾರುಕಟ್ಟೆಯಲ್ಲಿ ಸಾಮಾನ್ಯ ಪಟಾಕಿ ದಾಸ್ತಾನು ಇರುವುದನ್ನು ಅಲ್ಲಗಳೆದಿರುವ ‘ಸುವರ್ಣ ಕರ್ನಾಟಕ ಕ್ರ್ಯಾಕರ್ಸ್‌ ಅಸೋಸಿಯೇಶನ್‌’ ಖಜಾಂಚಿ ಮಂಜುನಾಥ ರೆಡ್ಡಿ, ಶೇ.99ರಷ್ಟುಹಳೆಯ ಪಟಾಕಿಗಳು ಈಗಾಗಲೆ ಖರ್ಚಾಗಿವೆ. ಮಳಿಗೆಗಳನ್ನು ಜಪ್ತಿ ಮಾಡಿರುವುದು, ತಪಾಸಣೆ ಕಾರಣದಿಂದ ಹೆಚ್ಚಿನ ವರ್ತಕರು ಸಾಮಾನ್ಯ ಪಟಾಕಿ ಇಡುತ್ತಿಲ್ಲ. ಎಲ್ಲೋ ಒಂದೆರಡು ಕಡೆ ಇರಬಹುದು. ಸಂಘದಿಂದ ಹಸಿರು ಪಟಾಕಿ ಮಾತ್ರ ಮಾರುವಂತೆ ವರ್ತಕರಿಗೆ ತಿಳಿವಳಿಕೆ ಮೂಡಿಸುತ್ತಿದ್ದೇವೆ ಎಂದರು.

ಎಚ್ಚರಿಕೆ ಅಗತ್ಯ: ಬೇರಿಯಂ ನೈಟ್ರೇಟ್‌ ಸೇರಿದಂತೆ ವಿವಿಧ ರಾಸಾಯನಿಕ ಅಂಶವಿರುವ ಸಾಮಾನ್ಯ ಪಟಾಕಿ ಗಾತ್ರದಲ್ಲಿ ದೊಡ್ಡದಿರುತ್ತದೆ. ಹಸಿರು ಪಟಾಕಿಗಿಂತ ಶೇ.30ರಷ್ಟುಹೆಚ್ಚು ಶಬ್ದ ಮಾಡುತ್ತದೆ. ಹೆಚ್ಚಿನ ಹೊಗೆ ಹೊರಸೂಸುತ್ತದೆ. ಆದರೆ ಬೆಳಕು ಅಷ್ಟೇ ಪ್ರಮಾಣದಲ್ಲಿರುತ್ತದೆ. ಪಟಾಕಿ ಖರೀದಿಸುವ ಮುನ್ನ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಿದೆ.

ಕಡಿಮೆ ದರಕ್ಕೆ ಸಾಮಾನ್ಯ ಪಟಾಕಿ ಮಾರಾಟವಾದರೆ ಪರವಾನಗಿ ಪಡೆದು ದುಬಾರಿ ದರದಲ್ಲಿನ ಹಸಿರು ಪಟಾಕಿ ಮಾರುವ ವರ್ತಕರಿಗೆ ಅನ್ಯಾಯವಾಗಲಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಕ್ರಮ ವಹಿಸಬೇಕು.
-ಚಕ್ರವರ್ತಿ ಕ್ರ್ಯಾಕರ್ಸ್‌, ಸಣ್ಣತಮ್ಮನಹಳ್ಳಿ

Firecrackers: ಉತ್ಪಾದನೆ ಕುಸಿತ: ಪಟಾಕಿ ಇನ್ನೂ ದುಬಾರಿ

ಪಟಾಕಿ ಮಳಿಗೆ ಆರಂಭವಾದ ಬಳಿಕ ಎಲ್ಲೆಡೆ ತಪಾಸಣೆ ನಡೆಸುತ್ತೇವೆ. ಶಬ್ದ, ಹೊಗೆಯಲ್ಲಿ ವ್ಯತ್ಯಾಸ ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು.
-ಕೆ.ಎಸ್‌.ಅಶೋಕ ಉಪ ಪರಿಸರ ಅಧಿಕಾರಿ

ಕಡಿಮೆ ದರಕ್ಕೆ ಸಿಗುತ್ತೆಂದು ಬಡವರೇ ಹೆಚ್ಚಾಗಿ ಸಾಮಾನ್ಯ ಪಟಾಕಿ ಖರೀದಿಸುವ ಸಾಧ್ಯತೆ ಇದೆ. ಇಂಥ ಪಟಾಕಿ ಮಾರುವ ವರ್ತಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು.
-ಉಮೇಶಕುಮಾರ್‌, ಪರಿಸರವಾದಿ

Latest Videos
Follow Us:
Download App:
  • android
  • ios