Namma metro: ಬೊಮ್ಮಸಂದ್ರ-ಹೊಸೂರು ನಡುವೆ ಮೆಟ್ರೋಗೆ ಮರುಜೀವ!
ಕರ್ನಾಟಕ-ತಮಿಳುನಾಡು ಸಂಪರ್ಕ ಕಲ್ಪಿಸುವ ದಕ್ಷಿಣ ಭಾರತದ ಮೊಟ್ಟಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ಜಾರಿ ಸಂಬಂಧ ಚೆನ್ನೈ ಮೆಟ್ರೋ ರೈಲ್ವೆ ಲಿ. (ಸಿಎಂಆರ್‌ಎಲ್) ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನಕ್ಕೆ ಟೆಂಡರ್ ಕರೆದಿದೆ.
ಬೆಂಗಳೂರು (ಆ.3) : ಕರ್ನಾಟಕ-ತಮಿಳುನಾಡು ಸಂಪರ್ಕ ಕಲ್ಪಿಸುವ ದಕ್ಷಿಣ ಭಾರತದ ಮೊಟ್ಟಮೊದಲ ಅಂತಾರಾಜ್ಯ ಮೆಟ್ರೋ ಯೋಜನೆ ಜಾರಿ ಸಂಬಂಧ ಚೆನ್ನೈ ಮೆಟ್ರೋ ರೈಲ್ವೆ ಲಿ. (ಸಿಎಂಆರ್‌ಎಲ್) ಯೋಜನೆಯ ಕಾರ್ಯಸಾಧ್ಯತೆ ಅಧ್ಯಯನಕ್ಕೆ ಟೆಂಡರ್ ಕರೆದಿದೆ.
ಆರ್.ವಿ.ರಸ್ತೆ-ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಕಾರಿಡಾರ್ ವಿಸ್ತರಿತ ಮಾರ್ಗವಾಗಿ ಬೆಂಗಳೂರು ಹಾಗೂ ಹೊಸೂರು ನಡುವೆ ಸಂಪರ್ಕಿಸುವ ಮೆಟ್ರೋ ಯೋಜನೆ ಇದಾಗಿದ್ದು, ಸಿಎಂಆರ್‌ಎಲ್ ಆ.1ರಂದು ಟೆಂಡರ್ ಕರೆದಿದ್ದು, ಆ.31 ಟೆಂಡರ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಸೆ.1ರಂದು ಟೆಂಡರ್ ತೆರೆಯಲು ಉದ್ದೇಶಿಸಲಾಗಿದೆ.
ಬೆಂಗಳೂರು: ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಪ್ರಾಯೋಗಿಕ ಸಂಚಾರ ಶುರು
ಬೊಮ್ಮಸಂದ್ರದಿಂದ ಹೊಸೂರಿನವರೆಗೆ 11.7 ಕಿಲೋ ಮೀಟರ್ ರಾಜ್ಯದಲ್ಲಿ ಹಾಗೂ 8.8 ಕಿ.ಮೀ. ತಮಿಳುನಾಡಿನÜಲ್ಲಿ ಸೇರಿ ಒಟ್ಟಾರೆ 20.5 ಕಿ.ಮೀ. ಮೆಟ್ರೋ ಮಾರ್ಗ ಇದಾಗಿದೆ. ಇದರಿಂದ ಐಟಿ ಸಿಟಿ ಬೆಂಗಳೂರು ಹಾಗೂ ಅಶೋಕಾ ಲೈಲ್ಯಾಂಡ್, ಟಿವಿಎಸ್ ಮೋಟಾರ್ಸ್, ಟೈಟಾನ್ ಸೇರಿ ಸುಮಾರು ಎರಡು ಸಾವಿರ ಸಣ್ಣ, ಮಧ್ಯಮ ಕೈಗಾರಿಕೆಗಳಿರುವ ಪ್ರಮುಖ ಕೈಗಾರಿಕಾ ವಸಾಹತು ಹೊಸೂರಿಗೆ ಸಂಪರ್ಕ ಕಲ್ಪಿಸಲಿದೆ.
ಕಾರ್ಯ ಸಾಧ್ಯತೆ ಅಧ್ಯಯನದ ಪೂರ್ಣ ವೆಚ್ಚವನ್ನು ತಮಿಳುನಾಡು ಸರ್ಕಾರ ಭರಿಸುತ್ತಿದೆ. ಆದರೆ, ಮುಂದೆ ಪ್ರಸ್ತಾವಿತ ಯೋಜನೆಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸಹಯೋಗದಲ್ಲಿ ಕರ್ನಾಟಕ (ಬಿಎಂಆರ್‌ಸಿಎಲ್) ಹಾಗೂ ತಮಿಳುನಾಡು (ಸಿಎಂಆರ್‌ಎಲ್) ತಮ್ಮ ವ್ಯಾಪ್ತಿಯ ಮೆಟ್ರೋ ಕಾಮಗಾರಿಗೆ ವೆಚ್ಚದ ಹೊಣೆ ಹೊರುವ ಸಾಧ್ಯತೆಯಿದೆ.
‘ಕನ್ನಡಪ್ರಭ’ ಜೊತೆ ಮಾತನಾಡಿದ ತಮಿಳುನಾಡು ಕೃಷ್ಣಗಿರಿ ಸಂಸದ ಡಾ ಎ.ಚೆಲ್ಲಕುಮಾರ್, ‘ಎರಡೂ ಮೆಟ್ರೋಗಳನ್ನು ಬೆಸೆಯುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅದರಂತೆ ಕೇಂದ್ರವು ಕಾರ್ಯ ಸಾಧ್ಯತಾ ವರದಿ ನಡೆಸಲು ಅನುಮತಿ ನೀಡಿದೆ. ಎರಡೂ ಕಡೆಯ ರಾಜ್ಯ ಸರ್ಕಾರಗಳು ಈ ಯೋಜನೆಗೆ ಸಮ್ಮತಿ ಸೂಚಿಸಿವೆ. ಮೆಟ್ರೋ ಸಂಚರಿಸಬಹುದಾದ ನಗರಗಳ ನಡುವಿನ ಮಾರ್ಗ, ಎರಡೂ ಮೆಟ್ರೋಗಳ ನಡುವೆ ತಂತ್ರಜ್ಞಾನ ಹೇಗಿರಬೇಕು, ಅಂತರ ಕಡಿಮೆ ಮಾಡಬಹುದೆ? ಒಟ್ಟಾರೆ ಯೋಜನೆಗೆ ಎಷ್ಟುವೆಚ್ಚ ತಗಲಬಹುದು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧ್ಯಯನ ನಡೆಯಲಿದೆ’ ಎಂದರು.
ಬೊಮ್ಮಸಂದ್ರ- ಹೊಸೂರು ಮೆಟ್ರೋ ಸಂಚಾರದಿಂದ ಎರಡೂ ರಾಜ್ಯಗಳ ನಡುವಿನ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರತಿನಿತ್ಯ ಬೆಂಗಳೂರಿಂದ ಹೊಸೂರು ಹಾಗೂ ಹೊಸೂರು, ಕೃಷ್ಣಗಿರಿಯಿಂದ ಬೆಂಗಳೂರಿಗೆ ಐಟಿ ನೌಕರರು ಸೇರಿ ಸಾವಿರಾರು ಜನ ಸಂಚರಿಸುತ್ತಾರೆ. ಅವರಿಗೆ ಈ ಅಂತಾರಾಜ್ಯ ಮೆಟ್ರೋ ನೆರವಾಗಲಿದೆ.
-ಡಾಎ.ಚೆಲ್ಲಕುಮಾರ್, ಸಂಸದ ಕೃಷ್ಣಗಿರಿ (ತಮಿಳುನಾಡು)
ಬೆಂಗಳೂರು: ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಪ್ರಾಯೋಗಿಕ ಸಂಚಾರ ಶುರು
ಈ ಹಿಂದೆಯೇ ಯೋಜನೆ ವಿರೋಧಿಸಿದ್ದ ಕನ್ನಡಿಗರು
ಐದು ತಿಂಗಳ ಹಿಂದೆ ಈ ಯೋಜನೆ ಪ್ರಸ್ತಾವ ಬಂದಾಗಲೇ ಕನ್ನಡ ಹೋರಾಟಗಾರರಿಂದ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆಯಿಂದ ಬೆಂಗಳೂರಿಗೆ ಅಷ್ಟಾಗಿ ಪ್ರಯೋಜನ ಇರುವಂತೆ ಕಾಣುತ್ತಿಲ್ಲ. ಬೆಂಗಳೂರಿಗೆ ಬರುವ ಕೈಗಾರಿಕೆಗಳನ್ನು ಸೆಳೆಯುವ ಉದ್ದೇಶದಿಂದಲೇ ಹೊಸೂರಲ್ಲಿ ಕೈಗಾರಿಕೆ ವಸಾಹತು ಸ್ಥಾಪನೆಯ ಉದ್ದೇಶವಾಗಿತ್ತು. ಹೀಗಾಗಿ ಸರ್ಕಾರ ಯೋಜನೆ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದರು.