Bengaluru Zombie Drugs viral video case ಬೆಂಗಳೂರಿನಲ್ಲಿ 'ಜೋಂಬಿ ಡ್ರಗ್ಸ್' ಹರಡಿದೆ ಎಂದು ವೈರಲ್ ಆದ ವಿಡಿಯೋ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ಹಂಚಿಕೊಂಡ ನಟ ದುನಿಯಾ ವಿಜಯ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ, ವಿಡಿಯೋ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬೆಂಗಳೂರು (ಏ.10): 'ಸಿಲಿಕಾನ್ ಸಿಟಿಗೆ 'ಜೋಂಬಿ ಡ್ರಗ್ಸ್' ಕಾಲಿಟ್ಟಿದೆ ಎಚ್ಚರ'ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಈಗ ದೊಡ್ಡ ಸಂಚಲನ ಸೃಷ್ಟಿಸಿದೆ. ಇದೊಂದು ಸುಳ್ಳು ವಿಡಿಯೋ ಆಗಿದ್ದು, ಸತ್ಯಾಂಶ ತಿಳಿಯದೇ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಟ ದುನಿಯಾ ವಿಜಯ್ ಸೇರಿದಂಟೆ ಅನೇಕರಿಗೆ ಬೆಂಗಳೂರು ಪೊಲೀಸರು ನೋಟಿಸ್ ನೀಡಿದ್ದಾರೆ.

ದುನಿಯಾ ವಿಜಯ್ ಸೇರಿ 25 ಜನರಿಗೆ ನೋಟಿಸ್!

ಆಧಾರರಹಿತ ವೈರಲ್ ವಿಡಿಯೋವನ್ನು ಸತ್ಯಾಂಶ ತಿಳಿಯದೇ ಶೇರ್ ಮಾಡಿಕೊಂಡಿರುವ ಪ್ರಕರಣದಲ್ಲಿ ನಟ ದುನಿಯಾ ವಿಜಯ್ ಸೇರಿದಂತೆ ಒಟ್ಟು 25ಕ್ಕೂ ಹೆಚ್ಚು ಜನರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಕೇವಲ ನಟ ದುನಿಯಾ ವಿಜಯ್ ಮಾತ್ರವಲ್ಲದೇ, ವಿಡಿಯೋ ಶೇರ್ ಮಾಡಿಕೊಂಡಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರಿಗೂ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಬಂಧಿತನಿಂದ ಕ್ಷಮೆಯಾಚನೆ: ಅಸಲಿ ವಿಷಯ ಬಯಲು

ಮೊದಲು ಈ ವಿಡಿಯೋ ಅಪ್‌ಲೋಡ್ ಮಾಡಿದ್ದ ವ್ಯಕ್ತಿಯನ್ನು ಬಾಗಲೂರು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ವಿಚಾರಣೆ ವೇಳೆ 'ವಿದೇಶಗಳಲ್ಲಿ ಇಂತಹ ಡ್ರಗ್ಸ್ ಇದೆ ಎಂಬ ಕಾರಣಕ್ಕೆ ವಿಡಿಯೋ ಮಾಡಿದ್ದೆ. ನನ್ನ ತಪ್ಪಾಗಿದೆ' ಎಂದು ಒಪ್ಪಿಕೊಂಡಿರುವ ಆರೋಪಿ, ಈಗ ಕ್ಷಮೆ ಕೇಳಿರುವ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಊಹೆ ಮಾಡಿಕೊಂಡು ತಪ್ಪು ಮಾಹಿತಿ ಹಂಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಆಯುಕ್ತರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತರು ಹೇಳಿದ್ದೇನು?

'ಬೆಂಗಳೂರಿಗೆ ಜೊಂಬಿ ಡ್ರಗ್ಸ್ ಎಂಟ್ರಿ' ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿರುವ ವಿಚಾರವಾಗಿ ನಗರ ಪೊಲೀಸ್ ಆಯುಕ್ತರು ಪ್ರತಿಕ್ರಿಯಿಸಿದ್ದು, 'ಈಗಾಗಲೇ ಜೋಂಬಿ ಡ್ರಗ್ಸ್ ವಿಡಿಯೋ ಬಗ್ಗೆ ಸೃಷ್ಟಿಕರಣ ಕೊಟ್ಟಿದ್ದೇವೆ. ವಿಡಿಯೋದಲ್ಲಿ ಕಾಣಿಸಿರುವ ವ್ಯಕ್ತಿ ಜೋಂಬಿ ಡ್ರಗ್ಸ್ ಸೇವಿಸಿರುವುದು ಪತ್ತೆಯಾಗಿಲ್ಲ. ಆತನಿಗೆ ಮೆಡಿಕಲ್ ಟೆಸ್ಟ್ ಸಹ ಮಾಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಗಲೂರು ಪೊಲೀಸರು ವಿಡಿಯೋ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನ ಬಂಧಿಸಿ ವಿಚಾರಣೆಗೊಳಿಸಿದ್ದಾರೆ. ಆದರೆ ವ್ಯಕ್ತಿ ಈ ಕ್ಷಮೆ ಕೇಳಿದ್ದಾರೆ. ಇದರ ಮುಂದಿನ ಪರಿಣಾಮ ತಿಳಿಯದೇ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿ ತಪ್ಪು ಮಾಡಿದ್ದೇನೆ ಎಂದು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾನೆ. ಸದ್ಯ ಈ ವಿಡಿಯೋವನ್ನ ಯಾರೆಲ್ಲಾ ಶೇರ್ ಮಾಡಿದ್ದಾರೆ ಅವರಿಗೆ ನೋಟಿಸ್ ನೀಡುತ್ತೇವೆ. ಈ ರೀತಿ ಆಧಾರರಹಿತವಾದ ಮಾಹಿತಿ ಶೇರ್ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಕಠಿಣವಾಗಿ ಎಚ್ಚರಿಸಿದ್ದಾರೆ.

ಒಬ್ಬರ ಬಗ್ಗೆ, ಒಂದು ವಿಷಯದ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ. ಸತ್ಯಾಂಶ ತಿಳಿದುಕೊಳ್ಳಬೇಕು, ಜವಾಬ್ದಾರಿಯಿಂದ ಸೋಷಿಯಲ್ ಮೀಡಿಯಾ ಬಳಕೆ ಮಾಡಬೇಕು. ಊಹೆ ಮಾಡಿಕೊಂಡು ಈ ರೀತಿ ಪೋಸ್ಟ್ ಮಾಡುವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.