ಬೆಂಗಳೂರು ಜಲಮಂಡಳಿಯು (BWSSB) ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರಿಗೆ ಮಾಹಿತಿ ನೀಡದೆ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ದರವನ್ನು ಹೆಚ್ಚಿಸುತ್ತಿದೆ. ಈ ವಾರ್ಷಿಕ 12% ರಷ್ಟು ದರ ಏರಿಕೆಯ ಕ್ರಮವನ್ನು ಬಿಜೆಪಿ ಖಂಡಿಸಿದ್ದು, ಈ ಕುರಿತು ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಬೆಂಗಳೂರು (ಮಾ.25): ಬೆಂಗಳೂರು ಜಲಮಂಡಳಿಯು (BWSSB) ಸಿಲಿಕಾನ್ ಸಿಟಿಯ ನಾಗರಿಕರ ಗಮನಕ್ಕೆ ಬಾರದಂತೆ ಸದ್ದಿಲ್ಲದೆ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಹಗಲು ದರೋಡೆ ಸದ್ದಿಲ್ಲದೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ನೀರಿನ ದರ ಹೆಚ್ಚಿಸಿ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ವರ್ಷಕ್ಕೆ ನಾಲ್ಕು ಬಾರಿ ದರ ಏರಿಕೆ: ಬೆಚ್ಚಿಬಿದ್ದ ಬೆಂಗಳೂರಿಗರು

Add Asianetnews Kannada as a Preferred SourcegooglePreferred

ಜಲಮಂಡಳಿಯು ನಿಯಮಗಳ ಹೆಸರಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ದರವನ್ನು ಏರಿಕೆ ಮಾಡುತ್ತಿದೆ. ಅಂದರೆ ವರ್ಷಕ್ಕೆ ಬರೋಬ್ಬರಿ ನಾಲ್ಕು ಬಾರಿ ದರ ಹೆಚ್ಚಳವಾಗುತ್ತಿದೆ. ನೀರಿನ ದರ ಏರಿಕೆಗೆ ಮುನ್ನ ನಾಗರಿಕರ ಗಮನಕ್ಕೆ ತರಬೇಕು, ಸಾರ್ವಜನಿಕ ಪ್ರಕಟಣೆ ಮಾಡಬೇಕು. ಆದರೆ ಇದ್ಯಾವುದು ಮಾಡದೇ, ಅಧಿಕೃತ ಪ್ರಕಟಣೆ ಅಥವಾ ಮುನ್ಸೂಚನೆ ನೀಡದೆ ಸದ್ದಿಲ್ಲದೆ ದರ ಏರಿಸುವ ಮೂಲಕ ನಾಗರಿಕರ ಜೇಬಿಗೆ ಪಿಕ್‌ಪಾಕೆಟ್‌ ರೀತಿ ಲೂಟಿ ಮಾಡುತ್ತಿದೆ.

ವಾರ್ಷಿಕ 12% ದರ ಹೆಚ್ಚಳ!

ದರ ಏರಿಕೆಯ ಲೆಕ್ಕಾಚಾರವು ಬೆಚ್ಚಿಬೀಳಿಸುವಂತಿದೆ. ಪ್ರತಿ ಮೂರು ತಿಂಗಳಿಗೆ ಶೇಕಡಾ 3% ರಷ್ಟು ದರ ಏರಿಕೆ ಮಾಡಲಾಗುತ್ತಿದ್ದು, ಇದು ವರ್ಷದ ಅಂತ್ಯಕ್ಕೆ ಒಟ್ಟು ಶೇಕಡಾ 12% ರಷ್ಟು ಹೆಚ್ಚಳವಾಗುತ್ತಿದೆ. ಈಗಾಗಲೇ ಹಲವು ಬೆಲೆ ಏರಿಕೆಗೆ ಹೈರಾಣಾಗಿರುವ ಸಾಮಾನ್ಯ ಜನರಿಗೆ ಜಲಮಂಡಳಿಯ ನೀರಿನ ದರ ಏರಿಕೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇದರ ತೀವ್ರತೆ ತಕ್ಷಣಕ್ಕೆ ಅರಿವಾಗದಿದ್ದರೂ, ದೀರ್ಘಕಾಲದ ಬಿಲ್ ಮೊತ್ತದಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದೆ.

ಸಿಎಂ ಮತ್ತು ಅಧ್ಯಕ್ಷರಿಗೆ ಬಹಿರಂಗ ಪತ್ರ

ಈ ಸುಲಿಗೆಯ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕವು ಸಮರ ಸಾರಿದೆ. ಮುಖ್ಯಮಂತ್ರಿಗಳಿಗೆ ಹಾಗೂ BWSSB ಅಧ್ಯಕ್ಷರಿಗೆ ಈ ಕುರಿತು ಬಹಿರಂಗ ಪತ್ರ ಬರೆಯಲಾಗಿದೆ. ಜಲಮಂಡಳಿಯ ಈ ನಡೆಯನ್ನು ಖಂಡಿಸಿರುವ ಬಿಜೆಪಿ, ಇದು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾಗಿದೆ ಜನ ವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇಂದು ದಾಖಲೆ ಬಿಡುಗಡೆ ಮಾಡಲಿರುವ ಎನ್.ಆರ್. ರಮೇಶ್

BWSSB ಮಾಡುತ್ತಿರುವ ಈ ಅಕ್ರಮ ದರ ಏರಿಕೆಯ ಕುರಿತು ಇಂದು ಮಹತ್ವದ ದಾಖಲೆಗಳು ಬಿಡುಗಡೆಯಾಗಲಿವೆ. ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಎನ್.ಆರ್. ರಮೇಶ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ಜಲಮಂಡಳಿಯ ಹಗಲು ದರೋಡೆಯ ಹಸಿಬಿಸಿ ದಾಖಲೆಗಳನ್ನು ಜನರ ಮುಂದಿಡಲಿದ್ದಾರೆ.