ತುಮಕೂರಿಗೆ ಮೆಟ್ರೋ ವಿಸ್ತರಣೆ ಸಂಬಂಧ ಬಿಎಂಆರ್‌ಸಿಎಲ್‌ ಇನ್ನು ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿ ಪಡೆಯುವ ನಿರೀಕ್ಷೆಯಿದೆ. ಹೈದ್ರಾಬಾದ್ ಮೂಲದ ಆರ್‌ವಿ ಅಸೋಸಿಯೇಟ್ಸ್‌ ಆರ್ಕಿಟೆಕ್ಟ್ಸ್‌ ಎಂಜಿನಿಯರ್ಸ್‌ ಆ್ಯಂಡ್‌ ಕನ್ಸಲ್ಟಂಟ್ಸ್ ಕಂಪನಿಗೆ ಗುತ್ತಿಗೆ ನೀಡಿದೆ.

ಮಯೂರ್‌ ಹೆಗಡ

ಬೆಂಗಳೂರು (ಜು.13): ತುಮಕೂರಿಗೆ ಮೆಟ್ರೋ ವಿಸ್ತರಣೆ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಇನ್ನು ಆರು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿ ಪಡೆಯುವ ನಿರೀಕ್ಷೆಯಿದೆ. ಇದರ ಜೊತೆಗೆ 3ನೇ ಹಂತದ ಯೋಜನೆಯಲ್ಲಿ ಡಬ್ಬಲ್‌ ಡೆಕ್ಕರ್‌ ಮಾದರಿಯನ್ನು ಎಲ್ಲೆಲ್ಲಿ ಅಳವಡಿಸಬಹುದು ಎಂಬ ಬಗ್ಗೆ ನಡೆಸಲಾಗಿರುವ ಅಧ್ಯಯನದ ವರದಿಯೂ ಬಿಎಂಆರ್‌ಸಿಎಲ್‌ಗೆ ಸಲ್ಲಿಕೆಯಾಗಲಿದೆ.

ಮೆಟ್ರೋವನ್ನು ಬೆಂಗಳೂರಿನ ಆಚೆಗೆ ವಿಸ್ತರಿಸುವ ಸರ್ಕಾರದ ಆಶಯ ಈಡೇರಿಕೆ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್‌ ಮಹತ್ವದ ಹೆಜ್ಜೆಯಿಟ್ಟಿದೆ. ಹೈದ್ರಾಬಾದ್ ಮೂಲದ ಆರ್‌ವಿ ಅಸೋಸಿಯೇಟ್ಸ್‌ ಆರ್ಕಿಟೆಕ್ಟ್ಸ್‌ ಎಂಜಿನಿಯರ್ಸ್‌ ಆ್ಯಂಡ್‌ ಕನ್ಸಲ್ಟಂಟ್ಸ್ ಕಂಪನಿಗೆ ತುಮಕೂರು ಮೆಟ್ರೋದ ಕಾರ್ಯಸಾಧ್ಯತಾ ವರದಿ ನೀಡಲು ಅಂದಾಜು ₹1.25 ಕೋಟಿ (₹1,25,54,343) ವೆಚ್ಚದ ಗುತ್ತಿಗೆ ನೀಡಿದೆ.

ಬೆಂಗಳೂರು ಏರ್ಪೋರ್ಟ್‌ ಕಡೆ ಪ್ರಯಾಣಿಸುವವರಿಗೆ ಸಂತಸದ ಸುದ್ದಿ, ನೀಲಿ ಮಾರ್ಗಕ್ಕೆ ವಿದ್ಯುದೀಕರಣ, 766 ಕೋಟಿ ವೆಚ್ಚ!

‘ಸುಮಾರು 52.41 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗ ನಿರ್ಮಾಣ ಸಂಬಂಧ ಕಂಪನಿಯು ಅಧ್ಯಯನ ಕೈಗೊಂಡು ಆರು ತಿಂಗಳಲ್ಲಿ ಅಂದರೆ 2025ರ ಮೊದಲ ತ್ರೈಮಾಸಿಕದ ವೇಳೆಗೆ ಬಿಎಂಆರ್‌ಸಿಎಲ್‌ಗೆ ವರದಿ ನೀಡಬಹುದು. ಶೀಘ್ರವೇ ಇದರ ಅಧ್ಯಯನ ಆರಂಭವಾಗಲಿದೆ. ವರದಿಯು ಯೋಜನೆಯ ಸಾಧಕ, ಬಾಧಕ ಒಳಗೊಳ್ಳಲಿದೆ. ಮಾರ್ಗದ ಸ್ವರೂಪ, ನಿಲ್ದಾಣಗಳು, ಆರ್ಥಿಕ ಪಾಲುದಾರಿಕೆ, ಬಗ್ಗೆ ತೀರ್ಮಾನವಾಗಲಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದರು.

ಅಲ್ಲದೆ, ಮೆಟ್ರೋ, ಉಪನಗರ ರೈಲು ಅಥವಾ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರ್ಯಸಾಧ್ಯವೇ ಎಂಬುದನ್ನು ಕಾರ್ಯಸಾಧ್ಯತೆಯ ಅಧ್ಯಯನವು ತಿಳಿಸಲಿದೆ. ಬಳಿಕ ವಿಸ್ತ್ರತ ಯೋಜನಾ ವರದಿ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಅಪರ್ಣಾ ಮಜಾಟಾಕೀಸ್‌ಗೆ ಬರಬೇಕು ಅನ್ನೋದು ನನ್ನ ಯೋಚನೆಯಲ್ಲ, ಅನಾರೋಗ್ಯವನ್ನು ಗೌಪ್ಯವಾಗಿಟ್ಟಿದ್ದರು:ಸೃಜನ್

ಆರಂಭದಲ್ಲಿ ಹಸಿರು ಮಾರ್ಗವನ್ನು ಮಾದವಾರ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ (ಬಿಐಇಸಿ) ಕುಣಿಗಲ್ ಕ್ರಾಸ್‌ವರೆಗೆ 11 ಕಿ.ಮೀ. ವಿಸ್ತರಿಸಲು ಬಿಎಂಆರ್‌ಸಿಎಲ್‌ ಯೋಜಿಸಿತ್ತು. ಕಳೆದ ಫೆಬ್ರವರಿ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರಿಗೆ ಮೆಟ್ರೋ ವಿಸ್ತರಣೆ ಘೋಷಿಸಿದ್ದರು.

ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿ ವಿಸ್ತರಿತ ಮೆಟ್ರೋ ಹಾದು ಹೋಗಲಿದೆ. ಪ್ರಾಥಮಿಕವಾಗಿ ಈ ಮಾರ್ಗದಲ್ಲಿ 19 ಎಲಿವೆಟೆಡ್‌ ನಿಲ್ದಾಣಗಳ ಸ್ಥಳ ಗುರುತಿಸುವ ಸಾಧ್ಯತೆಯಿದೆ. ಮಾದಾವರ, ಮಾಕಳಿ, ದಾಸನಪುರ, ನೆಲಮಂಗಲ, ನೆಲಮಂಗಲ ಬಸ್‌ ನಿಲ್ದಾಣ, ನೆಲಮಂಗಲ ರಾಷ್ಟ್ರೀಯ ಹೆದ್ದಾರಿ, ಬೂದಿಹಾಳ, ಟಿ.ಬೇಗೂರು, ಕುಲುವನಹಳ್ಳಿ, ಸೋಂಪುರ ಕೈಗಾರಿಕಾ ಪ್ರದೇಶ, ದಾಬಸ್‌ಪೇಟೆ, ನಲ್ಲಯ್ಯನಪಾಳ್ಯ, ಚಿಕ್ಕಹಳ್ಳಿ, ಹಿರೇಹಳ್ಳಿ, ಪಂಡಿತನಹಳ್ಳಿ, ಕ್ಯಾತಸಂದ್ರ, ಬಟವಾಡಿ, ತುಮಕೂರು ವಿಶ್ವ ವಿದ್ಯಾನಿಲಯ ಹಾಗೂ ತುಮಕೂರು ಬಸ್ ನಿಲ್ದಾಣ ಬಳಿ ಮೆಟ್ರೋ ನಿಲ್ದಾಣ ನಿರ್ಮಾಣ ಆಗಬಹುದು. ಅಂತಿಮ ವರದಿಯಲ್ಲಿ ಸ್ಪಷ್ಟವಾಗಿ ತಿಳಿದುಬರಲಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.

ಇದಲ್ಲದೆ, ಚಲ್ಲಘಟ್ಟ-ಬಿಡದಿ, ಸಿಲ್ಕ್‌ ಇನ್‌ಸ್ಟಿಟ್ಯೂಟ್‌- ಹಾರೋಹಳ್ಳಿ ಹಾಗೂ ಬೊಮ್ಮಸಂದ್ರ- ಅತ್ತಿಬೆಲೆ (50 ಕಿ.ಮೀ.) ಹಾಗೂ ಕಾಳೇನ ಅಗ್ರಹಾರ-ಜಿಗಣಿ-ಆನೇಕಲ್‌- ಅತ್ತಿಬೆಲೆ-ಸರ್ಜಾಪುರ-ವರ್ತೂರು-ಕಾಡುಗೋಡಿ ಟ್ರೀ ಪಾರ್ಕ್‌ (60 ಕಿ.ಮೀ.) ಮೆಟ್ರೋ ಮಾರ್ಗದ ಬಗ್ಗೆಯೂ ಕಾರ್ಯಸಾಧ್ಯತಾ ವರದಿ ಪಡೆಯಲು ಬಿಎಂಆರ್‌ಸಿಎಲ್‌ ಮುಂದಾಗಿದೆ.

ಡಬಲ್‌ ಡೆಕ್ಕರ್‌ ಅಧ್ಯಯನ: ಇನ್ನು, ಇದೇ ಆರ್‌ವಿ ಅಸೋಸಿಯೇಟ್ಸ್‌ ಕಂಪನಿಯೇ ಮೆಟ್ರೋ 3ನೇ ಹಂತದ ಯೋಜನೆಯಲ್ಲಿ ಡಬ್ಬಲ್‌ ಡೆಕ್ಕರ್‌ (ಫ್ಲೈಓವರ್‌ ಹಾಗೂ ಮೆಟ್ರೋ) ಮಾದರಿ ಅನುಸರಣೆ ಬಗ್ಗೆಯೂ ಕಾರ್ಯಸಾಧ್ಯತಾ ವರದಿ ನೀಡಲಿದೆ. ಇದಕ್ಕಾಗಿ ₹78 ಲಕ್ಷ ಮೊತ್ತದ ಪ್ರತ್ಯೇಕ ಟೆಂಡರ್‌ ಪಡೆದಿದೆ. ಕಾರಿಡಾರ್‌-1 ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳ (29 ಕಿ.ಮೀ.), ಕಾರಿಡಾರ್‌-2 ಹೊಸಹಳ್ಳಿ-ಕಡಬಗೆರೆ (11.45 ಕಿ.ಮೀ.), ಸರ್ಜಾಪುರ - ಇಬ್ಬಲೂರು (ಹೊರವರ್ತುಲ ರಸ್ತೆ ಜಂಕ್ಷನ್‌) (14 ಕಿ.ಮೀ.)ನಲ್ಲಿ ಹಳದಿ ಮಾರ್ಗದಲ್ಲಿ ಮಾಡಿದಂತೆ ಡಬ್ಬಲ್‌ ಡೆಕ್ಕರ್‌ ನಿರ್ಮಿಸಲು ಅಧ್ಯಯನ ನಡೆಸಲಿದೆ. ಜೊತೆಗೆ 3ಎ ಹಂತದ ಆಗರ-ಕೋರಮಂಗಲ 3ನೇ ಬ್ಲಾಕ್‌ (2.45 ಕಿ.ಮೀ.) ನಲ್ಲೂ ಈ ಅಧ್ಯಯನ ನಡೆಯಲಿದೆ.