ಬೆಂಗಳೂರಿನ ಜೆಸಿ ರಸ್ತೆಯಲ್ಲಿ, ತಪ್ಪಾದ ಮಾರ್ಗದಲ್ಲಿ ಬಂದ ಬೈಕ್ ಸವಾರನನ್ನು ಕಾರು ಚಾಲಕನೊಬ್ಬ ತಡೆದಿದ್ದಾನೆ. ನಿಯಮ ಉಲ್ಲಂಘಿಸಿ ಬಂದ ಸವಾರ ಹಿಂದಕ್ಕೆ ಸರಿಯಲು ನಿರಾಕರಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ಬಗ್ಗೆ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು (ಏ.07): ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಟ್ರಾಫಿಕ್‌ಜಾಮ್ ಇರುವ ನಗರವೆಂದು ಅಪಖ್ಯಾತಿಗೆ ಒಳಗಾಗಿದೆ. ಇದರ ನಡುವೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ಸಾವಿರಾರು ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಲ್ಲೊಬ್ಬ ಬೈಕ್ ಸವಾರ ವ್ಯಕ್ತಿ ತಪ್ಪಾದ ಮಾರ್ಗದಲ್ಲಿ ಸಿಗ್ನಲ್ ದಾಟುವುದಕ್ಕೆ ಬಂದಿದ್ದಾರೆ. ಈ ವೇಳೆ ಸರಿಯಾದ ಮಾರ್ಗದಲ್ಲಿ ಹೋಗುತ್ತಿದ್ದ ಕಾರಿನ ಚಾಲಕ ಅಡ್ಡ ನಿಲ್ಲಿಸಿ ವಾಪಸ್ ಹೋಗುವಂತೆ ಸೂಚಿಸಿದರೂ ಜಪ್ಪಯ್ಯಾ ಎಂದರೂ ವಾಪಸ್ ಹೋಗದೇ ಅಲ್ಲಿಯೇ ನಿಂತಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಅನೇಕ ವಿಡಿಯೋಗಳು ವೈರಲ್ ಆಗುತ್ತಲೆ ಇರುತ್ತವೆ. ಏ.4ರಂದು ನಡೆದ ಅಂತಹದ್ದೇ ಘಟನೆಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ವಾಹನ ಚಾಲಕನೊಬ್ಬ ರಾಂಗ್ ರೂಟ್‌ನಲ್ಲಿ ಬಂದ ಬೈಕ್ ಸವಾರನ ವಿರುದ್ಧ ನೀವು ಸರೊಯಾದ ಮಾರ್ಗದಲ್ಲಿ ಬರುವಂತೆ ಅಡ್ಡಲಾಗಿ ಕಾರನ್ನು ನಿಲ್ಲಿಸಿದ್ದಾರೆ. ಈ ವೇಳೆ ಸಂಚಾರ ದಟ್ಟಣೆ ಮತ್ತು ದೀರ್ಘ ಯು-ಟರ್ನ್‌ಗಳನ್ನು ತಪ್ಪಿಸಲು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ವ್ಯಕ್ತಿ ಹತಾಶೆಗೊಂಡು ಅಲ್ಲಿಯೇ ನಿಂತಿದ್ದಾರೆ.

ಈ ಘಟನೆ ಏಪ್ರಿಲ್ 4 ರಂದು ಬೆಳಿಗ್ಗೆ 11:10 ರ ಸುಮಾರಿಗೆ ಜೆಸಿ ರಸ್ತೆಯಲ್ಲಿ ಪೊಲೀಸ್ ಚೌಕಿಯ ಬಳಿ ನಡೆದಿದ್ದು, ಥರ್ಡ್ ಐ ಡ್ಯೂಡ್ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಕಾರು ಚಾಲಕನೊಬ್ಬ ತನ್ನ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ತಪ್ಪು ಮಾರ್ಗದಲ್ಲಿ ಬರುವ ದ್ವಿಚಕ್ರ ವಾಹನ ಸವಾರರನ್ನು ಹಿಂತಿರುಗಲು ಶಾಂತವಾಗಿ ಕೇಳಿದ್ದಾರೆ. 'ನಾನು ನನ್ನ ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ದಯವಿಟ್ಟು ನೀವು ರಾಂಗ್ ರೂಟ್‌ನಲ್ಲಿ ಬರದೇ ಯು-ಟರ್ನ್ ತೆಗೆದುಕೊಳ್ಳಿ' ಎಂದು ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ಹೇಳುತ್ತಾನೆ.

ಇದನ್ನೂ ಓದಿ: ಬೆಂಗಳೂರು: ₹4 ಕೋಟಿ ಮನೆ ಕೇವಲ 60 ಲಕ್ಷಕ್ಕೆ ಡೀಲ್, ಇನ್ಸ್‌ಪೆಕ್ಟರ್ ಸೇರಿ 7 ಜನರ ವಿರುದ್ಧ FIR!

ಆಗ ಕಾರಿನ ಚಾಲಕ ರಸ್ತೆ ಬಿಡುವುದಿಲ್ಲವೆಂದು ತಪ್ಪಾದ ಮಾರ್ಗದಲ್ಲಿ ಬರುತ್ತಿದ್ದ ನಾಲ್ಕೈದು ವಾಹನಗಳ ಪೈಕಿ ಒಂದಿಬ್ಬರು ವಾಪಸ್ ಯೂಟರ್ನ್ ಮಾಡಿಕೊಂಡು ವಾಪಸ್ ಹೋಗಿದ್ದಾರೆ. ಉಳಿದಂತೆ ಮುಂದೆ ನಿಂತಿದ್ದ ಬೈಕ್ ಸವಾರ ಹಾಗೂ ಅವರ ಹಿಂದೆ ಇದ್ದ ಕಾರಿನ ಚಾಲಕ ಮಾತ್ರ ದಾರಿ ಬಿಟ್ಟು ಕೊಡುವವರೆಗೂ ಅಲ್ಲಿಯೇ ನಿಂತಿದ್ದರು. ಎಷ್ಟೇ ಬುದ್ಧಿವಾದ ಹೇಳಿದರೂ ಕೇಳಲಿಲ್ಲ. ರಾಂಗ್ ರೂಟ್‌ನಲ್ಲಿ ಹೋಗುವುದಕ್ಕಾಗಿ ತುಂಬಾ ಹೊತ್ತು ಅಲ್ಲಿಯೇ ಕಾಯುತ್ತಾ ನಿಂತಿದ್ದರು. ಇನ್ನು ಕಾರಿನ ಚಾಲಕ ಪದೇ ಪದೆ ಮನವಿ ಮಾಡಿದರೂ, ದ್ವಿಚಕ್ರ ವಾಹನ ಸವಾರರು ಮತ್ತು ಕ್ಯಾಬ್ ಸೇರಿದಂತೆ ಕೆಲವರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದರಿಂದ ಮಾತ್ರ ಹಿಂದೆ ಸರಿಯಲೇ ಇಲ್ಲ.

ಈ ದೃಶ್ಯಗಳನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಥರ್ಡ್ ಐ ಡ್ಯೂಡ್ ಎನ್ನುವ ವ್ಯಕ್ತಿ 'ಇಲ್ಲೊಬ್ಬ ಕಾರು ಚಾಲಕ ರಾಂಗ್ ರೂಟ್‌ನಲ್ಲಿ ಬಂದ ದ್ವಿಚಕ್ರ ವಾಹನದ ಎದುರಿಗೆ ಕಾರು ನಿಲ್ಲಿಸುತ್ತಾನೆ. ಆದರೂ ತಪ್ಪು ಮಾರ್ಗದಲ್ಲಿ ಬಂದಿದ್ದ ಬೈಕ್ ಸವಾರ ನಾಚಿಕೆ ಇಲ್ಲದೇ ವಾಪಸ್ ಹೋಗದೇ ಅಲ್ಲಿಯೇ ನಿಂತಿದ್ದಾನೆ. ಅವನ ಹಿಂದೆ ಹಲವಾರು ವಾಹನ ಸವಾರರು ಕೂಡ ಸೇರಿಕೊಂಡಿದ್ದಾರೆ. ಇದು ಜೆಸಿ ರಸ್ತೆಯಲ್ಲಿ, ಪೊಲೀಸ್ ಹೊರಠಾಣೆ ಮುಂದೆಯೇ ಸಂಭವಿಸಿದೆ' ಎಂದು ಬರೆದಿದ್ದಾರೆ.

Scroll to load tweet…

ಈ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನೇಕ ನೆಟ್ಟಿಗರು ಬೆಂಗಳೂರಿನ ರಸ್ತೆಯಲ್ಲಿ ನಿಯಮ ಉಲ್ಲಂಘನೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಬ್ಬ ನೆಟ್ಟಿಗರು 'ಈ ರೀತಿಯ ಚಾಲನೆ ನಿಲ್ಲುವುದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು 'ಬ್ರೋ, ಬೆಂಗಳೂರು ನಗರ ಸಂಚಾರಿ ಪೊಲೀಸರು ನಿಮ್ಮನ್ನು ಹೆಲ್ಮೆಟ್ ಧರಿಸದಿದ್ದಕ್ಕಾಗಿ ಮಾತ್ರ ತಡೆಯುತ್ತಾರೆ. ಬೆಂಗಳೂರಿನಲ್ಲಿ ತಪ್ಪು ಬದಿಯ ಚಾಲನೆ ಸರಿಯಾಗಿದೆ ಎಂಬಂತೆ ತೋರುತ್ತದೆ. ವೀಡಿಯೊದಲ್ಲಿರುವ ಆ ಅಂಕಲ್‌ನ ಆತ್ಮವಿಶ್ವಾಸವನ್ನು ನೋಡಿ. ಇದನ್ನು ಸಾಮಾನ್ಯೀಕರಿಸಿದ್ದಕ್ಕಾಗಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಧನ್ಯವಾದಗಳು' ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿರುವ 2 ಗ್ರಾಮೀಣ ಬ್ಯಾಂಕ್ ವಿಲೀನ: ಒಂದೇ ಬ್ಯಾಂಕ್ ಆಗಿ ಕಾರ್ಯಾರಂಭ?