ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದ ಕುರಿತು ಆಮ್ ಆದ್ಮಿ ಪಕ್ಷದ ಯುವ ಅಧ್ಯಕ್ಷ ಲೋಹಿತ್ ಹನುಮಪುರ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದಾರೆ. 

ಬೆಂಗಳೂರು (ಜೂ.5) : ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ರಾಯಲ್‌ ಚಾಲೆಂಜರ್ಸ್‌ ತಂಡದ ವಿಜಯೋತ್ಸವ ಆಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಬಲಿಯಾಗಿ, 42 ಮಂದಿ ಗಾಯಗೊಂಡಿರುವ ಪ್ರಕರಣದ ಕುರಿತು ಆಮ್‌ ಆದ್ಮಿ ಪಕ್ಷದ ಕರ್ನಾಟಕ ವಿಭಾಗದ ಯುವ ಅಧ್ಯಕ್ಷರೂ ಆದ ವಕೀಲ ಲೋಹಿತ್‌ ಹನುಮಪುರ ಗುರುವಾರ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ಸಲ್ಲಿಸಲಿದ್ದಾರೆ.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ವಕೀಲ ಲೋಹಿತ್‌, ದುರಾದೃಷ್ಟವಶಾತ್‌ ನಡೆದ ಈ ಘಟನೆಯಲ್ಲಿ ಅಮಾಯಕ ಕ್ರಿಕೆಟ್‌ ಅಭಿಮಾನಿಗಳು ಸಾವಿಗೀಡಾಗಿದ್ದಾರೆ. ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷ್‌ ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಪ್ರದರ್ಶನ ಮತ್ತು ಜನರ ಗುಂಪು ನಿಯಂತ್ರಿಸುವಲ್ಲಿ ವಿಫಲವಾದ ಕಾರಣ ಈ ದುರಂತ ಸಭವಿಸಿದೆ. ಘಟನೆಗೆ ಕ್ರಿಕೆಟ್‌ ಅಸೋಸಿಯೇಷನ್‌, ಚಿನ್ನಸ್ವಾಮಿ ಕ್ರೀಡಾಂಗಣದ ಅಧಿಕಾರಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿಯೇ ಹೊಣೆ. ಸಮರ್ಪಕವಾಗಿ ಸುರಕ್ಷತಾ ಮತ್ತು ಶಿಷ್ಟಾಚಾರ ಕ್ರಮ ಕೈಗೊಂಡಿದ್ದಾರೆ. ಈ ದುರಂತ ಸಂಭವಿಸಿ, ಅಮಾಯಕ ಅಭಿಮಾನಿಗಳು ಸಾವಿಗೀಡಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ತಪ್ಪಿತಸ್ಥರ ವಿರುದ್ಧ ಹೊಣೆಗಾರಿಕೆ ನಿಗದಿಪಡಿಸದೆ ಪ್ರಕರಣವನ್ನು ಮುಕ್ತಾಯಗೊಳಿಸಬಾರದು ಮತ್ತು ನಿರ್ಲಕ್ಷ್ಯ ಮಾಡಬಾರದು. ಸಾರ್ವಜನಿಕ ಹಿತಾಸಕ್ತಿ, ನ್ಯಾಯ ಕಲ್ಪಿಸುವ ಮತ್ತು ಭವಿಷ್ಯದಲ್ಲಿ ಇಂಥ ದುರ್ಘಟನೆಗಳು ಮರುಳಿಸಬಾರದು ಎಂಬ ಸದುದ್ದೇಶದಿಂದ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೆ ವಹಿಸಬೇಕು. ತನಿಖೆ ನೇತೃತ್ವವನ್ನು ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಯೊಬ್ಬರ ಹೆಗಲಿಗೆ ಹೊರಿಸಬೇಕು. ಘಟನೆಯಲ್ಲಿ ಸಂಭವಿಸಲು ಕಾರಣವಾಗಿರುವ ತಪ್ಪಿತಸ್ಥ ಸರ್ಕಾರಿ ಅಧಿಕಾರಿಗಳು, ಖಾಸಗಿ ಸಂಸ್ಥೆಯ ಅಧಿಕಾರಿಗಳು-ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಿದ್ದಾರೆ.

ಅಲ್ಲದೆ, ಆರ್‌ಸಿಬಿ ವಿಯೋತ್ಸವ ಆಚರಣೆ ಮತ್ತು ಆಟಗಾರರಿಗೆ ಅಭಿನಂದನಾ ಕಾರ್ಯಕ್ರಮ ಆಚರಣೆಗೆ ಸರ್ಕಾರ ನೀಡಿರುವ ಅನುಮತಿಗಳು, ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಲೋಹಿತ್‌ ಕೋರಲಿದ್ದಾರೆ.