ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಆಡಳಿತಾಧಿಕಾರಿಯೊಬ್ಬರು ಲಂಚ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ನೀಡಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆಗಾಗಿ ಕರ್ನಾಟಕ ಮಾಹಿತಿ ಆಯೋಗವು ಅವರಿಗೆ ₹10,000 ದಂಡ ವಿಧಿಸಿದೆ.

ಬೆಂಗಳೂರು: ಸಿಸಿಟಿವಿ ದೃಶ್ಯಾವಳಿ ನೀಡದೆ ಬೇಜವಬ್ದಾರಿ ತೋರಿದ ಆಡಳಿತಧಿಕಾರಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯ ಆಡಳಿತಾಧಿಕಾರಿ ಬಿ.ಎಂ. ಶೋಭಾ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ₹10,000 ದಂಡ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ಹಕ್ಕು ಕಾಯ್ದೆಯನ್ನು ಗಂಭೀರವಾಗಿ ಉಲ್ಲಂಘಿಸಿದ ಪ್ರಕರಣ ಇದಾಗಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗ ಸ್ಪಷ್ಟಪಡಿಸಿದೆ.

Add Asianetnews Kannada as a Preferred SourcegooglePreferred

ಎಎಸ್ಐ ಅಧಿಕಾರಿ ಮೂಲಕ ಲಂಚ ಸ್ವೀಕಾರ

ನಗರ ಪೊಲೀಸ್ ಕಮಿಷನರ್ ಕಚೇರಿಯೊಂದರಲ್ಲಿ ಕೆಲಸ ಮಾಡುವ ಸಿಬ್ಬಂದಿಯೊಬ್ಬರು ಎಎಸ್ಐ (ASI) ಯೊಬ್ಬರ ಮೂಲಕ ಬಹಿರಂಗವಾಗಿ ಲಂಚ ಸ್ವೀಕರಿಸಿದ ಆರೋಪ ಇತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಲಾಗಿತ್ತು. ಈ ಪ್ರಕರಣದ ಮೂಲ ಸತ್ಯಾಂಶ ಗೊತ್ತಾಗಲು ಮತ್ತು ತನಿಖೆಗೆ ಸಹಾಯವಾಗಲು, ದೂರುದಾರ ಉಪಾಧ್ಯಕ್ಷ ಶಿವರಾಮ್ ಅವರು ಕಚೇರಿಯ ಮಾಹಿತಿ ಹಕ್ಕು ಅಧಿಕಾರಿಗೆ ಸಿಸಿಟಿವಿ ವಿಡಿಯೋ ದೃಶ್ಯಾವಳಿ ನೀಡುವಂತೆ ಅಧಿಕೃತ ಮನವಿ ಸಲ್ಲಿಸಿದ್ದರು.

ಆದರೆ ಕಾನೂನುಬದ್ಧವಾಗಿ ನೀಡಬೇಕಿದ್ದ ಮಾಹಿತಿ ನೀಡದೆ, ಆಡಳಿತಾಧಿಕಾರಿ ಬಿ.ಎಂ. ಶೋಭಾ ಅವರು ತಡಮಾಡಿ, ಬೇಜವಾಬ್ದಾರಿ ತೋರಿರುವುದು ಆಯೋಗಕ್ಕೆ ಸ್ಪಷ್ಟವಾಗಿದೆ. ಹಲವು ಬಾರಿ ಮನವಿ ಹಾಗೂ ಸೂಚನೆ ನೀಡಿದರೂ ಕೂಡ ಅಗತ್ಯ ದೃಶ್ಯಾವಳಿ ಹಸ್ತಾಂತರಿಸದ ಕಾರಣ, ಮಾಹಿತಿ ಹಕ್ಕು ಆಯೋಗವು ಅವರನ್ನು ಹೊಣೆಗಾರರನ್ನಾಗಿ ಪರಿಗಣಿಸಿ ದಂಡ ವಿಧಿಸುವ ನಿರ್ಧಾರಕ್ಕೆ ಬಂದಿದೆ.

ಕರ್ನಾಟಕ ಮಾಹಿತಿ ಹಕ್ಕು ಆಯೋಗದಿಂದ ದಂಡ

ಕರ್ನಾಟಕ ಮಾಹಿತಿ ಹಕ್ಕು ಆಯೋಗವು ನೀಡಿರುವ ಆದೇಶದಲ್ಲಿ, ಮಾಹಿತಿ ನೀಡದಿರುವುದು ಕಾಯ್ದೆಯ ನೇರ ಉಲ್ಲಂಘನೆ, ಸಾರ್ವಜನಿಕ ಪ್ರಯೋಜನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿಡಲು ಅಧಿಕಾರಿಗಳಿಗೂ ಹಕ್ಕಿಲ್ಲ, ಮತ್ತು ಕಚೇರಿಯೊಳಗಿನ ಭ್ರಷ್ಟಾಚಾರ ಸಂಬಂಧಿತ ವಿಷಯದಲ್ಲಿ ಪಾರದರ್ಶಕತೆ ಕಡ್ಡಾಯ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಆಡಳಿತಾಧಿಕಾರಿ ಬಿ.ಎಂ. ಶೋಭಾ ಅವರಿಗೆ ₹10,000 ದಂಡ ವಿಧಿಸಿ ತಕ್ಷಣ ಪಾವತಿಸಲು ಆದೇಶಿಸಲಾಗಿದೆ.

ಬೃಹತ್ ಕಚೇರಿಗಳಲ್ಲೂ ಸಹ, ಮಾಹಿತಿ ಹಕ್ಕು ಕಾಯ್ದೆಯನ್ನು ಪಾಲಿಸುವಲ್ಲಿ ಅಧಿಕಾರಿಗಳಿಂದ ಆಗುವ ನಿರ್ಲಕ್ಷ್ಯಕ್ಕೆ ಇದು ಒಂದು ಪ್ರಮುಖ ಎಚ್ಚರಿಕೆಯ ಸಂದೇಶವಾಗಿದೆ. ಜೊತೆಗೆ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಏನಾಗಲಿದೆ ಎಂಬುದು ಇದರಿಂದ ತಿಳಿದುಬರಲಿದೆ.