Asianet Suvarna News Asianet Suvarna News

Covid 19 cases ಒಮಿಕ್ರೋನ್‌ ಉಪತಳಿ ಬೆಂಗಳೂರಿನಲ್ಲೂ ಪತ್ತೆ, ರಾಜ್ಯದಲ್ಲಿ 4ನೇ ಅಲೆ ಭೀತಿ!

  • 1 ತಿಂಗಳ ಬಳಿಕ ರಾಜ್ಯದಲ್ಲಿ 100+ ಕೇಸು
  • ಬೆಂಗಳೂರು ಒಂದರಲ್ಲೇ 132 ಪ್ರಕರಣ ದಾಖಲು
  • ಶೇ. 1 ಕ್ಕಿಂತ ಹೆಚ್ಚಾದ ಪಾಸಿಟಿವಿಟಿ ದರ 
Bengaluru Reports Omicron sub variant BA 2 cases 4th wave alert on karnataka ckm
Author
Bengaluru, First Published Apr 24, 2022, 4:30 AM IST

ಬೆಂಗಳೂರು(ಏ.24): ದೆಹಲಿಯಲ್ಲಿ ಸೋಂಕು ಉಲ್ಬಣಕ್ಕೆ ಕಾರಣವಾದ ಒಮಿಕ್ರೋನ್‌ನ 2 ಹೊಸ ಉಪತಳಿಗಳು ಬೆಂಗಳೂರಿನಲ್ಲೂ ಪತ್ತೆಯಾಗಿವೆ. ಬೆಂಗಳೂರಿನ ಮೂಲದ ಇಬ್ಬರು ಸೋಂಕಿತರಲ್ಲಿ ‘ಬಿಎ.2’ ವಿಭಾಗಕ್ಕೆ ಸೇರುವ ‘ಬಿಎ.2.10’ ಹಾಗೂ ‘ಬಿಎ.2.12’ ಎಂಬ ಒಮಿಕ್ರೋನ್‌ ಉಪತಳಿಗಳು ದೃಢಪಟ್ಟಿವೆ ಎಂದು ತಿಳಿದು ಬಂದಿದೆ. ಆದರೆ, ಎರಡೂ ಉಪತಳಿಗಳ ಪತ್ತೆಯನ್ನು ಆರೋಗ್ಯ ಇಲಾಖೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಈ ನಡುವೆ, ರಾಜ್ಯದಲ್ಲಿ ಸದ್ಯದಲ್ಲೇ 4ನೇ ಅಲೆ ಏಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಖಾಸಗಿ ಪ್ರಯೋಗಾಲಯದ ಮೂಲಗಳ ಪ್ರಕಾರ ಬಿಎ.2 ವಿಭಾಗಕ್ಕೆ ಸೇರಿದ ಒಮಿಕ್ರೋನ್‌ನ ಎರಡು ಹೊಸ ಉಪತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ. ಬೆಂಗಳೂರಿನ ಖಾಸಗಿ ಪ್ರಯೋಗಾಲಯ ನಡೆಸಿರುವ ವಂಶವಾಹಿ ಪರೀಕ್ಷೆಯಲ್ಲಿ ಉಪತಳಿಗಳು ಪತ್ತೆಯಾಗಿದ್ದು, ಇಬ್ಬರೂ ಸೋಂಕಿತರು ಬೆಂಗಳೂರಿನ ಮೂಲದವರು ಎಂದು ತಿಳಿದುಬಂದಿದೆ.

"

ಬೆಂಗಳೂರಲ್ಲಿ ಹೆಚ್ಚುತ್ತಿರುವ ಕೊರೋನಾ ಕೇಸ್, ರಾಜಧಾನಿಗೆ ಎಂಟ್ರಿ ಕೊಡ್ತಾ ಕೋವಿಡ್ ನಾಲ್ಕನೇ ಅಲೆ?

ರಾಜ್ಯದಲ್ಲಿ ನಾಲ್ಕು ವಾರದಲ್ಲಿ 4ನೇ ಅಲೆ- ಮಂಜುನಾಥ್‌:
ಹೊಸ ಪ್ರಕರಣಗಳಿಂದಾಗಿ ಸದ್ಯದಲ್ಲೇ ರಾಜ್ಯದಲ್ಲಿ ನಾಲ್ಕನೇ ಅಲೆಯ ಎದುರಾಗುವ ಭೀತಿ ಉಂಟಾಗಿದೆ. ‘ಮುಂದಿನ 4-5 ವಾರದಲ್ಲೇ ರಾಜ್ಯದಲ್ಲಿ ಕೊರೋನಾ ನಾಲ್ಕನೇ ಅಲೆ ಕಾಣಿಸಿಕೊಳ್ಳಲಿದೆ. ವೇಗವಾಗಿ ಹರಡಿದರೂ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಮೂರನೇ ಅಲೆ ಮಾದರಿಯಲ್ಲೇ ಒಂದೂವರೆ ತಿಂಗಳಲ್ಲಿ ಕಡಿಮೆಯಾಗಲಿದೆ’ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

‘ಎರಡು ವಾರದ ಹಿಂದೆಯೇ ಈ ಒಮಿಕ್ರೋನ್‌ ಉಪತಳಿಗಳು ದೇಶದಲ್ಲಿ ಎರಡು ಕಡೆ ಪತ್ತೆಯಾಗಿವೆ. ಈಗಾಗಲೇ ಹಲವು ರಾಜ್ಯಗಳಿಗೆ ಹರಡಿರುತ್ತವೆ. ಹೀಗಾಗಿಯೇ ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿನ ಈ ಹಿಂದಿನ ಮೂರು ಅಲೆಗಳು ಕೂಡಾ ದೆಹಲಿಯಿಂದ ಆರಂಭವಾಗಿ ಮಹಾರಾಷ್ಟ್ರ, ಕೇರಳ ಅನಂತರ ಕರ್ನಾಟಕಕ್ಕೆ ಹರಡಿದ್ದವು. ಸದ್ಯ ದೆಹಲಿಯಲ್ಲಿ ನಾಲ್ಕನೇ ಅಲೆ ಆರಂಭಿಕ ಲಕ್ಷಣಗಳಿದ್ದು, ಅನಂತರ ಮಹಾರಾಷ್ಟ್ರ, ಕೇರಳದಲ್ಲಿ ಆರಂಭವಾಗಲಿದೆ. ಮುಂದಿನ ನಾಲ್ಕು ವಾರಗಳಲ್ಲಿ ಕರ್ನಾಟಕದಲ್ಲಿಯೂ ನಾಲ್ಕನೇ ಅಲೆ ಅಲೆ ಕಾಣಿಸಿಕೊಳ್ಳಲಿದೆ’ ಎಂದು ಡಾಮಂಜುನಾಥ್‌ ಮಾಹಿತಿ ನೀಡಿದರು. 

Covid cases ದೆಹಲಿ, ಪಂಜಾಬ್ ಬಳಿಕ ಮತ್ತೊಂದು ರಾಜ್ಯದಲ್ಲಿ ಕೊರೋನಾ ನಿರ್ಬಂಧ ಜಾರಿ!

ಹೆಚ್ಚಿನ ತೀವ್ರತೆ ಇರುವುದಿಲ್ಲ:
‘ಮೂರನೇ ಅಲೆ ಉಂಟುಮಾಡಿದ್ದ ಒಮಿಕ್ರೋನ್‌ ರೂಪಾಂತರಿಯೂ ರಾಜ್ಯವನ್ನು ಕೇವಲ ಒಂದೂವರೆ ತಿಂಗಳು ಕಾಡಿತ್ತು. ಸದ್ಯ ಕಾಣಿಸಿಕೊಂಡಿರುವುದು ಒಮಿಕ್ರೋನ್‌ನ ಉಪತಳಿಗಳೇ ಆಗಿರುವುದರಿಂದ ನಾಲ್ಕನೇ ಅಲೆಯೂ ಕೂಡಾ ಒಂದರಿಂದ ಒಂದೂವರೆ ತಿಂಗಳು ಇರಬಹುದು. ಇನ್ನು ತೀವ್ರತೆಯು ಒಮಿಕ್ರೋನ್‌ನಷ್ಟೇ ಇರಲಿದೆ. ಇದರರ್ಥ ತೀವ್ರತೆ ಕಮ್ಮಿ ಇರಲಿದೆ. ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು, ಸಾವು, ಐಸಿಯು, ವೆಂಟಿಲೇಟರ್‌ ಬೇಡಿಕೆ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ (ಮುನ್ನೆಚ್ಚರಿಕಾ ಡೋಸ್‌) ಹಾಗೂ ಮಾಸ್‌್ಕ, ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಹೆಚ್ಚೆಚ್ಚು ಪರೀಕ್ಷೆ ನಡೆಸಿ: ಡಾ ಮಂಜುನಾಥ್‌ ಕೋರಿಕೆ
‘ರಾಜ್ಯದಲ್ಲೂ ಒಮಿಕ್ರೋನ್‌ ಉಪತಳಿಗಳು ಹರಡುವ ಭೀತಿ ಇದೆ. ಹೀಗಾಗಿ ಸೋಂಕು ಪರೀಕ್ಷೆ ಮತ್ತು ವಂಶವಾಹಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಪ್ರಸ್ತುತ ಕಡಿಮೆ ಸಂಖ್ಯೆಯ ಪರೀಕ್ಷೆ ನಡೆಯುತ್ತಿದ್ದು, ಹೆಚ್ಚಿನ ಪರೀಕ್ಷೆ ಹಾಗೂ ವಂಶವಾಹಿ ಪರೀಕ್ಷೆ ನಡೆಸಿದರೆ ಸೋಂಕಿನ ಪ್ರಮಾಣ ಅಂದಾಜಿಸಲು ನೆರವಾಗುತ್ತದೆ. ತನ್ಮೂಲಕ ಸಿದ್ಧತೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಲೂ ಅನುವಾಗುತ್ತದೆ’ ಎಂದು ತಜ್ಞ ಡಾ ಮಂಜುನಾಥ್‌ ಅವರು ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ.

Follow Us:
Download App:
  • android
  • ios