ಬಂಗಾಳಕೊಲ್ಲಿಯಲ್ಲಿ ಲಘು ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ 2025ರ ಮೊದಲ ಮಳೆ ಸುರಿದಿದ್ದು, ಇನ್ನೂ 5 ದಿನ ಮಳೆಯಾಗುವ ಮುನ್ಸೂಚನೆ ಇದೆ. ಮಕ್ಕಳು ಮತ್ತು ವೃದ್ಧರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು (ಜ.19): ಬಂಗಾಳಕೊಲ್ಲಿಯಲ್ಲಿ ಲಘು ವಾಯುಬಾರ ಕುಸಿತಗೊಂಡಿದ್ದು, ಮಳೆ ಮಾರುತಗಳು ಚುರುಕು ಪಡೆದಿವೆ. ಈ ಹಿನ್ನಲೆಯಲ್ಲಿ ರಾಜ್ಯದ ಹಲವಡೆ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೇರಿದಂರೆ ರಾಜ್ಯದ ವಿವಿಧೆಡೆ 2025ನೇ ವರ್ಷದ ಮೊಲದ ಮಳೆ ಸಿಂಚನವಾಗಿದೆ. ಜೊತೆಗೆ, ಇನ್ನೂ 5 ದಿನಗಳ ಕಾಲ ಮಳೆಯಾಗಲಿದ್ದು, ವಾತಾವರಣದಲ್ಲಿ ದಿಢೀರ್ ಏರುಪೇರಾಗಲಿದೆ. ಇದರಿಂದ ಅನಾರೋಗ್ಯ ಕಾಡುವ ಸಾಧ್ಯತೆಯಿದ್ದು, ರಾಜ್ಯದ ಜನತೆ ಮಕ್ಕಳು ಹಾಗೂ ವೃದ್ಧರು ಸೇರಿದಂತೆ ಎಲ್ಲರ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ.
ಬಂಗಾಳಕೊಲ್ಲಿಯಲ್ಲಿ ಮಳೆ ಮಾರುತಗಳು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ ಸಿಕ್ಕಿದೆ. ನಾಳೆ ರಾಜ್ಯದ 11 ಜಿಲ್ಲೆಗಳಿಗೆ ರಾಜ್ಯ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿದಂತೆ ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಒಳನಾಡಿನ ಒಂದೆರಡು ಕಡೆ ಮಂಜು ಮುಸುಕಿನ ವಾತಾವರಣ ಇರಲಿದೆ. ಒಂದೆಡೆ ಚುಮು ಚುಮು ಚಳಿಯ ಜೊತೆಗೆ, ಮತ್ತೊಂದೆಡೆ ಜಿಟಿ ಜಿಟಿ ಮಳೆಯೂ ಶುರುವಾಗಿದೆ. ವಿಕೇಂಡ್ ಮೂಡ್‌ನಲ್ಲಿದ್ದ ಬೆಂಗಳೂರಿನ ಜನತೆಗೆ ಬೆಳ್ಳಂಬೆಳಗ್ಗೆ ಮಳೆ ಕಾಟ ಶುರುವಾಗಿದೆ. ಬೆಂಗಳೂರಿನ ನಗರದ ಹಲವೆಡೆ ಬೆಳಗ್ಗೆ 5 ಗಂಟೆಯಿಂದಲೇ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಶೇಷಾದ್ರಿಪುರಂ, ಕೆ ಆರ್ ಸರ್ಕಲ್, ಕಾರ್ಪೊರೇಷನ್, ವಿಧಾನಸೌಧ, ಮೈಸೂರು ರೋಡ್, ಚಾಮರಾಜಪೇಟೆ, ನಾಯಂಡನಹಳ್ಳಿ, ಶಿವಾಜಿನಗರ, ಜಯನಗರ ಸೇರಿದಂತೆ ಹಲವೆಡೆ ಸಾಧಾರಣ ಮಳೆಯೂ ಸುರಿದಿದೆ.
ಇದನ್ನೂ ಓದಿ: ನಾಳೆ 11 ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ನಾಳೆ ಎಲ್ಲೆಲ್ಲಿ ಮಳೆ: ಬಂಗಾಳಕೊಲ್ಲಿಯಲ್ಲಿ ಲಘು ವಾಯುಬಾರ ಕುಸಿತದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಕೋಲಾರ ಮತ್ತು ಹಾಸನ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ. ಇನ್ನು ಮುಂದಿನ 5 ದಿನಗಳ ಕಾಲ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು ಚಳಿಗಾಲದ ಜೊತೆಗೆ ಮಳೆಯೂ ಕೂಡ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆ ಇರುವವರಿಗೆ ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಹೀಗಾಗಿ, ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಆರೋಗ್ಯ ಇಲಾಖೆಯೂ ಸೂಚನೆ ನೀಡಿದೆ.
2025ರ ಮೊದಲ ಮಳೆ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜ.01ರ ವೇಳೆ 2025ನೇ ಸಾಲಿನ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ. ಈ ವೇಳೆ ರಸ್ತೆ, ರಸ್ತೆಗಳಲ್ಲಿ ಗಂಡಸರು, ಹೆಂಗಸರೆನ್ನಲೇ ಎಲ್ಲರೂ ಕುಡಿದು ತೂರಾಡಿದ್ದು ಬಿಟ್ಟರೆ ಬೇರಾವ ಅವಘಡಗಳೂ ನಡೆದಿಲ್ಲ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವರ್ಷ ಕೆಲವು ರಾಶಿವರಿಗೆ ಅಶುಭವೆಂದು ಹೇಳಲಾಗುತ್ತಿದೆ. ಇನ್ನು ಕೆಲವರಿಗೆ ಸಾಧಾರಣ, ಮತ್ತೆ ಕೆಲವರಿಗೆ ಅದೃಷ್ಟವೂ ಇದೆ. ಆದರೆ, ಮಳೆಯ ವಿಚಾರದಲ್ಲಿ ಶುಭ, ಅಶುಭದ ಸಂಕೇತವನ್ನು ಲೆಕ್ಕ ಹಾಕಲಾಗಿಲ್ಲ. ವಾಡಿಕೆ ಪ್ರಕಾರ ಸಂಕ್ರಾಂತಿಯ ಹಿಂದೆ, ಮುಂದೆ ಮಳೆಯಾಗುತ್ತದೆ. ಅದೇ ರೀತಿ ಕಳೆದೊಂದು ವಾರದಿಂದ ಮೋಡದ ವಾತಾವರಣ ಇದ್ದರೂ, ಮಳೆಯಾಗದೇ ಇಂದು ಬೆಳಗ್ಗೆ ವಿವಿಧೆಡೆ ಮಳೆಯಾಗಿದೆ.
ಇದನ್ನೂ ಓದಿ: ಭಾರತದ ಅತಿ ಚಳಿ ಇರುವ ರಾಜ್ಯ ಯಾವುದು ನಿಮಗೆ ತಿಳಿದಿದೆಯೇ?: ಇಲ್ಲಿದೆ ಕಾರಣಗಳು!
