Bengaluru rains: ಗಾಳಿಗೆ ಕಬ್ಬನ್ ಪಾರ್ಕಲ್ಲಿ 25ಕ್ಕೂ ಹೆಚ್ಚು ಮರ ಧರೆಗೆ!
ನಗರದಲ್ಲಿ ಭಾನುವಾರ ಸುರಿದ ಸುಳಿಗಾಳಿ ಸಹಿತ ಮಳೆಗೆ ಕಬ್ಬನ್‌ಪಾರ್ಕ್ನಲ್ಲಿ ಹಳೆಯದಾದ ಸುಮಾರು 25ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ನೂರಾರು ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿವೆ.
ಬೆಂಗಳೂರು (ಮೇ.23) : ನಗರದಲ್ಲಿ ಭಾನುವಾರ ಸುರಿದ ಸುಳಿಗಾಳಿ ಸಹಿತ ಮಳೆಗೆ ಕಬ್ಬನ್‌ಪಾರ್ಕ್ನಲ್ಲಿ ಹಳೆಯದಾದ ಸುಮಾರು 25ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ನೂರಾರು ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿವೆ.
ಸುಮಾರು 30ರಿಂದ 65 ವರ್ಷಗಳಷ್ಟುಹಳೆಯದಾದ ಪೆಲ್ಟೋಫೋರಂ, ಫಿಕಸ್ ಬೆಂಜಮಿನ್, ಪೇಪರ್ ಮಲ್ಬರಿ, ಆರ್ಕ್, ಸಿಲ್ವರ್‌ಓಕ್, ಹಲಸು ಸೇರಿದಂತೆ ಮತ್ತಿತರರ ಜಾತಿಯ ಮರಗಳು ಬುಡ ಸಮೇತ ನೆಲಕ್ಕುರುಳಿವೆ. ಸುಮಾರು ಒಂದೂವರೆ ಗಂಟೆ ಸುರಿದ ಗಾಳಿ ಮಳೆಗೆ ನೂರಾರು ಹಳೆಯ ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿದೆ.
ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ತತ್ತರಿಸಿ ಕರ್ನಾಟಕ ಜನತೆ: ಮೂವರು ಸಾವು
ತೋಟಗಾರಿಕೆ ಸಿಬ್ಬಂದಿ ಮಳೆ ನಿಂತ ಕೂಡಲೇ ಬಿದ್ದ ಮರಗಳು, ಮುರಿದ ರೆಂಬೆ ಕೊಂಬೆಗಳನ್ನು ತೆರವು ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಸೋಮವಾರ ಬಹುತೇಕ ತೆರವು ಕಾರ್ಯ ಪೂರ್ಣಗೊಂಡಿದ್ದರೂ, ಉದ್ಯಾನವನ್ನು ಸ್ವಚ್ಛಗೊಳಿಸುವ ಕಾರ್ಯ ಮುಂದುವರೆಸಿದ್ದರು. ಲಾಲ್‌ಬಾಗ್‌ನಲ್ಲಿಯೂ ಭಾನುವಾರ ಮಧ್ಯಾಹ್ನದ ಸುಳಿಗಾಳಿ ಸಹಿತ ಮಳೆಗೆ ಮರವೊಂದು ಬಿದ್ದಿದ್ದು, ಹತ್ತಾರು ಮರಗಳ ಕೊಂಬೆಗಳು ಮುರಿದಿವೆ. ಉಳಿದಂತೆ ಯಾವುದೇ ಅನಾಹುತವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಣಗಿದ ರೆಂಬೆ ಕೊಂಬೆ ತೆರವು:
ಕಳೆದ ಮೂರು ತಿಂಗಳಿನಿಂದಲೇ ಲಾಲ್‌ಬಾಗ್ ಮತ್ತು ಕಬ್ಬನ್‌ಪಾರ್ಕ್ನಲ್ಲಿ ಒಣಗಿದ ಮರಗಳು, ರೆಂಬೆ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಕೈಗೆಟುಕದ ಮತ್ತು ತುಂಬಾ ಎತ್ತರದಲ್ಲಿರುವ ಒಣಗಿದ ಕೆಲ ರೆಂಬೆ ಕೊಂಬೆಗಳನ್ನು ತೆರವು ಮಾಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಭಾನುವಾರ ಮಳೆಗಿಂತ ಗಾಳಿ ಹೆಚ್ಚಾಗಿದ್ದರಿಂದ ಒಣಗಿದ ರೆಂಬೆಗಳು ಸೇರಿದಂತೆ ಹಳೆಯ ಮರಗಳ ಹಸಿಯಾಗಿರುವ ರೆಂಬೆಕೊಂಬೆಗಳೇ ಮುರಿದು ಬಿದ್ದಿವೆ. ಕೆಲವು ಕಡೆಗಳಲ್ಲಿ ಮರಗಳು ಸಹ ಬುಡ ಸಮೇತ ಬಿದ್ದಿವೆ. ಸೋಮವಾರ ಸಹ ಎರಡು ಉದ್ಯಾನಗಳ ಒಣ ಮರಗಳು, ಕೊಂಬೆಗಳನ್ನು ಗುರುತಿಸಿ ತೆರವು ಮಾಡುವ ಕಾರ್ಯವನ್ನು ಆರಂಭಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬೆಂಗಳೂರು: ಭಾರೀ ಮಳೆ, ಗಾಳಿಗೆ 175 ಮರ, ಕೊಂಬೆಗಳು ಧರೆಗೆ
ಮುನ್ನೆಚ್ಚರಿಕೆಗೆ ಸೂಚನೆ
ಮಳೆ ಸುರಿಯುವ ಸಂದರ್ಭದಲ್ಲಿ ಸಾರ್ವಜನಿಕರು ಮಳೆಯಿಂದ ರಕ್ಷಣೆ ಪಡೆಯಲು ಮರಗಳ ಕೆಳಗೆ ನಿಲ್ಲಬಾರದು. ಮಳೆ ಸುರಿಯುವ ಮುನ್ಸೂಚನೆ ಸಿಕ್ಕಿದ ಕೂಡಲೇ ಸುರಕ್ಷಿತ ಸ್ಥಳಗಳತ್ತ ತೆರಳಬೇಕು. ಮುಖ್ಯವಾಗಿ ಗಾಳಿ ಸಹಿತ ಮಳೆಯ ಬರುತ್ತಿರುವಾಗ ಯಾವುದೇ ಕಾರಣಕ್ಕೂ ಉದ್ಯಾನಗಳಲ್ಲಿ ಇರಬಾರದು. ಅನಾಹುತ ಸಂಭವಿಸುವುದಕ್ಕೂ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಮಾಡಿದ್ದಾರೆ.