ಬೆಂಗಳೂರು (ಫೆ. 04): ವಾಹನ ಸವಾರರೇ ಸಿಗ್ನಲ್‌ಗಳಲ್ಲಿ ನಿಂತು ಅನಗತ್ಯವಾಗಿ ಹಾರ್ನ್‌ ಮಾಡಿ ಶಬ್ದ ಮಾಲಿನ್ಯ ಮಾಡಿದರೆ, ಹೆಚ್ಚು ನಿಮಿಷ ಸಿಗ್ನಲ್‌ನಲ್ಲೇ ಕಾಯಬೇಕಾಗುತ್ತದೆ...!

ಹೌದು, ಇಂತಹದೊಂದು ಶಬ್ದ ಮಾಲಿನ್ಯ ನಿಯಂತ್ರಿಸಲು ‘ಸೆಕೆಂಡುಗಳ ಸಂಖ್ಯೆ ಹೆಚ್ಚಿಸಿ, ಸವಾರರ ಕಾಯುವ ಸಮಯವನ್ನು ಹೆಚ್ಚಿಸುವ’ ಮುಂಬೈ ಸಂಚಾರ ಪೊಲೀಸರ ಪ್ರಯೋಗವನ್ನು ಬೆಂಗಳೂರಿನಲ್ಲೂ ಜಾರಿಗೆ ತರುವ ಬಗ್ಗೆ ಪೊಲೀಸರು ಚಿಂತನೆ ನಡೆಸಿದ್ದಾರೆ.

ಹೆಚ್ಚು ಹಾರ್ನ್‌ ಮಾಡಿದರೆ ಹಸಿರು ಸಿಗ್ನಲ್‌ ಲೈಟ್‌ ಆನ್‌ ಆಗಲ್ಲ!

ಸಿಗ್ನಲ್‌ಗಳಲ್ಲಿ ಕೆಂಪು ದೀಪದ ಸೆಕೆಂಡುಗಳು ಮುಗಿದು ಹಸಿರು ದೀಪ ಪ್ರಾರಂಭವಾಗುವ ಮುನ್ನವೇ ವಾಹನ ಸವಾರರು ಪದೇ ಪದೇ ಹಾರ್ನ್‌ ಮಾಡುತ್ತಾರೆ. ಇದರಿಂದ ಶಬ್ದ ಮಾಲಿನ್ಯ ಉಂಟಾಗಿ ಸಾಮಾನ್ಯ ಜನರಿಗೆ ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಅಂತ್ಯ ಹಾಡುವ ಉದ್ದೇಶದಿಂದ, ಸಿಗ್ನಲ್‌ನಲ್ಲಿ ದೀಪದ ಕೆಳಗೆ ಶಬ್ದ ಪ್ರಮಾಣ ಅಳೆಯುವ ಯಂತ್ರವನ್ನು ಅಳವಡಿಸಲಾಗುತ್ತದೆ.

ಕೆಂಪು ದೀಪ ಉರಿಯುವ ಸಂದರ್ಭದಲ್ಲೇ ಹಾರ್ನ್‌ ಮಾಡಿದಾಗ ಶಬ್ದದ ಪ್ರಮಾಣ 90 ಡೆಸಿಬಲ್‌ ದಾಟುತ್ತಿದ್ದಂತೆ ಸಿಗ್ನಲ್‌ ಸೆಕೆಂಡ್‌ಗಳು ‘ರೀಸೆಟ್‌’ ಆಗಿ ವಾಪಸ್‌ 90 ಸೆಕೆಂಡ್‌ಗೆ ಆಗುತ್ತದೆ. ಅದನ್ನು ಗಮನಿಸುವ ವಾಹನ ಸವಾರರಿಗೆ ಹಾರ್ನ್‌ ಮಾಡಿ ಶಬ್ದ ಮಾಲಿನ್ಯ ಮಾಡಬಾರದು ಎಂಬ ಅರಿವು ಮೂಡುತ್ತದೆ.

ಕಾರಲ್ಲಿ ಸೆಲ್ಫಿ ವಿಡಿಯೋ: 2000 ರು. ದಂಡ ಕಟ್ಟಿದ ಸಂಜನಾ!

ಇಂತಹ ಒಂದು ಪ್ರಯೋಗವನ್ನು ಈಗಾಗಲೇ ನೆರೆಯ ಮಹಾರಾಷ್ಟ್ರ ರಾಜಧಾನಿ ಮುಂಬೈನ ಸಿಗ್ನಲ್‌ವೊಂದರಲ್ಲಿ ಜಾರಿ ಮಾಡಲಾಗಿದೆ. ಈ ವಿಡಿಯೋವನ್ನು ಮುಂಬೈ ಪೊಲೀಸರು ತಮ್ಮ ಟ್ವೀಟರ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಇದಕ್ಕೆ ಸಾವಿರಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿಯೂ ಜಾರಿಗೆ ತಂದರೆ ಒಳಿತು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಅವರು ಉತ್ತಮ ಯೋಜನೆಯಾಗಿದ್ದು, ಇಲ್ಲೂ ಜಾರಿಗೆ ತರಲಾಗುವುದು ಎಂದಿದ್ದಾರೆ. ಈ ಬಗ್ಗೆ ಮುಂಬೈ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.