Asianet Suvarna News Asianet Suvarna News

Covid 19 Spike: ಸಕ್ರಿಯ ಕೇಸ್‌: ಮಹಾನಗರಗಳ ಪೈಕಿ ದೇಶಕ್ಕೆ ಬೆಂಗ್ಳೂರು ನಂ.1..!

*  ರಾಜಧಾನಿಯಲ್ಲಿ 1.3 ಲಕ್ಷ ಸಕ್ರಿಯ ಸೋಂಕಿತರು
*  2000 ಮಂದಿ ಮಾತ್ರ ಆಸ್ಪತ್ರೆಗೆ ದಾಖಲು
*  ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ
 

Bengaluru No 1 in Highest Number of Covid Active Cases in India grg
Author
Bengaluru, First Published Jan 16, 2022, 4:20 AM IST

ಜಯಪ್ರಕಾಶ್‌ ಬಿರಾದಾರ
ಬೆಂಗಳೂರು(ಜ.16): 
ರಾಜಧಾನಿ ಬೆಂಗಳೂರಿನಲ್ಲಿ(Bengaluru) ದಿನದಿಂದ ದಿನಕ್ಕೆ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1.3 ಲಕ್ಷಕ್ಕೆ ತಲುಪಿದೆ. ಇದರಿಂದಾಗಿ ದೇಶದ ನಗರ ಮತ್ತು ಮಹಾನಗರಗಳ ಪೈಕಿ ಅತಿ ಹೆಚ್ಚು ಸಕ್ರಿಯ ಕೊರೋನಾ(Coronavirus) ಸೋಂಕಿತರು ಬೆಂಗಳೂರಿನಲ್ಲಿ ಇದ್ದಂತಾಗಿದೆ. ಜನವರಿ ಮೊದಲ ವಾರಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಎರಡನೇ ವಾರ ಕೊರೋನಾ ಸೋಂಕು ಹೊಸ ಪ್ರಕರಣಗಳು 5 ಪಟ್ಟು ಹೆಚ್ಚಳವಾಗಿವೆ. ಜ.1ರಿಂದ 8ರ ನಡುವೆ 22 ಸಾವಿರ ಮಂದಿ, ಜ.9 ರಿಂದ ಜ.15ರ ನಡುವೆ 1,05,437 ಮಂದಿಗೆ ಸೋಂಕು ತಗುಲಿದೆ. ನಿತ್ಯ ಸರಾಸರಿ 15 ಸಾವಿರ ಮಂದಿಗೆ ಸೋಂಕು ತಗುಲಿದಂತಾಗಿದೆ.

ಗಮನಾರ್ಹವೆಂದರೆ, ರಾಜಧಾನಿಯಲ್ಲಿರುವ 1.3 ಲಕ್ಷ ಸಕ್ರಿಯ ಸೋಂಕಿತರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 2,042 ಮಾತ್ರ. ಇದರಲ್ಲಿ 535 ಮಂದಿ ಸರ್ಕಾರಿ, 1,507 ಸೋಂಕಿತರು ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. 1.28 ಲಕ್ಷ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿದ್ದಾರೆ.ಕೊರೋನಾ ಎರಡನೇ ಅಲೆಯ ಆರಂಭದಲ್ಲಿ ಮುಂಬೈನಲ್ಲಿ(Mumbai) ಅತಿ ಹೆಚ್ಚು ಸೋಂಕಿತರಿದ್ದರೂ, ನಂತರದಲ್ಲಿ ಮೂರು ಲಕ್ಷಕ್ಕೂ ಸಕ್ರಿಯ ಸೋಂಕಿತರನ್ನು ಹೊಂದುವ  ಮೂಲಕ ಒಂದು ತಿಂಗಳ ಮಟ್ಟಿಗೆ ಬೆಂಗಳೂರು ಮೊದಲ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ಮೂರನೇ ಅಲೆಯ ಆರಂಭದ ದಿನಗಳಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ದೆಹಲಿ, ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್‌ಗೆ ಹೋಲಿಸಿದರೆ ಅತಿ ಹೆಚ್ಚು ಸೋಂಕಿತರು ಸದ್ಯ ಬೆಂಗಳೂರಿನಲ್ಲಿದ್ದಾರೆ.

Covid 19 Spike: ಮಂಡ್ಯದ ಒಂದೇ ಶಾಲೆಯ 20 ಮಕ್ಕಳಿಗೆ ಕೊರೋನಾ: ಸ್ಕೂಲ್ ಸೀಲ್ ಡೌನ್!

ರಾಜ್ಯವಾರು ಕೊರೋನಾ ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ(Karnataka) ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ(Maharashtra) 2.6 ಲಕ್ಷ ಮಂದಿ ಸೋಂಕಿತರಿದ್ದಾರೆ. ಕರ್ನಾಟಕದಲ್ಲಿ 1.4 ಲಕ್ಷ ಸೋಂಕಿತರಿದ್ದಾರೆ. ಈ ಪೈಕಿ ಶೇ.91ರಷ್ಟು ಮಂದಿ ಬೆಂಗಳೂರು ನಗರದಲ್ಲಿದ್ದಾರೆ.

2ನೇ ಅತಿ ಹೆಚ್ಚು ಕೇಸ್‌:

ಕೊರೋನಾ ಸೋಂಕು ಹೆಚ್ಚಿರುವ ಮಹಾರಾಷ್ಟ್ರದ ಮುಂಬೈ, ಪುಣೆಗಿಂತಲೂ ಬೆಂಗಳೂರಿನಲ್ಲಿ ಅತಿ ಹೆಚ್ಚು ಮಂದಿಗೆ ಜನರಿಗೆ ಸೋಂಕು ತಗುಲಿದೆ. ದೇಶದಲ್ಲಿಯೇ(India) ದೆಹಲಿ ಹೊರತುಪಡಿಸಿದರೆ ಎರಡನೇ ಅತಿ ಹೆಚ್ಚು ಹೊಸ ಪ್ರಕರಣಗಳು ಉದ್ಯಾನ ನಗರಿಯಲ್ಲಿ ಪತ್ತೆಯಾಗಿವೆ. ಒಂದು ವಾರದಲ್ಲಿ ದೆಹಲಿಯಲ್ಲಿ 1.64 ಲಕ್ಷ ಮಂದಿ, ಮುಂಬೈನಲ್ಲಿ 1.01 ಲಕ್ಷ ಮಂದಿ, ಪುಣೆಯಲ್ಲಿ 46 ಸಾವಿರ ಮಂದಿ ಸೋಂಕಿತರಾಗಿದ್ದಾರೆ.

ಮಹಾನಗರ ಸಕ್ರಿಯ ಸೋಂಕು

ಬೆಂಗಳೂರು - 130000
ದೆಹಲಿ - 93000
ಮುಂಬೈ- 84000
ಪುಣೆ - 66000
ಚೆನ್ನೈ - 47000
ತಿರುವನಂತಪುರ 21000
ಹೈದರಾಬಾದ್‌ - 20000

ಟೆಕ್ಕಿಗಳು ಹೆಚ್ಚಿರುವ ಕಡೆ ಕೊರೋನಾ ಹೆಚ್ಚು!

ಬೆಂಗಳೂರಿನ ಕೇಂದ್ರ ಭಾಗಗಳಿಗಿಂತಲೂ ಹೊರವಲಯಗಳಾದ ಎಲೆಕ್ಟ್ರಾನಿಕ್‌ ಸಿಟಿ, ಬೇಗೂರು, ಸಿಂಗಸಂದ್ರ, ಬೆಳ್ಳಂದೂರು, ವರ್ತೂರು, ವೈಟ್‌ಫೀಲ್ಡ್‌, ಮಹದೇವಪುರದಲ್ಲಿ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಈ ಪ್ರದೇಶಗಳಲ್ಲಿ ಟೆಕ್ಕಿಗಳು ಹೆಚ್ಚು ವಾಸವಿದ್ದು, ಹೊರ ದೇಶ ಮತ್ತು ಹೊರರಾಜ್ಯಗಳೊಂದಿಗೆ ಸಂಪರ್ಕ ಹೆಚ್ಚಿರುತ್ತದೆ. ಹೀಗಾಗಿಯೇ ಹೆಚ್ಚು ಮಂದಿ ಕೊರೋನಾ ಸೋಂಕಿಗೊಳಗಾಗುತ್ತಿದ್ದಾರೆ ಎಂದು ಸ್ಥಳೀಯ ಆರೋಗ್ಯಾ​ಧಿಕಾರಿಗಳು ತಿಳಿಸಿದ್ದಾರೆ.

Vijayapura: ಕೊರೋನಾ ಅಟ್ಟಹಾಸಕ್ಕೆ ಬಾಣಂತಿ ಬಲಿ: ಆರು ದಿನದ ಮಗು ತಬ್ಬಲಿ

ರಾಜ್ಯದಲ್ಲಿ ಕೋವಿಡ್‌ ಉಲ್ಬಣ: ಒಂದೇ ದಿನ 32000+ ಕೇಸ್‌ ಬೆಂಗಳೂರಲ್ಲಿ 22284 ಕೇಸ್‌

ರಾಜ್ಯದಲ್ಲಿ ಕೊರೋನಾ ಮತ್ತಷ್ಟು ಉಲ್ಬಣಗೊಂಡಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 32,793 ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು 230 ದಿನಗಳಲ್ಲೇ ಗರಿಷ್ಠ. ರಾಜ್ಯದ ಪಾಸಿಟಿವಿಟಿ ದರ ಮೇ 28ರ ಬಳಿಕ ಶೇ.15 ಮುಟ್ಟಿದ್ದು, ಏಳು ಮಂದಿ ಮೃತರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ 249 ದಿನಗಳ ಬಳಿಕ 22284 ಪ್ರಕರಣಗಳು ದೃಢಪಟ್ಟಿವೆ. ರಾಜ್ಯದ ಪ್ರಕರಣಗಳಲ್ಲಿ ಬೆಂಗಳೂರಿನ ಪಾಲು ಶೇ.68ರಷ್ಟಿದೆ. ಪಾಸಿಟಿವಿಟಿ ದರ ಆತಂಕಕಾರಿ 19.95%ಕ್ಕೆ ತಲುಪಿದೆ.

ವಾರಾಂತ್ಯ ಕರ್ಫ್ಯೂಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಕೊರೋನಾ ನಿಗ್ರಹಕ್ಕಾಗಿ ಜಾರಿಗೊಳಿಸಲಾಗಿರುವ ವೀಕೆಂಡ್‌ ಕರ್ಫ್ಯೂಗೆ(Weekend Curfew) ಎರಡನೇ ವಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಸ್ತಬ್ಧವಾಗಿದ್ದರೆ, ಉಳಿದೆಡೆ ಜನರ ಓಡಾಟ ಇತ್ತು. ಗಂಗಾವತಿಯಲ್ಲಿ ಜಾತ್ರೆಯೂ ನಡೆಯಿತು.

689 ವಾಹನ ಜಪ್ತಿ: 6.5 ಲಕ್ಷ ದಂಡ

ಬೆಂಗಳೂರು: ವಾರಾಂತ್ಯ ಕರ್ಫ್ಯೂ ಇದ್ದರೂ ಅನಗತ್ಯವಾಗಿ ರಸ್ತೆಗೆ ಇಳಿದ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ರಾಜ್ಯಾದ್ಯಂತ 689ಕ್ಕೂ ಹೆಚ್ಚು ವಾಹನ ಜಪ್ತಿ ಮಾಡಿ, 6.5 ಲಕ್ಷ ರು.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ.
 

Follow Us:
Download App:
  • android
  • ios